
ಸಾಂದರ್ಭಿಕ ಚಿತ್ರ
ಮೊಂಥಾ ಚಂಡಮಾರುತ ಅಬ್ಬರ; ರಾಜ್ಯದ 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಬೀದರ್, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ʼಮೊಂಥಾʼ ಚಂಡಮಾರುತವು ರಾಜ್ಯದ ಮೇಲೂ ಪರಿಣಾಮ ಬೀರಿದೆ. 12 ಜಿಲ್ಲೆಗಳಿಗೆ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಯಾವ್ಯಾವ ಭಾಗದಲ್ಲಿ ಮಳೆ
ಉತ್ತರ ಒಳನಾಡಿನ ಗದಗ, ಧಾರವಾಡ, ಹಾವೇರಿ, ಬೆಳಗಾವಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ 30-40 ಕೀ.ಮೀಟರ್ ನಿರಂತರ ಗಾಳಿಯೊಂದಿಗೆ ಮಳೆಯಾಗಲಿದೆ.
ಬೀದರ್, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗಂಟೆಗೆ 110 ಕಿ.ಮೀಟರ್ ಗಾಳಿ ವೇಗ
'ಮೊಂಥಾ' ಚಂಡಮಾರುತವು ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡು, ಉತ್ತರ-ವಾಯುವ್ಯದ ಕಡೆಗೆ ಚಲಿಸುತ್ತಿದೆ. ಈ ಚಂಡಮಾರುತವು ಅ.28 ರ ಬೆಳಗಿನ ಜಾವದ ವೇಳೆಗೆ ತೀವ್ರವಾಗಿ ಬದಲಾಗಿತ್ತು. ಮಂಗಳವಾರ (ಅ.28) ರಾತ್ರಿ ವೇಳೆಗೆ ಆಂಧ್ರಪ್ರದೇಶದ ಕರಾವಳಿಯಾದ ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ, ಕಾಕಿನಾಡ ಬಳಿ ನೆಲಕ್ಕೆ ಅಪ್ಪಳಿಸಿದೆ. ಈ ಸಂದರ್ಭದಲ್ಲಿ ಗಾಳಿಯ ವೇಗವು ಗಂಟೆಗೆ 90–100 ಕಿ.ಮೀ.ಗೆ, ಗರಿಷ್ಠ 110 ಕಿ.ಮೀ.ಗೆ ತಲುಪಿತ್ತು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

