Cyber Hostage Case |‌ ವಕೀಲೆಯನ್ನೇ ಸೈಬರ್‌ ಒತ್ತೆಯಾಳು ಮಾಡಿ, 14 ಲಕ್ಷ ವಂಚನೆ!
x
ಸೈಬರ್‌ ಕ್ರೈಮ್‌ (ಚಿತ್ರಕೃಪೆ: pexels)

Cyber Hostage Case |‌ ವಕೀಲೆಯನ್ನೇ ಸೈಬರ್‌ ಒತ್ತೆಯಾಳು ಮಾಡಿ, 14 ಲಕ್ಷ ವಂಚನೆ!

ಬೆಂಗಳೂರಿನಲ್ಲಿ ಸೈಬರ್ ಕ್ರೈಮ್‌ಗಳು ಹೆಚ್ಚಾಗುತ್ತಿದ್ದು, ಇದೀಗ ಸೈಬರ್ ವಂಚಕರ ತಂಡ ವಕೀಲೆಯೊಬ್ಬರನ್ನು ಸೈಬರ್ ಒತ್ತೆಯಾಳನ್ನಾಗಿ ಇರಿಸಿಕೊಂಡು ಅವರ ಬೆತ್ತಲೆ ವಿಡಿಯೋ ಮಾಡಿ, ಬರೋಬ್ಬರಿ 14 ಲಕ್ಷ ರೂ. ವಂಚಿಸಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.


ಬೆಂಗಳೂರಿನಲ್ಲಿ ಹೊಸ ಮಾದರಿಯ ಸೈಬರ್ ಕ್ರೈಮ್‌ಗಳು ಹೆಚ್ಚಾಗುತ್ತಿದ್ದು, ಇದೀಗ ಸೈಬರ್ ವಂಚಕರ ತಂಡ ವಕೀಲೆಯೊಬ್ಬರನ್ನು ಸೈಬರ್ ಒತ್ತೆಯಾಳನ್ನಾಗಿ ಇರಿಸಿಕೊಂಡು ಬರೋಬ್ಬರಿ 14 ಲಕ್ಷ ರೂಪಾಯಿ ವಸೂಲಿ ಮಾಡಿ ವಂಚಿಸಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ಸೈಬರ್ ವಂಚಕರ ತಂಡವೊಂದು ನಗರದ ವಕೀಲೆಯೊಬ್ಬರನ್ನು ವಂಚನೆಯ ಜಾಲಕ್ಕೆ ಬೀಳಿಸಿ 14 ಲಕ್ಷ ರೂಪಾಯಿ ಹಣ ವರ್ಗಾಯಿಸಿಕೊಂಡಿದೆ. ಈ ಪ್ರಕರಣದಲ್ಲಿ ಆಘಾತಕಾರಿ ಅಂಶವೆಂದರೆ ಸೈಬರ್ ವಂಚಕರು ಮಹಿಳೆಯನ್ನು ಕ್ಯಾಮೆರಾದ ಮುಂದೆ ಉಡುಪು ಕಳಚುವಂತೆಯೂ ಮಾಡಿದ್ದು, ಅದನ್ನು ಚಿತ್ರೀಕರಿಸಿಕೊಂಡಿರುವುದು.

29 ವರ್ಷದ ವಕೀಲೆಯೊಬ್ಬರು ಈ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ವಕೀಲೆಯನ್ನು ಸೈಬರ್ ವಂಚಕರು ಎರಡು ದಿನಗಳ ಕಾಲ ಡಿಜಿಟಲ್ ಒತ್ತೆಯಾಳಾಗಿರಿಸಿಕೊಂಡು, ಆಕೆಯ ಬೆತ್ತಲೆ ವಿಡಿಯೋ ಮಾಡಿದ್ದಾರೆ. ಮುಂಬೈನ ಸೈಬರ್ ಕ್ರೈಂ ತಂಡದಿಂದ ವಿಚಾರಣೆ ನಡೆಯುತ್ತದೆ ಎಂದು ಹೇಳಿ‌ ಮಹಿಳೆಗೆ ಕರೆ ಮಾಡಿರುವ ಸೈಬರ್ ವಂಚಕರು, ವಕೀಲೆಯನ್ನು ವಿಡಿಯೋ ಕ್ಯಾಮೆರಾದ ಮುಂದೆ ವಿಚಾರಣೆ ನೆಪದಲ್ಲಿ ಕೂರಿಸಿದ್ದಾರೆ. ಆಕೆಯ ಬೆತ್ತಲೆ ವಿಡಿಯೋ ಬಳಸಿಕೊಂಡು, ಬ್ಲ್ಯಾಕ್‌ಮೇಲ್ ಮೂಲಕ ಮತ್ತೆ 10 ಲಕ್ಷ ರೂಪಾಯಿ ಸುಲಿಗೆ ಮಾಡಲು ಮುಂದಾಗಿದ್ದಾರೆ.

ಪಾರ್ಸಲ್‌ ನೆಪದಲ್ಲಿ ಬಂತು ಕರೆ

ವಕೀಲೆಯ ಹೆಸರಿನಲ್ಲಿ ಪಾರ್ಸಲ್ ಬಂದಿದೆ ಎಂದು ಹೇಳಿ ಮೊದಲು ನಂಬಿಸಲಾಗಿದೆ. ಇದಾದ ನಂತರ ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

ಫೆಡ್‌ಎಕ್ಸ್ ಎನ್ನುವ ಸಂಸ್ಥೆಯಿಂದ ಮಾತನಾಡುತ್ತಿರುವುದಾಗಿ ವ್ಯಕ್ತಿಯೊಬ್ಬ ಪರಿಚಯ ಮಾಡಿಕೊಂಡಿದ್ದು, ವಕೀಲೆ ಹೆಸರಿನಲ್ಲಿ ಕಳುಹಿಸಿದ್ದ ಪಾರ್ಸಲ್‌ವೊಂದು ವಾಪಸ್ ಬಂದಿರುವುದಾಗಿ ತಿಳಿಸಿದ್ದ. ಅಲ್ಲದೇ ಮುಂಬೈನಿಂದ ಥಾಯ್ಲೆಂಡ್‌ಗೆ ಪಾರ್ಸಲ್‌ ಕಳುಹಿಸಿದ್ದು, ಇದರಲ್ಲಿ 5 ಪಾಸ್‌ ಪೋರ್ಟ್, 3 ಕ್ರೆಡಿಟ್ ಕಾರ್ಡ್ ಹಾಗೂ ನಿಷೇಧಿತ ಮಾದಕವಸ್ತು ಎಂದು ಗುರುತಿಸಲಾಗಿರುವ ಎಂಡಿಎಂಎ 140 ಮಾತ್ರೆಗಳಿವೆ ಎಂದು ಹೇಳಿದ್ದ. ಆಗ ವಕೀಲೆ ನಾನು ಯಾವುದೇ ಪಾರ್ಸಲ್ ಕಳುಹಿಸಿಲ್ಲ. ಆ ಪಾರ್ಸಲ್‌ ಮತ್ತು ನನಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ವಕೀಲೆ ಈ ರೀತಿ ಹೇಳುತ್ತಿದ್ದಂತೆಯೇ ಆ ವ್ಯಕ್ತಿ ನಿಮ್ಮ ಹೆಸರಿನಲ್ಲಿ ವಂಚನೆ ನಡೆದಿದೆ ಎಂದು ಮುಂಬೈನ ಸೈಬರ್ ತಂಡಕ್ಕೆ ದೂರು ನೀಡಿದ್ದಾಗಿ ಹೇಳಿದ್ದಾನೆ. ಬಳಿಕ ಮುಂಬೈ ಸೈಬರ್ ಅಪರಾಧ ತಂಡಕ್ಕೆ ಕರೆ ವರ್ಗಾಯಿಸುತ್ತೇವೆ ಎಂದು ಹೇಳಿದ್ದಾರೆ. ಕರೆ ಮತ್ತೊಬ್ಬರಿಗೆ ವರ್ಗಾವಣೆಯಾಗಿದ್ದು, ಸ್ಕೈಪ್ ಆಪ್ ಡೌನ್‌ಲೋಡ್ ಮಾಡಿ, ವಿಡಿಯೋ ಕಾಲ್‌ಗೆ ಬರುವಂತೆ ಸೂಚಿಸಿದ್ದಾರೆ. ವಕೀಲೆ ಸ್ಕೈಪ್ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡು ವಂಚಕರು ಹೇಳಿದ ಸಂಖ್ಯೆಗೆ ವಿಡಿಯೋ ಕರೆ ಮಾಡಿದ್ದು, ಕರೆ ಸ್ವೀಕರಿಸಿದ ವ್ಯಕ್ತಿ, ವಕೀಲೆಯ ಆಧಾರ್ ಕಾರ್ಡ್ ವಿವರ ಪಡೆದುಕೊಂಡು ʻನಿಮ್ಮ ಆಧಾರ್ ಕಾರ್ಡ್ ಬಳಸಿಕೊಂಡು ಮಾನವ ಕಳ್ಳಸಾಗಣೆ ಹಾಗೂ ಡ್ರಗ್ಸ್ ಸರಬರಾಜು ಸಹ ನಡೆಯುತ್ತಿದ್ದು, ಹೈ ಅಲರ್ಟ್ ನೀಡಲಾಗಿದೆ. ಈ ಕರೆಯನ್ನು ನಮ್ಮ ಹಿರಿಯ ಸಿಬಿಐ ಅಧಿಕಾರಿ ಅಭಿಷೇಕ್ ಚೌಹಾಣ್ ಅವರಿಗೆ ವರ್ಗಾಯಿಸುತ್ತಿದ್ದೇನೆ. ನೀವು ಕ್ಯಾಮೆರಾ ಆನ್ ಮಾಡಿʼ ಎಂದು ಹೇಳಿದ್ದಾನೆ.

ನಂತರ ಅಭಿಷೇಕ್ ಚೌಹಾಣ್ ಎನ್ನುವ ವ್ಯಕ್ತಿಯು ವಕೀಲೆಯ ಬ್ಯಾಂಕ್ ವಿವರ, ಹೂಡಿಕೆ ಸೇರಿದಂತೆ ಸಂಪೂರ್ಣ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡಿದ್ದು, ಈ ವಿಷಯವನ್ನು ಯಾರ ಬಳಿಯೂ ಹೇಳದಂತೆ ಸೂಚಿಸಿದ್ದಾನೆ. ಈ ಪ್ರಕರಣದಲ್ಲಿ ಹಲವು ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂದೂ ವಕೀಲೆಯನ್ನು ಬೆದರಿಸಲಾಗಿದೆ. ಅಲ್ಲದೇ ಕ್ಯಾಮೆರಾ ಆನ್‌ನಲ್ಲಿ ಇರಿಸಿ, ಸ್ಕ್ರೀನ್ ಶೇರ್ ಮಾಡುವಂತೆಯೂ ಹಗಲು ಮತ್ತು ರಾತ್ರಿ ನಿಗಾ ಇರಿಸಿದ್ದು, ವಕೀಲೆ ಕ್ಯಾಮೆರಾ ಆನ್ ಮಾಡಿಯೇ ಮಲಗಿದ್ದಾರೆ. ಈ ಎಲ್ಲ ಅಂಶಗಳನ್ನು ವಕೀಲೆ ನೀಡಿದ ದೂರಿನ ಮೇಲೆ ಬೆಂಗಳೂರು ಸೈಬರ್‌ ಪೊಲೀಸರು ಎಫ್ಐಆರ್‌ನಲ್ಲಿ ದಾಖಲಿಸಿದ್ದಾರೆ.

ಮಾದಕ ವಸ್ತು ನೆಪದಲ್ಲಿ ಬೆತ್ತಲೆ ವಿಡಿಯೋ

ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡಿದ ನಂತರವೂ ಸೈಬರ್ ವಂಚಕರು ಸಂತ್ರಸ್ತೆಯ ಬೆತ್ತಲೆ ವಿಡಿಯೋ ಮಾಡಿದ್ದಾರೆ. ʻಕ್ರೆಡಿಟ್‌ ಕಾರ್ಡ್‌ ಮಾಹಿತಿ ಪಡೆದು ನಾಲ್ಕು ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡ ನಂತರ ಮಾದಕವಸ್ತು ಪರೀಕ್ಷೆ ನಡೆಸಬೇಕಿದ್ದು, ಬಟ್ಟೆ ಕಳಚಿ ಎಂದರು. ಈ ರೀತಿ ಮಾಡದಿದ್ದರೆ ಮಾದಕ ವಸ್ತು ಪ್ರಕರಣದಲ್ಲಿ ನನ್ನ ಹಾಗೂ ಕುಟುಂಬದವರನ್ನು ಬಂಧಿಸುವುದಾಗಿ, ಸಾಯಿಸುವುದಾಗಿಯೂ ಬೆದರಿಕೆ ಹಾಕಿದರು. ಹೀಗಾಗಿ, ಕ್ಯಾಮೆರಾದ ಮುಂದೆ ಬಟ್ಟೆ ಕಳಚಿದ್ದೆ. ಬೆತ್ತಲೆ ವಿಡಿಯೋಗಳನ್ನು ಇರಿಸಿಕೊಂಡು ಬ್ಲ್ಯಾಕ್‌ ಮೇಲೆ ಮಾಡಿದ್ದರು. 10 ಲಕ್ಷ ರೂಪಾಯಿ ಕೊಡದಿದ್ದರೆ, ನನ್ನ ಬೆತ್ತಲೆ ವಿಡಿಯೋವನ್ನು ಡಾರ್ಕ್‌ ವೆಬ್‌ನಲ್ಲಿ ಅಪ್‌ಲೋಡ್‌ ಮಾಡುವುದಾಗಿ ಬೆದರಿಸಿದ್ದರುʼ ಎಂದು ವಕೀಲೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್: 14 ಲಕ್ಷ ವಂಚನೆ

ವಕೀಲೆಯ ಖಾತೆಗಳಲ್ಲಿರುವ ಹಣವನ್ನು ಸಹ ಡಮ್ಮಿ ಖಾತೆಗೆ ವರ್ಗಾವಣೆ ಮಾಡುವಂತೆ ಸೂಚಿಸಲಾಗಿದೆ. ವಂಚಕರ ನಿರ್ದೇಶನಂತೆ ವಕೀಲೆ 10.79 ಲಕ್ಷ ರೂಪಾಯಿ ಹಣವನ್ನು ವರ್ಗಾಯಿಸಿದ್ದಾರೆ. ಇದಾದ ನಂತರ ಕ್ರೆಡಿಟ್ ಕಾರ್ಡ್ ವ್ಯವಹಾರಗಳಲ್ಲಿ ಅನುಮಾನವಿದೆ ಎಂದು ಹೇಳಿದ ವಂಚಕರು ಆ್ಯಪ್‌ವೊಂದರ ಮೂಲಕ 4.16 ಲಕ್ಷ ರೂಪಾಯಿ ಮೊತ್ತದ ಬಿಟ್‌ಕಾಯಿನ್ ಖರೀದಿಸಲು ಪ್ರಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಇದಾದ ನಂತರ ಕ್ರೆಡಿಟ್ ಕಾರ್ಡ್‌ನ ಮೂಲಕ ಒಮ್ಮೆ 2.04 ಲಕ್ಷ ರೂಪಾಯಿ, ಮತ್ತೊಮ್ಮೆ 1.73 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಎಫ್‌ಐಆರ್‌ ನಲ್ಲಿ ಹೇಳಲಾಗಿದೆ.

Read More
Next Story