ನೇಪಾಳ ಗಲಭೆ | ಮೂರು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಸಡಿಲಿಕೆ, ಜೈಲುಗಳಲ್ಲಿ ಮುಂದುವರಿದ ಹಿಂಸಾಚಾರ
x

ನೇಪಾಳ ಗಲಭೆ | ಮೂರು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಸಡಿಲಿಕೆ, ಜೈಲುಗಳಲ್ಲಿ ಮುಂದುವರಿದ ಹಿಂಸಾಚಾರ

ಗುರುವಾರ ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ಸೇವೆಗಳಿಗೆ ಅವಕಾಶ ಒದಗಿಸಲಾಗಿದೆ. ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಿಷೇಧಾಜ್ಞೆ ಇರಲಿದೆ. ಮತ್ತೆ ಸಂಜೆ 5 ರಿಂದ 7 ರವರೆಗೆ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.


ನೇಪಾಳದಲ್ಲಿ ‘ಜೆನ್ Z’ ಗುಂಪಿನ ಹಿಂಸಾತ್ಮಕ ಪ್ರತಿಭಟನೆಯ ಬಳಿಕ ತಲೆದೋರಿದ್ದ ಉದ್ವಿಗ್ನ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಅತಿ ಹೆಚ್ಚು ಗಲಭೆ ಪೀಡಿತ ಪ್ರದೇಶಗಳಾದ ಕಠ್ಮಂಡು, ಲಲಿತ್‌ಪುರ ಹಾಗೂ ಭಕ್ತಪುರದಲ್ಲಿ ನಿಷೇಧಾಜ್ಞೆ ವಿಸ್ತರಿಸಲಾಗಿದ್ದು, ಸೇನಾ ಭದ್ರತೆಯನ್ನು ಹೆಚ್ಚಿಸಲಾಗಿದೆ. ನಿರ್ದಿಷ್ಟ ಸಮಯದಲ್ಲಿ ಮಾತ್ರ ಸಾರ್ವಜನಿಕರಿಗೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಗುರುವಾರ ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ಸೇವೆಗಳಿಗೆ ಅವಕಾಶ ಒದಗಿಸಲಾಗಿದೆ. ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಿಷೇಧಾಜ್ಞೆ ಇರಲಿದೆ. ಮತ್ತೆ ಸಂಜೆ 5 ರಿಂದ 7 ರವರೆಗೆ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮತ್ತೆ ಸಂಜೆ 7 ರಿಂದ ಶುಕ್ರವಾರ ಬೆಳಿಗ್ಗೆ 6 ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ನಿಷೇಧಾಜ್ಞೆ ಸಡಿಲಿಕೆ ಸಮಯದಲ್ಲಿ ಜನರು ಮಾರುಕಟ್ಟೆ, ಅಂಗಡಿ ಹಾಗೂ ಪದಾರ್ಥಗಳ ಖರೀದಿಸಬಹುದಾಗಿದೆ. ನೇಪಾಳದ ಇನ್ನೂ ಹಲವೆಡೆ ಹಿಂಸಾತ್ಮಕ ಘಟನೆಗಳು ನಡೆಯುತ್ತಿದ್ದು, ವಾಹನ ಸಂಚಾರ ತೀರಾ ವಿರಳವಾಗಿದೆ.

ಸೇನೆಯ ಕಠಿಣ ಎಚ್ಚರಿಕೆ

ಮಂಗಳವಾರ ರಾತ್ರಿಯಿಂದ ದೇಶದ ಹಲವೆಡೆ ಸಂಭವಿಸಿದ ಹಿಂಸಾತ್ಮಕ ಘಟನೆಗಳ ಬಳಿಕ ಭದ್ರತೆಗೆ ಸೇನೆಯನ್ನು ನಿಯೋಜಿಸಲಾಗಿದೆ. ಪ್ರತಿಭಟನೆ ಹೆಸರಲ್ಲಿ ಯಾವುದೇ ರೀತಿಯ ಹಿಂಸಾಚಾರ, ಆಸ್ತಿಪಾಸ್ತಿ ಹಾನಿ ಅಥವಾ ದಾಳಿ ನಡೆಸಿದರೆ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ಸೇನೆ ಎಚ್ಚರಿಕೆ ನೀಡಿದೆ.

ಇನ್ನು ಹಿಂಸಾತ್ಮಕ ಪ್ರತಿಭಟನೆಯಿಂದ 24 ಗಂಟೆಗಳ ಕಾಲ ಸೇವೆ ಸ್ಥಗಿತಗೊಳಿಸಿದ್ದ ಕಠ್ಮಂಡುವಿನ ತ್ರಿಭುವನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಜೆಯಿಂದ ಸೇವೆ ಪುನರಾರಂಭವಾಗಿದೆ.

ಕಾರಾಗೃಹಗಳಲ್ಲಿ ಹಿಂಸಾಚಾರ

ಕಠ್ಮಂಡುವಿನ ಆಗ್ನೇಯ ಭಾಗದ ರಾಮೆಛಾಪ್ ಜಿಲ್ಲಾ ಕಾರಾಗೃಹದಲ್ಲಿ ಹಿಂಸಾಚಾರ ಸಂಭವಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸೇನೆ ಗುಂಡಿನ ದಾಳಿ ನಡೆಸಿದೆ. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು,12 ಮಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿಯ ಲಾಭ ಪಡೆದ ಹಲವು ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ.

ನೇಪಾಳದ ಕಿಶೋರ್ ಜೈಲಿನಲ್ಲಿ ನಡೆದ ಹಿಂಸಾಚಾರದಲ್ಲಿ ಐವರು ಮೃತಪಟ್ಟಿದ್ದಾರೆ. ವಿವಿಧ ಜೈಲುಗಳಿಂದ ಒಟ್ಟು 7ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದಾರೆ.

ಹಿಂಸಾಚಾರದ ಸಾವು-ನೋವು

ಕಳೆದ ಭಾನುವಾರದಿಂದ ನಡೆದ ಪ್ರತಿಭಟನೆಗಳಲ್ಲಿ ಒಟ್ಟು 30 ಮಂದಿ ಮೃತಪಟ್ಟಿದ್ದಾರೆ. 1,061 ಮಂದಿ ಗಾಯಗೊಂಡಿದ್ದು, ಅವರಲ್ಲಿ 719 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನೂ 274 ಮಂದಿ ಆಸ್ಪತ್ರೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಮಧ್ಯೆ, ಮಧ್ಯಂತರ ನಾಯಕತ್ವ ವಹಿಸುವ ಕುರಿತು ಗೊಂದಲಗಳು ಸೃಷ್ಟಿಯಾಗಿದ್ದು, ಪ್ರತಿಭಟನೆ ನಡೆಸುತ್ತಿರುವ ‘ಜೆನ್ Z’ ಗುಂಪು ಯಾರನ್ನು ಮಧ್ಯಂತರ ಸರ್ಕಾರದ ನಾಯಕರನ್ನಾಗಿ ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿದೆ.

ನೇಪಾಳ ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕಾರ್ಕಿ, ಕಠ್ಮಂಡು ಮೇಯರ್ ಬಲೆಂದ್ರ ಶಾ, ಧರಣ್ ಮೇಯರ್ ಹರ್ಕ ಸಾಂಪಾಂಗ್ ಹೆಸರುಗಳು ಮುನ್ನೆಲೆಯಲ್ಲಿವೆ.

Read More
Next Story