
ನಮ್ಮ ಮೆಟ್ರೋ
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ: 2 ಮೆಟ್ರೋ ನಿಲ್ದಾಣ ಬಂದ್!
ಮೆಟ್ರೋ ರೈಲುಗಳಲ್ಲೂ ಜನಸಾಗರವೇ ಹರಿದುಬರುತ್ತಿರುವುದರಿಂದ ಯಾವುದೇ ಅಪಾಯಗಳು, ಕಾಲ್ತುಳಿತ ಸಂಭವಿಸಬಾರದು ಎಂಬ ಉದ್ದೇಶದಿಂದ 2 ಮೆಟ್ರೋ ನಿಲ್ದಾಣಗಳಲ್ಲಿ ಸೇವೆ ಸ್ಥಗಿತ ಮಾಡಲಾಗಿದೆ.
ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಮೊದಲ ಬಾರಿಗೆ ಚಾಂಪಿಯನ್ ಆದ ಸಂಭ್ರಮವು ದುರಂತಕ್ಕೆ ತಿರುಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆಯೋಜಿಸಿದ್ದ ವಿಜಯೋತ್ಸವದ ವೇಳೆ ಉಂಟಾದ ಭಾರೀ ಜನಸಂದಣಿಯಿಂದ ಕಾಲ್ತುಳಿತ ಸಂಭವಿಸಿ 10 ಜನರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಒಂದು ಮಗು ಸಹ ಸೇರಿದ್ದು, ಇನ್ನೂ ಅನೇಕರ ಸ್ಥಿತಿ ಗಂಭೀರವಾಗಿದೆ. ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ನೇರಳೆ ಮಾರ್ಗದ ಎರಡು ಮೆಟ್ರೋ ನಿಲ್ದಾಣಗಳಾದ ವಿಧಾನಸೌಧ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಆರ್ಸಿಬಿ ತಂಡವು 18 ವರ್ಷಗಳಲ್ಲಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ, ವಿಜಯಯಾತ್ರೆಯನ್ನು ಕಣ್ತುಂಬಿಕೊಳ್ಳಲು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಮಿತಿಮೀರಿದ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಉಂಟಾದ ಕಾಲ್ತುಳಿತದಿಂದಾಗಿ ಪರಿಸ್ಥಿತಿ ಕೈಮೀರಿದೆ.
ಮೆಟ್ರೋ ರೈಲುಗಳಲ್ಲೂ ಜನಸಾಗರವೇ ಕ್ರೀಡಾಂಗಣದತ್ತ ಹರಿದು ಬರುತ್ತಿರುವುದರಿಂದ ಮತ್ತಷ್ಟು ಅಪಾಯಗಳು ಅಥವಾ ಕಾಲ್ತುಳಿತ ಸಂಭವಿಸಬಾರದು ಎಂಬ ಉದ್ದೇಶದಿಂದ ನಮ್ಮ ಮೆಟ್ರೋ ಅಧಿಕಾರಿಗಳು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ನೇರಳೆ ಮಾರ್ಗದಲ್ಲಿರುವ ಕಬ್ಬನ್ ಪಾರ್ಕ್ ಮತ್ತು ವಿಧಾನಸೌಧ ಮೆಟ್ರೋ ನಿಲ್ದಾಣಗಳನ್ನು ಇಂದು (ಜೂನ್ 4) ಸಂಜೆ 4:30ರಿಂದಲೇ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಈ ಎರಡು ನಿಲ್ದಾಣಗಳಲ್ಲಿ ಮೆಟ್ರೋ ರೈಲುಗಳು ನಿಲ್ಲುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆರ್ಸಿಬಿ ಅಭಿಮಾನಿಗಳ ಸಂಭ್ರಮಾಚರಣೆಯು ಈ ದುರಂತಕ್ಕೆ ಕಾರಣವಾಗಿದ್ದು, ಆರ್ಸಿಬಿ ಗೆಲುವಿನ ಹರ್ಷದ ನಡುವೆ ಸೂತಕದ ಛಾಯೆ ಆವರಿಸಿದೆ.