ಸಚಿವೆಗೆ ಅಶ್ಲೀಲ ನಿಂದನೆ ಪ್ರಕರಣ | ವಿವಾದದಿಂದ ರಾಜಕೀಯ ಲಾಭವಾಗಿದ್ದು ಯಾರಿಗೆ?
ಅಸಭ್ಯ ಹೇಳಿಕೆ ಆರೋಪದ ವಿಷಯದಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಗಟ್ಟಿಯಾದ ದನಿ ಎತ್ತಿದರು. ಪ್ರಕರಣದ ಕುರಿತು ಮಾತನಾಡುವಾಗ ಕಣ್ಣೀರಿಟ್ಟು ತಮಗಾಗಿರುವ ನೋವನ್ನು ತೋಡಿಕೊಂಡರು.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆ ವಿಚಾರ ಬಹಳಷ್ಟು ಬೆಳವಣಿಗೆಗಳಿಗೆ ಕಾರಣವಾಗುತ್ತಿದೆ. ಜ.1 ರಂದು ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೈಕಮಾಂಡ್ ಜೊತೆ ಚರ್ಚಿಸಿ ಸಂಪುಟ ಪುನಾರಚನೆ ಮಾಡಲಾಗುವುದು ಎಂದಿದ್ದರು.
ಆದರೆ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಅದಕ್ಕಿಂತ ಮೊದಲೇ ಸಂಪುಟ ಪುನಾಚರನೆ ಗುಸುಗುಸು ಹಬ್ಬಿತ್ತು. ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದವರೂ ಸೇರಿದಂತೆ ಕೆಲವರನ್ನು ಸಂಪುಟದಿಂದ ಬಿಡಲಾಗುತ್ತದೆ ಎಂಬ ಚರ್ಚೆ ನಡೆದಿತ್ತು. ಹೀಗಾಗಿ ಸಂಪುಟದಲ್ಲಿರುವ ಕೆಲವು ಮಂತ್ರಿಗಳು ತಮ್ಮ ಸ್ಥಾನ ಉಳಿಸಿಕೊಳ್ಳಲು ಮುಂದಾಗಿದ್ದರು. ಜೊತೆಗೆ ಹಿರಿಯ ಶಾಸಕರು ಸಂಪುಟ ಸೇರಲು ತೀವ್ರ ಪ್ರಯತ್ನಗಳನ್ನು ನಡೆಸಿದ್ದರು. ಇದೀಗ ಜನವರಿ ಎರಡನೇ ವಾರದಲ್ಲಿ ಸಂಪುಟ ಪುನಾರಚನೆ ಆಗುತ್ತದೆ ಎಂಬ ಮುನ್ಸೂಚನೆ ಕಾಂಗ್ರೆಸ್ ಶಾಸಕರಿಗೆ ಸಿಕ್ಕಿದೆ ಎನ್ನಲಾಗುತ್ತಿದೆ.
ಮಾರ್ಚ್ ತಿಂಗಳಿನಲ್ಲಿ ಬಜೆಟ್ ಅಧಿವೇಶನವಿದೆ. ಅದಕ್ಕಿಂತ ಮೊದಲು ವರ್ಷದ ಮೊದಲ ವಿಧಾನಮಂಡಲ ಜಂಟಿ ಅಧಿವೇಶನ ನಡೆಯಬೇಕಿದೆ. ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರ ಭಾಷಣ, ಭಾಷಣದ ಮೇಲೆ ಚರ್ಚೆ ನಡೆಯಬೇಕು. ಹೀಗಾಗಿ ಈಗ ಸಂಪುಟ ವಿಸ್ತರಣೆ ಸಾಧ್ಯವಾ? ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಿದರೆ ಎಲ್ಲವೂ ಸಾಧ್ಯ ಎನ್ನುತ್ತಾರೆ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು.
ಅದೇನೆ ಇದ್ದರೂ ಕೂಡ ಸಂಪುಟ ಪುನಾರಚನೆ ಆದರೆ ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡಲು ತೀರ್ಮಾನಸಲಾಗಿದೆ ಎಂಬ ಮಾಹಿತಿಯಿದೆ. ಹಲವು ಲೆಕ್ಕಾಚಾರಗಳನ್ನಿಟ್ಟುಕೊಂಡು ಸಂಪುಟಕ್ಕೆ ಹೊಸಬರನ್ನು ಸೇರಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಈ ಮಧ್ಯೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ನಡೆದ ಘಟನೆಯ ಕುರಿತು ಕಾಂಗ್ರೆಸ್ ವಲಯದಲ್ಲಿ ಬಹಳಷ್ಟು ಚರ್ಚೆಗಳಾಗುತ್ತಿವೆ.
ಅಸಭ್ಯ ಹೇಳಿಕೆ ಆರೋಪ ಪ್ರಕರಣದಿಂದ ರಾಜಕೀಯ ಲಾಭ?
ಬೆಳಗಾವಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಆಡಿದ್ದ ಮಾತಿಗೆ ಬಹಳಷ್ಟು ವಿರೋಧ ವ್ಯಕ್ತವಾಗಿತ್ತು. ಇದೇ ವಿಚಾರವನ್ನಿಟ್ಟುಕೊಂಡು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಬಿಜೆಪಿ ಅವಮಾನ ಮಾಡುತ್ತಿದೆ. ಹಾಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಉಭಯ ಸದನಗಳಲ್ಲಿ ಗದ್ದಲ ಶುರುವಾಗಿತ್ತು.
ಅದೇ ಸಂದರ್ಭದಲ್ಲಿ ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ ಅಸಭ್ಯ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಬಹಳಷ್ಟು ಚರ್ಚೆ, ಆರೋಪ-ಪ್ರತ್ಯಾರೋಪಗಳು ನಡೆದವು. ಈ ಪ್ರಕರಣವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಹಳಷ್ಟು ಗಂಭೀರವಾಗಿ ತೆಗೆದುಕೊಂಡು ಅದನ್ನು ರಾಷ್ಟ್ರೀಯ ವಿಚಾರವನ್ನಾಗಿ ಮಾಡುವಲ್ಲಿ ಸಫಲರಾದರು. ಆ ಪ್ರಕರಣದ ವಿಷಯದಲ್ಲಿ ಅವರ ಕಾನೂನು ಹೋರಾಟ ನಿರೀಕ್ಷಿತ ಗುರಿ ಮುಟ್ಟುವಲ್ಲಿ ಹಲವು ಕಾನೂನು ತೊಡಕುಗಳು ಎದುರಾಗಿವೆ. ಆದರೆ, ಅದರಿಂದ ಅವರಿಗೆ ರಾಜಕೀಯ ಲಾಭವಾಯಿತು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಪ್ರಕರಣ ಬೆಳೆಸಿದ್ದರಿಂದ ಪಕ್ಷಕ್ಕೆ ಇರಿಸುಮುರಿಸು?
ಆದರೆ ಇಡೀ ಪ್ರಕರಣವನ್ನು ಬೆಳೆಸುವುದು ಬೇಡ ಎಂಬ ಹೇಳಿಕೆಯನ್ನು ಸಚಿವ ಸತೀಶ್ ಜಾರಕಿಹೊಳಿ ಕೊಟ್ಟಿದ್ದರು. ಘಟನೆ ಆಗಿದ್ದು ಆಗಿಹೋಗಿದೆ ಮುಂದುವರಿಸುವುದರಲ್ಲಿ ಅರ್ಥವಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದರು.
ದೇಶದಲ್ಲಿ ಇಂಥ ಘಟನೆಗಳು ಇದೇ ಹೊಸದೇನಲ್ಲ. ಸಂಸತ್ತು, ವಿಧಾನಸಭೆಯಲ್ಲಿ ಬಹಳಷ್ಟು ಆಗಿವೆ. ಘಟನೆಗೆ ಕ್ಷಮೆ ಕೇಳಿದ ಬಳಿಕ ಮುಗಿದು ಹೋಗಿವೆ. ಈಗಲೂ ಅದೇ ರೀತಿ ಮುಗಿಸೋದು ಒಳ್ಳೆಯದು. ಸಾರ್ವಜನಿಕವಾಗಿ ಈ ಪ್ರಕರಣ ಮುಂದುವರಿಸುವುದು ಅನವಶ್ಯಕ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದರು. ಪ್ರಕರಣವನ್ನು ಬೆಳೆಸುವುದು ಬೇಡ, ಅದರಿಂದ ಆಗುವುದು ಏನು ಇಲ್ಲ. ಬೆಳೆಸಿದಷ್ಟು ಪಕ್ಷಕ್ಕೆ ಇರಿಸುಮುರಿಸಾಗುತ್ತದೆ ಎಂಬ ಚರ್ಚೆಗಳು ಕಾಂಗ್ರೆಸ್ ಪಕ್ಷದಲ್ಲಿ ನಡೆದಿದ್ದವು. ಆದರೂ ಪ್ರಕರಣವನ್ನು ಸಚಿವೆ ಹೆಬ್ಬಾಳ್ಕರ್ ಅಷ್ಟಕ್ಕೆ ಬಿಡದೇ ಅದನ್ನು ರಾಷ್ಟ್ರೀಯ ಮಟ್ಟದ ಚರ್ಚೆಯ ವಸ್ತುವಾಗಿಸುವ ಪ್ರಯತ್ನ ನಡೆಸಿದ್ದರು.
ಮಂತ್ರಿಸ್ಥಾನ ಉಳಿಸಿಕೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಯಾಕೆಂದರೆ ಸಂಪುಟ ಪುನಾರಚನೆ ಆದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸಂಪುಟದಿಂದ ಕೈಬಿಟ್ಟು ಆ ಸ್ಥಾನಕ್ಕೆ ಬೇರೊಬ್ಬ ಶಾಸಕಿಯನ್ನು ಸಚಿವರನ್ನಾಗಿ ಮಾಡುವ ಸಾಧ್ಯತೆ ಹೆಚ್ಚಿತ್ತು. ಹೀಗೆ ಮಾಡುವುದರಲ್ಲಿಯೂ ಕೂಡ ರಾಜಕೀಯ ಲೆಕ್ಕಾಚಾರದಿಂದ ಬೇರೆಯವರಿಗೆ ಅವಕಾಶ ಮಾಡಿಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದರು ಎನ್ನಲಾಗಿದೆ. ಆದರೆ ಅದಕ್ಕಿಂತ ಮೊದಲು ಅಸಭ್ಯ ಹೇಳಿಕೆ ಆರೋಪ ಪ್ರಕರಣ ನಡೆದಿದ್ದರಿಂದ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಹಾಯವಾಯಿತೆ? ಎಂಬ ಚರ್ಚೆಗಳು ಕಾಂಗ್ರೆಸ್ ವಲಯದಲ್ಲಿ ನಡೆದಿವೆ.
ಅಸಭ್ಯ ಹೇಳಿಕೆ ಆರೋಪದ ವಿಷಯದಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಗಟ್ಟಿಯಾದ ದನಿ ಎತ್ತಿದರು. ಪ್ರಕರಣದ ಕುರಿತು ಮಾತನಾಡುವಾಗ ಕಣ್ಣೀರಿಟ್ಟು ತಮಗಾಗಿರುವ ನೋವನ್ನು ತೋಡಿಕೊಂಡರು. ಜೊತೆಗೆ ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ್ ಸೇರಿದಂತೆ ಸಂಪುಟದ ಬಹುತೇಕ ಸದಸ್ಯರು ಹೆಬ್ಬಾಳ್ಕರ್ ಬೆಂಬಲಕ್ಕೆ ನಿಂತರು.
ಮಹಿಳೆಗೆ ಅನ್ಯಾಯವಾದಾಗ ಅವರನ್ನು ಇಂತಹ ಸಂದರ್ಭದಲ್ಲಿ ಸಂಪುಟದಿಂದ ಕೈಬಿಡುವುದು ಸಾಧ್ಯವಾಗದ ಮಾತು. ಹೀಗಾಗಿಯೇ ಈ ಬೆಳವಣಿಗೆ ಕಾಂಗ್ರೆಸ್ ಪಕ್ಷದಲ್ಲಿ ಬಹಳಷ್ಟು ಚರ್ಚೆಯನ್ನು ಹುಟ್ಟು ಹಾಕಿತು.
ಸಿದ್ದರಾಮಯ್ಯ ರಾಜಕೀಯ ಲೆಕ್ಕಾಚಾರ ಏನು?
ಸಂಪುಟ ಪುನಾರಚನೆ ಆದಲ್ಲಿ 5 ರಿಂದ 6 ಸಚಿವರನ್ನು ಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದರು ಎನ್ನಲಾಗಿದೆ.
ಒಂದು ಮೂಲದ ಪ್ರಕಾರ ಉಳಿದ ಮೂರ್ನಾಲ್ಕು ಮಂತ್ರಿಗಳೊಂದಿಗೆ ಸಚಿವರಾದ ಕೆ.ಎಚ್. ಮುನಿಯಪ್ಪ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸಂಪುಟದಿಂದ ಬಿಡಲು ತೀರ್ಮಾನಿಸಲಾಗಿತ್ತು. ಮುನಿಯಪ್ಪ ಪುತ್ರಿ, ಎರಡನೇ ಬಾರಿ ಕೆಜಿಎಫ್ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕಿ ರೂಪಕಲಾ ಅವರಿಗೆ ಮಂತ್ರಿ ಸ್ಥಾನ ಕೊಡಲು ತೀರ್ಮಾನವಾಗಿತ್ತಂತೆ. ಹಾಗೆ ಮಾಡಿದಲ್ಲಿ ಮಹಿಳಾ ಕೋಟಾ ಹಾಗೂ ಪರಿಶಿಷ್ಟ ಸಮುದಾಯದ ಕೋಟಾವನ್ನು ಭರ್ತಿ ಮಾಡಿದಂತೆ ಆಗುತ್ತಿತ್ತು. ಮತ್ತೊಬ್ಬ ಹೊಸ ಶಾಸಕರಿಗೆ ಮಂತ್ರಿಯಾಗುವ ಅವಕಾಶ ಸೃಷ್ಟಿಯಾಗುತ್ತಿತ್ತು. ಇದನ್ನು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಆದರೆ, ಈ ನಡುವೆ ದಿಢೀರನೇ ಅಸಭ್ಯ ಹೇಳಿಕೆ ಪ್ರಕರಣದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಅನುಕಂಪ ನಿರ್ಮಾಣವಾಗಿದ್ದರಿಂದ ಮಂತ್ರಿ ಸ್ಥಾನ ಕಳೆದುಕೊಳ್ಳುವ ಅಪಾಯದಿಂದ ಬಚಾವಾದರು ಎಂಬ ಮಾತು ಕಾಂಗ್ರೆಸ್ ವಲಯದಲ್ಲಿದೆ.
ಔತಣಕೂಟದಲ್ಲಿಯೂ ಪುನಾರಚನೆ ಚರ್ಚೆ
ಜ. 2 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯ ನಂತರ ಸಚಿವ ಸತೀಶ್ ಜಾರಕಿಹೊಳಿ ಮಂತ್ರಿಗಳು ಹಾಗೂ ಕಾಂಗ್ರೆಸ್ ಶಾಸಕರಿಗೆ ಔತಣಕೂಟವನ್ನು ಏರ್ಪಡಿಸಿದ್ದರು. ಅದರಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟದಿಂದ ಕೆಲವರನ್ನು ಕೈಬಿಡುವ ಕುರಿತೂ ಆಪ್ತ ಸಚಿವರೊಂದಿಗೆ ಮಾತುಕತೆ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ ಸಂಪುಟ ಪುನಾಚರನೆ ಆದಲ್ಲಿ ಕೆಲವು ಮಂತ್ರಿಗಳು ಸ್ಥಾನ ಕಳೆದುಕೊಳ್ಳುವುದು ಖಚಿತವಾಗಿದೆ.
ಅಸಭ್ಯ ಹೇಳಿಕೆ ಆರೋಪದ ತನಿಖೆ ಎಲ್ಲಿಗೆ ಬಂತು?
ವಿಧಾನ ಪರಿಷತ್ನಲ್ಲಿ ನಡೆದಿದ್ದ ಅಸಭ್ಯ ಹೇಳಿಕೆ ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.
ಈಗಾಗಲೇ ತನಿಖಾಧಿಕಾರಿಗಳು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಅಸಭ್ಯ ಹೇಳಿಕೆ ಆರೋಪವನ್ನು ಎದುರಿಸುತ್ತಿರುವ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿ ಹೇಳಿಕೆಯನ್ನು ಸಿಐಡಿ ಪಡೆದುಕೊಂಡಿಲ್ಲ. ಜೊತೆಗೆ ಘಟನೆ ನಡೆದಿರುವ ವಿಧಾನ ಪರಿಷತ್ ಸಭಾಂಗಣದಲ್ಲಿ ಮಹಜರು ಮಾಡಲು ಅವಕಾಶ ಕೊಡುವುದಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಈಗಾಗಲೇ ಹೇಳಿದ್ದಾರೆ.
ಹೀಗಾಗಿ ಆ ಪ್ರಕರಣದ ತನಿಖೆ ಮುಗಿಯುತ್ತದೆಯೋ? ಇಲ್ಲವೊ? ಎಂಬಂತಹ ಸ್ಥಿತಿಯಿದೆ. ಒಟ್ಟಾರೆ ಪ್ರಕರಣದಿಂದ ಬಿಜೆಪಿಯಲ್ಲಿ ಸಿ.ಟಿ. ರವಿ ಮತ್ತಷ್ಟು ಪ್ರಭಾವಿಯಾಗಿದ್ದಾರೆ. ಜೊತೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಪರೋಕ್ಷವಾಗಿ ಮಂತ್ರಿ ಪದವಿ ಉಳಿಸಿಕೊಳ್ಳಲು ಸಹಾಯವಾಗಿದೆ ಎನ್ನಲಾಗುತ್ತಿದೆ.