C T Ravi Case | ಸಚಿವೆಗೆ ನಿಂದನೆ ಪ್ರಕರಣ: ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದ ಬಿಜೆಪಿ!
x
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಸಿ.ಟಿ. ರವಿ

C T Ravi Case | ಸಚಿವೆಗೆ ನಿಂದನೆ ಪ್ರಕರಣ: ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದ ಬಿಜೆಪಿ!

ವಿಧಾನ ಪರಿಷತ್​ನಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ ಆಡಿರುವ ಮಾತು ಬಿಜೆಪಿಗೆ ನುಂಗಲಾರದ ತುತ್ತಾಗಿದೆಯಾ? ಇಂಥದ್ದೊಂದು ಚರ್ಚೆ ಇದೀಗ ಬಿಜೆಪಿ ವಲಯದಲ್ಲಿಯೇ ನಡೆದಿದೆ.


ವಿಧಾನ ಪರಿಷತ್​ನಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ ಆಡಿರುವ ಮಾತು ಬಿಜೆಪಿಗೆ ನುಂಗಲಾರದ ತುತ್ತಾಗಿದೆಯಾ?

ಇಂಥದ್ದೊಂದು ಚರ್ಚೆ ಇದೀಗ ಬಿಜೆಪಿ ವಲಯದಲ್ಲಿಯೇ ಶುರುವಾಗಿದೆ. ಒಂದೆಡೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ‘ಭೇಟಿ ಬಚಾವೋ ಬೇಟಿ ಪಡಾವೋ’ ಎಂಬ ಧ್ಯೇಯ ವಾಕ್ಯವನ್ನಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದೆ. ಮತ್ತೊಂದೆಡೆ ಶಾಸಕಾಂಗದ ಸದನದಲ್ಲಿ ತನ್ನದೇ ಸದಸ್ಯ ಆಡಿರುವ ಮಾತಿನಿಂದ ಆಗಬಹುದಾದ ಹಿನ್ನಡೆಯ ಸಾಧ್ಯತೆಯನ್ನು ಕೇಂದ್ರ ಬಿಜೆಪಿ ಮನಗಂಡಿದೆ ಎನ್ನಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಮುಂದಾಗಬಹುದಾದ ಡ್ಯಾಮೇಜ್ ಕಂಟ್ರೋಲ್​ಗೆ ಬಿಜೆಪಿ ತನಗಿರುವ ಎಲ್ಲ ದಾರಿಗಳನ್ನು ಬಳಸಿಕೊಳ್ಳಲು ಮುಂದಾಗಿದ್ದು, ರಾಜಕೀಯ ಹೋರಾಟದೊಂದಿಗೆ ಕಾನೂನಾತ್ಮಕ ಹೋರಾಟಕ್ಕೂ ಇದೀಗ ಮುಂದಾಗಿದೆ. ಕಾಂಗ್ರೆಸ್ ಕೂಡ ಇದೇ ದಾಳವನ್ನು ಉರುಳಿಸುವ ಮೂಲಕ ತಿರುಗೇಟು ಕೊಡಲು ಸಿದ್ಧವಾಗಿದೆ.

ಬಿಜೆಪಿಗೆ ನುಂಗಲಾರದ ತುತ್ತಾಯ್ತಾ ರವಿ ಹೇಳಿಕೆ?

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ವಿಧಾನ ಪರಿಷತ್ ಸಭಾಂಗಣದಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ ಎಂಬ ಆರೋಪ ಎದುರಾಗಿದೆ.

ಆದರೆ ಶಿಸ್ತಿನ ಪಕ್ಷದ ನಾಯಕರು ಇದನ್ನು ಒಪ್ಪಿಕೊಳ್ಳುತ್ತಿಲ್ಲ. ಜೊತೆಗೆ ಸಿಟಿ ರವಿ ಸೇರಿದಂತೆ ಬಿಜೆಪಿಯ ಇತರ ಸದಸ್ಯರು ಆರೋಪವನ್ನು ತಳ್ಳಿ ಹಾಕಿದ್ದಾರೆ. ಈ ಮಧ್ಯೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೂಡ ನಮ್ಮಲ್ಲಿ ಈ ಕುರಿತು ಯಾವುದೇ ರೇಕಾರ್ಡ್ ಇಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಜೊತೆಗೆ ಸದನದ ಒಳಗೆ ಆಗಮಿಸಿ ಮಹಜರು ಮಾಡಲಿಕ್ಕೆ ಅವಕಾಶ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ರಾಜ್ಯಪಾಲರ ಮೊರೆ ಹೋದ ಬಿಜೆಪಿ ನಾಯಕರು

ಆದರೆ ಪ್ರಕರಣವನ್ನು ಇಷ್ಟಕ್ಕೆ ಬಿಡಲು ರಾಜ್ಯ ಕಾಂಗ್ರೆಸ್ ತಯಾರಿಲ್ಲ. ರಾಜಕೀಯ ಹೋರಾಟದೊಂದಿಗೆ ಕಾನೂನಾತ್ಮಕ ಹೋರಾಟ ಮಾಡಲೂ ಕಾಂಗ್ರೆಸ್ ಸರ್ಕಾರ ಸಿದ್ಧವಾಗಿದೆ. ಹೀಗಾಗಿಯೇ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವ ಮೂಲಕ ಬಿಜೆಪಿಗೆ ತಿರುಗೇಟು ಕೊಡಲು ಮುಂದಾಗಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ಕೂಡ ತನ್ನ ಪಟ್ಟು ಬಿಗಿಗೊಳಿಸಿದ್ದು, ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ನಿಷ್ಪಕ್ಷಪಾತ ತನಿಖೆಗೆ ಮನವಿ ಮಾಡಿಕೊಂಡಿದೆ.

ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಂಧನ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿ ಕೂಡಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸತ್ಯ ಶೋಧನಾ ತಂಡ ರಚಿಸುವಂತೆ ರಾಜ್ಯಪಾಲರಿಗೆ ಬಿಜೆಪಿ ಶಾಸಕಾಂಗ ಪಕ್ಷ ಮನವಿ ಮಾಡಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಮಂಗಳವಾರ (ಡಿ.24) ಸಂಜೆ ಭೇಟಿ ಮಾಡಿದ ಬಿಜೆಪಿ ನಿಯೋಗ, ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಶಾಸಕರಿಗೆ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದೆ.

ತನಿಖೆ ಮುಗಿಯುವುದು ಯಾವಾಗ?

ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿರುವ ಸರ್ಕಾರದ ನಡೆ ಪ್ರಕರಣವನ್ನು ಜೀವಂತವಾಗಿಡಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂಬುದಕ್ಕೆ ಸಾಕ್ಷಿ. ಯಾಕೆಂದರೆ ಪೊಲೀಸರು ಪ್ರಕರಣದ ತನಿಖೆಯ ಸಂದರ್ಭದಲ್ಲಿ ಘಟನೆ ನಡೆದಿರುವ ಸ್ಥಳದ ಮಹಜರನ್ನು ಮಾಡಲೇ ಬೇಕಾಗುತ್ತದೆ. ಅಂದರೆ ವಿಧಾನ ಪರಿಷತ್ ಸಭಾಂಗಣಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಆದರೆ ಸಭಾಂಗಣದ ಪ್ರವೇಶಕ್ಕೆ ಅವಕಾಶ ಕೊಡುವುದಿಲ್ಲ. ಆ ಅಧಿಕಾರವೂ ಪೊಲೀಸರಿಗಿಲ್ಲ ಎಂದು ಈಗಾಗಲೇ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಹಾಗಾಗಿ ಪೊಲೀಸರು ತನಿಖೆ ಮಾಡಿದರೂ ತನಿಖೆ ಪೂರ್ಣಗೊಳ್ಳಲು ಬಹಳಷ್ಟು ಸಮಯಾವಕಾಶ ಬೇಕಾಗಬಹುದು, ಅಥವಾ ತನಿಖೆ ಪೂರ್ಣವಾಗದೆ ಇರಬಹುದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಧರ್ಮಸ್ಥಳಕ್ಕೆ ಬನ್ನಿ: ಲಕ್ಷ್ಮೀ ಸವಾಲು

ಇನ್ನು ಈ ಮಧ್ಯೆ ಸಿ.ಟಿ. ರವಿ ಅವರಿಗೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೊಸ ಸವಾಲು ಹಾಕಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿರುವ ಅವರು, ನೀವು ಆ ಮಾತು ಆಡಿಲ್ಲ ಎಂದು ಹೇಳುತ್ತಿದ್ದೀರಿ, ಅದೇ ಮಾತನ್ನು ಧರ್ಮಸ್ಥಳಕ್ಕೆ ಬಂದು ಮಂಜುನಾಥನ ಮೇಲೆ ನೀವು ಪ್ರಮಾಣ ಮಾಡಿ ಹೇಳಿ. ನೀವು ಕೂಡ ನಿಮ್ಮ ಧರ್ಮಪತ್ನಿಯನ್ನು ಕರೆದುಕೊಂಡು ಬನ್ನಿ ಮಂಜುನಾಥನ ದೇವಸ್ಥಾನಕ್ಕೆ. ನಾನೂ ಕೂಡ ನನ್ನ ಕುಟುಂಬವನ್ನು ಕರೆದುಕೊಂಡು ಅಲ್ಲಿಗೆ ಬರುತ್ತೇನೆ. ನೈತಿಕತೆಯ ಪ್ರಶ್ನೆಯನ್ನು ನೀವು ಎತ್ತಿದ್ದೀರಿ. ನಿಮಗೆ ನೈತಿಕತೆ ಇದ್ದರೆ ಖಂಡಿತವಾಗಿಯೂ ನೀವು ಅಲ್ಲಿಗೆ ಬನ್ನಿ. ದತ್ತ ಮಾಲೆಯನ್ನು ಹಾಕಿದ್ದೀರಿ, ದತ್ತ ಪೀಠಕ್ಕೆ ಹೋಗುತ್ತೀರಿ. ಬಾಯಿ ತೆಗೆದರೆ ರಾಮನ ಹೆಸರನ್ನು ಹೇಳುತ್ತೀರಿ. ಅದಕ್ಕೆ ಬಂದು ಅಲ್ಲಿ ಪ್ರಮಾಣ ಮಾಡಿ ಎಂದು ಸವಾಲು ಹಾಕಿದ್ದಾರೆ.

ಒಟ್ಟಾರೆ, ಇಡೀ ಪ್ರಕರಣವನ್ನು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ತರುವಂತಹ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಇಡೀ ಪ್ರಕರಣದ ಅಂತ್ಯ ತಕ್ಷಣಕ್ಕೆ ಆಗುವಂತೆ ಕಾಣುತ್ತಿಲ್ಲ. ಆದರಿಂದಾಗಿ ಡಾ. ಅಂಬೇಡ್ಕರ್​ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಮಾನ ಮಾಡಿದ್ದಾರೆ ಎಂದು ಪ್ರತಿಭಟನೆ ನಡೆಸಿದಂತೆಯೆ, ಈ ಪ್ರಕರಣವನ್ನೂ ರಾಷ್ಟ್ರ ಮಟ್ಟಕ್ಕೆ ಕಾಂಗ್ರೆಸ್ ಕೊಂಡೊಯ್ಯುವ ಆತಂಕದಲ್ಲಿ ಬಿಜೆಪಿ ಇದೆ. ಹಾಗೊಂದು ವೇಳೆ ಆದಲ್ಲಿ, ಅದರಿಂದಾಗಿ ಆಗಬಹುದಾದ ಡ್ಯಾಮೇಜ್ ಕಂಟ್ರೋಲ್ ಮಾಡಲು ಬಿಜೆಪಿ ಇದೀಗ ಪ್ರಕರಣವನ್ನು ರಾಜಭವನಕ್ಕೆ ತಲುಪಿಸುವ ಮೂಲಕ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಮುಂದಾಗಿದೆ ಎನ್ನಲಾಗುತ್ತಿದೆ.

Read More
Next Story