
ಬೆಳ್ಳಂದೂರು ರಸ್ತೆ
ಬೈಯಪ್ಪನಹಳ್ಳಿ-ಹೊಸೂರು ಕಾರಿಡಾರ್‌ಗೆ ಸಿಆರ್‌ಎಸ್ ಅನುಮೋದನೆ
ಬೈಯಪ್ಪನಹಳ್ಳಿ-ಬೆಳ್ಳಂದೂರು ಮತ್ತು ಹೀಲಲಿಗೆ-ಆನೇಕಲ್ ಮಾರ್ಗಗಳ ಕಾರ್ಯಾರಂಭದಿಂದ ಬೆಂಗಳೂರು ಮತ್ತು ಹೊಸೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಮೆಮು ರೈಲು ಸೇವೆಗೆ ಅವಕಾಶ ದೊರೆಯುವ ನಿರೀಕ್ಷೆಯಿದೆ.
ಬೆಂಗಳೂರಿನ ಜನನಿಬಿಡ ಉಪನಗರ ಮಾರ್ಗಗಳಲ್ಲಿ ಒಂದಾಗಿರುವ ಬೈಯಪ್ಪನಹಳ್ಳಿ-ಹೊಸೂರು ಕಾರಿಡಾರ್ ಯೋಜನೆಗೆ ಗ್ನೀನ್ ಸಿಗ್ನಲ್ ದೊರೆತಿದೆ. ಬೆಳ್ಳಂದೂರು ರಸ್ತೆ ಮತ್ತು ಕಾರ್ಮೆಲಾರಂ ನಡುವಿನ ಡಬಲ್ ಲೈನ್ ಹಾಗೂ ಹುಸ್ಕೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ರೈಲು ಕಾರ್ಯಾಚರಣೆ ನಡೆಸಲು ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿ ಲಭಿಸಿದೆ.
ಇದರಿಂದ ಈ ಮಾರ್ಗದಲ್ಲಿ ಮೆಮು (MEMU - Mainline Electric Multiple Unit) ರೈಲು ಸೇವೆಗಳ ವಿಸ್ತರಣೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಸಮೀಪದ ಪ್ರಯಾಣಿಕರಿಗೆ ಸುಧಾರಿತ ಪ್ರವೇಶ ಒದಗಿಸಲು ಅನುವು ಮಾಡಿಕೊಟ್ಟಿದೆ.
ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ ಲಿಮಿಟೆಡ್ ಅಧಿಕಾರಿಗಳ ಪ್ರಕಾರ, ಸಿಆರ್‌ಎಸ್ ತಂಡವು ಟ್ರ್ಯಾಕ್‌ನ ಗುಣಮಟ್ಟ, ಸಿಗ್ನಲಿಂಗ್ ವ್ಯವಸ್ಥೆಗಳು, ನಿಲ್ದಾಣದ ಸೌಲಭ್ಯಗಳು ಮತ್ತು ವಿಭಾಗದ ಒಟ್ಟಾರೆ ಸನ್ನದ್ಧತೆ ಪರಿಶೀಲಿಸಿದೆ. ಕಾರಿಡಾರ್ ಎಲ್ಲಾ ಅಗತ್ಯ ಸುರಕ್ಷತೆ ಮತ್ತು ಕಾರ್ಯಾಚರಣೆಯ ಮಾನದಂಡಗಳನ್ನು ಪೂರೈಸಿದ್ದು, ಪ್ರಯಾಣಿಕರ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದೆ.
ಬೈಯಪ್ಪನಹಳ್ಳಿ-ಬೆಳ್ಳಂದೂರು ರಸ್ತೆ ವಿಭಾಗ ಮತ್ತು ಹೀಲಲಿಗೆ-ಆನೇಕಲ್ ರಸ್ತೆ ಮಾರ್ಗಗಳ ಕಾರ್ಯಾರಂಭದಿಂದ ಬೆಂಗಳೂರು ಮತ್ತು ಹೊಸೂರು ನಡುವೆ ಪ್ರಯಾಣಿಸುವ ದೈನಂದಿನ ಪ್ರಯಾಣಿಕರಿಗೆ ಮೆಮು ರೈಲು ಸೇವೆ ದೊರೆಯುವ ನಿರೀಕ್ಷೆಯಿದೆ.
ಪರಿಶೀಲನೆಯ ಸಮಯದಲ್ಲಿ ಹೊಸ ಡಬಲ್ ಲೈನ್‌ನಲ್ಲಿ ರೈಲುಗಳು ಗಂಟೆಗೆ 107.7 ಕಿ.ಮೀ. ಗರಿಷ್ಠ ವೇಗ ತಲುಪಿವೆ ಎಂದು ವರದಿಯಾಗಿದೆ. ಕೆ-ರೈಡ್ ಸಂಸ್ಥೆಯು ಬೆಳ್ಳಂದೂರು ರಸ್ತೆ-ಕಾರ್ಮೆಲಾರಂ ವಿಭಾಗ ಮತ್ತು ಹುಸ್ಕೂರು ನಿಲ್ದಾಣದಲ್ಲಿನ ಲೂಪ್ ಲೈನ್‌ಗಳಲ್ಲಿ 25 ಕೆವಿ ಎಸಿ ಎಲೆಕ್ಟ್ರಿಕ್ ಟ್ರಾಕ್ಷನ್ ಅನ್ನು ಸಹ ಅಳವಡಿಸಿದೆ. ಈ ನವೀಕರಣವು ಬೆಂಗಳೂರು ವಿಭಾಗದ ಅಡಿಯಲ್ಲಿ ಬೈಯಪ್ಪನಹಳ್ಳಿ-ಹೊಸೂರು ಮಾರ್ಗದ ಕಾರ್ಯಾಚರಣೆಯ ದಕ್ಷತೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ.
ಹುಸ್ಕೂರು ನಿಲ್ದಾಣವು ಆರಂಭದಲ್ಲಿ ಸರಕು ಸಾಗಣೆ ಕಾರ್ಯಾಚರಣೆ ನಿರ್ವಹಿಸಲಿದ್ದರೂ, ಅಂತಿಮವಾಗಿ ಬೃಹತ್ ಪ್ರಮಾಣದ ಪ್ರಯಾಣಿಕರ ದಟ್ಟಣೆ ನಿವಾರಿಸಲು ಅನುವಾಗುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಿಲ್ದಾಣವು ಎಲೆಕ್ಟ್ರಾನಿಕ್ ಸಿಟಿಯಿಂದ ಸುಮಾರು 5 ಕಿ.ಮೀ ದೂರದಲ್ಲಿದ್ದು, ಸುಮಾರು 10 ಕಿ.ಮೀ ದೂರದಲ್ಲಿರುವ ಹೀಲಲಿಗೆ ನಿಲ್ದಾಣಕ್ಕೆ ಹೆಚ್ಚು ಸುಲಭವಾಗಿ ತಲುಪಬಹುದಾದ ಪರ್ಯಾಯ ಮಾರ್ಗ ಒದಗಿಸಲಿದೆ. ಪ್ರಯಾಣಿಕರ ಸೇವೆಗಳು ಪ್ರಾರಂಭವಾದ ನಂತರ ಈ ಹೊಸ ನಿಲ್ದಾಣವು ದೈನಂದಿನ ಪ್ರಯಾಣವನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ನಿವಾಸಿಗಳು ಮತ್ತು ಪ್ರಯಾಣಿಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

