Bangalore Chitra Santhe | ಕಲಾಕೃತಿಗಳ ವೀಕ್ಷಣೆ, ಖರೀದಿಗೆ ಜನಸಾಗರ
x
ಬೆಂಗಳೂರಿನಲ್ಲಿ ಆರಂಭವಾಗಿರುವ ಚಿತ್ರಸಂತೆಗೆ ಸಿಎಂ ಚಾಲನೆ ನೀಡಿದರು

Bangalore Chitra Santhe | ಕಲಾಕೃತಿಗಳ ವೀಕ್ಷಣೆ, ಖರೀದಿಗೆ ಜನಸಾಗರ

Bangalore Chitra Santhe: ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ವಿವಿಧ ಭಾಗಗಳಿಂದ 1,500 ಕ್ಕೂ ಹೆಚ್ಚು ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿದ್ದಾರೆ.


ಬೆಂಗಳೂರಿನಲ್ಲಿ ಕಡಲೆಕಾಯಿ ಪರಿಷೆ, ಅವರೆ ಮೇಳದ ಬಳಿಕ ಮತ್ತೊಂದು ಜಾತ್ರೆಯ ಸುಗ್ಗಿ ಆರಂಭವಾಗಿದೆ. ಇಲ್ಲಿನ ಕುಮಾರಕೃಪ ರಸ್ತೆಯ ಚಿತ್ರಕಲಾ ಪರಿಷತ್‌ನಲ್ಲಿ ಬೆಳಿಗ್ಗೆ 6 ರಿಂದ ಚಿತ್ರಸಂತೆಗೆ ಅದ್ಧೂರಿ ಚಾಲನೆ ದೊರೆತಿದೆ. ಹೆಣ್ಣು ಮಗುವಿಗಾಗಿ ಮೀಸಲಿರಿಸಿರುವ ಈ ಬಾರಿಯ ಚಿತ್ರಸಂತೆಗೆ ಸಹಸ್ರಾರು ಸಂಖ್ಯೆಯ ಕಲಾವಿದರು, ಸಾರ್ವಜನಿಕರು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ದೇಶದ ವಿವಿಧ ಭಾಗದ ಕಲಾವಿದರು ಬಿಡಿಸಿರುವ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟವೂ ಜೋರಾಗಿದೆ.

ಚಿತ್ರಕಲಾ ಪರಿಷತ್ ಪ್ರವೇಶ ದ್ವಾರದಲ್ಲಿ ಬಾಲಕಿಯ ಬೃಹದಾಕಾರದ ಕಲಾಕೃತಿ ನಿರ್ಮಿಸಲಾಗಿದೆ. ಚಿತ್ರಸಂತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 'ಕಲಾಕೃತಿಗಳ ಪ್ರದರ್ಶನ'ಕ್ಕೆ ಚಾಲನೆ ನೀಡಿದರು.

ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ವಿವಿಧ ಭಾಗಗಳಿಂದ 1,500 ಕ್ಕೂ ಹೆಚ್ಚು ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿದ್ದು, ತಮ್ಮ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಚಿತ್ರಕಲಾ ಪರಿಷತ್ತಿನ ಗ್ಯಾಲರಿಯಲ್ಲಿ ಹಿರಿಯ ಕಲಾವಿದರು ರಚಿಸಿದ ಕಲಾಕೃತಿಗಳ ಪ್ರದರ್ಶನ ಆಯೋಜಿಸಲಾಗಿದೆ.

ಚಿತ್ರಕಲಾ ಪರಿಷತ್‌ ಪ್ರವೇಶ ದ್ವಾರದಲ್ಲಿ ನಿರ್ಮಿಸಿರುವ ಬಾಲಕಿಯ ಬೃಹತ್‌ ಕಲಾಕೃತಿ

ಚಿತ್ರಸಂತೆಯಲ್ಲಿ 100 ರೂ.ಗಳಿಂದ ಹಿಡಿದು ಲಕ್ಷಾಂತರ ರೂ.ಮೌಲ್ಯದ ಕಲಾಕೃತಿಗಳು ಪ್ರದರ್ಶನ ಹಾಗೂ ಮಾರಾಟಕ್ಕಿವೆ. ಸಾರ್ವಜನಿಕರು ಕಲಾವಿದರಿಂದ ನೇರವಾಗಿ ಕಲಾಕೃತಿಗಳನ್ನು ಖರೀದಿಸಬಹುದು.ರಾತ್ರಿ 9 ರವರೆಗೆ ನಡೆಯುವ ಚಿತ್ರಸಂತೆಗೆ ಅಂದಾಜು ಆರು ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ತಿಳಿಸಿದ್ದಾರೆ.

ಚಿತ್ರಸಂತೆಯಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ, ಕುಂಚ ಅಥವಾ ಪೆನ್ಸಿಲ್‌ನಿಂದ ಸ್ಥಳದಲ್ಲೇ ಭಾವಚಿತ್ರಗಳನ್ನು ರಚಿಸಿಕೊಡಲಾಗುತ್ತಿದೆ. ಮನೆಗೊಂದು ಚಿತ್ರ’ ಎಂಬ ಶೀರ್ಷಿಕೆಯಡಿ ಚಿತ್ರಕಲಾವಿದರಿಗೆ ಪ್ರೋತ್ಸಾಹ ನೀಡಲು ಚಿತ್ರಸಂತೆ ಆಯೋಜಿಸಲಾಗಿದೆ.


ಮೈಸೂರು ಸಾಂಪ್ರದಾಯಿಕ ಶೈಲಿ, ರಾಜಸ್ಥಾನಿ ಶೈಲಿ, ಮಧುಬನಿಯ ಶೈಲಿ, ತೈಲ ಮತ್ತು ಜಲವರ್ಣದ ಕಲಾಕೃತಿಗಳು ಚಿತ್ರಸಂತೆಯಲ್ಲಿ ಕಂಗೊಳಿಸುತ್ತಿವೆ. ಜೊತೆಗೆ ಅಕ್ರಲಿಕ್ ಕೊಲಾಜ್ ಲಿಥೋಗ್ರಾಫ್ ಮೊದಲಾದ ಪ್ರಕಾರಗಳ ಕಲಾಕೃತಿಗಳು ಮಾರಾಟಕ್ಕೆ ಲಭ್ಯವಿವೆ ಎಂದು ಪರಿಷತ್ ತಿಳಿಸಿದೆ.

ಚಿತ್ರಸಂತೆ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಲಿದ್ದು, ವಾಹನಗಳ ಪಾರ್ಕಿಂಗ್‌ಗೆ ರೈಲ್ವೆ ಪ್ಯಾರಲಲ್ ರಸ್ತೆ, ಕ್ರೆಸೆಂಟ್ ರಸ್ತೆಯಲ್ಲಿ ಗುರುರಾಜ ಕಲ್ಯಾಣ ಮಂಟಪದಿಂದ ಜನಾರ್ಧನ ಹೋಟೆಲ್ ವರೆಗೆ, ರೇಸ್ಕೋರ್ಸ್ ರಸ್ತೆಯಲ್ಲಿ ಟ್ರಿಲೈಟ್ ಜಂಕ್ಷನ್ನಿಂದ ಮೌರ್ಯ ಜಂಕ್ಷನ್ ವರೆಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ.

Read More
Next Story