
Crime News : ಬೆಂಗಳೂರಿನ ಖ್ಯಾತಿಗೆ ಚ್ಯುತಿ ತರುತ್ತಿರುವ ಮಹಿಳಾ ದೌರ್ಜನ್ಯ ಪ್ರಕರಣಗಳು
ನಗರ ಪೊಲೀಸರು ಗಸ್ತು ತೀವ್ರಗೊಳಿಸಿ, ಸಿಸಿ ಕ್ಯಾಮೆರಾಗಳ ಸಂಖ್ಯೆಯನ್ನು ಹೆಚ್ಚಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಬೆಂಗಳೂರು "ಬೀದಿ ಕಾಮಣ್ಣರ ಸಿಟಿ" ಎಂಬ ಕುಖ್ಯಾತಿಗೆ ಒಳಗಾಗುವ ಸಾಧ್ಯತೆಯೇ ಹೆಚ್ಚಿದೆ
ಸಿಲಿಕಾನ್ ಸಿಟಿ ಎಂದೇ ವಿಶ್ವ ವಿಖ್ಯಾತಿ ಪಡೆದಿರುವ ಮಹಾನಗರ ಬೆಂಗಳೂರು ಇತ್ತೀಚಿನ ದಿನಗಳಲ್ಲಿ 'ಬೀದಿ ಕಾಮಣ್ಣರ' ನಗರ ಎಂಬ ಹೊಸ ಗುರುತನ್ನು ಪಡೆಯುತ್ತಿದೆಯೇ ಎಂಬ ಆತಂಕ ಜನರಲ್ಲಿ ಮೂಡಿದೆ. ನಗರದಲ್ಲಿ ನಿರಂತರವಾಗಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳದ ಘಟನೆಗಳು ಈ ಆತಂಕಕ್ಕೆ ಕಾರಣವಾಗಿವೆ. ಕಾನೂನು ಮತ್ತು ಸುರಕ್ಷತೆಯಲ್ಲಿ ಪೊಲೀಸ್ ಅಧಿಕಾರಿಗಳು ವೈಫಲ್ಯ ಎದುರಿಸುತ್ತಿದ್ದಾರೆ ಎಂಬುದಾಗಿ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಏಪ್ರಿಲ್ 3 ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಸುದ್ದಗುಂಟೆಪಾಳ್ಯದ ಭಾರತಿ ಬಡಾವಣೆಯ ಒಂದನೇ ಕ್ರಾಸ್‌ನಲ್ಲಿ ಇಬ್ಬರು ಯುವತಿಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ಅವರನ್ನು ಹಿಂಬಾಲಿಸಿ ಅನುಚಿತವಾಗಿ ವರ್ತಿಸಿದ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳೀಯ ನಿವಾಸಿ ಲೋಕೇಶ್ ಗೌಡ ಈ ದೃಶ್ಯಾವಳಿಗಳ ಆಧಾರದ ಮೇಲೆ ಸದ್ದುಗುಂಟೆಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆಣ್ಣೂರು ಮುಖ್ಯರಸ್ತೆಯಲ್ಲಿ, ಏಪ್ರಿಲ್ 5ರಂದು ಬೆಳಗಿನ 4:30 ಗಂಟೆ ಸುಮಾರಿಗೆ, 25 ವರ್ಷದ ಯುವತಿಯೊಬ್ಬಳು ಸ್ನೇಹಿತೆ ಮನೆಯಿಂದ ಸ್ಕೂಟಿಯಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ, ಇಬ್ಬರು ಬೈಕ್ ಸವಾರರು ಆಕೆಯನ್ನು ಹಿಂಬಾಲಿಸಿ ಅಸಭ್ಯವಾಗಿ ವರ್ತಿಸಿದ್ದ. ಯುವತಿ ಸಹಾಯಕ್ಕಾಗಿ ಕೂಗಿದ ಬಳಿಕ ಸಾರ್ವಜನಿಕರು ಬಂದಿದ್ದರೂ, ಚಾಕು ತೋರಿಸಿ ಪರಾರಿಯಾಗಿದ್ದರು.
ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಿಂಗ್ ರಸ್ತೆಯಲ್ಲಿ, ಬೆಳಗಿನ 4 ಗಂಟೆಗೆ ಅಸ್ಸಾಂ ಮೂಲದ 19 ವರ್ಷದ ಯುವತಿಯೊಬ್ಬಳು ತನ್ನ ಸಹೋದರನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಆಟೋ ಚಾಲಕರಿಬ್ಬರು ಆಕೆಯ ಮೇಲೆ ದೌರ್ಜನ್ಯ ಎಸಗಿದ್ದರು. ಸಹೋದರನ ಮೇಲೆ ಹಲ್ಲೆ ನಡೆಸಿ, ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.
ಬಿಟಿಎಂ ಲೇಔಟ್‌ನಲ್ಲಿ ರೀಲ್ಸ್ ಮಾಡುತ್ತಿದ್ದ ಮಹಿಳಾ ವ್ಲಾಗರ್ ಮೇಲೆ ಬೀದಿ ಕಾಮಿಯೊಬ್ಬ ಅನುಚಿತವಾಗಿ ವರ್ತಿಸಿ ಪರಾರಿಯಾಗಿದ್ದಾನೆ. ಜಯನಗರ, ರಾಮಮೂರ್ತಿನಗರದಂತಹ ಪ್ರದೇಶಗಳಲ್ಲಿ ಸಹ ಇಂತಹ ಘಟನೆಗಳು ವರದಿಯಾಗಿವೆ.
ಕಾಮುಕರ ಸಂಖ್ಯೆ ಹೆಚ್ಚಳಕ್ಕೆ ಕಾರಣವೇನು?
ಈ ಘಟನೆಗಳು ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕಾಮುಕರ ದೌರ್ಜನ್ಯಗಳಿಗೆ ಸಾಕ್ಷಿಯಾಗಿವೆ. ನಗರದಲ್ಲಿ ಗಂಡು- ಹೆಣ್ಣು ಎಂಬ ಭೇದವಿಲ್ಲದೆ ಹಗಲು ರಾತ್ರಿ ಎನ್ನದೇ ದುಡಿಯುವ ಜನರ ಮಧ್ಯೆ ಕೆಲವರು ಕುಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಈ ಎಲ್ಲ ಘಟನೆಗಳು ಪೊಲೀಸರು ಮತ್ತು ಕಾನೂನಿನ ಭಯವಿಲ್ಲದೆ ನಡೆಯುತ್ತಿರುವಂತೆ ಕಾಣುತ್ತಿದೆ. ಕೆಲವು ಪ್ರಕರಣಗಳಲ್ಲಿ ಸಿಸಿ ಕ್ಯಾಮೆರಾಗಳಲ್ಲಿ ದೃಶ್ಯಗಳು ಸೆರೆಯಾಗಿದ್ದರೂ, ಆರೋಪಿಗಳನ್ನು ಬಂಧಿಸುವ ಕೆಲಸ ಆಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪೊಲೀಸ್ ಇಲಾಖೆಯ ವೈಫಲ್ಯವೇ?
ಪೊಲೀಸರು ಕೆಲವು ಪ್ರಕರಣಗಳಲ್ಲಿ ತ್ವರಿತವಾಗಿ ಕ್ರಮ ಕೈಗೊಂಡಿದ್ದಾರೆ. ಮಹದೇವಪುರ ಘಟನೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಇತರ ಪ್ರಕರಣಗಳಲ್ಲಿ ಆರೋಪಿಗಳು ಪರಾರಿಯಾಗಿದ್ದು, ತನಿಖೆ ಎಂದೇ ಹೇಳಲಾಗುತ್ತಿದೆ. ಕರ್ನಾಟಕ ಗೃಹ ಸಚಿವ ಜಿ. ಪರಮೇಶ್ವರ ಅವರು ಈ ಘಟನೆಗಳ ಬಗ್ಗೆ ಪ್ರತಿಕ್ರಿಯಿಸಿ, "ದೊಡ್ಡ ನಗರದಲ್ಲಿ ಇಂತಹ ಘಟನೆಗಳು ಆಗಾಗ ನಡೆಯುತ್ತವೆ. ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಮತ್ತು ಗಸ್ತು ತೀವ್ರಗೊಳಿಸಲು ಸೂಚಿಸಲಾಗಿದೆ" ಎಂದು ಹೇಳಿದ್ದಾರೆ. ಅವರ ಹೇಳಿಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಗಳು ಮತ್ತು ಸಮಜಾಯಿಷಿಗಳ ನಡುವೆಯೂ ಈ ಘಟನೆಗಳು ಬೆಂಗಳೂರಿನ ಖ್ಯಾತಿಗೆ ಕಳಂಕ ತರುತ್ತಿವೆ. ಸಿಲಿಕಾನ್ ಸಿಟಿಯಲ್ಲಿ ಹಗಲು-ರಾತ್ರಿ ದುಡಿಯುವ ಮಹಿಳೆಯರ ಸುರಕ್ಷತೆಯ ಖಾತ್ರಿಯ ಪ್ರಶ್ನೆಗಳು ಏಳುತ್ತಿವೆ. ನಗರ ಪೊಲೀಸರು ಗಸ್ತು ತೀವ್ರಗೊಳಿಸಿ, ಸಿಸಿ ಕ್ಯಾಮೆರಾಗಳ ಸಂಖ್ಯೆಯನ್ನು ಹೆಚ್ಚಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಬೆಂಗಳೂರು "ಬೀದಿ ಕಾಮಣ್ಣರ ಸಿಟಿ" ಎಂಬ ಕುಖ್ಯಾತಿಗೆ ಒಳಗಾಗುವ ಸಾಧ್ಯತೆಯೇ ಹೆಚ್ಚಿದೆ.