Mysore MUDA Scam| ಹೈಕೋರ್ಟ್ ಆದೇಶದ ಪ್ರತಿಧ್ವನಿ;  ಸಿಬಿಐ ತನಿಖೆಗೆ ಕೋರಿ ರಾಜ್ಯಪಾಲರಿಗೆ ದೂರು
x

Mysore MUDA Scam| ಹೈಕೋರ್ಟ್ ಆದೇಶದ ಪ್ರತಿಧ್ವನಿ; ಸಿಬಿಐ ತನಿಖೆಗೆ ಕೋರಿ ರಾಜ್ಯಪಾಲರಿಗೆ ದೂರು

ಮುಡಾ ಅಕ್ರಮ ಮಾತ್ರವಲ್ಲ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆಯೂ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಗೆ 'ಸಿಟಿಜನ್ ರೈಟ್ಸ್ ಫೌಂಡೇಷನ್’ ಒತ್ತಾಯಿಸಿದೆ.


ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ದದ ಮುಡಾ ಹಗರಣ ಕುರಿತಂತೆ ರಾಜ್ಯಪಾಲರಿಗೆ ಮತ್ತೊಂದು ದೂರು ಸಲ್ಲಿಕೆಯಾಗಿದೆ.
"ಸಿದ್ದರಾಮಯ್ಯ ಕುಟುಂಬ ವಿರುದ್ದದ ಆರೋಪಗಳು ಗಂಭೀರವಾಗಿದ್ದು ನ್ಯಾಯಾಲಯವೇ ಶಾಕ್ ಆಗಿದೆ ಎಂದು ತೀರ್ಪಿನಲ್ಲಿ ಹೇಳಿದೆ. ಹೀಗಿರುವಾಗ ಲೋಕಾಯುಕ್ತದಿಂದ ಸಮರ್ಪಕ ತನಿಖೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಗೆ ಆದೇಶಿಸಲು ನಿರ್ದೇಶನ ನೀಡಬೇಕು"ದು 'ಸಿಟಿಜನ್ ರೈಟ್ಸ್ ಫೌಂಡೇಷನ್ (CRF)’ ರಾಜ್ಯಪಾಲರಿಗೆ ದೂರು ನೀಡಿದೆ. ಮುಡಾ ಅಕ್ರಮ ಮಾತ್ರವಲ್ಲ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆಯೂ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಗೆ 'ಸಿಟಿಜನ್ ರೈಟ್ಸ್ ಫೌಂಡೇಷನ್’ ಒತ್ತಾಯಿಸಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ದಲ್ಲಿ ನಿವೇಶನ ಹಂಚಿಕೆ ಅಕ್ರಮ ಮೂಲಕ ಸಾವಿರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು ಈ ಪ್ರಕರಣದ ಬಗ್ಗೆ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಲು ಕೋರಿ 'ಸಿಟಿಜನ್ ರೈಟ್ಸ್ ಫೌಂಡೇಷನ್’ದಿನಾಂಕ 03.07.2024ರಂದು ಮನವಿ ಸಲ್ಲಿಸಿತ್ತು. ಈ ಮನವಿ ಸಲ್ಲಿಸಿ ಸುಮಾರು ನಾಲ್ಕು ತಿಂಗಳುಗಳಾದರೂ ರಾಜ್ಯ ಸರ್ಕಾರ ಯಾವುದೇ ಉತ್ತರ ನೀಡದಿರುವುದು ರಾಜ್ಯ ಸರ್ಕಾರದ ಕಾರ್ಯವೈಖರಿ ಹೇಗಿದೆ ಎಂಬುದನ್ನು ತೋರಿಸಿಕೊಡುತ್ತಿದೆ ಎಂದು ಈ ದೂರಿನಲ್ಲಿ ರಾಜ್ಯಪಾಲರ ಗಮನಸೆಳೆದಿರುವ 'ಸಿಟಿಜನ್ ರೈಟ್ಸ್ ಫೌಂಡೇಷನ್ ಅಧ್ಯಕ್ಷ ಕೆ.ಎ.ಪಾಲ್, 'ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 5 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಭ್ರಷ್ಟಾಚಾರ ನಡೆದಿದೆ'. ಈ ಹಗರಣದಲ್ಲಿ ಸಚಿವರಾದ ಭೈರತಿ ಸುರೇಶ್, ಸಿದ್ದರಾಮಯ್ಯ ರವರ ಪುತ್ರ ಡಾ.ಯತೀಂದ್ರ, ಶಾಸಕ ಹರೀಶ್ ಗೌಡ, ರಾಕೇಶ್ ಪಾಪಣ್ಣ, ಮುಡಾ ಅಧ್ಯಕ್ಷ ಮರಿಗೌಡ, ಅಧ್ಯಕ್ಷರಾಗಿದ್ದ ಎಚ್.ವಿ.ರಾಜೀವ್, ನಟೇಶ್, ಆಯುಕ್ತರಾಗಿದ್ದ ದಿನೇಶ್ ಹಾಗೂ ಅವರ ಮೈದುನ ತೇಜಸ್ ಗೌಡ, ಸುದೀಪ್, ದಲ್ಲಾಳಿಗಳಾದ ಉತ್ತಮ್ ಗೌಡ, ಮೋಹನ್ ಹೆಸರುಗಳನ್ನು ಉಲ್ಲೇಖಿಸಿ ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್ 30.06.2024ರಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಿಎಂ ಪತ್ನಿ ಹೆಸರಿಗೂ ಅಕ್ರಮವಾಗಿ ಪರಿಹಾರ ನೀಡಲಾಗಿದೆ ಎಂದೂ ಆರೋಪಿಸಿರುವ ಶಾಸಕರಾದ ಎಚ್.ವಿಶ್ವನಾಥ್, ಮೈಸೂರಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರಲ್ಲಿ 3 ಎಕರೆ 16 ಗುಂಟೆ ಜಮೀನು ಇದ್ದು, ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರ ಸೋದರ ಸಂಬಂಧಿ ಮಲ್ಲಣ್ಣ ಎಂಬುವರು 1992ರಲ್ಲಿ ಖರೀದಿ ಮಾಡಿದ್ದರು. ನಂತರದಲ್ಲಿ ಈ ಜಮೀನನ್ನು ಪಾರ್ವತಮ್ಮ ಹೆಸರಿಗೆ ದಾನಪತ್ರವಾಗಿ ನೀಡಿದ್ದರು. 1994ರಲ್ಲಿ ಇದರ ಭೂಸ್ವಾಧೀನಕ್ಕೆ ಮುಡಾ ಪ್ರಕಟಣೆ ಹೊರಡಿಸಿತ್ತು. 1998ರಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದಾಗ ಇದನ್ನು ಡಿನೋಟಿಫೈ ಮಾಡಲಾಯಿತು. ಹೀಗಿದ್ದೂ ಮುಡಾ ಇದೇ ಜಮೀನಿಗೆ ಪರಿಹಾರ ವಿತರಿಸಿದೆ' ಎಂದು ವಿಶ್ವನಾಥ್‌ ಅವರು ಆರೋಪಿಸಿದ್ದರು. ಈ ಅಂಶಗಳನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಈ ಆರೋಪಗಳ ಬಗ್ಗೆ ಪ್ರಾಸಿಕ್ಯೂಷನ್ ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಪ್ರಶ್ನಿಸಿದ್ದ ಸಿಎಂ ಸಿದ್ದರಾಮಯ್ಯ ಅವರ ಧಾವೆಯನ್ನು ವಜಾ ಮಾಡಿರುವ ಹೈಕೋರ್ಟ್, ಮುಡಾ ಬಹುಕೋಟಿ ನಿವೇಶನ ಅಕ್ರಮದ ಬಗ್ಗೆ ನ್ಯಾಯಪೀಠವೇ ಶಾಕ್ ಆಗಿದೆ ಎಂದು ತೀರ್ಪಿನಲ್ಲಿ (ಪುಟ ಸಂಖ್ಯೆ 177/199 ಪ್ಯಾರಾ 50) ಉಲ್ಲೇಖಿಸಿದೆ.

ಮೂರು ಎಕರೆಗಿಂತ ಹೆಚ್ಚಿನ ಜಾಮೀನು ಕಳೆದುಕೊಂಡವರಿಗೆ 40x60 ಅಳತೆಯ ನಿವೇಶನ ಹಂಚಲು ಮುಡಾಕ್ಕೆ ಅವಕಾಶ ಇದೆ. ಆದರೆ ಈ ಪ್ರಕರಣವನ್ನು ಗಮನಿಸಿದರೆ ಕೋರ್ಟಿಗೆ ಶಾಕ್ ಅನ್ನಿಸುತ್ತಿದೆ. ಇದೊಂದು ಆಘಾತಕಾರಿ ವಿಷಯ. ಯಾಕೆಂದರೆ ಇಲ್ಲಿ ನೀಡಿರುವುದು 4800 ಚ.ಅಡಿ ಬದಲಿಗೆ 38,284 ಚ.ಅಡಿಯ 14 ನಿವೇಶನ. ಅರ್ಜಿದಾರರಾಗಿರುವ ಸಿದ್ದರಾಮಯ್ಯ ರವರ ಪತ್ನಿ ಈಗ 56 ಕೋಟಿ ರೂಪಾಯಿ ಮೌಲ್ಯದ 14 ನಿವೇಶನಗಳ ಒಡತಿಯಾಗಿದ್ದಾರೆ' ಎಂದು ಮಾನ್ಯ ಗೌರವಾನ್ವಿತ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಹೀಗಿರುವಾಗ ಈ ಗಂಭೀರ ಆರೋಪದ ಬಗ್ಗೆ ರಾಜ್ಯ ಸರ್ಕಾರದ ಅಧೀನದ ಸಂಸ್ಥೆಯು ತನಿಖೆ ನಡೆಸಿದ್ದೇ ಆದಲ್ಲಿ ಸತ್ಯಾಂಶ ಹೊರಬರುವುದು ಕಷ್ಟ ಸಾಧ್ಯ. ಹಾಗಾಗಿ ಮಾನ್ಯ ಗೌರವಾನ್ವಿತ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಲು ಆದೇಶಿಸಬೇಕಿದೆ ಎಂದು ಸಿಟಿಜನ್ ರೈಟ್ಸ್ ಫೌಂಡೇಶನ್ ರಾಜ್ಯಪಾಲರ ಗಮನಸೆಳೆದಿದೆ.

ಹಿಂದಿನ ಸರ್ಕಾರದಲ್ಲೂ ಸಾವಿರಾರು ಕೋಟಿ ರೂಪಾಯಿಗಳ ಹಲವು ಹಗರಣಗಳು:

ಇನ್ನೊಂದೆಡೆ, ನಿಕಟಪೂರ್ವ ಸರ್ಕಾರದ ಆಡಳಿತಾವಧಿಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ಹೈಕೋರ್ಟ್ ಪರಿವೀಕ್ಷಣೆಯಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸುವಂತೆಯೂ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 'ಸಿಟಿಜನ್ ರೈಟ್ಸ್ ಫೌಂಡೇಷನ್' 22.05.2023ರಂದು ಮನವಿ ಸಲ್ಲಿಸಲಾಗಿತ್ತು. 40% ಕಮೀಷನ್ ಆರೋಪ, ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ, ಪಿಡಬ್ಲೂಡಿ ಗುತ್ತಿಗೆಯಲ್ಲಿ 40%, ಮಠಗಳ ಅನುದಾನದಲ್ಲಿ 30%, ಸಲಕರಣೆ ಖರೀದಿಯಲ್ಲಿ 40% ಕಮೀಷನ್ ನಡೆದಿದೆ ಎಂದು ಸಿದ್ದರಾಮಯ್ಯ ಅವರೇ ಆರೋಪ ಮಾಡಿರುತ್ತಾರೆ. 'ಲಂಚದ ಪಟ್ಟಿ'ಯನ್ನೂ ಬಿಡುಗಡೆ ಮಾಡಿ, ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳ ವಿರುದ್ದದ ಜನಾಂದೋಲನಕ್ಕಾಗಿ 8447704940 ಸಂಖ್ಯೆಯ ಸಹಾಯವಾಣಿಯನ್ನೂ ಕಾಂಗ್ರೆಸ್ ಪಕ್ಷ ಪ್ರಾರಂಭಿಸಿತ್ತು. 'PayCM, SayCM' ಅಭಿಯಾನವನ್ನೂ ಆರಂಭಿಸಿತ್ತು. ಸರಣಿ ಅಭಿಯಾನಗಳಿಗೆ ಆಗಿನ ಸರ್ಕಾರ ಸ್ಪಂಧಿಸದೇ ಇದ್ದಾಗ 2024ರ ಮಾರ್ಚ್ 9ರಂದು 'ಕರ್ನಾಟಕ ಬಂದ್'ಗೆ ಕಾಂಗ್ರೆಸ್ ಪಕ್ಷ ಕರೆ ಕೊಟ್ಟಿರುತ್ತದೆ.

ಬೊಮ್ಮಾಯಿ ಸರ್ಕಾರದ ಹಲವು ಅಕ್ರಮಗಳ, ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ 'ರೇಟ್ ಕಾರ್ಡ್' ಬಿಡುಗಡೆ ಮಾಡಿ 'ನಾಲ್ಕೇ ವರ್ಷಗಳಲ್ಲಿ 40% ಸರ್ಕಾರ ಕನ್ನಡಿಗರಿಂದ 1,50,000 ಕೋಟಿಗೂ ಹೆಚ್ಚು ಹಣ ಲೂಟಿ ಮಾಡಿದೆ. ಇದೇ ಗತಿಯಲ್ಲಿ ಸಾಗಿದರೆ ನಮ್ಮ ರಾಜ್ಯವೇ ನಾಶವಾಗುತ್ತೆ ಎಂದು ಆರೋಪಿಸಿತ್ತು. ‘ಲೂಟಿಯನ್ನು ನಿಲ್ಲಿಸಿ' ಎಂಬ ಘೋಷಣೆಯೊಂದಿಗೆ 'ಭ್ರಷ್ಟಾಚಾರದ ರೇಟ್ ಕಾರ್ಡ್' ಬಿಡುಗಡೆ ಮಾಡಿತ್ತು. ಈ ಸಂಗತಿಗಳನ್ನು ಮುಂದಿಟ್ಟು 'ಸಿಟಿಜನ್ ರೈಟ್ಸ್ ಫೌಂಡೇಷನ್' ವತಿಯಿಂದ ದಿನಾಂಕ 22.05.2023ರಂದು ಮನವಿ ಸಲ್ಲಿಸಲಾಗಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರವು ಈ ಮನವಿಗೆ ನಿರೀಕ್ಷಿತ ರೀತಿಯಲ್ಲಿ ಸ್ಪಂಧಿಸಿಲ್ಲ.

ಈ ನಡುವೆ, ಇತ್ತೀಚಿಗೆ ನಡೆದ 16ನೇ ವಿಧಾನಸಭೆಯ ನಾಲ್ಕನೇ ಅಧಿವೇಶನದಲ್ಲಿ ದಿನಾಂಕ 19ನೇ ಜುಲೈ 2024ರಂದು ಸದನದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹೇಳಿಕೆ ನೀಡುತ್ತಾ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಈ ಹಗರಣಗಳ ಬಗ್ಗೆ ತನಿಖೆ ನಡೆಸುವುದಾಗಿ ಘೋಷಿಸಿದ್ದರು.

ಈ ಆರೋಪಗಳು ಗಂಭೀರ ಪ್ರಕರಣಗಳಾಗಿದ್ದು ಹೈಕೋರ್ಟ್ ಪರಿವೀಕ್ಷಣೆಯಲ್ಲಿ ಉನ್ನತಮಟ್ಟದ ತನಿಖೆಗೆ ಆದೇಶಿಸಬೇಕೆಂದು ಕೋರಿ 09.09.2024ರಂದು 'ಸಿಟಿಜನ್ ರೈಟ್ಸ್ ಫೌಂಡೇಶನ್' ಸಿಎಂ ಸಿದ್ದರಾಮಯ್ಯ ರವರಿಗೆ ಮತ್ತೊಮ್ಮೆ ದೂರು ಸಲ್ಲಿಸಿದೆ. ಆದರೆ, ಈ ಮನವಿಗೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಧಾನಸಭೆಯಲ್ಲಿ ಹೇಳಿದ ರೀತಿಯಲ್ಲಿ ಸಿದ್ದರಾಮಯ್ಯ ಅವರು ತನಿಖೆಗೂ ಆದೇಶಿಸಿಲ್ಲ.ಇದನ್ನು ಗಮನಿಸಿದರೆ 'ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ' ಎಂಬ ನಾಣ್ಣುಡಿ ಉದಾಹರಣೆಯಾಗಿ ನಿಲ್ಲುತ್ತದೆ ಎಂದು ರಾಜ್ಯಪಾಲರ ಗಮನಸೆಳೆದಿರುವ ಕೆ.ಎ.ಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಕೇಳಿಬಂದಿರುವ ಮುಡಾ ಹಗರಣ ಬಗ್ಗೆ ಹಾಗೂ ಹಿಂದಿನ ಸರ್ಕಾರದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಲು ಸೂಕ್ತ ಆದೇಶ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದೆ.

Read More
Next Story