ಸಿ.ಪಿ.ಯೋಗೇಶ್ವರ್ ಕುಟುಂಬ ಕಲಹ | ಪತ್ನಿ, ಪುತ್ರಿಯಿಂದ ಸುರ್ಜೇವಾಲಾಗೆ ದೂರು
x

ಸಿ.ಪಿ ಯೋಗೇಶ್ವರ್‌ ವಿರುದ್ಧ ಪುತ್ರಿ ಹಾಗೂ ಪತ್ನಿ ದೂರು ನೀಡಿದ್ದಾರೆ. 

ಸಿ.ಪಿ.ಯೋಗೇಶ್ವರ್ ಕುಟುಂಬ ಕಲಹ | ಪತ್ನಿ, ಪುತ್ರಿಯಿಂದ ಸುರ್ಜೇವಾಲಾಗೆ ದೂರು

ರಣದೀಪ್ ಸುರ್ಜೇವಾಲಾ ಅವರು ತಾಳ್ಮೆಯಿಂದ ತಮ್ಮ ಅಹವಾಲುಗಳನ್ನು ಆಲಿಸಿದರು ಎಂದು ಮಾಳವಿಕಾ ಸೋಲಂಕಿ ತಿಳಿಸಿದ್ದಾರೆ.


"ನನ್ನ ಪತಿಯ ಪ್ರಭಾವದಿಂದ ನಾನು, ನನ್ನ ಮಕ್ಕಳು ಉಸಿರಾಡುವುದಕ್ಕೂ ಆಗುತ್ತಿಲ್ಲ. ಒಬ್ಬ ತಾಯಿಯಾಗಿ ನ್ಯಾಯಕ್ಕಾಗಿ ಎಲ್ಲೆಲ್ಲಿ ಓಡಾಡಬೇಕೋ ಅಲ್ಲಲ್ಲಿ ಓಡಾಡುತ್ತಿದ್ದೇನೆ. ನಮ್ಮ ಮೇಲೆ ನಾಲ್ಕೈದು ಕೇಸ್ ಹಾಕಿದ್ದಾರೆ. ನಮಗೆ ಬೀದಿಗೆ ಇಳಿದು ಹೋರಾಟ ಮಾಡುವ ಹಣ ಹಾಗೂ ರಾಜಕೀಯ ಶಕ್ತಿ ಇಲ್ಲ. ನಮ್ಮಲ್ಲಿ ದುಃಖ ಮಾತ್ರ ಇದೆ".

ಹೀಗೆ ಹೇಳುತ್ತಲೇ ಕಣ್ಣೀರಾದವರು ಶಾಸಕ ಸಿ.ಪಿ. ಯೋಗೇಶ್ವರ್‌ ಅವರ ಮೊದಲ ಪತ್ನಿ ಮಾಳವಿಕಾ ಸೋಲಂಕಿ. ಇಷ್ಟು ದಿನ ಹಾದಿರಂಪವಾಗಿದ್ದ ಶಾಸಕ ಸಿ.ಪಿ. ಯೋಗೇಶ್ವರ್‌ ಅವರ ಕೌಟುಂಬಿಕ ಕಲಹ ಇದೀಗ ಕಾಂಗ್ರೆಸ್‌ ಹೈಕಮಾಂಡ್‌ ಅಂಗಳವನ್ನೂ ಮುಟ್ಟಿದೆ.

ಶಾಸಕ ಸಿ.ಪಿ.ಯೋಗೇಶ್ವರ್‌ ಅವರ ಮೊದಲ ಪತ್ನಿ ಮಾಳವಿಕಾ ಸೋಲಂಕಿ, ಪುತ್ರಿ ನಿಶಾ ಯೋಗೇಶ್ವರ್‌ ಅವರು ತಾವು ಅನುಭವಿಸುತ್ತಿರುವ ಯಾತನೆಯನ್ನು ಬುಧವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮುಂದೆ ತೋಡಿಕೊಂಡಿದ್ದಾರೆ.

ಸಿ.ಪಿ. ಯೋಗೇಶ್ವರ್ ಅವರ ಪತ್ನಿ ಮಾಳವಿಕಾ ಸೋಲಂಕಿ ಮಾತನಾಡಿ, " ನಮ್ಮ ಕೌಟುಂಬಿಕ ಸಮಸ್ಯೆಯನ್ನು ಸುರ್ಜೇವಾಲಾ ಅವರ ಮುಂದಿಟ್ಟಿದ್ದೇವೆ. ಡಿಸಿಎಂ ಹಾಗೂ ಗೃಹ ಸಚಿವರ ಜತೆ ಮಾತನಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ಕಾನೂನಿನ ಮೇಲೆ ನಮಗೆ ನಂಬಿಕೆ ಇದೆ. ನಮ್ಮ ಕುಟುಂಬದ ವಿಚಾರ ಕಾಂಗ್ರೆಸ್‌ ಕಚೇರಿ ಬಾಗಿಲು ತಟ್ಟಬೇಕಾದ ಸ್ಥಿತಿ ಬಂದಿದೆ ಎಂದು ಅಳಲು ತೋಡಿಕೊಂಡರು.

300 ಆಸ್ತಿಗಳ ಮೇಲೆ ತಡೆಯಾಜ್ಞೆ ತಂದಿದ್ದೇವೆ. ಈಗ ನಮ್ಮ ಮಕ್ಕಳಿಗೆ ಬೀದಿಗೆ ಬಂದು ಹೋರಾಟ ಮಾಡುವ ಶಕ್ತಿ ಇಲ್ಲ. ನಮ್ಮ ಹತ್ತಿರ ಹಣದ ಶಕ್ತಿ, ರಾಜಕೀಯ ಶಕ್ತಿ ಇಲ್ಲ. ದುಃಖ ಮಾತ್ರ ಇದೆ, ಆದರೆ, ಒಬ್ಬ ತಾಯಿಯಾಗಿ ನಾನು ಹೋರಾಡಲೇಬೇಕಿದೆ" ಎಂದು ಕಣ್ಣೀರಿಟ್ಟರು.

"ನನ್ನ ಮಗಳು ಹೊರಗೆ ಬಂದು ಮಾತಾಡಿದ್ದು ನಡೆದಿರುವ ವಿಚಾರಗಳ ಬಗ್ಗೆ ಮಾತ್ರ. ಈಗ ಸೋಷಿಯಲ್ ಮೀಡಿಯಾ, ಫೇಸ್‌ಬುಕ್ ಸೇರಿ ಎಲ್ಲವನ್ನೂ ತೆಗೆದುಹಾಕಿದ್ದಾರೆ. ಮಗಳ ವಾಕ್ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗಿದೆ. ಪರಿಸ್ಥಿತಿ ಒತ್ತಡಕ್ಕೆ ಅವಳು ಹೊರಗೆ ಬಂದು ಮಾತಾಡಿದ್ದಳು. ಹೈಕೋರ್ಟ್‌ನಲ್ಲಿ ನಮಗೆ ನ್ಯಾಯ ಸಿಕ್ಕಿದೆ. ಕೌಟುಂಬಿಕ ವಿಷಯವನ್ನು ಈಗ ಯಾಕೆ ಎಂದು ಎಲ್ಲರೂ ಕೇಳುತ್ತಾರೆ. ಫ್ಯಾಮಿಲಿ ವಿಚಾರ ಬಗೆಹರಿಸಿಕೊಳ್ಳಬೇಕೆಂಬುದು ಪಬ್ಲಿಕ್ ಲೈಫ್‌ನಲ್ಲಿ ಇರುವವರಿಗೆ ಮೊದಲು ಇರಬೇಕು. ವಿಚಾರ ಪರಿಹರಿಸಿಕೊಳ್ಳುವ ಜವಾಬ್ದಾರಿ ಅವರಿಗೇ ಇರಬೇಕಿತ್ತು. ನಾವು ಕೇವಲ ಕೇಸ್‌ಗಳಿಗೆ ಸ್ಪಂದಿಸುತ್ತಿದ್ದೇವೆ ಅಷ್ಟೇ" ಎಂದು ಮಾಳವಿಕಾ ಸೋಲಂಕಿ ಸ್ಪಷ್ಟಪಡಿಸಿದರು.

"ಯೋಗೇಶ್ವರ್ ಒಬ್ಬ ಜನಪ್ರತಿನಿಧಿ. ಅವರ ಕುಟುಂಬದ ವಿಷಯವನ್ನು ಅವರೇ ಬೀದಿಗೆ ತಂದಿದ್ದಾರೆ. ಇದರಿಂದ ಜನರಿಗೆ ಅವರು ಏನು ಸಂದೇಶ ಕೊಡುತ್ತಿದ್ದಾರೆ? ನಾಯಕರ ಮೇಲೆ, ನ್ಯಾಯದ ಮೇಲೆ ಭರವಸೆ ಇದೆ. ಸತ್ಯಕ್ಕೆ ಜಯ ಸಿಗಬಹುದು. ನಾವು ಈ ಹೋರಾಟ ಶುರು ಮಾಡಿಲ್ಲ. ಅವರೇ ಮೊದಲು ಕೇಸ್ ಹಾಕಿದ್ದು, ಅವರು ಕೋರ್ಟ್ ಕೇಸ್ ನಿಲ್ಲಿಸುತ್ತಿಲ್ಲ. ನಾವು ಅದಕ್ಕೆ ಪ್ರತಿಯಾಗಿ ಹೋರಾಟ ಮಾಡಬೇಕಾಗಿದೆ. ಒಂದು ಪೊಲೀಸ್ ಕೇಸ್ ಹಾಕಿದರೂ ತೆಗೆದುಕೊಳ್ಳುತ್ತಿಲ್ಲ. ಅಧಿಕಾರದಲ್ಲಿ ಇದ್ದರೆ ಜನ ಹೆದರಿಕೊಳ್ಳುತ್ತಾರೆ, ಹಾಗಾಗಿದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಯೋಗೀಶ್ವರ್‌ ಪುತ್ರಿ ನಿಶಾ ಯೋಗೇಶ್ವರ್ ಮಾತನಾಡಿ, "ನಮ್ಮ ಕುಟುಂಬದ ಸಮಸ್ಯೆಗಳನ್ನು ಸುರ್ಜೇವಾಲಾ ಗಮನಕ್ಕೆ ತಂದಿದ್ದೇವೆ. ಪರಿಶೀಲಿಸುವ ಭರವಸೆ ನೀಡಿದ್ದಾರೆ. ನಮ್ಮ ಕುಟುಂಬದ ಪ್ರಕರಣ ಕೋರ್ಟ್‌ನಲ್ಲಿದೆ. ಈ ವಿಚಾರವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವ ಪ್ರಯತ್ನವೂ ನಡೆದಿತ್ತು. ಆದರೆ, ಅದು ಫಲಿಸಲಿಲ್ಲ. ಈಗ ನನ್ನ ತಂದೆಯ ಏನನ್ನೂ ಹೇಳಲು ಬಯಸುವುದಿಲ್ಲ. ಹೇಳುವುದೆಲ್ಲವೂ ಹೇಳಾಗಿದೆ, ನನ್ನ ತಂದೆಯಿಂದ ಸಾಕಷ್ಟು ನೊಂದಿದ್ದೇನೆ" ಎಂದು ಭಾವುಕರಾದರು. ಕುಟುಂಬದ ಈ ಕಲಹವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

2024ಏಪ್ರಿಲ್‌ ತಿಂಗಳಲ್ಲಿ ನಿಶಾ ಯೋಗೇಶ್ವರ್‌ ಹಾಗೂ ಮಾಳವಿಕಾ ಸೋಲಂಕಿ ಅವರು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಅವರನ್ನು ಭೇಟಿ ಮಾಡಿ ತಮ್ಮ ಕುಟುಂಬದ ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಿದ್ದರು. ಅಲ್ಲದೇ ತಮ್ಮ ಕಾಂಗ್ರೆಸ್‌ ಪಕ್ಷಕ್ಕೂ ಸೇರ್ಪಡೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದರು.

Read More
Next Story