Karnataka By-Election | ಸಿಪಿವೈ, ಭರತ್‌ ಬೊಮ್ಮಾಯಿ, ಅನ್ನಪೂರ್ಣ ನಾಮಪತ್ರ ಸಲ್ಲಿಕೆ
x

Karnataka By-Election | ಸಿಪಿವೈ, ಭರತ್‌ ಬೊಮ್ಮಾಯಿ, ಅನ್ನಪೂರ್ಣ ನಾಮಪತ್ರ ಸಲ್ಲಿಕೆ

ಸತತ ಎಂಟು ಬಾರಿ ಚುನಾವಣೆಗೆ ಸ್ಪರ್ಧಿಸಿರುವ ಸಿ.ಪಿ. ಯೋಗೇಶ್ವರ್ ಅವರು ಈಗ ಒಂಬತ್ತನೇ ಬಾರಿಗೆ ಚುನಾವಣಾ ಕದನಕ್ಕೆ ನಾಮಪತ್ರ ಸಲ್ಲಿಸುವ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.


ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್ ಅವರು ಗುರುವಾರ ತಮ್ಮ ಅಪಾರ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಶೋ ನಡೆಸಿ, ನಾಮಪತ್ರ ಸಲ್ಲಿಸಿದರು.

ಸತತ ಎಂಟು ಬಾರಿ ಚುನಾವಣೆಗೆ ಸ್ಪರ್ಧಿಸಿರುವ ಸಿ.ಪಿ. ಯೋಗೇಶ್ವರ್ ಅವರು ಈಗ ಒಂಬತ್ತನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಚನ್ನಪಟ್ಟಣ ತಹಶೀಲ್ದಾರ್ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಆಗಿರುವ ರಾಮನಗರ ಉಪವಿಭಾಗಾಧಿಕಾರಿ ಪಿ.ಕೆ.ಬಿನೋಯ್ ಅವರಿಗೆ ನಾಮಪತ್ರ ಸಲ್ಲಿಸಿದರು.

ರೋಡ್ ಶೋನಲ್ಲಿ ಸಚಿವರಾದ ಭೈರತಿ ಸುರೇಶ್, ಎಂ.ಸಿ.ಸುಧಾಕರ್ ಸೇರಿದಂತೆ ಹತ್ತಕ್ಕೂ ಹಚ್ಚು ಶಾಸಕರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿದ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಮಾಜಿ ಸಂಸದ ಡಿ.ಕೆ.ಸುರೇಶ್ ಭಾಗವಹಿಸಿದ್ದರು.

ಫಲಿತಾಂಶ ನಾನೂ ನೋಡ್ತೀನಿ ಎಂದ ಸಿಎಂ

ರೋಡ್ ಶೋನಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈ ಸಲ ಫಲಿತಾಂಶವನ್ನು ನಾನೂ ನೋಡುತ್ತೇನೆ ಎಂದು ಹೇಳುವ ಮೂಲಕ ಮೈತ್ರಿ ಪಕ್ಷದ ನಾಯಕರಿಗೆ ರಣವೀಳ್ಯ ನೀಡಿದರು. ಸಿ.ಪಿ. ಯೋಗೇಶ್ವರ್ ಅವರು ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸುವಂತೆ ಕಾರ್ಯಕರ್ತರಿಗೆ ಸಿಎಂ ಕರೆ ನೀಡಿದರು.

ಕೆರೆಗಳಿಗೆ ಜೀವದಾನ ಮಾಡಿದ ಯೋಗೀಶ್ವರ್ ಅಭಿವೃದ್ಧಿ ಪರ ಇರುವುದರಿಂದಲೇ ಐದು ಬಾರಿ ಶಾಸಕರಾಗಿದ್ದು. ಈಗ ಅವರು ಮಾತೃಪಕ್ಷ ಕಾಂಗ್ರೆಸ್ಸಿಗೆ ಮರಳಿದ್ದಾರೆ. ಯೋಗೀಶ್ವರ್ ಅವರನ್ನು ಗೆಲ್ಲಿಸುವ ಮೂಲಕ ಚನ್ನಪಟ್ಟಣದಲ್ಲಿ ನಿಂತು ಹೋಗಿರುವ ಅಭಿವೃದ್ಧಿ ಕಾರ್ಯಗಳಿಗೆ ಮರು ಚಾಲನೆ ನೀಡಿ ಎಂದು ಮತದಾರರನ್ನು ಕೋರಿದರು.

ಕುಮಾರಸ್ವಾಮಿ ಅವರು ಚನ್ನಪಟ್ಟಣ ಮರೆತು ಮಂಡ್ಯಕ್ಕೆ ಸೀಮಿತರಾಗಿದ್ದಾರೆ. ಮೈತ್ರಿ ಪಕ್ಷಗಳಿಂದ ಕುಮಾರಸ್ವಾಮಿಯೇ ನಿಲ್ಲಲಿ, ನಿಖಿಲ್ ಕುಮಾರಸ್ವಾಮಿಯೇ ನಿಲ್ಲಲಿ, ಇಲ್ಲವೇ ಅನಿತಾ ಕುಮಾರಸ್ವಾಮಿಯವರೇ ನಿಲ್ಲಲಿ. ಕಾಂಗ್ರೆಸ್ ಪಕ್ಷದ ಯೋಗೀಶ್ವರ್ ಭರ್ಜರಿ ಜಯ ಗಳಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರದಲ್ಲಿ ಯೋಗೀಶ್ವರ್ ಇರ್ತಾರೆ

ನಮ್ಮದು ಜನಕಲ್ಯಾಣದ ಸರ್ಕಾರ. ಈ ಸರ್ಕಾರದಲ್ಲಿ ಯೋಗೀಶ್ವರ್ ಅವರು ಇರಬೇಕು. ಎಚ್.ಡಿ.ಕುಮಾರಸ್ವಾಮಿ ಅವರು ಶಾಸಕರಾಗಿ, ಮುಖ್ಯಮಂತ್ರಿ ಆಗಿದ್ದಾಗಲೂ ಮಾಡದ ಚನ್ನಪಟ್ಟಣದ ಅಭಿವೃದ್ಧಿ ಕೆಲಸಗಳು ಮುಂದಿನ ತಿಂಗಳಿಂದ ಶಾಸಕರಾಗಿ ಯೋಗೀಶ್ವರ್ ಅವರು ಮುಂದುವರೆಸುತ್ತಾರೆ. ಇಂದು ನಾಮಪತ್ರ ಸಲ್ಲಿಕೆ ಬಳಿಕ ನಾನು ಮತ್ತೆ ಚನ್ನಪಟ್ಟಣಕ್ಕೆ ಪ್ರಚಾರಕ್ಕೆ ಬರುತ್ತೇನೆ ಎಂದರು.


ಯೋಗೀಶ್ವರ್ ಚುನಾವಣೆ ಹಾದಿ

ಸಿನಿಮಾ ಕ್ಷೇತ್ರದಿಂದ ವಾಪಸಾಗಿ 1999ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ ಸಿ.ಪಿ. ಯೋಗೇಶ್ವರ್‌ ಅವರು ಕಾಂಗ್ರೆಸ್ಸಿನ ಕಾಂತ ಸಾದತ್ ಅಲಿ ಖಾನ್ ಅವರನ್ನು 2282 ಮತಗಳ ಅಂತರದಿಂದ ಸೋಲಿಸಿ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಆ ನಂತರ ಕಾಂಗ್ರೆಸ್ ಸೇರ್ಪಡೆಯಾದರು. 2004ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಸಿ. ಅಶ್ವತ್ಥ್ ಅವರನ್ನು 16,169 ಮತಗಳಿಂದ ಸೋಲಿಸಿ ಗೆದ್ದು ಬೀಗಿದ್ದರು. 2008ರಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು 4,930 ಮತಗಳ ಅಂತರದಿಂದ ಪರಾಭವಗೊಳಿಸಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದರು.

2009ರಲ್ಲಿ ಪಕ್ಷಾಂತರ ಮಾಡಿ ಪ್ರಥಮ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದರು. ಆದರೆ, ಆ ಚುನಾವಣೆಯಲ್ಲಿ ಜೆಡಿಎಸ್ನ ಎಂ.ಸಿ. ಅಶ್ವತ್ಥ್ ವಿರುದ್ಧ 2282 ಮತಗಳ ಅಂತರದಿಂದ ಸೋಲು ಕಂಡರು. 2011 ರಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿ, ಜೆಡಿಎಸ್ ಅಭ್ಯರ್ಥಿ ನಾಗರಾಜು ವಿರುದ್ಧ 17,803 ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ಸಾಧಿಸಿದರು.

2013ರಲ್ಲಿ ಬಿಜೆಪಿ ತೊರೆದು, ಸಮಾಜವಾದಿ ಪಕ್ಷದಿಂದ ಚುನಾವಣೆಗೆ ನಿಂತು ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರನ್ನು 6,464 ಮತಗಳಿಂದ ಸೋಲಿಸಿದರು. 2018ರಲ್ಲಿ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿ ಎಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ 21 ಸಾವಿರ ಮತಗಳ ಅಂತರದಿಂದ ಸೋಲು ಕಂಡರು. 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕುಮಾರಸ್ವಾಮಿ ಎದುರು 15 ಸಾವಿರಕ್ಕೂ ಅಧಿಕ ಮತಗಳಿಂದ ಸೋಲುಂಡರು. ಈಗ ಎರಡನೇ ಬಾರಿಗೆ ಕಾಂಗ್ರೆಸ್‌ ಸೇರಿದ್ದು, ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದಾರೆ.


ಶಿಗ್ಗಾವಿಯಲ್ಲಿ ನಾಮಪತ್ರ ಸಲ್ಲಿಸಿದ ಭರತ್ ಬೊಮ್ಮಾಯಿ

ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್‌ ಬೊಮ್ಮಾಯಿ ಅವರು ನಾಮಪತ್ರ ಸಲ್ಲಿಸಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಪೂಜಾರ್ ಸೇರಿದಂತೆ ಸ್ಥಳೀಯ ನಾಯಕರು ಮಾತ್ರ ಇದ್ದರು.

ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಭರತ್‌ ಬೊಮ್ಮಾಯಿ ಅವರು, ನಮ್ಮ ತಾಯಿಯ ಸೂಚನೆಯಂತೆ ಒಳ್ಳೆಯ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ತಂದೆ ತಾಯಿ, ಹಿರಿಯರು ಹಾಗೂ ಪಕ್ಷದ ವರಿಷ್ಠರ ಆಶೀರ್ವಾದದಿಂದ ನಾನು ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ನಾಳೆ ಬೃಹತ್‌ ರೋಡ್‌ ಶೋ ನಡೆಸಿ, ಮತ್ತೊಮ್ಮೆ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದರು.

ಇದುವರೆಗೂ ನಮ್ಮ ತಂದೆ ಬಸವರಾಜ ಬೊಮ್ಮಾಯಿ ಅವರಿಗೆ ಆಶೀರ್ವಾದ ಮಾಡಿದ್ದೀರಿ, ಈಗ ನನಗೆ ಆಶೀರ್ವಾದ ಮಾಡಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ನಾನು ಬಡವರು, ಯುವಕರು, ಮಹಿಳೆಯರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಬಳ್ಳಾರಿ : ಸಂಡೂರು ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಂ ಅವರು ಗುರುವಾರ ಬೆಳಗ್ಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ರೋಡ್ ಶೋ ನಡೆಯಿತು. ಸಂಡೂರಿನ ಎಪಿಎಂಸಿಯಿಂದ ತಾಲೂಕು ಆಡಳಿತದ ಕಚೇರಿವರೆಗೂ ರೋಡ್ ಶೋ‌ ಸಾಗಿತು.


ಸಂಡೂರಿನಲ್ಲಿ ಅನ್ನಪೂರ್ಣ ನಾಮಪತ್ರ ಸಲ್ಲಿಕೆ

ಸಂಸದ ಇ. ತುಕಾರಾಂ ಪತ್ನಿಅನ್ನಪೂರ್ಣ ಅವರು ಸಂಡೂರಿನ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಈ.ತುಕಾರಾಂ ಹಾಗೂ ಸ್ಥಳೀಯ ಮುಖಂಡರು ಸಾಥ್‌ ನೀಡಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್‌ ರೋಡ್​ ಶೋ ನಡೆಸಿದರು. ಸುಮಾರು 2 ಕಿ.ಮೀ ವರೆಗೆ ವಿವಿಧ ಕಲಾತಂಡಗಳ ಮೆರವಣಿಗೆಯಲ್ಲಿ ಬೆಂಬಲಿಗರು, ಕಾಂಗ್ರೆಸ್​ ಕಾರ್ಯಕರ್ತರು ಭಾಗಿಯಾಗಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಕಾಂಗ್ರೆಸ್ ಬಾವುಟಗಳು ರಾರಾಜಿಸಿದವು. ನಗರದ ಕೇಂದ್ರಭಾಗವಾದ ವಿಜಯ ಸರ್ಕಲ್​ನಲ್ಲಿ ಬಹಿರಂಗ ಸಭೆ ನಡೆಯಿತು. ಈ ವೇಳೆ ಅಭಿಮಾನಿಗಳು ಕ್ರೇನ್‌ ಮೂಲಕ ಹೂವಿನ ಮಳೆ ಸುರಿಸಿದರು. ಬುಧವಾರವಷ್ಟೇ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರು ನಾಮಪತ್ರ ಸಲ್ಲಿಸಿದ್ದರು. ಸಚಿವರಾದ ಜಮೀರ್‌ ಅಹಮದ್‌ ಖಾನ್‌, ಸಂತೋಷ್‌ ಲಾಡ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

Read More
Next Story