
ಕೊರೊನಾ ಟೆಸ್ಟ್
Covid-19 Test: ರಾಜ್ಯದಲ್ಲಿ ಕೋವಿಡ್-19 ಪರೀಕ್ಷೆ ಕಡ್ಡಾಯ
ಗರ್ಭಿಣಿಯರು ಮತ್ತು ಬಾಣಂತಿಯರು ವಿಶೇಷ ಜಾಗೃತಿ ವಹಿಸಬೇಕು. ಮಾಸ್ಕ್ ಬಳಸುವುದು ಕಡ್ಡಾಯವಾಗಿದ್ದು, ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಳ ಹಿನ್ನಲೆ ಕೊರೊನಾ ಟೆಸ್ಟಿಂಗ್ ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ತಾಂತ್ರಿಕ ಸಲಹಾ ಸಮಿತಿಯ ಸಲಹೆಯಂತೆ ಈ ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ದಿನ ನಿತ್ಯ 150 ರಿಂದ 200 ಪರೀಕ್ಷೆಗೆ ನಿಗದಿ ಮಾಡಲಾಗಿದೆ. ಎಲ್ಲಾ ತೀವ್ರ ಸ್ವರೂಪದ ಉಸಿರಾಟದ ತೊಂದರೆ ಇದ್ದಲ್ಲಿ ಕೋವಿಡ್-19 ಸೋಂಕನ್ನು ಧೃಡ ಪಡಿಸಿಕೊಳ್ಳಲು RT-PCR ಪರೀಕ್ಷೆ ಕಡ್ಡಾಯ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ನಿಗದಿ ಪಡಿಸಿರುವ ಪ್ರಯೋಗಾಲಯಗಳಿಗೆ ಸ್ಯಾಂಪಲ್ ಸಲ್ಲಿಸಲು ಸೂಚನೆ ನೀಡಲಾಗಿದ್ದು, ಅಂದಿನ ಸ್ಯಾಂಪಲ್ ಅಂದೇ ಪ್ರಯೋಗಾಲಯಕ್ಕೆ ತಲುಪಿಸುವುದು ಕಡ್ಡಾಯವಾಗಿದೆ. ಎಲ್ಲಾ ಪರೀಕ್ಷೆಗಳನ್ನು ಕಡ್ಡಾಯವಾಗಿ ಸರ್ಕಾರಿ ಪ್ರಯೋಗ ಶಾಲೆಗಳಲ್ಲಿಯೇ ನಡೆಸಬೇಕು. ಲಭ್ಯವಿರುವ ಕೋವಿಡ್-19ರ ಪರೀಕ್ಷಾ ಕಿಟ್‌ಗಳನ್ನು FIFO (First-In-First-Out) ಮಾದರಿಯಲ್ಲಿ ಉಪಯೋಗಿಸಬೇಕು ಎಂದು ಹೇಳಲಾಗಿದೆ. ಕೋವಿಡ್-19 ರ ಕಿಟ್ /ಪರಿಕರಗಳು ಅನುಪಯುಕ್ತವಾಗದಂತೆ ಕ್ರಮವಹಿಸಲು ಸೂಚನೆಯನ್ನೂ ನೀಡಲಾಗಿದೆ.
ಕೋವಿಡ್ ಟೆಸ್ಟಿಂಗ್ ಈ ಮಾರ್ಗಸೂಚಿ ಕಡ್ಡಾಯ
1. ಎಲ್ಲಾ ತೀವ್ರ ಸ್ವರೂಪದ ಉಸಿರಾಟದ ತೊಂದರೆ ಪ್ರಕರಣಗಳಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸುವುದು
2. ವಯೋವೃದ್ಧರಲ್ಲಿ ಮಕ್ಕಳಲ್ಲಿ, ಗರ್ಭಿಣಿಯರಲ್ಲಿ ರೋಗ ಲಕ್ಷಣಗಳು ಕಂಡು ಬಂದಲ್ಲಿ ಕಡ್ಡಾಯವಾಗಿ ಪರೀಕ್ಷೆ ನಡೆಸುವುದು.
3. ಕೋವಿಡ್-19ರ ಪರೀಕ್ಷಾ ಮಾದರಿಯನ್ನು ಪ್ರಯೋಗಶಾಲೆಗಳಿಗೆ ಅದೇ ದಿನ ತಲುಪುವಂತೆ ಕ್ರಮವಹಿಸುವುದು
ಗರ್ಭಿಣಿಯರು ಮೇಲೆ ಹೆಚ್ಚು ನಿಗಾ
ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ಗರ್ಭಿಣಿಯರು ಹಾಗೂ ಬಾಣಂತಿಯರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಅನೇಕ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೂ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಕೋವಿಡ್ ರೋಗಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣವೇ ವೈದ್ಯರಿಂದ ಚಿಕಿತ್ಸೆಗೆ ಸೂಚನೆ ನೀಡಲಾಗಿದೆ.
ಗರ್ಭಿಣಿಯರು ಮತ್ತು ಬಾಣಂತಿಯರು ವಿಶೇಷ ಎಚ್ಚರಿಕೆ ವಹಿಸಬೇಕು. ಮಾಸ್ಕ್ ಬಳಸುವುದು ಕಡ್ಡಾಯವಾಗಿದ್ದು, ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಸೋಮವಾರದಿಂದ ರಾಜ್ಯದಲ್ಲಿ ಕೋವಿಡ್ ಟೆಸ್ಟ್ ಆರಂಭವಾಗಲಿದೆ. ಕೋವಿಡ್ ಪ್ರಕರಣಗಳ ಏರಿಕೆಯನ್ನು ಗಮನಿಸಿ, ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಜಿಲ್ಲೆಯ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೊತೆಗೆ ಎಂಟು ಆರ್ಟಿಪಿಸಿಆರ್ ಟೆಸ್ಟಿಂಗ್ ಲ್ಯಾಬ್ ಗಳನ್ನು ಮತ್ತೆ ಓಪನ್ ಮಾಡಲು ಇಲಾಖೆ ಮುಂದಾಗಿದೆ.