ಟಬು ರಾವ್‌ ವಿರುದ್ಧ ಹೇಳಿಕೆ | ಶಾಸಕ ಯತ್ನಾಳ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ
x

ಟಬು ರಾವ್‌ ವಿರುದ್ಧ ಹೇಳಿಕೆ | ಶಾಸಕ ಯತ್ನಾಳ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ


ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ದಾಖಲಿಸಿದ್ದ ಖಾಸಗಿ ದೂರು ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರು, ಬಿಜೆಪಿ ಹಿರಿಯ ನಾಯಕ ಹಾಗೂ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ದೇಶಿಸಿದ್ದಾರೆ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಏಪ್ರಿಲ್ 4, 2024ರಂದು ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಯತ್ನಾಳ್, ʻʻಹೆಚ್ಚು ಕಡಿಮೆ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ. ದೇಶದ ವಿರುದ್ದ ಹೇಳಿಕೆ ಕೊಡುವುದು ಗುಂಡೂರಾವ್‌ಗೆ ಚಟ ಆಗಿಬಿಟ್ಟಿದೆʼʼ ಎಂದು ಹೇಳಿಕೆ ನೀಡಿದ್ದರು.

ಯತ್ನಾಳ್‌ ಹೇಳಿಕೆ ವಿರುದ್ಧ ಟಬು ರಾವ್ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿ ಪತ್ರಿಕೆ ವರದಿ ಸೇರಿದಂತೆ, ಸಾಕ್ಷಿಗಳನ್ನು ನೀಡಿದ್ದರು. ಇದನ್ನು ಪರಿಗಣಿಸಿರುವ ನ್ಯಾಯಾಲಯ ಯತ್ನಾಳ್ ಗೆ ಸಮನ್ಸ್ ಜಾರಿಗೊಳಿಸಿದೆ. ಅರ್ಜಿದಾರ ಪರ ಸೂರ್ಯ ಮುಕುಂದರಾಜ್ , ಸಂಜಯ್ ವಕಾಲತ್ತು ವಹಿಸಿದ್ದರು.

ಬಸನಗೌಡ ಪಾಟೀಲ್ ಯತ್ನಾಳ್ ಅವರು ಇಸ್ಲಾಂ ಧರ್ಮಕ್ಕೆ ಸೇರಿದ ಎಲ್ಲ ವ್ಯಕ್ತಿಗಳನ್ನು ಪಾಕಿಸ್ತಾನದವರು ಎಂದು ಈ ಹಿಂದೆಯೂ ಉಲ್ಲೇಖಿಸಿದ್ದರು. ಮಾರ್ಚ್ 6, 2024ರಂದು ಶಿವಾಜಿ ಜಯಂತಿ ಉದ್ದೇಶಿಸಿ ಮಾತನಾಡಿದ್ದ ಅವರು, ಒಂದು ವೇಳೆ ನಾನು ಗೃಹ ಸಚಿವನಾದರೆ ವಿಜಯಪುರದ ಎಲ್ಲಾ ಮುಸ್ಲಿಮರನ್ನು ಎನ್ ಕೌಂಟರ್ ನಲ್ಲಿ ಮುಗಿಸಲು ಆದೇಶ ನೀಡುತ್ತೇನೆ. ಮುಸ್ಲಿಮರು ದೇಶ ವಿರೋಧಿಗಳು, ದೇಶದ್ರೋಹಿಗಳು. ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿಕೆ ನೀಡಿದ್ದರು.

ಯತ್ನಾಳ್ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500 (ಮಾನನಷ್ಟ) ಅಡಿ ಪ್ರಕರಣ ದಾಖಲಿಸಲು ತಬು ರಾವ್ ಕೋರಿದ್ದರು.

ಪ್ರಕರಣದ ಹಿನ್ನೆಲೆ

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಬಿಜೆಪಿ ಮುಖಂಡ ಸಾಯಿಪ್ರಸಾದ್‌ನನ್ನು ಎನ್‌ಐಎ ತಂಡ ವಿಚಾರಣೆಗೆ ಒಳಪಡಿಸಿದೆ ಎಂದು ಏಪ್ರಿಲ್ 5, 2024ರಂದು ವರದಿಯಾಗಿತ್ತು.

ಅದರ ಬೆನ್ನಲ್ಲೇ ʼಎಕ್ಸ್ʼ ಮೂಲಕ ಪ್ರತಿಕ್ರಿಯಿಸಿದ್ದ ಸಚಿವ ದಿನೇಶ್ ಗುಂಡೂರಾವ್, ʻʻಸ್ಫೋಟಕ್ಕೆ ನಮ್ಮ ಸರ್ಕಾರವೇ ಕಾರಣ ಅನ್ನೋವಂತೆ ಮಾತಾನಾಡುತ್ತಿದ್ದ ರಾಜ್ಯದ ಕೇಸರಿ ಕಲಿಗಳು ಈಗ ಏನು ಹೇಳುತ್ತಾರೆ? ಬಿಜೆಪಿ ಮುಖಂಡನನ್ನು ಎನ್‌ಐಎ ವಶಕ್ಕೆ ಪಡೆದಿದೆ ಎಂದ ಮೇಲೆ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಿಜೆಪಿ ಕೈವಾಡ ಇದೆ ಎಂದು ಅರ್ಥ ಅಲ್ಲವೇ? ರಾಷ್ಟ್ರದ ಭದ್ರತೆ ವಿಚಾರವನ್ನೂ ಲೆಕ್ಕಿಸದೇ ರಾಮೇಶ್ವರಂ ಬಾಂಬ್‌ ಸ್ಫೋಟ ಪ್ರಕರಣವನ್ನು ಕಾಂಗ್ರೆಸ್‌ ಸರ್ಕಾರದ ಮೇಲೆ ಹೊರೆಸಿದ ರಾಜ್ಯ ಬಿಜೆಪಿ ನಾಯಕರು, ಈಗ ಉತ್ತರ ನೀಡಲೇ ಬೇಕುʼʼ ಎಂದಿದ್ದರು.

ಈ ಕುರಿತು ಮಾಧ್ಯವರ ಪ್ರಶ್ನೆಗೆ ಉತ್ತರಿಸಿದ್ದ ಯತ್ನಾಳ್ ʻʻಹೆಚ್ಚು ಕಡಿಮೆ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ. ದೇಶದ ವಿರುದ್ದ ಹೇಳಿಕೆ ಕೊಡುವುದು ಗುಂಡೂರಾವ್‌ಗೆ ಚಟ ಆಗಿಬಿಟ್ಟಿದೆʼʼ ಎಂದಿದ್ದರು.

ಯತ್ನಾಳ್ ಹೇಳಿಕೆ ತಿರುಗೇಟು ನೀಡಿದ್ದ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್,ʻʻದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂಬ ಯತ್ನಾಳ್ ಅವರ ಹೇಳಿಕೆಯು ಅವಹೇಳನಕಾರಿ ಮತ್ತು ಮಾನಹಾನಿಕರವಾಗಿದೆ. ನಾನು ಮುಸಲ್ಮಾನಳಾಗಿ ಹುಟ್ಟಿರಬಹುದು. ಹಾಗಂತ ನನ್ನ ಭಾರತೀಯತೆಯನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಭಾರತೀಯ ಚುನಾವಣಾ ಆಯೋಗ ಈ ಸಂಬಂಧ ಕ್ರಮ ಕೈಗೊಳ್ಳಲಿದೆಯಾ? ಪ್ರಧಾನಿ ಮೋದಿ, ಜೆಪಿ ನಡ್ಡಾ ಅವರು ಈ ರೂಢಿಗತ ತಪ್ಪಿತಸ್ಥನ ವಿರುದ್ದ ಕ್ರಮ ಕೈಗೊಳ್ಳುತ್ತಾರಾ?" ಎಂದು ಪ್ರಶ್ನಿಸಿದ್ದರು. ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಎಕ್ಸ್ ಪೋಸ್ಟ್ ಟ್ಯಾಗ್ ಮಾಡಿದ್ದರು.

Read More
Next Story