ಗೋಕರ್ಣದ ಗುಹೆಯಲ್ಲಿ ವಾಸವಿದ್ದ ರಷ್ಯನ್ ತಾಯಿ-ಮಕ್ಕಳನ್ನು ವಾಪಸ್ ಕಳುಹಿಸಲು ಕೋರ್ಟ್ ಒಪ್ಪಿಗೆ
x

ಗೋಕರ್ಣದ ಗುಹೆಯಲ್ಲಿ ವಾಸವಿದ್ದ ರಷ್ಯನ್ ತಾಯಿ-ಮಕ್ಕಳನ್ನು ವಾಪಸ್ ಕಳುಹಿಸಲು ಕೋರ್ಟ್ ಒಪ್ಪಿಗೆ

ಅಪಾಯಕಾರಿ ಹಾವುಗಳು ಮತ್ತು ಕತ್ತಲಿನಿಂದ ಕೂಡಿದ್ದ ಆ ಗುಹೆಯಲ್ಲಿ, ಚಿಕ್ಕ ದೀಪದ ಬೆಳಕಿನಲ್ಲಿ ನಿನಾ ತನ್ನ ಹಿರಿಯ ಮಗಳಿಗೆ ಚಿತ್ರಕಲೆ ಕಲಿಸುತ್ತಿದ್ದ ದೃಶ್ಯ ಪೊಲೀಸರನ್ನೇ ಬೆರಗುಗೊಳಿಸಿತ್ತು.


Click the Play button to hear this message in audio format

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಗೋಕರ್ಣದ ಗುಡ್ಡಗಾಡು ಪ್ರದೇಶದ ಗುಹೆಯೊಂದರಲ್ಲಿ ಇಬ್ಬರು ಪುಟ್ಟ ಮಕ್ಕಳೊಂದಿಗೆ ವಾಸವಿದ್ದ ರಷ್ಯಾ ಮೂಲದ ಮಹಿಳೆ ನಿನಾ ಕುಟಿನಾ ಮತ್ತು ಅವರ ಮಕ್ಕಳನ್ನು ಸುರಕ್ಷಿತವಾಗಿ ಅವರ ತಾಯ್ನಾಡಿಗೆ ಕಳುಹಿಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಪೀಠ, ಮಹಿಳೆಯ ಇಚ್ಛೆಯನ್ನು ಪರಿಗಣಿಸಿ ಈ ಮಹತ್ವದ ಆದೇಶ ಹೊರಡಿಸಿದೆ.

2025ರ ಜುಲೈ ತಿಂಗಳಿನಲ್ಲಿ ಗೋಕರ್ಣದ ರಾಮತೀರ್ಥ ಬೆಟ್ಟದ ಸಮೀಪ ಪೊಲೀಸರು ಮಾಮೂಲಿ ಗಸ್ತು ತಿರುಗುತ್ತಿದ್ದಾಗ, ಜನವಸತಿಯಿಲ್ಲದ, ಟ್ರೆಕ್ಕಿಂಗ್ ನಿಷೇಧಿತ ಪ್ರದೇಶದ ಗುಹೆಯೊಂದರ ಹೊರಗೆ ಬಟ್ಟೆಗಳು ಒಣಗಿರುವುದನ್ನು ಗಮನಿಸಿದರು. ಹತ್ತಿರ ಹೋಗಿ ನೋಡಿದಾಗ, ಗುಹೆಯ ಹೊರಗೆ ಲಿಂಗ ಪೂಜೆ ಮಾಡಿರುವುದು ಕಂಡುಬಂದಿದೆ. ಅನುಮಾನಗೊಂಡು ಪೊಲೀಸರು ಗುಹೆಯೊಳಗೆ ಪ್ರವೇಶಿಸಲು ಮುಂದಾದಾಗ, ಬಟ್ಟೆಯಿಲ್ಲದ ಪುಟ್ಟ ಮಗುವೊಂದು ಓಡಿಬಂತು. ಪೊಲೀಸರನ್ನು ಕಂಡು ಹೆದರಿ ಮರಳಿ ಗುಹೆಯೊಳಗೆ ಓಡಿದ ಮಗುವನ್ನು ಹಿಂಬಾಲಿಸಿದಾಗ, ನಿನಾ ಕುಟಿನಾ (40) ತನ್ನಿಬ್ಬರು ಹೆಣ್ಣುಮಕ್ಕಳಾದ ಪ್ರೇಮಾ (6) ಮತ್ತು ಅಮಾ (4) ಜೊತೆ ವಾಸವಿರುವುದು ಪತ್ತೆಯಾಯಿತು. ಅಪಾಯಕಾರಿ ಹಾವುಗಳು ಮತ್ತು ಕತ್ತಲಿನಿಂದ ಕೂಡಿದ್ದ ಆ ಗುಹೆಯಲ್ಲಿ, ಚಿಕ್ಕ ದೀಪದ ಬೆಳಕಿನಲ್ಲಿ ನಿನಾ ತನ್ನ ಹಿರಿಯ ಮಗಳಿಗೆ ಚಿತ್ರಕಲೆ ಕಲಿಸುತ್ತಿದ್ದ ದೃಶ್ಯ ಪೊಲೀಸರನ್ನೇ ಬೆರಗುಗೊಳಿಸಿತ್ತು.

ಆಧ್ಯಾತ್ಮಿಕ ಜೀವನ ಮತ್ತು ಕುಟುಂಬದ ಹಿನ್ನೆಲೆ

ವಿಚಾರಣೆ ವೇಳೆ ನಿನಾ, ತಾನು ಆಧ್ಯಾತ್ಮಿಕ ಶಾಂತಿಗಾಗಿ ಈ ಗುಹೆಯನ್ನು ಆಯ್ದುಕೊಂಡಿದ್ದಾಗಿ ತಿಳಿಸಿದ್ದಾರೆ. 2017ರಲ್ಲಿ ವ್ಯಾಪಾರ ವೀಸಾದ ಮೇಲೆ ಭಾರತಕ್ಕೆ ಬಂದಿದ್ದ ಅವರು, ವೀಸಾ ಅವಧಿ ಮುಗಿದಿದ್ದರೂ ಭಾರತದಲ್ಲೇ ಉಳಿದುಕೊಂಡಿದ್ದರು. ಅವರು ತಮ್ಮ ಮಾಜಿ ಪತಿ, ಇಸ್ರೇಲ್ ಮೂಲದ ಸಂಗೀತಗಾರ ಡ್ರೋರ್ ಶ್ಲೋಮೋ ಗೋಲ್ಡ್‌ಸ್ಟೀನ್‌ ಜೊತೆಗಿನ ಸಂಬಂಧದಲ್ಲಿ ಇಬ್ಬರು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ, 2023ರಲ್ಲಿ ತಮ್ಮ 21 ವರ್ಷದ ಮಗ ಅಪಘಾತದಲ್ಲಿ ಮೃತಪಟ್ಟ ನಂತರ, ನಿನಾ ಮಾನಸಿಕವಾಗಿ ಕುಗ್ಗಿ, ಮಕ್ಕಳೊಂದಿಗೆ ನಾಪತ್ತೆಯಾಗಿದ್ದರು ಎಂದು ಗೋಲ್ಡ್‌ಸ್ಟೀನ್‌ ಆರೋಪಿಸಿದ್ದರು.

ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣ

ನಿನಾ ಮತ್ತು ಮಕ್ಕಳನ್ನು ಪೊಲೀಸರು ರಕ್ಷಿಸಿ, ವೀಸಾ ಅವಧಿ ಮುಗಿದ ಕಾರಣ ತುಮಕೂರಿನಲ್ಲಿರುವ ವಿದೇಶಿಯರ ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಿದ್ದರು. ಈ ನಡುವೆ, ಮಕ್ಕಳನ್ನು ತಕ್ಷಣವೇ ರಷ್ಯಾಕ್ಕೆ ಗಡಿಪಾರು ಮಾಡುವುದನ್ನು ತಡೆಯಬೇಕೆಂದು ಕೋರಿ ಗೋಲ್ಡ್‌ಸ್ಟೀನ್‌ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಕ್ಕಳ ಹಿತಾಸಕ್ತಿ ಮತ್ತು ಅವರ ಹಕ್ಕುಗಳನ್ನು ಪರಿಗಣಿಸಬೇಕೆಂದು ಅವರು ವಾದಿಸಿದ್ದರು. ಆರಂಭದಲ್ಲಿ ಗಡಿಪಾರಿಗೆ ತಡೆ ನೀಡಿದ್ದ ನ್ಯಾಯಾಲಯ, ಮಕ್ಕಳ ಹಿತದೃಷ್ಟಿಯಿಂದ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿತು.

ತಾಯ್ನಾಡಿಗೆ ಮರಳಲು ಹೈಕೋರ್ಟ್ ಅಸ್ತು

ಭಾರತದಲ್ಲಿ ಜನಿಸಿದ್ದ ಕಿರಿಯ ಮಗಳು ಅಮಾಳಿಗೆ ರಷ್ಯಾ ಸರ್ಕಾರವು ಪೌರತ್ವ ಮತ್ತು ತುರ್ತು ಪ್ರಯಾಣ ದಾಖಲೆಗಳನ್ನು ನೀಡಿದ ನಂತರ ಪ್ರಕರಣ ತಿರುವು ಪಡೆಯಿತು. ಅಂತಿಮವಾಗಿ, ನಿನಾ ಕುಟಿನಾ ಅವರ ರಷ್ಯಾಕ್ಕೆ ಮರಳುವ ಇಚ್ಛೆಯನ್ನು ಗೌರವಿಸಿದ ಹೈಕೋರ್ಟ್, ಮಕ್ಕಳ ಹಿತಾಸಕ್ತಿಯೇ ಮುಖ್ಯವೆಂದು ಪರಿಗಣಿಸಿ, ಅವರ ವಾಪಸಾತಿಗೆ ಅನುಮತಿ ನೀಡಿತು. ತಾಯಿ ಮತ್ತು ಮಕ್ಕಳಿಗೆ ಅಗತ್ಯವಿರುವ ಪ್ರಯಾಣ ದಾಖಲೆಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯವು ನಿರ್ದೇಶನ ನೀಡಿದೆ.

Read More
Next Story