Couple watches IndiGo flight cancelled, Hubballi reception online
x

ಎಐ ಆಧಾರಿತ ಚಿತ್ರ

ಇಂಡಿಗೋ ವಿಮಾನ ರದ್ದು, ಹುಬ್ಬಳ್ಳಿಯಲ್ಲಿ ನಡೆದ ಆರತಕ್ಷತೆಯನ್ನು ಆನ್‌ಲೈನ್‌ನಲ್ಲಿ ಕಣ್ತುಂಬಿಕೊಂಡ ಜೋಡಿ

ಆರತಕ್ಷತೆ ಕಾರ್ಯಕ್ರಮಕ್ಕೆ ಕಲ್ಯಾಣ ಮಂಟಪ ಬುಕ್‌ ಮಾಡಿ, ಅಡುಗೆ ಸೇರಿದಂತೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ವಿಮಾನ ರದ್ದಾದ ಪರಿಣಾಮ ಎನು ಮಾಡಬೇಕೆಂದು ತಿಳಿಯದೇ ಆನ್‌ಲೈನ್‌ನಲ್ಲೇ ಆರತಕ್ಷತೆ ಕಾರ್ಯಕ್ರಮದ ಶಾಸ್ತ್ರ ಮುಗಿಸಿದ್ದಾರೆ.


Click the Play button to hear this message in audio format

ತಾಂತ್ರಿಕ ದೋಷ ಹಾಗೂ ಸಿಬ್ಬಂದಿಗಳ ಕೊರತೆಯಿಂದ ದೇಶಾದ್ಯಂತ ಇಂಡಿಗೋ ವಿಮಾನ ಸೇವೆಯಲ್ಲಿ ವ್ಯತ್ಯಯವಾಗಿದ್ದು, ನೂರಾರು ವಿಮಾನಗಳು ರದ್ದಾಗಿವೆ. ಇದರಿಂದ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದ್ದು, ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ಆರತಕ್ಷತೆಗೆ ವಧು-ವರ ಆಗಮಿಸಲಾಗದೇ ಭುವನೇಶ್ವರದಲ್ಲೇ ಉಳಿಯಬೇಕಾದ ಪ್ರಸಂಗ ನಡೆದಿದೆ.

ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳಾಗಿರುವ ಹುಬ್ಬಳ್ಳಿಯ ಮೇಧಾ ಕ್ಷೀರಸಾಗರ ಹಾಗೂ ಭುವನೇಶ್ವರದ ಸಂಗಮ ದಾಸ್‌ ಪರಸ್ಪರ ಪ್ರೀತಿಸಿ ಕುಟುಂಬದವರ ಒಪ್ಪಿಗೆ ಮೇರೆಗೆ ನ.23ರಂದು ಭುವನೇಶ್ವರದಲ್ಲಿ ಮದುವೆಯಾಗಿದ್ದರು. ಬುಧವಾರ(ಡಿ.3) ಹುಬ್ಬಳ್ಳಿಯಲ್ಲಿ ಆರತಕ್ಷತೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ವಿಮಾನ ರದ್ದಾದ ಪರಿಣಾಮ ವಧು-ವರರು ಹುಬ್ಬಳ್ಳಿಗೆ ತಲುಪಲು ಸಾಧ್ಯವಾಗಿಲ್ಲ.

ಆರತಕ್ಷತೆ ಕಾರ್ಯಕ್ರಮಕ್ಕೆ ಕಲ್ಯಾಣ ಮಂಟಪ ಬುಕ್‌ ಮಾಡಿ, ಅಡುಗೆ ಸೇರಿದಂತೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ವಿಮಾನ ರದ್ದಾದ ಪರಿಣಾಮ ಎನು ಮಾಡಬೇಕೆಂದು ತಿಳಿಯದೇ, ವಧುವಿನ ತಂದೆ-ತಾಯಿಯೇ ವೇದಿಕೆ ಮೇಲೆ ನಿಂತು ಆರತಕ್ಷತೆ ಕಾರ್ಯಕ್ರಮದ ಶಾಸ್ತ್ರ ಮುಗಿಸಿದ್ದು, ನವ ವಧು-ವರರು ಭುವನೇಶ್ವರದಲ್ಲೇ ತಮ್ಮ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲೇ ವೀಕ್ಷಿಸುವಂತಾಗಿದ್ದು, ಸ್ನೇಹಿತರು ಹಾಗೂ ಸಂಬಂಧಿಕರು ಅಲ್ಲಿಂದಲೇ ಆಶೀರ್ವಾದ ಮಾಡಿದ್ದಾರೆ.

ವಿಮಾನ ರದ್ದಾಗಿದಕ್ಕೆ, ಮದುವೆಯೂ ರದ್ದು

ಬೆಂಗಳೂರಿನ ವ್ಯಕ್ತಿಯೊಬ್ಬರ ವಿವಾಹ ಒಡಿಶಾದ ಭುವನೇಶ್ವರದಲ್ಲಿ ಶುಕ್ರವಾರ(ಡಿ.5) ನಿಗದಿಯಾಗಿತ್ತು. ಇಂಡಿಗೊ ವಿಮಾನಗಳ ಸಂಚಾರ ವ್ಯತ್ಯಯ ಮತ್ತು ರದ್ದತಿಯಿಂದಾಗಿ ಮದುವೆಯನ್ನೇ ಮುಂದೂಡುವ ಅನಿವಾರ್ಯ ಎದುರಾಗಿದೆ ಎಂದು ವ್ಯಕ್ತಿಯೊಬ್ಬರು ಪ್ರಜಾವಾಣಿ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಯಿಸಿರುವ ವರನ ತಂದೆ ಮಹೇಶ್, "ಭುವನೇಶ್ವದಲ್ಲಿ ಶುಕ್ರವಾರ(ಡಿ.5) ನಿಗದಿಯಾಗಿದ್ದ ನನ್ನ ಮಗನ ಮದುವೆಗೆ ತೆರಳಲು ಇಂಡಿಗೊ ವಿಮಾನದಲ್ಲಿ ಮುಂಗಡವಾಗಿ 110 ಟಿಕೆಟ್‌ಗಳನ್ನು ಕಾಯ್ದಿರಿಸಿದ್ದೆವು. ಆದರೆ, ಕಳೆದೆರಡು ದಿನಗಳಿಂದ ವಿಮಾನಗಳ ಸಂಚಾರ ವ್ಯತ್ಯಯ ಮತ್ತು ರದ್ದಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಚರಿಸಬೇಕಿರುವ ವಿಮಾನ ಸೇವೆ ಲಭ್ಯವಿರಲಿದೆಯೇ ಎಂಬುದನ್ನು ತಿಳಿದುಕೊಳ್ಳಲು ಬಂದಿದ್ದೆ" ಎಂದು ತಿಳಿಸಿದ್ದಾರೆ.

ಸಿಬ್ಬಂದಿಯಿಂದ ಸಿಗದ ಉತ್ತರ

ಈ ಕುರಿತು ಇಂಡಿಗೋ ಸಿಬ್ಬಂದಿಯೊಂದಿಗೆ ಎರಡು ಗಂಟೆ ಚರ್ಚಿಸಿದ್ದೇನೆ. ಆದರೆ, ವಿಮಾನ ಸೇವೆ ಲಭ್ಯವಿರಲಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ವಿಮಾನ ರದ್ದಾಗಿರುವುದರಿಂದ ಮದುವೆ ಮುಂದೂಡಬೇಕಾಗಿದೆ. ನಮಗಾಗಿ ವಧುವಿನ ಕಡೆಯವರು ಭುವನೇಶ್ವರದಲ್ಲಿ ಮದುವೆ ಸಿದ್ಧತೆ ಮಾಡಿಕೊಂಡಿದ್ದರು. ಅವರಿಗೆ ಏನು ಉತ್ತರ ಹೇಳಬೇಕೊ ಗೊತ್ತಾಗುತ್ತಿಲ್ಲ ಎಂದರು.

ವಧು-ವರ ಆನ್‌ಲೈನಲ್ಲಿ ಭಾಗವಹಿಸಿದ್ದ ವಿಡಿಯೋ ಇಲ್ಲಿದೆ.



Read More
Next Story