
Bihar Election Results| ಬಿಹಾರ ಚುನಾವಣೆ: ನಿತೀಶ್ ಅಲೆಯಲ್ಲಿ ಬಿರುಗಾಳಿ ಎಬ್ಬಿಸಿದ ಎನ್‌ಡಿಎ; ಆರ್‌ಜೆಡಿಗೆ ಹಿನ್ನಡೆ - ನೆಲಕಚ್ಚಿದ ಕಾಂಗ್ರೆಸ್
ಬಿಜೆಪಿಗೆ ಹಂಚಿಕೆಯಾಗಿದ್ದ 101 ಸ್ಥಾನಗಳಲ್ಲಿ 90 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದು ಕಳೆದ ವರ್ಷದ ಲೋಕಸಭೆ ಚುನಾವಣೆಯಲ್ಲಿ ಕಂಡಿದ್ದ ಹಿನ್ನಡೆಗೆ ಪ್ರತಿಕಾರವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಬಿಹಾರದಲ್ಲಿ ಭಾರಿ ಗೆಲುವು ದಾಖಲಿಸಲು ಸಜ್ಜಾಗಿದೆ. 243 ವಿಧಾನಸಭಾ ಸ್ಥಾನಗಳಲ್ಲಿ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ. ಬಿಹಾರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇಸರಿ ಪಕ್ಷವು ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ದಾಖಲಿಸುವತ್ತ ಹೆಜ್ಜೆ ಇಟ್ಟಿದೆ.
ಚುನಾವಣೆ ಆಯೋಗದ ಮಾಹಿತಿ ಪ್ರಕಾರ, ಬಿಜೆಪಿಗೆ ಹಂಚಿಕೆಯಾಗಿದ್ದ 101 ಸ್ಥಾನಗಳಲ್ಲಿ 90 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದು ಕಳೆದ ವರ್ಷದ ಲೋಕಸಭೆ ಚುನಾವಣೆಯಲ್ಲಿ ಕಂಡಿದ್ದ ಹಿನ್ನಡೆಗೆ ಪ್ರತಿಕಾರವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ ಬೆಂಬಲ ಎನ್‌ಡಿಎಗೆ ಲಾಭ ತಂದುಕೊಟ್ಟಿದೆ. 2020ರಲ್ಲಿ ಕೇವಲ 43 ಸ್ಥಾನ ಜಯಿಸಿದ್ದ ಜೆಡಿಯು, ಈಗ 70ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್ಜೆಪಿ (ಆರ್ವಿ) 29 ಸ್ಥಾನಗಳಲ್ಲಿ ಸ್ಪರ್ಧಿಸಿ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆರ್‌ಜೆಡಿ ಹಾಗೂ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ 35 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಆರ್‌ಜೆಡಿ 26 ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ.
ಮತಗಟ್ಟೆ ಸಮೀಕ್ಷೆಗಳು ಏನು ಹೇಳಿದ್ದವು?
ಬಹುತೇಕ ಎಲ್ಲಾ ಮತಗಟ್ಟೆ ಸಮೀಕ್ಷೆಗಳು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಸುಲಭದ ಗೆಲುವನ್ನು ಭವಿಷ್ಯ ನುಡಿದಿದ್ದವು.
ಆದರೆ, 'ಆಕ್ಸಿಸ್ ಮೈ ಇಂಡಿಯಾ' ಸಮೀಕ್ಷೆಯು ಎನ್‌ಡಿಎಗೆ 121-141 ಸ್ಥಾನಗಳೊಂದಿಗೆ ಅಲ್ಪ ಬಹುಮತ ಸಿಗಲಿದೆ ಎಂದು ಹೇಳಿದರೆ, ಮಹಾಘಟಬಂಧನ್‌ಗೆ 98-118 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಿದೆ.
'ಟುಡೇಸ್ ಚಾಣಕ್ಯ' ಸಮೀಕ್ಷೆಯು ಬಿಜೆಪಿ ನೇತೃತ್ವದ ಎನ್‌ಡಿಎಗೆ 160 ಸ್ಥಾನಗಳ ಬೃಹತ್ ಗೆಲುವನ್ನು ಊಹಿಸಿದೆ.
ಎರಡೂ ಬಣಗಳಲ್ಲಿ ವಿಶ್ವಾಸದ ಮಾತು
ಮತಗಟ್ಟೆ ಸಮೀಕ್ಷೆಗಳ ಹೊರತಾಗಿಯೂ, ಎರಡೂ ಮೈತ್ರಿಕೂಟಗಳು ತಮ್ಮ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿವೆ. ಎನ್‌ಡಿಎ ನಾಯಕರು ಸಮೀಕ್ಷೆಗಳನ್ನು ಆಧರಿಸಿ ಈಗಾಗಲೇ ಸಂಭ್ರಮದಲ್ಲಿದ್ದರೆ, ಮಹಾಘಟಬಂಧನ್ ನಾಯಕರು ಈ ಸಮೀಕ್ಷೆಗಳನ್ನು ತಿರಸ್ಕರಿಸಿದ್ದಾರೆ. ಜನ ಸ್ವರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್, "ಈ ಎಲ್ಲಾ ಸಮೀಕ್ಷೆಗಳು ನಕಲಿ. ಬಿಹಾರವು ಐತಿಹಾಸಿಕ ಬದಲಾವಣೆಯತ್ತ ಸಾಗುತ್ತಿದೆ" ಎಂದು ಹೇಳಿದ್ದರು.
Live Updates
- 14 Nov 2025 8:06 AM IST
ಮತ ಎಣಿಕೆ ಆರಂಭ
ಬಿಹಾರ ರಾಜ್ಯದ 38 ಜಿಲ್ಲೆಗಳಾದ್ಯಂತ 46 ಎಣಿಕೆ ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಅಭ್ಯರ್ಥಿಗಳು ನೇಮಿಸಿದ 18,000 ಕ್ಕೂ ಹೆಚ್ಚು ಎಣಿಕೆ ಏಜೆಂಟ್‌ಗಳು ಎಣಿಕೆ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಿದ್ದಾರೆ.
- 14 Nov 2025 8:04 AM IST
ಬಿಹಾರ ಮತಎಣಿಕೆ| ಅಂಚೆ ಮತಪತ್ರಗಳಿಂದ ಮತಎಣಿಕೆ ಆರಂಭ, ಬಿಗಿ ಬಂದೋಬಸ್ತ್
ಬಹುನಿರೀಕ್ಷಿತ ಚುನಾವಣೆಗಳ ಮತ ಎಣಿಕೆ ಕಾರ್ಯವು ಇಂದು ಆರಂಭವಾಗಲಿದ್ದು, ಚುನಾವಣಾ ಆಯೋಗವು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಈ ಬಾರಿ ಮತ ಎಣಿಕೆಯು ಮೊದಲು ಅಂಚೆ ಮತಪತ್ರಗಳ ಎಣಿಕೆಯೊಂದಿಗೆ ಪ್ರಾರಂಭವಾಗಲಿದ್ದು, ಇದರ ನಂತರವೇ ವಿದ್ಯುನ್ಮಾನ ಮತ ಯಂತ್ರಗಳನ್ನು ಎಣಿಕೆಗೆ ತೆಗೆದುಕೊಳ್ಳಲಾಗುತ್ತದೆ. ಒಟ್ಟು 243 ಸ್ಥಾನಗಳಿರುವ ಸದನದಲ್ಲಿ ಅಧಿಕಾರವನ್ನು ಹಿಡಿಯಲು ಯಾವುದೇ ಪಕ್ಷ ಅಥವಾ ಮೈತ್ರಿಕೂಟಕ್ಕೆ 122 ಸ್ಥಾನಗಳ ಬಹುಮತದ ಅಗತ್ಯವಿದೆ.
- 14 Nov 2025 7:48 AM IST
ಬಿಹಾರ ಚುನಾವಣೆ: ಮತ ಎಣಿಕೆಗೆ ವ್ಯಾಪಕ ಭದ್ರತಾ ಸಿದ್ಧತೆ
ಬಿಹಾರದ 243 ಸದಸ್ಯ ಬಲದ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆಗಾಗಿ ರಾಜ್ಯದ 38 ಜಿಲ್ಲೆಗಳಲ್ಲಿನ 46 ಕೇಂದ್ರಗಳಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ ಎಣಿಕೆ ನಡೆಯಲಿರುವ ಹಿನ್ನೆಲೆಯಲ್ಲಿ ಪಾಟ್ನಾ ನಗರದ ಶಾಲೆಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನವೆಂಬರ್ 6 ಮತ್ತು ನವೆಂಬರ್ 11 ರಂದು ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಹಾರವು ಐತಿಹಾಸಿಕವಾಗಿ ಶೇ. 67.13 ರಷ್ಟು ಮತದಾನವನ್ನು ದಾಖಲಿಸಿದೆ. ಒಟ್ಟು 7.45 ಕೋಟಿ ಮತದಾರರು 2,616 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲು ಅರ್ಹರಾಗಿದ್ದರು.
ಚುನಾವಣಾ ಆಯೋಗದ ಹೇಳಿಕೆಯ ಪ್ರಕಾರ, ಎಲ್ಲಾ 243 ವಿಧಾನಸಭಾ ಕ್ಷೇತ್ರಗಳಲ್ಲಿ ಎಣಿಕೆಗಾಗಿ ವ್ಯವಸ್ಥೆ ಮಾಡಲಾಗಿದ್ದು, 243 ಎಣಿಕೆ ವೀಕ್ಷಕರು ಮತ್ತು ಅಭ್ಯರ್ಥಿಗಳು ಅಥವಾ ಅವರ ಏಜೆಂಟರ ಸಮ್ಮುಖದಲ್ಲಿ 243 ರಿಟರ್ನಿಂಗ್ ಅಧಿಕಾರಿಗಳು ಈ ಕಾರ್ಯವನ್ನು ನಡೆಸಲಿದ್ದಾರೆ.
ಒಟ್ಟು 4,372 ಎಣಿಕೆ ಟೇಬಲ್‌ಗಳನ್ನು ಸ್ಥಾಪಿಸಲಾಗಿದೆ, ಪ್ರತಿಯೊಂದರಲ್ಲೂ ಒಬ್ಬ ಮೇಲ್ವಿಚಾರಕ, ಎಣಿಕೆ ಸಹಾಯಕ ಮತ್ತು ಮೈಕ್ರೋ-ವೀಕ್ಷಕರು ಇರಲಿದ್ದಾರೆ. ನಾಮನಿರ್ದೇಶಿತರು ನೇಮಿಸಿದ 18,000 ಕ್ಕೂ ಹೆಚ್ಚು ಎಣಿಕೆ ಏಜೆಂಟ್‌ಗಳು ಸಹ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ಆಯೋಗ ತಿಳಿಸಿದೆ.
ಮತ ಎಣಿಕೆಯ ಸಮಯ
ಮತ ಎಣಿಕೆ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಆಯೋಗದ ನಿರ್ದೇಶನದಂತೆ, ಅಂಚೆ ಮತಗಳ ಎಣಿಕೆ ಮೊದಲು ಪ್ರಾರಂಭವಾಗುತ್ತದೆ ಮತ್ತು ಇವಿಎಂಗಳ ಎಣಿಕೆ ಬೆಳಿಗ್ಗೆ 8.30 ಕ್ಕೆ ಆರಂಭವಾಗಲಿದೆ.
ಭದ್ರತಾ ವಿವರಗಳು
ಸುಗಮ ಎಣಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾಕಷ್ಟು ಸಂಖ್ಯೆಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ಬಿಹಾರ ಪೊಲೀಸ್ ಸಿಬ್ಬಂದಿಯನ್ನು ರಾಜ್ಯಾದ್ಯಂತ ನಿಯೋಜಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ರಾಜ್ಯದ ಹೊರಗಿನಿಂದ ಬಂದ 106 ಕಂಪನಿಗಳ ಭದ್ರತಾ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ.
ಎಣಿಕೆ ಕೇಂದ್ರಗಳಲ್ಲಿ ಎರಡು ಹಂತದ ಭದ್ರತೆಯನ್ನು ಖಚಿತಪಡಿಸಲಾಗಿದೆ. ಒಳ ಹಂತದ ಮತ ಎಣಿಕೆ ಪ್ರದೇಶಕ್ಕೆ ಸಿಎಪಿಎಫ್ ಅನ್ನು ಮತ್ತು ಹೊರ ಹಂತದಲ್ಲಿ ರಾಜ್ಯ ಪೊಲೀಸರನ್ನು ನಿಯೋಜಿಸಲಾಗಿದೆ. ಇದಲ್ಲದೆ, 24/7 ಸಿಸಿಟಿವಿ ಕಣ್ಗಾವಲು ಮತ್ತು ಇತರ ಭದ್ರತಾ ನಿಬಂಧನೆಗಳು ಜಾರಿಯಲ್ಲಿವೆ. ಚುನಾವಣೆಯಲ್ಲಿ ಬಳಸಲಾದ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳನ್ನು ಡಬಲ್-ಲಾಕ್ ವ್ಯವಸ್ಥೆಯ ಅಡಿಯಲ್ಲಿ ಸ್ಟ್ರಾಂಗ್ ರೂಮ್‌ಗಳ ಒಳಗೆ ಮುಚ್ಚಲಾಗಿದೆ ಎಂದು ಅವರು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
- 14 Nov 2025 7:27 AM IST
ನಾವು ಜನತಾ ಮಾಲೀಕರ ಜನಾದೇಶವನ್ನು ಸ್ವೀಕರಿಸುತ್ತೇವೆ; ಬಿಹಾರ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ
ಬಿಹಾರದ ಉಪಮುಖ್ಯಮಂತ್ರಿ ಮತ್ತು ಲಖಿಸರಾಯ್ ಸ್ಥಾನದ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಸಿನ್ಹಾ ಅವರು ಅಶೋಕಧಾಮ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಜನತಾ ಮಾಲೀಕರ ಜನಾದೇಶವನ್ನು ತಲೆಬಾಗಿ ಸ್ವೀಕರಿಸುತ್ತೇವೆ. ಪ್ರಜಾಪ್ರಭುತ್ವದಲ್ಲಿ ಜನರ ನಿರ್ಧಾರವೇ ಅಂತಿಮ ಎಂದು ಅವರು ತಿಳಿಸಿದರು.
- 14 Nov 2025 7:21 AM IST
ವಂಚನೆ ನಡೆದರೆ ನೇಪಾಳ ಮಾದರಿ ಹಿಂಸಾಚಾರ ; ಆರ್‌ಜೆಡಿ ಎಂಎಲ್ಸಿ ಎಚ್ಚರಿಕೆ
ಬಿಹಾರ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳಿಂದ ಆತಂಕಗೊಂಡಿರುವ ಇಂಡಿಯಾ ಕೂಟದ ಪಕ್ಷಗಳು ಕಟ್ಟುನಿಟ್ಟಿನ ಹಾಗೂ ಪಾರದರ್ಶಕ ಮತ ಎಣಿಕೆಗೆ ಆಗ್ರಹಿಸಿವೆ.
ಆರ್‌ಜೆಡಿಯ ವಿಧಾನ ಪರಿಷತ್ ಸದಸ್ಯ ಸುನಿಲ್ ಸಿಂಗ್ ಪ್ರತಿಕ್ರಿಯಿಸಿ, “ ಚುನಾವಣೆಯಲ್ಲಿ ವಂಚನೆ ನಡೆದರೆ ಬಿಹಾರವು ಮತ್ತೊಂದು ನೇಪಾಳ ಅಥವಾ ಬಾಂಗ್ಲಾದೇಶವಾಗಿ ಬದಲಾಗುತ್ತದೆ. ಸಾಮಾನ್ಯ ಜನರು ಜಾಗರೂಕರಾಗಿರಬೇಕು. ಶೇ. 1ರಷ್ಟು ದುಷ್ಕೃತ್ಯವನ್ನೂ ನಾವು ಸಹಿಸುವುದಿಲ್ಲ. ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಮನವಿ ಮಾಡುತ್ತೇನೆ. ಮತ ಎಣಿಕೆಯನ್ನು ನ್ಯಾಯಯುತವಾಗಿ ನಡೆಸಿ, ನಿಮ್ಮ ಕರ್ತವ್ಯಗಳನ್ನು ಸಮಗ್ರತೆಯಿಂದ ನಿರ್ವಹಿಸಿ” ಎಂದು ಎಚ್ಚರಿಸಿದ್ದಾರೆ.
- 14 Nov 2025 7:09 AM IST
ಜೆಡಿಯು-ಆರ್‌ಜೆಡಿ ಮಧ್ಯೆ ಪೋಸ್ಟರ್ ಸಮರ
ಬಿಹಾರ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಪಾಟ್ನಾದ ಜೆಡಿಯು ಕಚೇರಿ ಹೊರಗೆ ‘ಟೈಗರ್ ಅಭಿ ಜಿಂದಾ ಹೇ’ ಎನ್ನುವ ಪೋಸ್ಟರ್ಗಳು ರಾರಾಜಿಸುತ್ತಿವೆ.
ಭರ್ಜರಿ ಗೆಲುವಿನ ವಿಶ್ವಾಸದಲ್ಲಿರುವ ಜೆಡಿಯು ಕಾರ್ಯಕರ್ತರು, ಸಂಭ್ರಮಾಚರಣೆ ತಯಾರಿಯಲ್ಲಿದ್ದಾರೆ. ಇದಕ್ಕೆ RJDಯ ಬೆಂಬಲಿತ ಸಮಾಜವಾದಿ ಪಕ್ಷ ಕೂಡ ಕೌಂಟರ್ ಕೊಟ್ಟಿದೆ. ‘ಅಲ್ವಿದಾ ಚಾಚಾ’ ಅಂದರೆ ಬಾಯ್ ಬಾಯ್ ಚಿಕ್ಕಪ್ಪ ಎನ್ನುವ ಮೂಲಕ ನಿತೀಶ್ ಕುಮಾರ್ ಕಾಲೆಳೆದಿದೆ.




