ಮುಂಗಾರು ಪ್ರವೇಶ: ಯಾವ ತಿಂಗಳು ಯಾವ ಬೆಳೆ ಸೂಕ್ತ?
x
ಕೃಷಿ

ಮುಂಗಾರು ಪ್ರವೇಶ: ಯಾವ ತಿಂಗಳು ಯಾವ ಬೆಳೆ ಸೂಕ್ತ?

ಕರ್ನಾಟಕದಲ್ಲಿ ನೈರುತ್ಯ ಮುಂಗಾರಿಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕೇರಳಕ್ಕೆ ಮೇ 30ರಂದು ನೈರುತ್ಯ ಮುಂಗಾರು ಪ್ರವೇಶಿಸಿದ್ದು, ಇದೇ ವಾರದಲ್ಲಿ ಮುಂಗಾರು ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯಾವ ಕಾಲದಲ್ಲಿ ಯಾವ ರೀತಿಯ ಕೃಷಿ ಪದ್ಧತಿ ಅನುಸರಿಸಬೇಕು ಎನ್ನುವ ವಿವರ ಇಲ್ಲಿದೆ..


ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶವಾಗುತ್ತಿದೆ. ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರ ಮುಖದಲ್ಲಿ ಇದೀಗ ಮಂದಹಾಸ ಮೂಡಿದೆ. ಆದರೆ, ರೈತರು ಕೃಷಿಗೆ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು, ಯಾವ ಬೆಳೆ ಬೆಳೆದರೆ ಸೂಕ್ತ? ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ, ದೀರ್ಘಾವಧಿಯ ಬೆಳೆಗಳಿಗೆ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ?

ಕಳೆದ ವರ್ಷ ರಾಜ್ಯದಲ್ಲಿ ಎದುರಾಗಿದ್ದ ತೀವ್ರ ಬರದಿಂದಾಗಿ ರೈತರು ಬೆಳೆ ನಷ್ಟವಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಮೇವಿನ ಕೊರತೆ ಎದುರಾಗಿ ಜಾನುವಾರುಗಳ ನಿರ್ವಹಣೆ ಕಷ್ಟವಾಗಿತ್ತು. ಕರ್ನಾಟಕವು ಕೃಷಿ ಪ್ರಧಾನ ರಾಜ್ಯವಾಗಿದ್ದರೂ ಹೆಚ್ಚು ಮಳೆಯಾಶ್ರಿತ ಪ್ರದೇಶದಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿ ಇದೆ. ರಾಜ್ಯದಲ್ಲಿ ಶೇ. 66 ರಷ್ಟೂ ಕೃಷಿ ಭೂಮಿಯು ಮಳೆಯಾಶ್ರಿತವಾಗಿದೆ. ಕಳೆದ ವರ್ಷ ರಾಜ್ಯದ 223 ತಾಲ್ಲೂಕುಗಳಲ್ಲಿ ಬರ ಘೋಷಿಸಲಾಗಿತ್ತು. ಅಲ್ಲದೇ, ಅಂತರ್ಜಲ ಮಟ್ಟದ ತೀವ್ರ ಕುಸಿತದಿಂದ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿತ್ತು.

ಕರ್ನಾಟಕದಲ್ಲಿ ನೈರುತ್ಯ ಮುಂಗಾರಿಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಕೃಷಿ ಚಟುವಟಿಕೆಗಳಿಗೆ ಮಳೆರಾಯನ ಹಸಿರು ನಿಶಾನೆ ಸಿಗುವ ಲಕ್ಷಣಗಳಿವೆ. ಕೇರಳಕ್ಕೆ ಮೇ 30ರಂದು ನೈರುತ್ಯ ಮುಂಗಾರು ಪ್ರವೇಶಿಸಿದ್ದು, ಇದೇ ವಾರದಲ್ಲಿ ಮುಂಗಾರು ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಎದುರಾದ ಬರಗಾಲದಿಂದ ರೈತರು ತೀವ್ರ ಸಂಕಷ್ಟ ಅನುಭವಿಸಿದ್ದರು. ಇದೀಗ ರೈತರು ಮತ್ತೆ ಕೃಷಿ ಚಟುವಟಿಕೆಗಳತ್ತ ಮುಖ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಯಾವ ಬೆಳೆ ಬೆಳೆಯಲು ರೈತ ಮಂದಾಗಬೇಕು? ಎನ್ನುವ ಬಗ್ಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸಲಹೆಗಳನ್ನು ನೀಡಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಜಿಕೆವಿಕೆ)ದ ಕೃಷಿ ಹವಾಮಾನ ವಿಭಾಗದ ಮುಖ್ಯಸ್ಥ ತಿಮ್ಮೇಗೌಡ ಅವರು ಎಳೆಎಳೆಯಾಗಿ ರೈತರಿಗಾಗಿ ವೈಜ್ಞಾನಿಕ ಕಿವಿಮಾತುಗಳನ್ನು ʼದ ಫೆಡರಲ್‌ ಕರ್ನಾಟಕʼ ಮೂಲಕ ತಿಳಿಹೇಳಿದ್ದಾರೆ.

ದೀರ್ಘಕಾಲದ ಬೆಳೆಯ ಬಗ್ಗೆ ಎಚ್ಚರಿಕೆ ಇರಲಿ

ರೈತರು ದೀರ್ಘಕಾಲದ ಬೆಳೆಗಳನ್ನು ಬೆಳೆಯುವ ಮುನ್ನ ಎಚ್ಚರಿಕೆ ವಹಿಸಬೇಕು. ಈಗ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಆದರೆ, ದೀರ್ಘಕಾಲಿಕ ಬೆಳೆಗಳನ್ನು ಬೆಳೆಯುವ ಸಂದರ್ಭದಲ್ಲಿ ಪರಿಸ್ಥಿತಿ ಏರುಪೇರಾಗುವ ಸಾಧ್ಯತೆ ಇದೆ.

ಹತ್ತಿ ಬಿತ್ತನೆ ಬೇಡ

ಪೂರ್ವ ಮುಂಗಾರಿನಲ್ಲೇ ಬೆಳೆ ಪದ್ಧತಿ (ಕೃಷಿ ಚಟುವಟಿಕೆ) ಪ್ರಾರಂಭವಾಗುತ್ತದೆ. ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಹತ್ತಿ ಬಿತ್ತನೆ ಮಾಡಲಾಗುತ್ತದೆ. ಆದರೆ, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಉತ್ತಮ ಮಳೆಯಾಗದೆ ಇರುವುದರಿಂದ ಹತ್ತಿ ಬಿತ್ತನೆ ಆಗಿಲ್ಲ. ಆದರೆ, ಈಗ ಹತ್ತಿ ಬಿತ್ತನೆ ಮಾಡಬಾರದು. ಹತ್ತಿ ದೀರ್ಘಕಾಲಿಕ ಬೆಳೆಯಾಗಿದ್ದು, ಇದರ ಫಸಲು ಕೈಗೆ ಸೇರುವ ಸಂದರ್ಭದಲ್ಲಿ ಬರಗಾಲ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ, ಈ ಸಂದರ್ಭದಲ್ಲಿ ಹತ್ತಿ ಬಿತ್ತನೆ ಮಾಡುವುದನ್ನು ರೈತರು ಕೈಬಿಡುವುದು ಸೂಕ್ತ.

ಎಳ್ಳು ಬೆಳೆ ಬೇಡ

ಎಳ್ಳು ಬೆಳೆಯುವುದನ್ನೂ ಸಹ ಕೈಬಿಡಬೇಕು. ಇಲ್ಲದಿದ್ದರೆ, ಎಳ್ಳು ಬೆಳೆಯ ಫಸಲು ಬರುವ ಸಂದರ್ಭದಲ್ಲಿ ರೋಗಕ್ಕೆ (ಪಿಲ್ಲೋಡಿ) ತುತ್ತಾಗುವ ಸಾಧ್ಯತೆ ಇದೆ.

ಮೇವಿನ ಬೆಳೆ

ಇನ್ನು ಮೇವಿನ ಬೆಳೆಗಳಾದ ಮುಸುಕಿನ ಜೋಳ, ಮೇವಿನ ಜೋಳ, ಮೇವಿನ ಸಜ್ಜೆಯನ್ನು ಮೇವಿನ ಅವಶ್ಯಕತೆಗೆ ಅನುಗುಣವಾಗಿ ಮೇ ತಿಂಗಳಿನಿಂದ ಸೆಪ್ಟೆಂಬರ್ ವರೆಗೆ ಯಾವಾಗಲಾದರೂ ಬಿತ್ತಬಹುದಾಗಿದೆ.

ಬಹುವಾರ್ಷಿಕ ಮೇವಿನ ಬೆಳೆಗಳಾದ ನೇಪಿಯರ್ ಹುಲ್ಲು ಅಥವಾ ಹೆಬ್ಬೇವು, ಡಾಲ್ಬರ್ಜಿಯಾ, ದಶರಥ ಹುಲ್ಲಿನ ಬೆಳೆಯನ್ನು ಬದುಗಳ ಮೇಲೆ ಅಥವಾ ಹೊಲದ ಸುತ್ತಲು ಬೆಳೆಯುವುದರಿಂದ ಬರ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮೇವು ನೀಡಲು ಸಹಕಾರಿಯಾಗಲಿದೆ.

ತಿಂಗಳವಾರು ಬಿತ್ತನೆಗೆ ಸೂಕ್ತವಾದ ಬೆಳೆಗಳು

ಜೂನ್ : ಮುಸುಕಿನ ಜೋಳ, ನೆಲಗಡಲೆ ಹಾಗೂ ತೊಗರಿ ಬೆಳೆಗಳನ್ನು ಬಿತ್ತನೆ ಮಾಡಬಹುದು.

ಜುಲೈ: ನೆಲಗಡಲೆ, ರಾಗಿ (ದೀರ್ಘಾವಧಿ), ಸಿರಿಧಾನ್ಯಗಳಾದ ನವಣೆ, ಹಾರಕ, ಊದಲು ಹಾಗೂ ಕೊರಲೆ ಉತ್ತಮವಾಗಿದೆ.

ಆಗಸ್ಟ್: ರಾಗಿ (ಮಧ್ಯಮಾವಧಿ / ಅಲ್ಪಾವಧಿ) ಸಿರಿಧಾನ್ಯಗಳಾದ ನವಣೆ, ಸಾಮೆ, ಹಾರಕ, ಬರಗು, ಕೊರಲೆ, ಅವರೆ, ಅಲಸಂದೆ, ಸೂರ್ಯಕಾಂತಿ ಹಾಗೂ ಹುಚ್ಚೆಳ್ಳು ಬಿತ್ತನೆ ಮಾಡಬಹುದು.

ಸೆಪ್ಟೆಂಬರ್: ಸಿರಿಧಾನ್ಯಗಳಾದ ಬರಗು, ಸಾಮೆ, ಹುರಳಿ ಹಾಗೂ ಹುಚ್ಚೆಳ್ಳು ಬಿತ್ತನೆ ಉತ್ತಮ ಆಯ್ಕೆಯಾಗಿದೆ.


ಉತ್ತಮ ಬೆಳೆಗಾಗಿ ಈ ಪದ್ಧತಿಗಳನ್ನು ಅಳವಡಿಸಿಕೊಳ್ಳಿ

* ಮಳೆ ನೀರಿನ ಸಂರಕ್ಷಣೆಗಾಗಿ ಬದು ಹಾಗೂ ಕೃಷಿ ಹೊಂಡಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳ್ಳಬೇಕು.

* ಸಾವಯವ ಗೊಬ್ಬರಗಳು ಮಣ್ಣಿನ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹೀಗಾಗಿ, ಈ ಸಂದರ್ಭದಲ್ಲಿ ಮಣ್ಣಿಗೆ ಕನಿಷ್ಠ ಗೊಬ್ಬರ ಹಾಗೂ ಕಾಂಪೋಸ್ಟ್ ಸೇರಿಸಬೇಕು.

* ಕೆರೆಗೋಡನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ.

* ಕಳೆದ ವರ್ಷ ಎದುರಾದ ಬರಗಾಲದಿಂದಾಗಿ ಹೊಲ ಹಾಗೂ ಜಮೀನುಗಳಲ್ಲಿ ತೇವಾಂಶ ಪ್ರಮಾಣ ಹೆಚ್ಚಾಗುವುದಕ್ಕೆ ವಿಳಂಬವಾಗುವ ಸಾಧ್ಯತೆ ಇದೆ. ಹೀಗಾಗಿ, ಆಯಾ ಪ್ರದೇಶವಾರು ಮಧ್ಯಮ ಅವಧಿ ಹಾಗೂ ಅಲ್ಪಾವಧಿ ತಳಿಗಳ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಬೇಕು.

ಉಳುಮೆಗೆ ಮುನ್ನ ...

ಕರ್ನಾಟಕದಲ್ಲಿ ರೈತರು ಹೆಚ್ಚು ಮಳೆಯಾಶ್ರಿತ ಕೃಷಿಯನ್ನೇ ಅವಲಂಬಿಸಿರುವುದರಿಂದ ಮಣ್ಣು ಮತ್ತು ನೀರು ಸುರಕ್ಷತೆಗೆ ಆದ್ಯತೆ ನೀಡಬೇಕು. ಇಳಿಜಾರಿಗೆ ಅಡ್ಡಲಾಗಿ ಕೃಷಿ ಮಾಡಬೇಕು. ಮಳೆ ನೀರನ್ನು ಸಂಗ್ರಹಿಸಲು ಪ್ರಧಾನವಾಗಿ ಮಾಗಿ ಉಳುಮೆಗೆ (ಕೃಷಿ ಪೂರ್ವ ಚಟುವಟಿಕೆ) ಆದ್ಯತೆ ನೀಡಬೇಕು ಎಂದು ತಿಮ್ಮೇಗೌಡ ಅವರು ಸಲಹೆ ನೀಡಿದರು.

ಮಾಗಿ ಉಳುಮೆ ಮಾಡುವುದರಿಂದ ಮಣ್ಣು ಸಡಿಲವಾಗಿ, ಮಳೆ ನೀರು ಹೊಲದಲ್ಲಿ ಸಂಗ್ರಹವಾಗಲು ಸಾಧ್ಯವಾಗುತ್ತದೆ. ಅಲ್ಲದೇ ಹೊಲಗಳ ಮಣ್ಣಿನ ಸವಕಳಿ ಕಡಿಮೆಯಾಗಿ, ಫಲವತ್ತತೆಗೆ ಸಹಕಾರಿಯಾಗುತ್ತದೆ. ಮಾಗಿ ಉಳುಮೆಯ ಮತ್ತೊಂದು ಉಪಯೋಗವೆಂದರೆ, ಮಣ್ಣು ಸಡಿಲವಾಗಿ ಮಳೆ ನೀರು ಭೂಮಿಯ ಹೊರಪದರದಲ್ಲಿ ಹರಿದು ಹೋಗಿ ವ್ಯರ್ಥವಾಗದೆ ಭೂಮಿಯ ಒಳಗೆ ಇಳಿಯುತ್ತದೆ. ಇದರಿಂದ ಜಮೀನಿನಲ್ಲಿ ತೇವಾಂಶ ಇರುತ್ತದೆ. ಇಳಿ ಜಾರಿಗೆ ಅಡ್ಡವಾಗಿ ಉಳುಮೆ ಮಾಡುವುದರಿಂದ ಮಣ್ಣಿನ ಸವಕಳಿಯನ್ನು ತಡೆಯುವುದರೊಂದಿಗೆ ಫಲವತ್ತತೆಯನ್ನು ಸಹ ಕಾಪಾಡಿಕೊಳ್ಳಬಹುದು.

ಇನ್ನು ಮಾಗಿ ಉಳುಮೆ ಮಾಡುವ ಸಂದರ್ಭದಲ್ಲಿ ರೈತರು ಒಂದು ಅಡಿಗಿಂತ ಆಳವಾದ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದರಿಂದ ಮಣ್ಣಿನಲ್ಲಿ ಗಾಳಿಯಾಡುವಿಕೆ ಪ್ರಮಾಣ ಹೆಚ್ಚಳವಾಗಿ ಕೃಷಿಗೆ ಅನುಕೂಲವಾಗುತ್ತದೆ ಎಂದು ವಿವರಿಸಿದರು.

ವಾಡಿಕೆಗಿಂತ ಹೆಚ್ಚಿನ ಮಳೆ

ʻಈ ಬಾರಿ ಕರ್ನಾಟಕದಲ್ಲಿ ಮುಂಗಾರು ಮಳೆ ಉತ್ತಮವಾಗಿದೆ. ಮುಂಗಾರಿನ ಅವಧಿಯಲ್ಲಿ ಕರ್ನಾಟಕದಲ್ಲಿ ಸಾಮಾನ್ಯವಾಗಿ 850 ಮಿ.ಮೀ ಮಳೆಯಾಗುತ್ತದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಈ ಬಾರಿ ವಾಡಿಕೆಗಿಂತ ಅಂದಾಜು 100 ಮಿ.ಮೀ ಮಳೆ ಹೆಚ್ಚಾಗಿ ಬೀಳುವ ಸಾಧ್ಯತೆ ಇದೆ. ಆದರೆ, ಪ್ರವಾಹ ಪರಿಸ್ಥಿತಿಯ ಬಗ್ಗೆ ಈಗಲೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಈಗಾಗಲೇ ಕರ್ನಾಟಕದ ಡ್ಯಾಂಗಳು ಬರಿದಾಗಿವೆ. ಈ ಡ್ಯಾಂಗಳು ತುಂಬಿದ ಮೇಲೆ ಪರಿಸ್ಥಿತಿ ಹೇಗಿರಲಿದೆ ಎನ್ನುವುದು ತಿಳಿಯಲಿದೆʼ ಎಂದು ಹಿರಿಯ ಹವಾಮಾನ ತಜ್ಞ ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

2024ರ ಮುಂಗಾರು (ಜೂನ್-ಸೆಪ್ಟೆಂಬರ್) ಅವಧಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದರು.

Read More
Next Story