ವಿಧಾನಪರಿಷತ್‌ ಚುನಾವಣೆ | ಪಕ್ಷಗಳಿಗೆ ಬುದ್ಧಿವಂತರ ಕ್ಷೇತ್ರದಲ್ಲೂ ತಪ್ಪದ ಬಂಡಾಯದ ಬಿಸಿ
x

ವಿಧಾನಪರಿಷತ್‌ ಚುನಾವಣೆ | ಪಕ್ಷಗಳಿಗೆ ಬುದ್ಧಿವಂತರ ಕ್ಷೇತ್ರದಲ್ಲೂ ತಪ್ಪದ ಬಂಡಾಯದ ಬಿಸಿ

ಶಿಕ್ಷಿತ ವರ್ಗದ ಸೀಮಿತ ಮತದಾರರನ್ನು ಹೊಂದಿರುವ ಬುದ್ಧಿವಂತರ ಕ್ಷೇತ್ರಗಳೆಂದೇ ಹೆಸರಾಗಿರುವ ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಕೂಡ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿ ಮೂರೂ ಪಕ್ಷಗಳಿಗೆ ಬಂಡಾಯದ ಆತಂಕ ಎದುರಾಗಿದೆ.


ರಾಜ್ಯ ಆರು ವಿಧಾನ ಪರಿಷತ್ ಸ್ಥಾನಗಳಿಗಾಗಿ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಗುರುವಾರ(ಏ.16) ಮುಕ್ತಾಯವಾಗಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳು ಎಲ್ಲಾ ಆರು ಕ್ಷೇತ್ರಗಳಲ್ಲೂ ಕಣಕ್ಕಿಳಿದಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿಯ ಹಿನ್ನೆಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಅಧಿಕೃತ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

ಈಶಾನ್ಯ ಪದವೀಧರ ಕ್ಷೇತ್ರ, ನೈರುತ್ಯ ಪದವೀಧರ ಕ್ಷೇತ್ರ, ಬೆಂಗಳೂರು ಪದವೀಧರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಜೂನ್ 3ರಂದು ಮತದಾನ ನಡೆಯಲಿದ್ದು, ಜೂನ್ 6ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ.

ಆರೂ ಕ್ಷೇತ್ರಗಳಿಗೆ ಆಡಳಿತರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಮೈತ್ರಿಕೂಟಗಳೆರಡೂ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಿದ್ದರೂ, ಎರಡೂ ಪಕ್ಷಗಳಿಗೆ ಬಂಡಾಯ ಅಭ್ಯರ್ಥಿಗಳ ಬಿಸಿ ಕೂಡ ತಟ್ಟಿದೆ. ಚುನಾವಣೆ ಎದುರಿಸುತ್ತಿರುವ ಎಲ್ಲಾ ಮೂರು ಪದವೀಧರರ ಕ್ಷೇತ್ರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಲ್ಲಿ ಪಕ್ಷಗಳಿಗೆ ಬಂಡಾಯ ಎದುರಾಗಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ, ಬೆಂಗಳೂರು ಪದವೀಧರರ ಕ್ಷೇತ್ರ, ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ಈಶಾನ್ಯ ಪದವೀಧರರ ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ಸವಾಲಾಗಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರ ಗೊಂದಲರಾಜ್ಯ

ದಕ್ಷಿಣ ಶಿಕ್ಷಕರ ಕ್ಚೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯ ವಿಷಯದಲ್ಲೇ ಗೊಂದಲವಾಗಿದ್ದು, ಕ್ಷೇತ್ರಕ್ಕೆ ಮೊದಲು ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಲಾಗಿತ್ತು. ಬಿಜೆಪಿ ಪಟ್ಟಿಯಲ್ಲಿ ನಿಂಗರಾಜ ಗೌಡ ಹೆಸರು ಹೊರಬಿದ್ದ ಎರಡು ದಿನದ ಬಳಿಕ ದಿಢೀರನೇ ಜೆಡಿಎಸ್ ವರಿಷ್ಠರು ಕ್ಷೇತ್ರದಿಂದ ತಮ್ಮ ಅಭ್ಯರ್ಥಿ ವಿವೇಕಾನಂದ ಅಧಿಕೃತವಾಗಿ ಕಣಕ್ಕಿಳಿಯಲಿದ್ದಾರೆ ಎಂದು ಘೋಷಿಸಿ ಅಭ್ಯರ್ಥಿಗೆ ಬಿ ಫಾರಂ ವಿತರಣೆಯನ್ನೂ ಮಾಡಿದರು. ಅತ್ತ ಬಿಜೆಪಿ ಅಭ್ಯರ್ಥಿ ನಿಂಗರಾಜ ಗೌಡ ಅವರೂ ನಾಮಪತ್ರ ಸಲ್ಲಿಸಿದ್ದಾರೆ.

ಈ ನಡುವೆ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಪರಿಷತ್ ಮಾಜಿ ಸದಸ್ಯ ಕೆ ಟಿ ಶ್ರೀಕಂಠೇಗೌಡ ನಾಮಪತ್ರ ಸಲ್ಲಿಕೆಯ ಅಂತಿಮ ದಿನವಾದ ಗುರುವಾರ, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಮುಂದಾದಾಗ ಚುನಾವಣಾಧಿಕಾರಿಗಳ ಕಚೇರಿ ಎದುರೇ ಜೆಡಿಎಸ್ ಕಾರ್ಯಕರ್ತರು ಅವರನ್ನು ಎಳೆದಾಡಿ, ಸಂಘರ್ಷದಲ್ಲಿ ಅವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಹಾಗಾಗಿ ಅವರಿಗೆ ನಾಮಪತ್ರ ಸಲ್ಲಿಸಲು ಅವಕಾಶವೇ ಆಗಿಲ್ಲ.

ಬಿಜೆಪಿಯಿಂದ ನಾಮಪತ್ರ ಸಲ್ಲಿಸಿರುವ ನಿಂಗರಾಜ ಗೌಡ ಕಣದಿಂದ ಹಿಂದೆ ಸರಿಯಲು ಒಪ್ಪಿಕೊಂಡಿದ್ದು, ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂದು ಬಿಜೆಪಿ ನಾಯಕ, ವಿಧಾನಸಭಾ ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದ್ದಾರೆ.

ನೈರುತ್ಯದಲ್ಲಿ ಬಂಡಾಯ ಭುಗಿಲು

ನೈರುತ್ಯ ಪದವೀಧರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರಗಳೆರಡಲ್ಲೂ ಬಂಡಾಯ ಭುಗಿಲೆದ್ದಿದೆ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡಕ್ಕೂ ಪ್ರಬಲ ಅಭ್ಯರ್ಥಿಗಳ ಬಂಡಾಯವೇ ಸವಾಲಾಗಿದೆ.

ಮುಂಚಿತವಾಗಿಯೇ ಹೆಸರು ಘೋಷಣೆ ಮಾಡಿದ್ದ ಕಾಂಗ್ರೆಸ್, ಪರಿಷತ್ ಮಾಜಿ ಸದಸ್ಯ, ಹಿರಿಯ ನಾಯಕ ಆಯನೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಿದೆ. ಆದರೆ, ಎರಡು ಬಾರಿ ಪರಿಷತ್ ಚುನಾವಣೆಯಲ್ಲಿ ಪಕ್ಷವನ್ನು ಪ್ರತಿನಿಧಿಸಿ ಸೋಲು ಕಂಡಿರುವ ಎಸ್ ಪಿ ದಿನೇಶ್ ಅಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದರು. ತಮಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ದಿನೇಶ್, ಕಾಂಗ್ರೆಸ್ಗೆ ಸವಾಲಾಗಿದ್ದಾರೆ.

ಬಿಜೆಪಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರಿರುವ ಜನಪ್ರಿಯ ವೈದ್ಯ ಡಾ ಧನಂಜಯ ಸರ್ಜಿ ಅವರಿಗೆ ಪಕ್ಷ ಟಿಕೆಟ್ ಘೋಷಿಸಿದೆ. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ತಮಗೂ ಪಕ್ಷ ಹಿಂದೆ ಪರಿಷತ್ ಟಿಕೆಟ್ ಆಶ್ವಾಸನೆ ನೀಡಿತ್ತು. ಇದೀಗ ಟಿಕೆಟ್ ನೀಡದೇ ವಂಚಿಸಲಾಗಿದೆ ಎಂದು ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ.

ಹಾಗಾಗಿ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಎರಡೂ ಪಕ್ಷಗಳಿಗೂ ಪ್ರಬಲ ಅಭ್ಯರ್ಥಿಗಳಿಂದಲೇ ಬಂಡಾಯ ಎದುರಾಗಿದೆ.

ಇನ್ನು ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆ ಕೆ ಮಂಜುನಾಥ್ ಅವರಿಗೂ ಬಂಡಾಯದ ಬಿಸಿ ತಲೆಬಿಸಿ ತಂದಿದೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವಕ್ತಾರ ರಮೇಶ್ ಶೆಟ್ಟಿ ಶಂಕರಘಟ್ಟ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಾಲಿ ಪರಿಷತ್ ಜೆಡಿಎಸ್ ಸದಸ್ಯ ಎಸ್ ಎಲ್ ಭೋಜೇಗೌಡ ಕಣಕ್ಕಿಳಿದಿದ್ದಾರೆ.

ಈಶಾನ್ಯ ಪದವೀಧರ ಕ್ಷೇತ್ರದಲ್ಲೂ ಬಿಜೆಪಿಗೆ ಬಿಸಿ

ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಮರನಾಥ ಪಾಟೀಲ ಅವರಿಗೆ ಟಿಕೆಟ್ ನೀಡಿ, ಪಕ್ಷದ ಅಭ್ಯರ್ಥಿಯಾಗಿ ಅವರನ್ನು ಕಣಕ್ಕಿಳಿಸಿದೆ. ಆದರೆ, ಕಲಬುರಗಿ- ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಸುರೇಶ್ ಸಜ್ಜನ ಅವರು ಪಕ್ಷದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಂಡಾಯ ಸಾರಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕ್ಷೇತ್ರದಲ್ಲಿ ಹಾಲಿ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಬೆಂಗಳೂರು ಪದವೀಧರ ಕ್ಷೇತ್ರದಲ್ಲೂ ಬಂಡಾಯ

ಕ್ಷೇತ್ರದಲ್ಲಿ ರಾಮೋಜಿ ಗೌಡ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಆದರೆ, ಪಕ್ಷದ ಸಾಮಾಜಿಕ ಜಾಲತಾಣ ಪ್ರಧಾನ ಕಾರ್ಯದರ್ಶಿ ಫರ್ಡಿನಾಂಡ್ ಲಾರೆನ್ಸ್ ಅವರು ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅ ದೇವೇಗೌಡ ಇಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಶಿಕ್ಷಿತ ವರ್ಗದ ಸೀಮಿತ ಮತದಾರರನ್ನು ಹೊಂದಿರುವ ಬುದ್ಧಿವಂತರ ಕ್ಷೇತ್ರಗಳೆಂದೇ ಹೆಸರಾಗಿರುವ ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಕೂಡ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿ ಮೂರೂ ಪಕ್ಷಗಳಿಗೆ ಬಂಡಾಯದ ಆತಂಕ ಎದುರಾಗಿದೆ. ನಾಮಪತ್ರ ವಾಪಸ್ ಪಡೆಯಲು ಮೇ 20ರ ವರೆಗೆ ಸಮಯವಿದ್ದು, ಅಷ್ಟರಲ್ಲಿ ಬಂಡಾಯ ಶಮನದ ಯತ್ನಗಳು ಎಷ್ಟರಮಟ್ಟಿಗೆ ಫಲ ಕೊಡಲಿವೆ ಎಂಬುದರ ಮೇಲೆ ಚುನಾವಣಾ ಕಣ ಸ್ಪಷ್ಟಗೊಳ್ಳಲಿದೆ.

ಎಲ್ಲಿ, ಯಾರು ನಾಮಪತ್ರ ಸಲ್ಲಿಸಿದ್ದಾರೆ?

ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಡಾ ಚಂದ್ರಶೇಖರ ಪಾಟೀಲ್(ಕಾಂಗ್ರೆಸ್)‌, ಅಮರನಾಥ್‌ ಪಾಟೀಲ್(ಬಿಜೆಪಿ) ಮತ್ತು ಸುರೇಶ್ ಸಜ್ಜನ(ಬಿಜೆಪಿ ಬಂಡಾಯ ಅಭ್ಯರ್ಥಿ) ನಾಮಪತ್ರ ಸಲ್ಲಿಸಿದ್ದಾರೆ. ಅದೇ ರೀತಿ, ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಆಯನೂರು ಮಂಜುನಾಥ್(ಕಾಂ.), ಡಾ ಧನಂಜಯ ಸರ್ಜಿ(ಬಿಜೆಪಿ), ರಘುಪತಿ ಭಟ್(ಬಿಜೆಪಿ ಬಂಡಾಯ) ಹಾಗೂ ಎಸ್‌ ಪಿ ದಿನೇಶ್(ಕಾಂಗ್ರೆಸ್‌ ಬಂಡಾಯ) ನಾಮಪತ್ರ ಸಲ್ಲಿಸಿದ್ದಾರೆ. ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ರಾಮೋಜಿ ಗೌಡ(ಕಾಂ.), ಎ ದೇವೇಗೌಡ(ಬಿಜೆಪಿ) ಹಾಗೂ ಫರ್ಡಿನಾಂಡ್‌ ಲಾರೆನ್ಸ್(ಕಾಂಗ್ರೆಸ್‌ ಬಂಡಾಯ) ನಾಮಪತ್ರ ಸಲ್ಲಿಸಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕೆ ಬಿ ಶ್ರೀನಿವಾಸ್(ಕಾಂ.) ಮತ್ತು ವೈ ಎ ನಾರಾಯಣಸ್ವಾಮಿ(ಬಿಜೆಪಿ) ನಾಮಪತ್ರ ಸಲ್ಲಿಸಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಕೆ ಕೆ ಮಂಜುನಾಥ್(ಕಾಂ.), ಎಸ್‌ ಎಲ್‌ ಭೋಜೇಗೌಡ(ಜೆಡಿಎಸ್) ಹಾಗೂ ರಮೇಶ್‌ ಶೆಟ್ಟಿ ಶಂಕರಘಟ್ಟ(ಕಾಂಗ್ರೆಸ್‌ ಬಂಡಾಯ) ನಾಮಪತ್ರ ಸಲ್ಲಿಸಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮರಿತಿಬ್ಬೇಗೌಡ(ಕಾಂ.), ವಿವೇಕಾನಂದ (ಜೆಡಿಎಸ್‌) ಹಾಗೂ ನಿಂಗರಾಜ ಗೌಡ(ಬಿಜೆಪಿ) ನಾಮಪತ್ರ ಸಲ್ಲಿಸಿದ್ದಾರೆ.

Read More
Next Story