
ರಾಜ್ಯದಲ್ಲಿ ಕೆಮ್ಮಿನ ಸಿರಪ್‌ಗಳು ಸದ್ಯಕ್ಕೆ ಸುರಕ್ಷಿತ; ಆತಂಕ ಬೇಡ,ಆದರೆ ಫಾರ್ಮಸಿಗಳ ಮೇಲೆ ಹದ್ದಿನಕಣ್ಣು
ನಾವು ರಾಜ್ಯದ ವಿವಿಧ ಭಾಗಗಳಿಂದ ನೂರಾರು ಕೆಮ್ಮಿನ ಸಿರಪ್‌ಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ, ಅವುಗಳನ್ನು ಪರೀಕ್ಷೆಗೆ ಕಳುಹಿಸಿದ್ದೇವೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಅಂತಿಮ ಮತ್ತು ಸಂಪೂರ್ಣ ವರದಿ ನಮ್ಮ ಕೈ ಸೇರಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ದೇಶದ ವಿವಿಧೆಡೆ ಮಕ್ಕಳ ಸಾವಿಗೆ ಕಾರಣವಾಗಿ, ತೀವ್ರ ಆತಂಕ ಸೃಷ್ಟಿಸಿದ್ದ "ಕಾಫ್ ಸಿರಪ್" ಕುರಿತು ಕರ್ನಾಟಕದ ಜನತೆಗೆ ಕೊಂಚ ನಿರಾಳವಾಗುವ ಸುದ್ದಿ ಲಭಿಸಿದೆ. ರಾಜ್ಯದಲ್ಲಿ ಮಾರಾಟವಾಗುತ್ತಿರುವ ಕೆಮ್ಮಿನ ಸಿರಪ್‌ಗಳನ್ನು ವ್ಯಾಪಕವಾಗಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರಾಥಮಿಕ ವರದಿಗಳಲ್ಲಿ ಯಾವುದೇ ಹಾನಿಕಾರಕ ರಾಸಾಯನಿಕ ಅಥವಾ ಕಲಬೆರಕೆ ಕಂಡುಬಂದಿಲ್ಲ.
ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ, ಸದ್ಯಕ್ಕೆ ರಾಜ್ಯದಲ್ಲಿ ಲಭ್ಯವಿರುವ ಕೆಮ್ಮಿನ ಸಿರಪ್‌ಗಳು ಸುರಕ್ಷಿತವಾಗಿವೆ ಎಂದು ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ಸೇವನೆಯಿಂದ 14 ಮಕ್ಕಳು ಸಾವನ್ನಪ್ಪಿದ ಘಟನೆಯು ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈ ದುರಂತಕ್ಕೆ ತಮಿಳುನಾಡು ಮೂಲದ ‘ಸ್ರೆಸನ್ ಫಾರ್ಮಾಸ್ಯುಟಿಕಲ್ಸ್’ ಕಂಪನಿಯು ತಯಾರಿಸಿದ 'ಕೋಲ್ಡ್ರಿಫ್' ಸಿರಪ್‌ನಲ್ಲಿ ವಿಷಕಾರಿ 'ಡೈಥಿಲೀನ್ ಗ್ಲೈಕಾಲ್' (DEG) ರಾಸಾಯನಿಕ ಪತ್ತೆಯಾಗಿದ್ದೇ ಕಾರಣ ಎಂದು ವರದಿಯಾಗಿತ್ತು. ಇದೇ ಕಂಪನಿಯ ಎರಡು ಉತ್ಪನ್ನಗಳು ಕರ್ನಾಟಕದ ರಾಯಚೂರಿನಲ್ಲಿಯೂ ಪತ್ತೆಯಾಗಿದ್ದವು. ಈ ವಿಷಯ ತಿಳಿಯುತ್ತಿದ್ದಂತೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಆ ಉತ್ಪನ್ನಗಳನ್ನು ವಶಪಡಿಸಿಕೊಂಡು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿದ್ದರು.
"ರಾಯಚೂರಿನಲ್ಲಿ ಪತ್ತೆಯಾದ ಸಿರಪ್‌ಗಳ ಮಾದರಿಗಳನ್ನು ನಾವು ಕೂಲಂಕಷವಾಗಿ ಪರೀಕ್ಷಿಸಿದ್ದೇವೆ. ಸಂತಸದ ವಿಷಯವೆಂದರೆ, ಪ್ರಾಥಮಿಕ ವರದಿಯಲ್ಲಿ ಯಾವುದೇ ಕಲಬೆರಕೆ ಅಥವಾ ಕಳಪೆ ಗುಣಮಟ್ಟ ಕಂಡುಬಂದಿಲ್ಲ. ಆದರೂ, ನಾವು ಇದನ್ನು ಲಘುವಾಗಿ ಪರಿಗಣಿಸಿಲ್ಲ. ರಾಜ್ಯದಲ್ಲಿ ಜನರ ಆರೋಗ್ಯ ರಕ್ಷಣೆಗೆ ನಾವು ಬದ್ಧರಾಗಿದ್ದು, ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ," ಎಂದು ಸಚಿವ ದಿನೇಶ್ ಗುಂಡೂರಾವ್ ವಿವರಿಸಿದರು.
ಫಾರ್ಮಸಿಗಳ ಮೇಲೆ ಹದ್ದಿನಕಣ್ಣು
ರಾಜ್ಯದಾದ್ಯಂತ ಆರೋಗ್ಯ ಇಲಾಖೆಯು ಹೈ ಅಲರ್ಟ್‌ನಲ್ಲಿದ್ದು, ಔಷಧಿ ತಯಾರಿಕಾ ಕಂಪನಿಗಳು ಮತ್ತು ಫಾರ್ಮಸಿಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. "ನಾವು ರಾಜ್ಯದ ವಿವಿಧ ಭಾಗಗಳಿಂದ ನೂರಾರು ಕೆಮ್ಮಿನ ಸಿರಪ್‌ಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ, ಅವುಗಳನ್ನು ಪರೀಕ್ಷೆಗೆ ಕಳುಹಿಸಿದ್ದೇವೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಅಂತಿಮ ಮತ್ತು ಸಂಪೂರ್ಣ ವರದಿ ನಮ್ಮ ಕೈ ಸೇರಲಿದೆ. ಅಲ್ಲಿಯವರೆಗೆ ಜನತೆ ಯಾವುದೇ ಆತಂಕಕ್ಕೆ ಒಳಗಾಗಬಾರದು. ಪ್ರಾಥಮಿಕ ವರದಿಗಳು ನಮಗೆ ಸಮಾಧಾನ ತಂದಿವೆ," ಎಂದು ಸಚಿವರು ಜನರಿಗೆ ಧೈರ್ಯ ತುಂಬಿದ್ದಾರೆ.
ಇದೇ ವೇಳೆ, ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಪೋಷಕರಿಗೆ ಸಲಹೆ ನೀಡಿರುವ ಸಚಿವರು, "ಈಗಾಗಲೇ ನಾವು ಎರಡು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಕೆಮ್ಮಿನ ಸಿರಪ್ ನೀಡಬಾರದು ಎಂದು ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಹೊರಡಿಸಿದ್ದೇವೆ. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧವನ್ನು ಮಕ್ಕಳಿಗೆ ನೀಡುವುದು ಅಪಾಯಕಾರಿ. ಈ ಬಗ್ಗೆ ಪೋಷಕರು ಜಾಗೃತರಾಗಿರಬೇಕು," ಎಂದು ಮನವಿ ಮಾಡಿದರು.
ಒಟ್ಟಿನಲ್ಲಿ, ರಾಜ್ಯ ಆರೋಗ್ಯ ಇಲಾಖೆಯ ತ್ವರಿತ ಕಾರ್ಯಚರಣೆ ಮತ್ತು ಪಾರದರ್ಶಕ ವರದಿಗಳಿಂದಾಗಿ ಕೆಮ್ಮಿನ ಸಿರಪ್ ಕುರಿತ ಆತಂಕ ತಾತ್ಕಾಲಿಕವಾಗಿ ದೂರವಾಗಿದೆ. ಆದರೂ, ಅಂತಿಮ ವರದಿ ಬರುವವರೆಗೂ ಎಚ್ಚರಿಕೆ ವಹಿಸುವುದು ಮತ್ತು ವೈದ್ಯರ ಸಲಹೆಯಿಲ್ಲದೆ ಔಷಧಿಗಳನ್ನು ಬಳಸದಿರುವುದು ಅತ್ಯಗತ್ಯ.