ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣ | ಕೋರ್ಟಿಗೆ ಖುದ್ದು ಹಾಜರಾದ ಸಿಎಂ, ಡಿಸಿಎಂ
x

ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣ | ಕೋರ್ಟಿಗೆ ಖುದ್ದು ಹಾಜರಾದ ಸಿಎಂ, ಡಿಸಿಎಂ


2023ರಲ್ಲಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ವರ್ಚಸ್ಸಿಗೆ ಧಕ್ಕೆ ತಂದ ಆರೋಪದಡಿ ದಾಖಲಿಸಲಾಗಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶನಿವಾರ ಬೆಳಿಗ್ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಾದರು.

ವಿಧಾನ ಪರಿಷತ್‌ ಸದಸ್ಯ ಬಿಜೆಪಿ ಮುಖಂಡ ಕೇಶವ ಪ್ರಸಾದ್ ಅವರು ಈ ಸಂಬಂಧ ಖಾಸಗಿ ದೂರು ಸಲ್ಲಿಸಿದ್ದರು. ಎ1 ಕೆಪಿಸಿಸಿ, ಎ2 ಡಿಕೆ ಶಿವಕುಮಾರ್, ಎ3 ಆರೋಪಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎ4 ಆರೋಪಿಯಾಗಿ ರಾಹುಲ್ ಗಾಂಧಿ ಅವರನ್ನು ಹೆಸರಿಸಲಾಗಿದೆ. ಐಪಿಸಿ ಸೆಕ್ಷನ್ 499 ಹಾಗೂ 500 ಅಡಿಯಲ್ಲಿ ಖಾಸಗಿ ದೂರು ದಾಖಲಾಗಿತ್ತು.‌

'ಶಾಸಕರು- ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ'ದ 42ನೇ ಎಸಿಎಂಎಂ ಕೋರ್ಟ್ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಆರೋಪಿಗಳ ಹಾಜರಿಯನ್ನು ದಾಖಲಿಸಿಕೊಂಡ ನ್ಯಾಯಾಧೀಶರು ದಿನಾಂಕ ತಿಳಿಸುವುದಾಗಿ ಹೇಳಿದರು. ಸದ್ಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಬಳಿಕ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕೆಲ ಹೊತ್ತು ಕೋರ್ಟ್ ಹಾಲ್ ಹೊರಗಡೆಯ ಬೆಂಚ್‌ನಲ್ಲಿ ಕುಳಿತು ಸ್ನೇಹಿತರನ್ನು ಮಾತನಾಡಿಸಿ ಅಲ್ಲಿಂದ ತೆರಳಿದರು.

ಈ ಪ್ರಕರಣದಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರೂ ಆರೋಪಿಯಾಗಿದ್ದು, ಅವರ ಪರ ವಕೀಲರು ಹಾಜರಾಗಿ, ಖುದ್ದು ಹಾಜರಿಯಿಂದ ವಿನಾಯಿತಿ ಕೋರಿದರು.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಬಿಜೆಪಿ ಯವರು ದಾಖಲಿಸಿದ್ದ ಖಾಸಗಿ ದೂರಿನ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿದ್ದ ಮುಖ್ಯಮಂತ್ರಿಗಳು ಈ ಬಗ್ಗೆ ಪ್ರತಿಕ್ರಿಯಿಸಿ, ʻʻಸಿವಿಲ್ ಸ್ವರೂಪದ ಪ್ರಕರಣ ಇದಾಗಿದೆ. ಕಾನೂನು ರಕ್ಷಕರಾಗಿ, ಪಾಲಕರಾಗಿ ನ್ಯಾಯಾಲಯದ ಸೂಚನೆ ಮೇರೆಗೆ ಇಂದು ನಾನು ನ್ಯಾಯಾಧೀಶರ ಮುಂದೆ ಹಾಜರಾಗಿದ್ದೇನೆ. ಜಾಮೀನು ಪಡೆದಿದ್ದೇನೆ. ನನ್ನನ್ನು, ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಖಾಸಗಿ ದೂರು ದಾಖಲಾಗಿತ್ತು. ರಾಹುಲ್ ಗಾಂಧಿಯವರೂ ನ್ಯಾಯಾಲಯಕ್ಕೆ ಹಾಜರಾಗುತ್ತಾರೆʼʼ ಎಂದು ತಿಳಿಸಿದರು.

ಸಿವಿಲ್ ಕೋರ್ಟ್ ಮುಂಭಾಗದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ʻʻನಮ್ಮ ಜಾಹೀರಾತುಗಳ ಬಗ್ಗೆ ಬಿಜೆಪಿಯವರು ಖಾಸಗಿ ದೂರು ನೀಡಿದ್ದಾರೆ. ನಾವು ಸುಮ್ಮನೆ ಜಾಹೀರಾತು ನೀಡಿಲ್ಲ. ಬಿಜೆಪಿ ನಾಯಕರ, ಸಚಿವರ ಹೇಳಿಕೆಗಳ ಆಧಾರದ ಮೇಲೆ ಹಾಗೂ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಆಧರಿಸಿ ಹಿಂದಿನ ರಾಜ್ಯ ಬಿಜೆಪಿ ಸರಕಾರದ ಹಗರಣಗಳ ಬಗ್ಗೆ ಪತ್ರಿಕಾ ಜಾಹೀರಾತು ನೀಡಿದ್ದೆವು. ಇದನ್ನೆಲ್ಲಾ ನಾವು ಸಾಬೀತು ಮಾಡುತ್ತೇವೆ.ʼʼ

ʻʻಕೇಂದ್ರದ ಮಾಜಿ ಸಚಿವ, ಶಾಸಕ ಯತ್ನಾಳ್ ಅವರೇ ತಮ್ಮ ಬಿಜೆಪಿ ಸರ್ಕಾರದ ಮೇಲೆ ಹಗರಣದ ಆರೋಪ ಮಾಡಿದ್ದರು. ಹಣ ನೀಡದೆ ಯಾವುದೇ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ 2,500 ಸಾವಿರ ಕೋಟಿ, ಮಂತ್ರಿ ಹುದ್ದೆಗೆ 100 ಕೋಟಿ ಎಂದು ಹೇಳಿಕೆ ನೀಡಿದವರು ಬಿಜೆಪಿಯವರೇ ಅಲ್ಲವೇ?ʼʼ ಎಂದು ಪ್ರಶ್ನೆ ಮಾಡಿದರು.

ʻಕಾಸಿದ್ದರೆ ಸರ್ಕಾರ ಹುದ್ದೆʼ ಎನ್ನುವ ಪತ್ರಿಕಾ ವರದಿಯ ಪ್ರಕಾರ, ಎ ದರ್ಜೆಯ ಗೆಜೆಟೆಡ್ ಹುದ್ದೆಗೆ 70 ಲಕ್ಷ. ಎಸಿಗೆ 1.50 ಕೋಟಿ, ಡಿವೈಎಸ್ ಪಿಗೆ 80 ಲಕ್ಷ, ತಹಶೀಲ್ದಾರ್ ಹುದ್ದೆಗೆ 60- 80 ಲಕ್ಷ, ಪೊಲೀಸ್ ಸನ್ ಇನ್ಸ್ ಪೆಕ್ಟರ್ ಹುದ್ದೆಗೆ 40 ಲಕ್ಷದಿಂದ 1.5 ಕೋಟಿ, ಅಸಿಸ್ಟೆಂಟ್ ಎಂಜಿನಿಯರ್ ಗೆ 80 ಲಕ್ಷ, ಸಹಾಯಕ ಅರಣ್ಯ ಅಧಿಕಾರಿಗೆ 50 ಲಕ್ಷ, ಎಸ್ ಡಿಎಗೆ 10 ರಿಂದ 15 ಲಕ್ಷ ರೂ. ಫಿಕ್ಸ್ ಆಗಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ಆಧಾರದಲ್ಲಿ ಕಾಂಗ್ರೆಸ್ ಜಾಹೀರಾತು ನೀಡಿತ್ತು.ʼʼ ಎಂದು ಪತ್ರಿಕೆಗಳ ಪ್ರತಿಯನ್ನು ತೋರಿಸಿದರು.

ʻʻಬಿಜೆಪಿಯವರನ್ನು ಹೋಗಲಿ ಎಂದು ಸುಮ್ಮನೆ ಬಿಟ್ಟಿದ್ದೆವು. ಅವರೇ ದೂರು ನೀಡಿದ ಮೇಲೆ ಈಗ ಸುಮ್ಮನಿರಲು ಸಾಧ್ಯವೇ? ದೊಡ್ಡ ಹೆಸರು ಬರುತ್ತದೆ ಎಂದು ರಾಹುಲ್ ಗಾಂಧಿ ಹೆಸರು ಸೇರಿಸಿದ್ದಾರೆ. ಇಂಡಿಯಾ ಸಭೆ ಇದ್ದ ಕಾರಣ ರಾಹುಲ್ ಗಾಂಧಿ ಅವರು ಬರಲಾಗಲಿಲ್ಲ. ನಾನು ಮತ್ತು ಸಿದ್ದರಾಮಯ್ಯ ಅವರು ನ್ಯಾಯಲಯಕ್ಕೆ ಬಂದಿದ್ದೇವೆ. ನಮ್ಮನ್ನು ರಾಜಕೀಯ ಮಾಡಲು ಬಿಜೆಪಿಯವರು ಕರೆಯುತ್ತಿದ್ದಾರೆ, ಅದನ್ನು ಮಾಡುತ್ತೇವೆʼʼ ಎಂದರು.

ʻʻಈ ಜಾಹೀರಾತು ಆಧರಿಸಿ ಬಿಜೆಪಿಯು ರಾಹುಲ್ ಗಾಂಧಿ, ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಹಾಗೂ ನನ್ನ ಮೇಲೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಹೇಗೆ ಎದುರಿಸಬೇಕು ಎಂಬುದು ನಮಗೆ ತಿಳಿದಿದೆ. ನಾವು ಕಾನೂನಿಗೆ ಗೌರವ ನೀಡುತ್ತೇವೆ. ರಾಹುಲ್ ಗಾಂಧಿ ಅವರು ನ್ಯಾಯಲಯಕ್ಕೆ ಗೌರವ ನೀಡುತ್ತಾರೆ. ಹೀಗಾಗಿ ಅವರು ನ್ಯಾಯಾಲಯದ ಮುಂದೆ ಹಾಜರಾಗುತ್ತಾರೆ. ದಿನಾಂಕವನ್ನು ಮುಂದೆ ತಿಳಿಸುತ್ತೇನೆʼʼ ಎಂದು ಉತ್ತರಿಸಿದರು.

ಪ್ರಕರಣವೇನು?

“2023ರಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪಕ್ಷವು ರಾಷ್ಟ್ರೀಯ ಮತ್ತು ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ 2023ರ ಮೇ 5ರಂದು ಜಾಹೀರಾತು ನೀಡಿ, ಆಡಳಿತಾರೂಢ ರಾಜ್ಯ ಬಿಜೆಪಿ ಸರ್ಕಾರ ಶೇ 40ರಷ್ಟು ಕಮೀಷನ್ ಸರ್ಕಾರ. ಇದು ಕಳೆದ ನಾಲ್ಕು ವರ್ಷಗಳಲ್ಲಿ 1.50 ಲಕ್ಷ ಕೋಟಿ ಲೂಟಿ ಹೊಡೆದಿರುವ ಭ್ರಷ್ಟ ಸರ್ಕಾರ ಎಂದು ಆರೋಪಿಸಿದ್ದರು. 'ಈ ಆರೋಪಕ್ಕೆ ಫಿರ್ಯಾದುದಾರರೇ ಇಲ್ಲ. ಇದು ರಾಷ್ಟ್ರೀಯ ಪಕ್ಷವೊಂದರ ವಿರುದ್ಧ ಮಾಡಲಾಗಿರುವ ಆಧಾರ ರಹಿತ, ಪೂರ್ವಗ್ರಹ ಪೀಡಿತ ಮತ್ತು ಮಾನಹಾನಿಕರ ಆರೋಪ' ಎಂದು ಈ ಖಾಸಗಿ ದೂರು ದಾಖಲಿಸಲಾಗಿದೆ.

Read More
Next Story