RTI Commissioner | ಮಾಹಿತಿ ಆಯುಕ್ತರ ನೇಮಕ ವಿವಾದ; ಕಾನೂನು ಸಮರಕ್ಕೆ ಮುಂದಾದ ಆಕಾಂಕ್ಷಿಗಳು
ರಾಜ್ಯ ಸರ್ಕಾರ ಮಾಹಿತಿ ಆಯೋಗಕ್ಕೆ ಆಯುಕ್ತರನ್ನು ನೇಮಿಸಿ ಆದೇಶ ಹೊರಡಿಸಿರುವ ಬೆನ್ನಲ್ಲೇ ಆಕಾಂಕ್ಷಿಯೊಬ್ಬರು ಸರ್ಕಾರದ ನೇಮಕಾತಿ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ಕರ್ನಾಟಕ ಮಾಹಿತಿ ಆಯೋಗಕ್ಕೆ ಮುಖ್ಯ ಆಯುಕ್ತ ಹಾಗೂ ಏಳು ಮಂದಿ ಆಯುಕ್ತರನ್ನು ನೇಮಿಸಿ ರಾಜ್ಯ ಸರ್ಕಾರ ಗುರುವಾರ ರಾತ್ರಿ ಅಧಿಸೂಚನೆ ಹೊರಡಿಸಿದೆ. ಅದರಂತೆ ಮುಖ್ಯ ಆಯುಕ್ತರಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಎಂ. ಪ್ರಸಾದ್, ಆಯುಕ್ತರಾಗಿ ಕೆ. ರಾಮನ್, ಡಾ.ಹರೀಶ್ ಕುಮಾರ್, ನಾರಾಯಣ ಜಿ. ಚನ್ನಲ್, ಬಿ.ಆರ್. ಮಮತಾ, ಪತ್ರಕರ್ತರಾದ ರುದ್ರಣ್ಣ ಹರ್ತಿಕೋಟೆ, ಕೆ. ಬದ್ರುದ್ದೀನ್ ̧ ಎಸ್. ರಾಜಶೇಖರ್ ನೇಮಕಗೊಂಡಿದ್ದಾರೆ.
ಸರ್ಕಾರದ ನೇಮಕಾತಿ ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ ಹುದ್ದೆವಂಚಿತ ಆಕಾಂಕ್ಷಿಗಳು ಸರ್ಕಾರದ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಬೆಳಗಾವಿ ಆಯುಕ್ತ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಹೈಕೋರ್ಟ್ ಹಿರಿಯ ವಕೀಲ ಎಸ್ಯುಕೆ ಪಾಟೀಲ್ ಅವರು ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿ, "ಕಾನೂನು, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ಸೇವೆ, ನಿರ್ವಹಣೆ, ಪತ್ರಿಕೋದ್ಯಮ ಅಥವಾ ಆಡಳಿತದಲ್ಲಿ ವ್ಯಾಪಕ ಜ್ಞಾನ ಮತ್ತು ಅನುಭವ ಹೊಂದಿರುವವರನ್ನು ಆರ್ಟಿಐ ಕಾಯ್ದೆಯ ಸೆಕ್ಷನ್ 15 ರ ಅಡಿ ಆಯುಕ್ತರನ್ನಾಗಿ ನೇಮಕಾತಿ ಮಾಡಬೇಕು. ಆಯುಕ್ತರ ನೇಮಕಾತಿಯಲ್ಲಿ ಮೊದಲಿಗೆ ಕಾನೂನು ಕ್ಷೇತ್ರದಲ್ಲಿ ಹೆಚ್ಚು ವ್ಯಾಪಕ ಅನುಭವ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಬೇಕು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಅನುಭವ ಪಡೆದವರಿಗೆ ನಂತರದ ಆದ್ಯತೆ ನೀಡಬೇಕು. ಕೊನೆಯಲ್ಲಿ ಆಡಳಿತಾತ್ಮಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವವರನ್ನು ಪರಿಗಣಿಸಬೇಕು. ಆದರೆ, ಸರ್ಕಾರ ಇದಾವ ಕ್ರಮವನ್ನು ಅನುಸರಿಸದೇ ಬೇಕಾದವರಿಗೆ ಹುದ್ದೆ ಹಂಚಿಕೆ ಮಾಡಿದೆ" ಎಂದು ಆರೋಪಿಸಿದ್ದಾರೆ. ಸರ್ಕಾರದ ನೇಮಕವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ತೀರ್ಮಾನಿಸಿದ್ದಾರೆ.
ಕಾನೂನು ಸಮರ ನಡೆಸಿದ್ದ ಪಾಟೀಲ್
ಬೆಳಗಾವಿ ಆಯುಕ್ತರ ಹುದ್ದೆಗೆ 2021ರಲ್ಲಿ ಬಿ.ವಿ.ಗೀತಾ ಅವರ ನೇಮಕ ಪ್ರಶ್ನಿಸಿ ಎಸ್ಯುಕೆ ಪಾಟೀಲ್ ಅವರು ಧಾರವಾಡ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಆದೇಶಕ್ಕೂ ಮುನ್ನವೇ 2022 ಏಪ್ರಿಲ್ನಲ್ಲಿ ಬಿ.ವಿ.ಗೀತಾ ಅವರು ರಾಜೀನಾಮೆ ಬೆಳಗಾವಿ ಆಯುಕ್ತರ ಹುದ್ದೆ ರಾಜೀನಾಮೆ ನೀಡಿ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ನೇಮಕವಾಗಿದ್ದರು.
ಬಿ.ವಿ.ಗೀತಾ ಅವರು ರಾಜೀನಾಮೆ ನೀಡಿರುವುದರಿಂದ ಅವರ ವಿರುದ್ಧ ಯಾವುದೇ ಕ್ರಮಕ್ಕೆ ಸೂಚಿಸಲಾಗದು ಎಂದು ಹೇಳಿದ್ದ ನ್ಯಾಯಾಲಯ, ಬೆಳಗಾವಿ ಆಯುಕ್ತರ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವಾಗ ಎಸ್ಯುಕೆ ಪಾಟೀಲ್ ಅವರನ್ನು ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ಎಸ್ಯುಕೆ ಪಾಟೀಲ್ ಅವರು ಬೆಳಗಾವಿಯ ವಿಭಾಗೀಯ ಆಯುಕ್ತ ಹಾಗೂ ಮುಖ್ಯ ಆಯುಕ್ತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರು.
ಯಾರು ಈ ಎಸ್ಯುಕೆ ಪಾಟೀಲ್?
ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನವರಾದ ಎಸ್ಯುಕೆ ಪಾಟೀಲ್ ಅವರು 30 ವರ್ಷಗಳಿಂದ ಹೈಕೋರ್ಟ್ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾನೂನು ಹಾಗೂ ವಿವಿಧ ಕ್ಷೇತ್ರದಲ್ಲಿ 14 ಕ್ಕೂ ಹೆಚ್ಚು ಪದವಿಗಳನ್ನು ಪಡೆದಿದ್ದಾರೆ. ಕಾನೂನು ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಆಯುಕ್ತರ ಹುದ್ದೆಗೆ 500ಅರ್ಜಿ
ಮುಖ್ಯ ಆಯುಕ್ತ ಹಾಗೂ ಮಾಹಿತಿ ಆಯುಕ್ತರ ಏಳು ಹುದ್ದೆಗಳಿಗೆ ಹಿರಿಯ ವಕೀಲರು, ಪತ್ರಕರ್ತರು, ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು.ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗಿದ್ದ ಕಾರಣ ವರ್ಷದ ಹಿಂದೆಯೇ ಆರಂಭವಾಗಿದ್ದ ಆಯ್ಕೆ ಪ್ರಕ್ರಿಯೆ ವಿಳಂಬವಾಗಿತ್ತು. ಮಾಹಿತಿ ಆಯುಕ್ತರ ಅವಧಿ ಮೂರು ವರ್ಷ ಅಥವಾ ನೇಮಕವಾದವರ ವಯಸ್ಸು 65 ಆಗುವವರಿಗೆ ಇರುತ್ತದೆ. ಎರಡರಲ್ಲಿ ಯಾವುದು ಮೊದಲೋ ಆಗ ಅವರ ಅಧಿಕಾರಾವಧಿ ಮುಗಿಯುತ್ತದೆ.