ಕಚೇರಿಯಲ್ಲೇ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಆರೋಪ; ಸಿದ್ದರಾಮಯ್ಯ ಕೆಂಡಾಮಂಡಲ!
x

ಕಚೇರಿಯಲ್ಲೇ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಆರೋಪ; ಸಿದ್ದರಾಮಯ್ಯ ಕೆಂಡಾಮಂಡಲ!

ತಮ್ಮ ಮೇಲಿನ ಆರೋಪಗಳನ್ನು ಡಿಜಿಪಿ ರಾಮಚಂದ್ರ ರಾವ್ ಅವರು ತಳ್ಳಿಹಾಕಿದ್ದಾರೆ. ಸಂಪೂರ್ಣವಾಗಿ ಎಡಿಟ್ ಮಾಡಲಾದ ಅಥವಾ ಮಾರ್ಫ್ಡ್ ವಿಡಿಯೋ ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.


Click the Play button to hear this message in audio format

ಕರ್ನಾಟಕದ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ ಆಕ್ಷೇಪಾರ್ಹ ವಿಡಿಯೋವೊಂದು ರಾಜ್ಯ ರಾಜಕೀಯ ಮತ್ತು ಪೊಲೀಸ್ ವಲಯದಲ್ಲಿ ತೀವ್ರ ಬಿರುಗಾಳಿ ಎಬ್ಬಿಸಿದೆ. ಚಿನ್ನದ ಸಾಗಣೆ ಪ್ರಕರಣದ ಆರೋಪಿ ರನ್ಯಾ ರಾವ್ ಅವರ ತಂದೆ ಹಾಗೂ ಡಿಜಿಪಿ ಶ್ರೇಣಿಯ ಐಪಿಎಸ್ ಅಧಿಕಾರಿ ಡಾ. ರಾಮಚಂದ್ರ ರಾವ್ ಅವರು ತಮ್ಮ ಅಧಿಕೃತ ಕಚೇರಿಯಲ್ಲೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿವೆ.

ಅಧಿಕೃತ ಚೇಂಬರ್‌ನಲ್ಲೇ ನೈತಿಕ ಅಧಃಪತನ?

ವೈರಲ್ ಆಗಿರುವ ವಿಡಿಯೋದಲ್ಲಿ, ಸಮವಸ್ತ್ರಧಾರಿ ಅಧಿಕಾರಿಯು ಕಚೇರಿ ಅವಧಿಯಲ್ಲಿಯೇ ವಿವಿಧ ಮಹಿಳೆಯರೊಂದಿಗೆ ಅತಿ ಸಲುಗೆಯಿಂದಿರುವ ದೃಶ್ಯಗಳು ಸೆರೆಯಾಗಿವೆ ಎನ್ನಲಾಗಿದೆ. ಕಚೇರಿಯ ಒಳಗೆ ಗುಪ್ತವಾಗಿ ಚಿತ್ರೀಕರಿಸಲಾದ ಈ ವಿಡಿಯೋದಲ್ಲಿ, ಬೇರೆ ಬೇರೆ ದಿನಗಳಲ್ಲಿ ಮಹಿಳೆಯರು ಇವರನ್ನು ಭೇಟಿ ಮಾಡಿರುವುದು ಮತ್ತು ಆ ಸಂದರ್ಭದಲ್ಲಿ ಅಧಿಕಾರಿಯು ವೃತ್ತಿ ಘನತೆಯನ್ನು ಮರೆತು ವರ್ತಿಸಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ. ಸರ್ಕಾರಿ ಕಚೇರಿ ಮತ್ತು ಕರ್ತವ್ಯದ ಸಮಯದಲ್ಲಿ ಇಂತಹ ನೈತಿಕ ಭ್ರಷ್ಟಾಚಾರ ನಡೆದಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿಗಳ ಆಕ್ರೋಶ ಮತ್ತು ತನಿಖೆಗೆ ಸೂಚನೆ

ವಿಡಿಯೋ ಹರಿದಾಡುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಪಡೆದಿದ್ದಾರೆ. ಈ ದೃಶ್ಯಗಳನ್ನು ವೀಕ್ಷಿಸಿದ ಬಳಿಕ ಮುಖ್ಯಮಂತ್ರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇಲಾಖೆಯ ಶಿಸ್ತನ್ನು ಕಾಪಾಡುವ ಉನ್ನತ ಸ್ಥಾನದಲ್ಲಿರುವ ಅಧಿಕಾರಿಯೇ ಇಂತಹ ಕೃತ್ಯದಲ್ಲಿ ತೊಡಗಿಸಿಕೊಂಡಿರುವುದರ ಬಗ್ಗೆ ಕೆಂಡಾಮಂಡಲವಾಗಿದ್ದಾರೆ. ಘಟನೆಯ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಮತ್ತು ಹೇಗೆ ಇಂತಹ ಘಟನೆ ನಡೆಯಲು ಸಾಧ್ಯವಾಯಿತು ಎಂಬ ಬಗ್ಗೆ ವಿವರಣೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾರ್ಫ್ಡ್' ವಿಡಿಯೋ ಎಂದ ರಾಮಚಂದ್ರ ರಾವ್

ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಡಿಜಿಪಿ ರಾಮಚಂದ್ರ ರಾವ್ ಅವರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಇದು ಸಂಪೂರ್ಣವಾಗಿ ಎಡಿಟ್ ಮಾಡಲಾದ ಅಥವಾ ಮಾರ್ಫ್ಡ್ ವಿಡಿಯೋ. ನನ್ನನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ಪಿತೂರಿ ನಡೆಸಲಾಗುತ್ತಿದೆ," ಎಂದು ಹೇಳಿದ್ದಾರೆ. ಸದ್ಯಕ್ಕೆ ಈ ಪ್ರಕರಣವು ಆಡಳಿತಾರೂಢ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಅಥವಾ ನ್ಯಾಯಾಂಗ ತನಿಖೆ ನಡೆಯುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

ಎರಡು ದಿನದ ಹಿಂದೆಯಷ್ಟೇ ಬೇಸರ ವ್ಯಕ್ತಪಡಿಸಿದ್ದ ಸಿಎಂ

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 17ರಂದು (ಎರಡು ದಿನಗಳ ಹಿಂದೆ) ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ರಾಜ್ಯ ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದರು. ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಬಂದು ಮಾದಕ ವಸ್ತು ಜಾಲಗಳನ್ನು ಪತ್ತೆಹಚ್ಚುತ್ತಿರುವಾಗ, ಕರ್ನಾಟಕ ಪೊಲೀಸರಿಗೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ಕಠಿಣ ಪ್ರಶ್ನೆ ಕೇಳಿದ್ದರು.

ದರೋಡೆ, ಕೊಲೆ ಪ್ರಮಾಣ ಕಡಿಯೆಮಾಗಿದ್ದರೂ ಸೈಬರ್ ಅಪರಾಧ ಮತ್ತು ಮಾದಕ ವಸ್ತು ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸಿಎಂ ಎಚ್ಚರಿಸಿದ್ದರು. ಬೆಂಗಳೂರಿನಲ್ಲಿ 88 ಅಪರಾಧ ಪ್ರಕರಣಗಳಲ್ಲಿ ಪೊಲೀಸರೇ ಭಾಗಿಯಾಗಿರುವುದು ನಾಚಿಕೆಗೇಡು ಎಂದು ಟೀಕಿಸಿ, ಪಿಐ ಮತ್ತು ಪಿಎಸ್‌ಐ ಮಟ್ಟದ ಅಧಿಕಾರಿಗಳ ಮೇಲೆ ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಿನ ಕಣ್ಗಾವಲು ವಹಿಸಬೇಕು ಎಂದು ಸೂಚಿಸಿದ್ದರು. ಅದಾಗಿ ಎರಡೇ ದಿನದಲ್ಲಿ ಮುಜುಗರದ ಪ್ರಕರಣ ನಡೆದಿದೆ.

Read More
Next Story