
ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘದ ಸ್ಪೋಟಕ ಆರೋಪ: 'ಟೆಂಡರ್‌ಗೆ ಶೇ. 12 ಕಮಿಷನ್
ಪ್ರಮುಖವಾಗಿ 8 ಇಲಾಖೆಗಳಲ್ಲಿ ಈ ಕಮಿಷನ್ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಅದರಲ್ಲೂ ಜಲಸಂಪನ್ಮೂಲ, ಪಂಚಾಯತ್ ರಾಜ್, ಸಣ್ಣ ನೀರಾವರಿ, ನಗರಾಭಿವೃದ್ಧಿ ಮತ್ತು ಕಾರ್ಮಿಕ ಇಲಾಖೆಗಳಲ್ಲಿ ಟೆಂಡರ್ ನೀಡಲು ಕಮಿಷನ್ ಪಡೆಯಲಾಗುತ್ತಿದೆ ಎಂದು ಅವರು ದೂರಿದರು.
ರಾಜ್ಯ ಸರ್ಕಾರಿ ಇಲಾಖೆಗಳ ಟೆಂಡರ್‌ಗಳಲ್ಲಿ ಶೇ. 12ರಷ್ಟು ಕಮಿಷನ್ ಬೇಡಿಕೆ ಇಡಲಾಗುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಜಗನ್ನಾಥ್ ಬಿ. ಶೇಗಜಿ ಗಂಭೀರ ಆರೋಪ ಮಾಡಿದ್ದಾರೆ. ಒಂದು ವಾರದೊಳಗೆ ಮುಖ್ಯಮಂತ್ರಿಗಳು ಸಭೆ ಕರೆದು ಸಮಸ್ಯೆ ಬಗೆಹರಿಸದಿದ್ದರೆ, ಕಮಿಷನ್ ಪಡೆಯುವ ಅಧಿಕಾರಿಗಳ ಹೆಸರನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುವುದಾಗಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ದ ಫೆಡರಲ್ ಕರ್ನಾಟಕಕ್ಕೆ ವಿಶೇಷ ಸಂದರ್ಶನ ನೀಡಿದ ಅವರು, "ಸರ್ಕಾರಿ ಇಲಾಖೆಗಳಲ್ಲಿ ಯಾವುದೇ ಟೆಂಡರ್ ಪಡೆಯಬೇಕಾದರೆ ಶೇ. 12ರಷ್ಟು ಕಮಿಷನ್ ಅನ್ನು ಅಧಿಕಾರಿಗಳಿಗೆ ನೀಡಲೇಬೇಕು. ಯಾರು ಕಮಿಷನ್ ಕೊಡುತ್ತಾರೋ ಅವರಿಗೆ ಮಾತ್ರ ಟೆಂಡರ್ ಸಿಗುತ್ತದೆ. ನ್ಯಾಯಯುತವಾಗಿ ಕೆಲಸ ಮಾಡುವವರಿಗೆ ಅವಕಾಶವೇ ಇಲ್ಲದಂತಾಗಿದೆ. ಅಧಿಕಾರಿಗಳು ನೇರವಾಗಿಯೇ ಕಮಿಷನ್ ಕೇಳುತ್ತಿದ್ದಾರೆ" ಎಂದು ಶೇಗಜಿ ಆರೋಪಿಸಿದ್ದಾರೆ.
ಪ್ರಮುಖ 8 ಇಲಾಖೆಗಳಲ್ಲಿ ಅಕ್ರಮ
ಪ್ರಮುಖವಾಗಿ 8 ಇಲಾಖೆಗಳಲ್ಲಿ ಈ ಕಮಿಷನ್ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಅದರಲ್ಲೂ ಜಲಸಂಪನ್ಮೂಲ, ಪಂಚಾಯತ್ ರಾಜ್, ಸಣ್ಣ ನೀರಾವರಿ, ನಗರಾಭಿವೃದ್ಧಿ ಮತ್ತು ಕಾರ್ಮಿಕ ಇಲಾಖೆಗಳಲ್ಲಿ ಟೆಂಡರ್ ನೀಡಲು ಕಮಿಷನ್ ಪಡೆಯಲಾಗುತ್ತಿದೆ ಎಂದು ಅವರು ದೂರಿದರು.
ದಾಖಲೆ ಸಮೇತ ಬಹಿರಂಗಕ್ಕೆ ಸಿದ್ಧ
ಈ ಅಕ್ರಮದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. "ಮುಖ್ಯಮಂತ್ರಿಗಳು ತಕ್ಷಣ ಸಭೆ ಕರೆಯಬೇಕು. ಆಯಾ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲೇ ನಾವು ಕಮಿಷನ್ ಬಗ್ಗೆ ಮಾತನಾಡಲು ಸಿದ್ಧರಿದ್ದೇವೆ. ನಮ್ಮ ಬಳಿ ಎಲ್ಲಾ ದಾಖಲೆಗಳಿವೆ. ಯಾವ ಇಲಾಖೆಯಲ್ಲಿ, ಯಾರು, ಎಷ್ಟು ಕಮಿಷನ್ ಪಡೆದಿದ್ದಾರೆ ಎಂಬುದನ್ನು ಅವರ ಹೆಸರಿನ ಸಮೇತ ಬಹಿರಂಗಪಡಿಸುತ್ತೇವೆ" ಎಂದು ಜಗನ್ನಾಥ್ ಶೇಗಜಿ ಸವಾಲು ಹಾಕಿದರು.
ಸರ್ಕಾರಕ್ಕೆ ಒಂದು ವಾರದ ಗಡುವು
ಹಿಂದಿನ ಸರ್ಕಾರದಲ್ಲಿ ಕಮಿಷನ್ ಆರೋಪ ಕೇಳಿಬಂದಿತ್ತು, ಈಗಿನ ಸರ್ಕಾರವೂ ಅದೇ ಹಾದಿಯಲ್ಲಿ ಸಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, "ಒಂದು ವಾರದೊಳಗೆ ಮುಖ್ಯಮಂತ್ರಿಗಳು ಸಭೆ ಕರೆದು ನಮ್ಮ ಸಮಸ್ಯೆಗಳನ್ನು ಆಲಿಸಬೇಕು. ಇಲ್ಲದಿದ್ದರೆ, ನಾವು ಮಾಧ್ಯಮಗಳ ಮುಂದೆ ಬಂದು ಎಲ್ಲವನ್ನೂ ಹೆಸರು ಸಮೇತ ಬಹಿರಂಗಪಡಿಸುತ್ತೇವೆ" ಎಂದು ಸರ್ಕಾರಕ್ಕೆ ಗಡುವು ನೀಡಿದರು.