Bill Pending | ಜೇಷ್ಠತೆ ಆಧಾರದ ಮೇಲೆ ಬಾಕಿ ಹಣ ಪಾವತಿಸಿ; ಸಿಎಂ, ಡಿಸಿಎಂಗೆ ಗುತ್ತಿಗೆದಾರರ ಸಂಘ ಆಗ್ರಹ
x

Bill Pending | ಜೇಷ್ಠತೆ ಆಧಾರದ ಮೇಲೆ ಬಾಕಿ ಹಣ ಪಾವತಿಸಿ; ಸಿಎಂ, ಡಿಸಿಎಂಗೆ ಗುತ್ತಿಗೆದಾರರ ಸಂಘ ಆಗ್ರಹ

ಜೇಷ್ಠತೆ ಆಧಾರದಲ್ಲಿ ಬಾಕಿ ಹಣ ಬಿಡುಗಡೆ ಮಾಡಲು ಆಗದಿದ್ದರೆ ವಿಶೇಷ ಗುತ್ತಿಗೆ ವ್ಯವಸ್ಥೆಯಡಿಯಲ್ಲೇ ಸಣ್ಣ ಹಾಗೂ ಮಧ್ಯಮ ಗುತ್ತಿಗೆದಾರರಿಗೆ ರೂ.5 ಲಕ್ಷದಿಂದ 50ಲಕ್ಷದವರೆಗೆ ಹಣ ಬಿಡುಗಡೆ ಮಾಡಬೇಕು ಎಂದು ರಾಜ್ಯ ಗುತ್ತಿಗೆದಾರರ ಸಂಘ ಆಗ್ರಹಿಸಿದೆ.


ಲೋಕೋಪಯೋಗಿ, ನಾಲ್ಕು ನೀರಾವರಿ ನಿಗಮಗಳು ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಿ ವಿಶೇಷ ಗುತ್ತಿಗೆ ವ್ಯವಸ್ಥೆ( ಸ್ಪೆಷಲ್‌ ಎಲ್‌ಒಸಿ)ಯಡಿ ಬಲಾಢ್ಯರಿಗೆ ಮಾತ್ರ ಹಣ ಬಿಡುಗಡೆ ಮಾಡುತ್ತಿರುವ ಅಧಿಕಾರಿಗಳ ಕ್ರಮಕ್ಕೆ ರಾಜ್ಯ ಗುತ್ತಿಗೆದಾರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಈ ಸಂಬಂಧ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಪತ್ರ ಬರೆದಿದ್ದು, ವಿಶೇಷ ಗುತ್ತಿಗೆ ವ್ಯವಸ್ಥೆ ಕೈಬಿಟ್ಟು ಜೇಷ್ಠತೆ ಆಧಾರದಲ್ಲಿ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ.

ಜೇಷ್ಠತೆ ಆಧಾರದಲ್ಲಿ ಬಾಕಿ ಹಣ ಬಿಡುಗಡೆ ಮಾಡಲು ಆಗದಿದ್ದರೆ ವಿಶೇಷ ಗುತ್ತಿಗೆ ವ್ಯವಸ್ಥೆಯಡಿಯಲ್ಲೇ ಸಣ್ಣ ಹಾಗೂ ಮಧ್ಯಮ ಗುತ್ತಿಗೆದಾರರಿಗೆ ರೂ.5 ಲಕ್ಷದಿಂದ 50ಲಕ್ಷದವರೆಗೆ ಹಣ ಬಿಡುಗಡೆ ಮಾಡಬೇಕು. ಅದನ್ನು ಬಿಟ್ಟು ಸ್ಪೆಷಲ್‌ ಎಲ್‌ಒಸಿ ನೆಪದಲ್ಲಿ ಬಲಾಢ್ಯ ಗುತ್ತಿಗೆದಾರರಿಗೆ ಮಾತ್ರ ಹಣ ಬಿಡುಗಡೆ ಮಾಡುವ ಪರಿಪಾಠ ನಿಲ್ಲಿಸಬೇಕು ಎಂದು ಸಂಘದ ಅಧ್ಯಕ್ಷ ಆರ್‌. ಮಂಜುನಾಥ್‌, ಪ್ರಧಾನ ಕಾರ್ಯದರ್ಶಿ ಜಿ.ಎಂ. ರವೀಂದ್ರ ಒತ್ತಾಯಿಸಿದ್ದಾರೆ.

ಸಣ್ಣ ಹಾಗೂ ಮಧ್ಯಮ ವರ್ಗದ ಗುತ್ತಿಗೆದಾರರು ಸುಮಾರು ಮೂರು ವರ್ಷಗಳಿಂದ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಈಗಾಗಲೇ ಹಲವು ಬಾರಿ ಸರ್ಕಾರದ ಗಮನಕ್ಕೆ ತರಲಾಗಿದೆ. ಜೇಷ್ಠತೆ ಆಧಾರದ ಮೇಲೆ ಹಣ ಬಿಡುಗಡೆ ಮಾಡಲು ತೀರ್ಮಾನಿಸಿದ್ದರೂ ವಿಶೇಷ ಗುತ್ತಿಗೆ ವ್ಯವಸ್ಥೆ( ಸ್ಪೆಷಲ್‌ ಎಲ್‌ಒಸಿ) ಅಡಿಯಲ್ಲಿ ಬಲಾಢ್ಯರಿಗೆ ಮಾತ್ರ ಹಣ ಬಿಡುಗಡೆ ಮಾಡಲು ಮುಂದಾಗಿರುವುದು ಸರಿಯಲ್ಲ. ಸುಮಾರು 3-4 ತಿಂಗಳಿಂದ ಈ ಮೇಲಿನ ಎಲ್ಲಾ ಇಲಾಖೆಗಳಲ್ಲಿ ಮಧ್ಯವರ್ತಿಗಳು ಕಾಟದಿಂದ ಇಡೀ ವ್ಯವಸ್ಥೆಯೇ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ.

ಮೂರು ವರ್ಷಗಳಿಂದ ಗುತ್ತಿಗೆದಾರರು ಹಣ ಬಿಡುಗಡೆಯಾಗದೆ ಸಂಕಷ್ಟದಲ್ಲಿದ್ದಾರೆ. ಏಪ್ರಿಲ್‌ ತಿಂಗಳಲ್ಲಿ ಗುತ್ತಿಗೆದಾರರ ಬಾಕಿ ಹಣದ ಶೇ 50 ರಷ್ಟು ಪಾವತಿ ಮಾಡುವುದಾಗಿ ಕಳೆದ ತಿಂಗಳು ಭರವಸೆ ನೀಡಿ ದ್ದೀರಿ, ಹಾಗಾಗಿ ಕೂಡಲೇ 15 ಸಾವಿರ ಕೋಟಿ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Read More
Next Story