Consumer Court : ಹುಡುಗಿ ಹುಡುಕಿ ಕೊಡದ ಮ್ಯಾಟ್ರಿಮೊನಿ ಸಂಸ್ಥೆಗೆ 90 ಸಾವಿರ ರೂ. ದಂಡ ಹಾಕಿದ ನ್ಯಾಯಾಲಯ
ಬೆಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಂ.ಎಸ್ ರಾಮಚಂದ್ರ ಅವರು ಆದೇಶ ಹೊರಡಿಸಿದ್ದಾರೆ.
ವಧು-ವರರ ಅನ್ವೇಷಣೆ ಮಾಡುವುದಾಗಿ ಹೇಳಿಕೊಂಡು ಸಾಕಷ್ಟು ಭಾಷೆ, ಸಮುದಾಯ ಆಧರಿತ ಮ್ಯಾಟ್ರಿಮೊನಿ ಸಂಸ್ಥೆಗಳು ಹುಟ್ಟಿಕೊಂಡಿವೆ. ಆದರೆ, ಎಲ್ಲವೂ ಹೇಳಿದಂತೆ ಕೆಲಸ ಮಾಡುವುದಿಲ್ಲ. ಬದಲಾಗಿ ಹಣ ತೆಗೆದುಕೊಂಡು ʼನಾಳೆ ಬಾʼ ಅಂಥ ಹೇಳಿ ಕಳುಹಿಸುವುದುಂಟು. ಒಂದಿಷ್ಟು ದುಡ್ಡು ಮಾಡಿದ ಬಳಿಕ ಹುಡುಗಿ ಹುಡುಕಿ ಕೊಡದೇ ಮೋಸ ಮಾಡುತ್ತಾರೆ. ಈ ರೀತಿ ಮಾಡಿದ ಮ್ಯಾಟ್ರಿಮೊನಿ ಸಂಸ್ಥೆಯೊಂದಕ್ಕೆ ಜಿಲ್ಲಾ ಗ್ರಾಹಕರ ನ್ಯಾಯಾಲಯವು 60 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಬೆಂಗಳೂರಿನಲ್ಲಿ ಈ ಪ್ರಕರಣ ನಡೆದಿದೆ.
ಏನಿದು ಘಟನೆ?
ಬೆಂಗಳೂರಿನ ಎಂ.ಎಸ್ ನಗರ ನಿವಾಸಿಯಾದ ಕೆ.ಎಸ್ ವಿಜಯಕುಮಾರ್ ಎಂಬುವರು ತಮ್ಮ ಪುತ್ರನಿಗೆ ವಧು ಅನ್ವೇಷಣೆ ನಡೆಸುತ್ತಿದ್ದರು. ವಧು ಸಿಗದ ಹಿನ್ನೆಲೆಯಲ್ಲಿ ಕಲ್ಯಾಣ ನಗರದಲ್ಲಿರುವ ʼದಿಲ್ ಮಿಲ್ ಮ್ಯಾಟ್ರಿಮೊನಿʼ ಸಂಸ್ಥೆಗೆ ಭೇಟಿ ನೀಡಿದ್ದರು. ಆ ಸಂಸ್ಥೆಯು 45 ದಿನಗಳಲ್ಲಿ ವಧು ಹುಡುಕುವುದಾಗಿ ಭರವಸೆ ನೀಡಿತ್ತು. ಅದರಂತೆ ವಿಜಯಕುಮಾರ್ ಅವರು ಕಳೆದ ಮಾರ್ಚ್ 17 ರಂದು ತಮ್ಮ ಮಗನ ಭಾವಚಿತ್ರ ಹಾಗೂ ಅಗತ್ಯ ಮಾಹಿತಿ ಜೊತೆಗೆ 30 ಸಾವಿರ ರೂ. ಶುಲ್ಕ ಪಾವತಿಸಿದ್ದರು. ಆದರೆ, ಮ್ಯಾಟ್ರಿಮೊನಿ ಸಂಸ್ಥೆ 45 ದಿನಗಳು ಕಳೆದರೂ ವಧು ಹುಡುಕಿಕೊಟ್ಟಿರಲಿಲ್ಲ. ಇದರಿಂದ ಬೇಸರಗೊಂಡ ವಿಜಯ್‌ಕುಮಾರ್ ಅವರು ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಆದರೆ, ಮ್ಯಾಟ್ರಿಮೊನಿ ಸಿಬ್ಬಂದಿ ಸ್ಪಂದಿರಲಿಲ್ಲ. ಈ ಕುರಿತು ವಿಜಯ್‌ಕುಮಾರ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ಏಪ್ರಿಲ್ 30ರವರೆಗೆ ಕಾಲಾವಕಾಶ ನೀಡುವಂತೆ ಮ್ಯಾಟ್ರಿಮೋನಿ ಸಂಸ್ಥೆಯವರು ಮನವಿ ಮಾಡಿದರು. ಸರಿ ಎಂದು ಒಂದು ತಿಂಗಳು ಅವಕಾಶ ನೀಡಿದರೂ ಮತ್ತದೇ ವಿಳಂಬ ಧೋರಣೆ ಸಂಸ್ಥೆ ಅನುಸರಿಸಿತ್ತು..
ವಿಜಯಕುಮಾರ್ ಅವರು ನೇರವಾಗಿ ಕಚೇರಿಗೆ ಬಂದು ಈ ಬಗ್ಗೆ ವಿಚಾರಿಸಿದಾಗ ಅಲ್ಲಿನ ಸಿಬ್ಬಂದಿ ನಿಂದಿಸಿ, ಕೆಟ್ಟದಾಗಿ ನಡೆಸಿಕೊಂಡಿದ್ದರು. ಆಗ ವಿಜಯಕುಮಾರ್ ಅವರು ಮೇ 5 ರಂದು ಸಂಸ್ಥೆಗೆ ಲೀಗಲ್ ನೋಟಿಸ್ ಕಳುಹಿಸಿದ್ದರು. ಇದಕ್ಕೆ ಮ್ಯಾಟ್ರಿಮೊನಿ ಸಂಸ್ಥೆ ಯಾವುದೇ ಉತ್ತರ ನೀಡಿರಲಿಲ್ಲ. ಅನಿವಾರ್ಯವಾಗಿ ವಿಜಯಕುಮಾರ್ ಅವರು ಗ್ರಾಹಕರ ನ್ಯಾಯಾಲಯದ ಮೊರೆ ಹೋದರು. ಇಷ್ಟಾದರೂ ದಿಲ್ ಮಿಲ್ ಮ್ಯಾಟ್ರಿಮೋನಿ ಸಂಸ್ಥೆ ತಲೆಕೆಡಿಸಿಕೊಂಡಿರಲಿಲ್ಲ.
ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಂ.ಎಸ್ ರಾಮಚಂದ್ರ ಅವರು, ದೂರುದಾರರಿಗೆ ಸೇವೆ ಸಲ್ಲಿಸುವಲ್ಲಿ ಕೊರತೆ ಕಂಡು ಬಂದಿದೆ. ಮ್ಯಾಟ್ರಿಮೊನಿ ಸಂಸ್ಥೆ ಅನ್ಯಾಯದ ವ್ಯಾಪಾರ ಅಭ್ಯಾಸಗಳಲ್ಲಿ ತೊಡಗಿದೆ ಎಂದು ಹೇಳಿ ಅರ್ಜಿದಾರರು ನೀಡಿದ ಶುಲ್ಕದ ಜೊತೆಗೆ ಪರಿಹಾರ ಮೊತ್ತವನ್ನೂ ನೀಡಬೇಕೆಂದು ಆದೇಶಿಸಿದರು.
30 ಸಾವಿರ ರೂ. ಶುಲ್ಕದೊಂದಿಗೆ ಸೇವೆ ಕೊರತೆಗೆ 20 ಸಾವಿರ ರೂಪಾಯಿ, ಮಾನಸಿಕ ಸಂಕಟ ಉಂಟುಮಾಡಿದ್ದಕ್ಕಾಗಿ ೫ ಸಾವಿರ ರೂ. ವ್ಯಾಜ್ಯಕ್ಕೆ 5 ಸಾವಿರ ರೂಪಾಯಿ ದೂರುದಾರ ವಿಜಯಕುಮಾರ್ ಅವರಿಗೆ ಪಾವತಿಸುವಂತೆ ಮ್ಯಾಟ್ರಿಮೊನಿ ಸಂಸ್ಥೆಗೆ ಆಯೋಗ ಆದೇಶಿಸಿದೆ.