
Congress Unrest | ಮನೆಯಲ್ಲಿ ಕೂರುವುದಕ್ಕಾ ಪಕ್ಷ ನನ್ನನ್ನು ಬೆಳೆಸಿರೋದು: ಡಿಕೆ ಖಡಕ್ ಪ್ರಶ್ನೆ
ತಮ್ಮ ಮಾತಿನುದ್ದಕ್ಕೂ ಅವರು ತಮ್ಮ ವರ್ಚಸ್ಸು, ವರ್ಚಸ್ಸಿನ ಸುತ್ತ ಇರುವ ವೈಬ್ರೇಷನ್ ಕುರಿತು ಹೇಳುತ್ತಲೇ ಮುಂದಿನ ಚುನಾವಣೆಗೂ ಪಕ್ಷದ ನಾಯಕತ್ವ ತಮ್ಮದೇ ಆಗಿರಬೇಕು ಎಂಬ ತಮ್ಮ ಹಕ್ಕನ್ನು ಬಹಳ ಪ್ರಬಲವಾಗಿ ಮಂಡಿಸಿದ್ದಾರೆ.
“ನನ್ನ ಮುಖ ತೋರಿಸಿ, ನನಗೆ ಲೀಡರ್ಶಿಪ್ ಕೊಡಲಿಲ್ಲ ಅಂದ್ರೆ ಹೇಗೆ? ನಾನು ಮನೆಯಲ್ಲಿ ಕೂರುವುದಕ್ಕಾ ಪಕ್ಷ ನನ್ನನ್ನು ಬೆಳೆಸಿರೋದು..?” ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮ್ಮ ವಿರೋಧಿ ಪಾಳೆಯಕ್ಕೆ ಖಡಕ್ ಸಂದೇಶ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆಗಳ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷ ನನ್ನನ್ನು ಮುಖ್ಯಮಂತ್ರಿ ಮಾಡಿದೆ. 1990ರಿಂದಲೇ ಮಂತ್ರಿ ಮಾಡಿ ಬೆಳೆಸಿದೆ. ಇಷ್ಟೆಲ್ಲಾ ನನ್ನನ್ನು ಬೆಳೆಸಿ, ನನ್ನ ಮುಖ ತೋರಿಸಿ, ನನಗೆ ಲೀಡರ್ ಶಿಪ್ ಕೊಡಲಿಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸುವ ಮೂಲಕ ಏಕಕಾಲಕ್ಕೆ ಪಕ್ಷದ ಹೈಕಮಾಂಡ್ ನಾಯಕರಿಗೂ ಮತ್ತು ತಮ್ಮ ಬದಲಾವಣೆಗೆ ದನಿ ಎತ್ತಿರುವ ವಿರೋಧಿ ಬಣದವರಿಗೂ ಅವರು ಸವಾಲೆಸೆದಿದ್ದಾರೆ.
ಕಾಂಗ್ರೆಸ್ ಪಕ್ಷ ನನಗೆ ಶಕ್ತಿ ಕೊಟ್ಟಿದೆ. ಹಾಗಾಗಿ ನಾನು ಯಾವುದೇ ಸ್ಥಾನದಲ್ಲಿದ್ದರೂ ಪಕ್ಷಕ್ಕಾಗಿ ನಾಯಕತ್ವ ವಹಿಸುತ್ತೇನೆ. ಪಕ್ಷದ ಇಷ್ಟೆಲ್ಲಾ ಕೊಟ್ಟಿರುವಾಗ ನನ್ನ ಲೀಡರ್ಶಿಪ್‌ನಲ್ಲಿ ಮತ್ತು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿರುವ ಅವರು, ಕಳೆದ ಒಂದು ವಾರದಲ್ಲಿ ಮೂರನೇ ಬಾರಿಗೆ ಮುಂದಿನ ಚುನಾವಣೆ ತಮ್ಮದೇ ನೇತೃತ್ವದಲ್ಲಿ ನಡೆಯಲಿದೆ ಎಂದು ಪುನರುಚ್ಚರಿಸಿದ್ದಾರೆ.
ನನಗೆ ಫೇಸ್ ಇದೆ, ವೈಬ್ರೇಷನ್ ಇದೆ
ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ನಾನು ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಪಕ್ಷದ ಅಧ್ಯಕ್ಷನಾಗಿದ್ದೆ. ಈಗ ಡಿಸಿಎಂ ಆಗಿದ್ದೇನೆ. ಪಕ್ಷ ನನಗೆ ಹೀಗೆ ಹಲವು ಜವಾಬ್ದಾರಿಗಳನ್ನು ನೀಡಿದೆ. ಆ ಮೂಲಕ ನಾಯಕನನ್ನಾಗಿ ಮಾಡಿದೆ. ನನಗೆ ಫೇಸ್ ಇದೆ, ವ್ಯಕ್ತಿತ್ವಕ್ಕೆ ವೈಬ್ರೇಷನ್ ಇದೆ. ಹಾಗಾಗೇ ನನ್ನನ್ನು ದೆಹಲಿಗೂ ಕರೆಯುತ್ತಾರೆ, ಬಿಹಾರಕ್ಕೂ, ಕೇರಳಕ್ಕೂ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣಕ್ಕೂ ಕರೆಯುತ್ತಾರೆ. ನನಗೆ ಲೀಡರ್ಶಿಪ್ ಇರೋದಕ್ಕೆ ತಾನೆ ಬೇರೆ ಬೇರೆ ರಾಜ್ಯಗಳಿಗೆ ಕರೀತಿರೋದು? ಎಂದು ತಮ್ಮ ನಾಯಕತ್ವ ಗುಣದ ಬಗ್ಗೆ ಹೇಳಿಕೊಂಡಿರುವ ಡಿ ಕೆ ಶಿವಕುಮಾರ್, ನನ್ನನ್ನು ಕರೆಯುವಂತೆ ನಿಮ್ಮನ್ನು ಕರೆಯುತ್ತಾರೆಯೇ? ಅಥವಾ ಬೇರೆಯವರನ್ನು ಕರೆಯುತ್ತಾರೆಯೇ? ಎಂದು ತಮ್ಮ ನಾಯಕತ್ವ ಬದಲಾವಣೆಯ ಬಗ್ಗೆ ದನಿ ಎತ್ತಿರುವ ವಿರೋಧಿ ಬಣದ ನಾಯಕರಿಗೆ ಸವಾಲು ಹಾಕಿದ್ದಾರೆ.
ನನ್ನ ಶಕ್ತಿಯನ್ನು ಪಕ್ಷಕ್ಕೆ ಬಳಸಬೇಕು. ಎಲ್ಲರ ಶಕ್ತಿಯನ್ನೂ ಪಕ್ಷ ಬಳಸಿಕೊಳ್ಳಬೇಕು. ಪಕ್ಷ ನನಗೆ ಇಷ್ಟೆಲ್ಲಾ ನಾಯಕತ್ವ, ಬೆಳೆಯುವ ಅವಕಾಶ ಕೊಟ್ಟಾಗ ನನ್ನ ನಾಯಕತ್ವದಲ್ಲಿ ಅಥವಾ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುವುದು ತಪ್ಪೇನು? ಜೊತೆಗೆ ಸಿದ್ದರಾಮಯ್ಯ ನಾಯಕತ್ವ ಕೂಡ ಇರುತ್ತದೆ. ಅವರೂ ನಮ್ಮೊಂದಿಗೆ ಇರುತ್ತಾರೆ. ಅವರ ಶಕ್ತಿಯನ್ನೂ ಬಳಸಿಕೊಳ್ಳಬೇಕು. ಜೊತೆಗೆ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸಬೇಕು ಎಂದೂ ಅವರು ಹೇಳಿದ್ದಾರೆ.
ಒಟ್ಟಾರೆ ತಮ್ಮ ಮಾತಿನುದ್ದಕ್ಕೂ ಅವರು ತಮ್ಮ ವರ್ಚಸ್ಸು, ವರ್ಚಸ್ಸಿನ ಸುತ್ತ ಇರುವ ವೈಬ್ರೇಷನ್ ಕುರಿತು ಹೇಳುತ್ತಲೇ ಮುಂದಿನ ಚುನಾವಣೆಗೂ ಪಕ್ಷದ ನಾಯಕತ್ವ ತಮ್ಮದೇ ಆಗಿರಬೇಕು ಎಂಬ ತಮ್ಮ ಹಕ್ಕನ್ನು ಬಹಳ ಪ್ರಬಲವಾಗಿ ಮಂಡಿಸಿದ್ದಾರೆ. ಜೊತೆಗೆ ಪೂಜೆ ಫಲಿಸದೇ ಇರಬಹುದು, ಆದರೆ ಪ್ರಾರ್ಥನೆ ಫಲಿಸದೇ ಇರದು ಎನ್ನುವ ಮೂಲಕ ತಮ್ಮ ಕೋರಿಕೆಯನ್ನು ಹೈಕಮಾಂಡ್ ನಾಯಕರು ಪರಿಗಣಿಸುತ್ತಾರೆ ಮತ್ತು ಅವಕಾಶ ನೀಡುತ್ತಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.