Karnataka By-Election | ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್
ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಅವರು ಸ್ಪರ್ಧಿಸುವ ಕುರಿತು 'ದ ಫೆಡರಲ್ ಕರ್ನಾಟಕ' ಕಳೆದ ಭಾನುವಾರ ವರದಿ ಪ್ರಕಟಿಸಿತ್ತು. ಅದಾದ ಬಳಿಕ ಸಿಎಂ, ಡಿಸಿಎಂ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಿ.ಪಿ. ಯೋಗೇಶ್ವರ್ ಅವರಿಗೆ ಬಹಿರಂಗ ಆಹ್ವಾನ ನೀಡಿದ್ದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಚ್ಚರಿಯ ಅಭ್ಯರ್ಥಿ ಕುರಿತ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ಮೈತ್ರಿ ಟಿಕೆಟ್ ಬಿಕ್ಕಟ್ಟಿನಿಂದ ಅಸಮಾಧಾನಗೊಂಡಿರುವ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಪಕ್ಷದ ಆಹ್ವಾನದ ಮೇರೆಗೆ ಅಚ್ಚರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಅಧಿಕೃತವಾಗಿದೆ.
ಬುಧವಾರ ಬೆಳಿಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರದ ನಿವಾಸದಲ್ಲಿ ಪ್ರತ್ಯಕ್ಷರಾದ ಸಿ.ಪಿ.ಯೋಗೇಶ್ವರ್ ಮಹತ್ವದ ಮಾತುಕತೆ ನಡೆಸಿದರು. ಬಳಿಕ ಒಂದೇ ಕಾರಿನಲ್ಲಿಇಬ್ಬರೂ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿದರು.
ಸಿದ್ದರಾಮಯ್ಯ ಅವರ ಕಾಲಿಗೆರಗಿ ಆಶೀರ್ವಾದ ಪಡೆದ ಸಿ.ಪಿ.ಯೋಗೇಶ್ವರ್ ಮೈತ್ರಿ ನಾಯಕರಿಗೆ ಠಕ್ಕರ್ ನೀಡಿದರು.
ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್ ಅವರು ಸ್ಪರ್ಧಿಸುವ ಕುರಿತು ʼದ ಫೆಡರಲ್ ಕರ್ನಾಟಕʼ ಭಾನುವಾರ ವರದಿ ಪ್ರಕಟಿಸಿತ್ತು. ಅದಾದ ಬಳಿಕ ಸಿಎಂ, ಡಿಸಿಎಂ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಿ.ಪಿ. ಯೋಗೇಶ್ವರ್ ಅವರಿಗೆ ಬಹಿರಂಗ ಆಹ್ವಾನ ನೀಡಿದ್ದರು.
ಈ ಬಗ್ಗೆ ಬಿಜೆಪಿ ಮಿತ್ರ ಪಕ್ಷದ ನಾಯಕ, ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಯೋಗೇಶ್ವರ್ ಅವರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಿದ್ದರು.
ಸೋಮವಾರ ಸಿ.ಪಿ.ಯೋಗೇಶ್ವರ್ ಅವರು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ವದಂತಿಯನ್ನು ತಳ್ಳಿ ಹಾಕಿರಲಿಲ್ಲ.
ಬುಧವಾರ ದಿಢೀರನೇ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಕಾಣಿಸಿಕೊಂಡ ನಂತರ ವಾಟ್ಸ್ ಆಪ್ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ಕಾಂಗ್ರೆಸ್ ಕಚೇರಿಯಲ್ಲಿ ಕೆಲವೇ ಕ್ಷಣಗಳಲ್ಲಿ ಪಕ್ಷ ಸೇರ್ಪಡೆ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.