Mysore MUDA scam | ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಹೈಕಮಾಂಡ್, ರಾಜೀನಾಮೆ ಬೇಡಿಕೆ ತಳ್ಳಿಹಾಕಿದ ಖರ್ಗೆ
x

Mysore MUDA scam | ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಹೈಕಮಾಂಡ್, ರಾಜೀನಾಮೆ ಬೇಡಿಕೆ ತಳ್ಳಿಹಾಕಿದ ಖರ್ಗೆ

ಮೂಡಾ ಪ್ರಕರಣದಲ್ಲಿ ಇನ್ನೂ ಆರೋಪಪಟ್ಟಿಯೇ ಸಲ್ಲಿಸಿಲ್ಲ, ಶಿಕ್ಷೆಯೂ ಆಗಿಲ್ಲ. ಹೀಗಿರುವಾಗ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ಕಾನೂನು ತನ್ನ ಕೆಲಸ ಮಾಡಲಿದೆ


ಮುಡಾ ಹಗರಣದಲ್ಲಿ ಲೋಕಾಯುಕ್ತ ತನಿಖೆಗೆ ಗುರಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಇಡೀ ಪಕ್ಷವೇ ನಿಲ್ಲಲಿದೆ. ಎಲ್ಲ ಸಂದರ್ಭಗಳಲ್ಲಿ ಅವರಿಗೆ ಬೆಂಬಲ ನೀಡಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಘೋಷಿಸಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೆಂಬ ಬಿಜೆಪಿ ಬೇಡಿಕೆಯನ್ನು ತಳ್ಳಿಹಾಕಿದ ಅವರು, ಪ್ರಕರಣದಲ್ಲಿ ಇನ್ನೂ ಆರೋಪಪಟ್ಟಿಯೇ ಸಲ್ಲಿಸಿಲ್ಲ, ಶಿಕ್ಷೆಯೂ ಆಗಿಲ್ಲ. ಹೀಗಿರುವಾಗ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ಕಾನೂನು ತನ್ನ ಕೆಲಸ ಮಾಡಲಿದೆ. ಒಂದು ವೇಳೆ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಾಗ ಪಕ್ಷ ಅದನ್ನು ಪರಿಶೀಲಿಸಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

"ಗೋಧ್ರಾ ಘಟನೆ ಸಂಭವಿಸಿದಾಗ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಅಂದು ಗುಜರಾತ್‌ ಮುಖ್ಯಮಂತ್ರಿಯಾಗಿದ್ದರು. ಅವರು ರಾಜೀನಾಮೆ ನೀಡಿರಲಿಲ್ಲ. ಇಂದಿಗೂ ಹಲವು ಪ್ರಕರಣಗಳು ಮೋದಿ ಹಾಗೂ ಅಮಿತ್‌ ಶಾ ಅವರ ಮೇಲಿವೆ ಎಂದು ತಿರುಗೇಟು ನೀಡಿದರು.

ಒಬ್ಬ ವ್ಯಕ್ತಿಯ ಘನತೆಯನ್ನು ಹಾಳು ಮಾಡಲು ಹೋಗಬೇಡಿ. ಅದರಿಂದ ಪಕ್ಷಕ್ಕೂ ಧಕ್ಕೆಯಾಗಲಿದೆ. ಕಾಂಗ್ರೆಸ್ ಪಕ್ಷದ ಘನತೆಗೆ ಚ್ಯುತಿ ತರುವುದೇ ನಿಮ್ಮ (ಬಿಜೆಪಿ) ಕೆಲಸ. ಯಾವುದೇ ವ್ಯಕ್ತಿ ಇಂದು ಪಕ್ಷದಲ್ಲಿ ಇರಬಹುದು, ನಾಳೆ ಇಲ್ಲದೇ ಇರಬಹುದು. ಆದರೆ, ಪಕ್ಷ ಮಾತ್ರ ಇರಲಿದೆ. ನೀವು ಕಾಂಗ್ರೆಸ್‌ ಪಕ್ಷವನ್ನು ನಾಶ ಮಾಡಲು ಬಯಸುತ್ತಿದ್ದೀರಾ, ಕಾನೂನು ಅದರ ಪಾಡಿಗೆ ಕೆಲಸ ಮಾಡಲಿದೆ ಬಿಡಿ ಎಂದರು.

ಪ್ರತಿದಿನ ನಾನು ಮುಡಾ, ಮುಡಾ ಎಂದು ನೋಡುತ್ತಿದ್ದೇನೆ. ಕೋಟಿಗಟ್ಟಲೆ ಹಣವನ್ನು ಕೈಗಾರಿಕೋದ್ಯಮಿಗಳು ನುಂಗಿದ್ದಾರೆ. ಅವರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದೀರಿ. ಈಗ ನೀವು ಒಂದು ಸಣ್ಣ ಮೊತ್ತವನ್ನು ತೆಗೆದುಕೊಂಡು, ಗದ್ದಲ ಎಬ್ಬಿಸುತ್ತಿದ್ದೀರಿ. ಅದೂ ಕೂಡ ಚಾರ್ಜ್ಶೀಟ್ ಆಗಿಲ್ಲ. ಪ್ರತಿ ದಿನ ಈ ಎಲ್ಲ ಸಂಗತಿಗಳನ್ನು ನೋಡಿ ಬೇಸರಗೊಂಡಿದ್ದೇನೆ ಎಂದು ಹೇಳಿದರು.

ಸಿಎಂ ವಿರುದ್ಧ ಎಫ್ಐಆರ್ ದಾಖಲಾದ ನಂತರವೂ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಜತೆ ನಿಲ್ಲುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಖರ್ಗೆಅವರು, ನಿಮ್ಮದು ಕಾಲ್ಪನಿಕ ಪ್ರಶ್ನೆ, ನಾವು ಅವರ ಜತೆ ನಿಂತಿದ್ದೇವೆ, ಬೆಂಬಲಿಸುತ್ತೇವೆ, ಏಕೆಂದರೆ ಅವರು ಪಕ್ಷವನ್ನು ಪ್ರತಿನಿಧಿಸುತ್ತಾರೆ. ವೈಯಕ್ತಿಕ ಅಲ್ಲ ಎಂದು ಹೇಳಿದರು.

ಮೂಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಬುಧವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಸಿಸಿತ್ತು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ 14 ನಿವೇಶನ ಹಂಚಿಕೆಯಲ್ಲಿದ್ದು, ಇದರಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ತನಿಖೆ ನಡೆಸಲು ರಾಜ್ಯಪಾಲ ತಾವರಚಂದ್ ಗೆಹಲೋತ್‌ ನೀಡಿದ್ದ ಪ್ರಾಸಿಕ್ಯೂಷನ್‌ ಅನ್ನು ಹೈಕೋರ್ಟ್ ಎತ್ತಿ ಹಿಡಿದ ಮರುದಿನವೇ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ತನಿಖೆಗೆ ಆದೇಶ ಹೊರಡಿಸಿದ್ದರು.

ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ದೂರಿನ ಮೇರೆಗೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿತ್ತು.

ಮುಡಾ ವತಿಯಿಂದ ಪಾರ್ವತಿ ಅವರಿಗೆ 50:50 ಅನುಪಾತದಲ್ಲಿ ಅವರ 3.16 ಎಕರೆ ಜಮೀನಿಗೆ ಬದಲಾಗಿ 14 ನಿವೇಶನಗಳನ್ನು ಮಂಜೂರು ಮಾಡಿತ್ತು.

Read More
Next Story