
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ
ಒಟ್ಟು 101 ಶಾಸಕರ ಜತೆ ಸುರ್ಜೇವಾಲಾ 'ಒನ್ ಟು ಒನ್' ಸಭೆ ಇಂದು ಅಂತ್ಯ; ಶೀಘ್ರ ಹೈಕಮಾಂಡ್‌ಗೆ ವರದಿ
ಕಳೆದ ವಾರ ಮೊದಲ ಹಂತದಲ್ಲಿ 42 ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಸೋಮವಾರದಿಂದ ಮತ್ತೆ ಎರಡನೇ ಹಂತದಲ್ಲಿ ಉಳಿದ ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದ್ದು ಬುಧವಾರ(ಜು.9) ಅಂತ್ಯವಾಗಲಿದೆ.
ರಾಜ್ಯ ಸರ್ಕಾರದ ಸಚಿವರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕರೊಂದಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ನಡೆಸುತ್ತಿರುವ 'ಒನ್ ಟು ಒನ್' ಸಭೆ ಇಂದು(ಬುಧವಾರ) ಮುಕ್ತಾಯವಾಗಲಿದೆ.
ಕಳೆದ ವಾರ ಮೊದಲ ಹಂತದಲ್ಲಿ 42 ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದರು. ಸೋಮವಾರದಿಂದ ಮತ್ತೆ ಎರಡನೇ ಹಂತದಲ್ಲಿ ಉಳಿದ ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದ್ದು ಬುಧವಾರ(ಜು.9) ಅಂತ್ಯವಾಗಲಿದೆ. ಸೋಮವಾರ 21 ಶಾಸಕರು ಹಾಗೂ ಮಂಗಳವಾರ 24 ಶಾಸಕರ ಜತೆ ಸಭೆ ನಡೆಸಲಾಗಿತ್ತು. ಬುಧವಾರ 14 ಶಾಸಕರ ಜತೆ ಸಭೆ ನಡೆಸಲಿದ್ದು ಒಟ್ಟು 101 ಶಾಸಕರ ಜತೆ ಸಭೆ ನಡೆಸಿ ಅಭಿಪ್ರಾಯ ಕಲೆಹಾಕಿ ದೆಹಲಿಗೆ ತೆರಳಿ ಹೈಕಮಾಂಡ್‌ಗೆ ಸಂಪೂರ್ಣ ವರದಿ ನೀಡಲಿದ್ದಾರೆ.
ಅನುದಾನದ ಜತೆಗೆ ಕ್ಷೇತ್ರದ ಅಭಿವೃದ್ಧಿ, ಸಚಿವರ ಕಾರ್ಯವೈಖರಿ ಹಾಗೂ ಸರ್ಕಾರದ ಆಡಳಿತ ವ್ಯವಸ್ಥೆ ಬಗ್ಗೆ ಶಾಸಕರ ಜತೆ ಸಭೆ ನಡೆಸಿ ಅಭಿಪ್ರಾಯ ಕೇಳಿದ್ದರು. ಪ್ರತಿ ಶಾಸಕರ ಅಭಿಪ್ರಾಯ ಆಲಿಸಿರುವ ಸುರ್ಜೇವಾಲಾ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ವರದಿ ಸಲ್ಲಿಸಲಿದ್ದಾರೆ.
ರಾಹುಲ್ ಭೇಟಿಗೆ ಅವಕಾಶ ಕೇಳಿರುವ ಸಿಎಂ , ಡಿಸಿಎಂ
ಇದೆಲ್ಲದರ ನಡುವೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಭೇಟಿಗೆ ಪ್ರತ್ಯೇಕವಾಗಿ ಸಮಯ ಕೇಳಿದ್ದಾರೆ. ಈಗಾಗಲೇ ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿರುವ ಡಿ.ಕೆ. ಶಿವಕುಮಾರ್ ಅವರು ರಾಹುಲ್ ಗಾಂಧಿ ಭೇಟಿಗೆ ಕಾಯುತ್ತಿದ್ದಾರೆ. ಆದರೆ, ರಾಹುಲ್ ಗಾಂಧಿ ಅವರು ಬಿಹಾರ ಚುನಾವಣೆ ಪ್ರಚಾರದಲ್ಲಿದ್ದು ಇನ್ನೂ ಭೇಟಿ ಸಾಧ್ಯವಾಗಿಲ್ಲ. ಸಿಎಂ ಸಿದ್ದರಾಮಯ್ಯ ಕೂಡ ಬುಧವಾರ ದೆಹಲಿಗೆ ತೆರಳಿದ್ದು ಇಂದು ರಾತ್ರಿ ಅಥವಾ ಗುರುವಾರ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.
ಸುರ್ಜೆವಾಲಾ ಸಭೆಗೆ ಅಸಮಾಧಾನ
ಬಹುತೇಕ ಶಾಸಕರು ಹಾಗೂ ಸಚಿವರು ರಾಜ್ಯ ಉಸ್ತುವಾರಿ ಸುರ್ಜೆವಾಲಾ ಅವರು ಶಾಸಕರ ಜತೆ ನಡೆಸಿದ ಪ್ರತ್ಯೇಕ ಸಭೆ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ ಸಿದ್ದರಾಮಯ್ಯ ಅವರನ್ನು ಹೊರಗಿಟ್ಟು ಸಭೆ ನಡೆಸುವ ಅವಶ್ಯಕತೆ ಇರಲಿಲ್ಲ. ಇದರ ಜತೆಗೆ ಸರ್ಕಾರದ ಆಡಳಿತ ವೈಖರಿ ಬಗ್ಗೆ ಶಾಸಕರ ಅಭಿಪ್ರಾಯ ಕಲೆಹಾಕುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಾಸಕರ ಬೇಡಿಕೆಗಳ ಈಡೇರಿಕೆ, ಸಮಸ್ಯೆಗಳಿಗೆ ಪರಿಹಾರ ಕೊಡುವುದು ಸಿಎಂ ಕೈಯಲ್ಲಿದೆ. ಅವರ ಸಮ್ಮುಖದಲ್ಲಿ ಶಾಸಕರ ಅಭಿಪ್ರಾಯ ಪಡೆಯಬೇಕಿತ್ತು ಎನ್ನುವುದು ಶಾಸಕರ ವಾದವಾಗಿದೆ. ಇದೇ ಅಭಿಪ್ರಾಯವನ್ನು ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ ಹೇಳಲಿದ್ದಾರೆ ಎನ್ನಲಾಗಿದೆ. ಇದರ ಜತೆಗೆ ಸಿಎಂ ಸ್ಥಾನ ಸಂಬಂಧಿಸಿದಂತೆ ಅನೇಕ ಚರ್ಚೆಗಳು ನಡೆಯುತ್ತಿದ್ದು ಈ ಬಗ್ಗೆಯೂ ರಾಹುಲ್ ಗಾಂಧಿ ಬಳಿ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ರಾಜ್ಯ ಉಸ್ತುವಾರಿ ಸುರ್ಜೆವಾಲಾ ಅವರು ಈ ಮೊದಲಿನಿಂದಲೂ ಡಿ.ಕೆ. ಶಿವಕುಮಾರ್ ಅವರೊಂದಿಗೆ ನಿಕಟವಾಗಿದ್ದು, ಶಾಸಕರ ಅಭಿಪ್ರಾಯ ಕೇಳುವ ನೆಪದಲ್ಲಿ ಸಿಎಂ ವಿರುದ್ಧದ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ದೂರಲಾಗಿದೆ.
ಸಿಎಂ ಸಿದ್ದರಾಮಯ್ಯ ಬಣದ ಸಚಿವರು ಈ ಹಿಂದೆ ಔತಣಕೂಟ ಸಭೆ ಹಾಗೂ ಹಾಸನದಲ್ಲಿ ಅಹಿಂದ ಸಮಾವೇಶ ನಡೆಸಲು ತೀರ್ಮಾನಿಸಿದ್ದಾಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇದೇ ಸುರ್ಜೆವಾಲಾ ಅವರ ಮೂಲಕ ಔತಣಕೂಟ ಸಭೆ ಹಾಗೂ ಅಹಿಂದ ಸಮಾವೇಶಕ್ಕೆ ಬ್ರೇಕ್ ಹಾಕಿದ್ದರು. ಸುರ್ಜೆವಾಲಾ ಧೋರಣೆ ವಿರುದ್ಧ ಹಲವು ಶಾಸಕರು ಸಿಎಂ ಸಿದ್ದರಾಮಯ್ಯ ಅವರಿಗೂ ದೂರು ಸಲ್ಲಿಸಿದ್ದರು. ಅಲ್ಲದೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆಯಲು ತೀರ್ಮಾನಿಸಿದ್ದರು.