ಬೆಳಗಾವಿ ಅಧಿವೇಶನ | ಅಮಿತ್‌ ಶಾ ಹೇಳಿಕೆ ವಿವಾದ: ಬಿಜೆಪಿ ವಿರುದ್ಧ ಅಂಬೇಡ್ಕರ್‌ ಫೋಟೋ ಪ್ರದರ್ಶನ
x
ಬೆಳಗಾವಿ ಅಧಿವೇಶನದಲ್ಲಿ ಅಂಬೇಡ್ಕರ್‌ ಭಾವಚಿತ್ರ ವಿಟ್ಟು ಅಮಿತ್‌ ಶಾ ಹೇಳಿಕೆ ಖಂಡಿಸಲಾಯಿತು

ಬೆಳಗಾವಿ ಅಧಿವೇಶನ | ಅಮಿತ್‌ ಶಾ ಹೇಳಿಕೆ ವಿವಾದ: ಬಿಜೆಪಿ ವಿರುದ್ಧ ಅಂಬೇಡ್ಕರ್‌ ಫೋಟೋ ಪ್ರದರ್ಶನ

ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಅಮಿತ್ ಶಾ ವಿರುದ್ಧ ಬೆಳಗಾವಿ ಅಧಿವೇಶನದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌ ಶಾಸಕರು ಡಾ ಬಿ ಆರ್‌ ಅಂಬೇಡ್ಕರ್‌ ಅವರ ಫೋಟೋಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು


ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅವಮಾನಕಾರಿ ಹೇಳಿಕೆಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಳಗಾವಿ ಅಧಿವೇಶನದಲ್ಲೂ ಗುರುವಾರ ಕಾಂಗ್ರೆಸ್ ಶಾಸಕರು ತಮ್ಮ ಮೇಜಿನ ಮೇಲೆ ಅಂಬೇಡ್ಕರ್ ಭಾವಚಿತ್ರ ಪ್ರದರ್ಶಿಸಿ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.

ಬೆಳಿಗ್ಗೆ ಕಲಾಪ ಆರಂಭವಾಗುತ್ತಲೇ ಅಂಬೇಡ್ಕರ್‌ ಕುರಿತ ಅಮಿತ್‌ ಶಾ ಹೇಳಿಕೆಯ ವಿವಾದ ಸದನದಲ್ಲಿ ಸದ್ದು ಮಾಡಿತು. ಮಧ್ಯಾಹ್ನದ ಊಟದ ಬಿಡುವಿನವರೆಗೂ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಈ ವಿಷಯವೇ ಪರಸ್ಪರ ಘೋಷಣೆ, ಪ್ರತಿ ಘೋಷಣೆಗೆ ಕಾರಣವಾಗಿ ಕಲಾಪವನ್ನು ಕೆಲವು ಬಾರಿ ಮುಂಡೂಲಾಯಿತು.

ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಅಮಿತ್ ಶಾ ವಿರುದ್ಧ ಆಡಳಿತ ಪಕ್ಷದ ನಾಯಕರ ಪ್ರತಿಭಟನೆ ನಡೆಸಿದರೆ, ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಅಮಿತ್ ಶಾ ಹೇಳಿಕೆ ಸಮರ್ಥಿಸಿಕೊಂಡು ಸದನದಿಂದ ಹೊರ ನಡೆದರು.

ಬೆಳಗಾವಿ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಂಬೇಡ್ಕರ್‌ ಭಾವಚಿತ್ರ ಹಿಡಿದು ಅಮಿತ್‌ ಶಾ ವಿರುದ್ಧ ಪ್ರತಿಭಟನೆ ನಡೆಸಿದರು.

ಆಡಳಿತ ಪಕ್ಷದ ಶಾಸಕರು ತಮ್ಮ ಮೇಜಿನ ಮೇಲೆ ಅಂಬೇಡ್ಕರ್ ಭಾವಚಿತ್ರಗಳನ್ನು ಜೋಡಿಸಿದ್ದರಿಂದ ಇಡೀ ಸದನ ಅಂಬೇಡ್ಕರ್ ಪ್ರಭೆಯಿಂದ ಕಂಗೊಳಿಸಿತು. ಎತ್ತ ನೋಡಿದರೂ ಅಂಬೇಡ್ಕರ್ ಭಾವಚಿತ್ರಗಳೇ ಎದ್ದು ಕಾಣುತ್ತಿದ್ದವು. ಸಂವಿಧಾನ ಶಿಲ್ಪಿಯ ಕುರಿತು ಅಂಬೇಡ್ಕರ್‌ ಜಪ ಮಾಡುವುದು ಕೆಲವರಿಗೆ ವ್ಯಸನವಾಗಿದೆ ಎಂಬ ಕೇಂದ್ರ ಸಚಿವ ಹಾಗೂ ಬಿಜೆಪಿ ಹೈಕಮಾಂಡ್‌ ನಾಯಕ ಅಮಿತ್‌ ಶಾ ಅವರ ಹೇಳಿಕೆ ಕರ್ನಾಟಕದ ವಿಧಾನ ಮಂಡಲವನ್ನು ಹೀಗೆ ಅಂಬೇಡ್ಕರ್‌ ಮಯವಾಗಿಸಿತ್ತು.

ಬೆಳಗಾವಿ ಅಧಿವೇಶನದಲ್ಲಿ ಆಡಳಿತ ಪಕ್ಷದ ಸದಸ್ಯರು ಅಂಬೇಡ್ಕರ್‌ ಭಾವಚಿತ್ರ ಹಿಡಿದು ಅಮಿತ್‌ ಶಾ ಹೇಳಿಕೆ ಖಂಡಿಸಿದರು.

ಮಂಗಳವಾರ ಸಂಸತ್ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುವುದು ವ್ಯಸನ ಆಗಿಬಿಟ್ಟಿದೆ. ಇಷ್ಟೊಂದು ಬಾರಿ ದೇವರ ಹೆಸರನ್ನಾದರೂ ಹೇಳಿದ್ದರೆ ಏಳು ಜನ್ಮಗಳವರೆಗೆ ಸ್ವರ್ಗ ಪ್ರಾಪ್ತಿ ಆಗುತ್ತಿತ್ತು.." ಎಂದು ಹೇಳುವ ಮೂಲಕ ಅಂಬೇಡ್ಕರ್‌ ಕುಡಿತು ಲಘುವಾಗಿ ಮಾತನಾಡಿದ್ದರು. ದೇಶದ ಸಂವಿಧಾನ ಶಿಲ್ಪಿಯ ಕುರಿತ ಆ ಅವಮಾನಕರ ಹೇಳಿಕೆಯ ವಿರುದ್ಧ ಬುಧವಾರ ಬೆಳಿಗ್ಗೆಯಿಂದಲೇ ಪ್ರತಿಪಕ್ಷಗಳು ಸಂಸತ್ತಿನ ಒಳ-ಹೊರಗೆ ಭಾರೀ ಪ್ರತಿಭಟನೆ ನಡೆಸಿ ಅಮಿತ್‌ ಶಾ ಕ್ಷಮೆಯಾಚನೆಗೆ ಆಗ್ರಹಿಸಿದ್ದವು.

ಆದರೆ, ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಅಮಿತ್ ಶಾ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

Read More
Next Story