
ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ
"ನನ್ನ ಬಟ್ಟೆ ನೋಡಿ ವೇಶ್ಯೆ ಅಂತಾರೆ"- ಕಿಡಿಗೇಡಿಗಳಿಗೆ ನಯನಾ ಮೋಟಮ್ಮ ವಾರ್ನಿಂಗ್
ಪುರುಷ ರಾಜಕಾರಣಿಗಳ ಉಡುಪಿನ ಬಗ್ಗೆ ಯಾರೂ ಮಾತನಾಡುವುದಿಲ್ಲ, ಆದರೆ ಮಹಿಳಾ ರಾಜಕಾರಣಿಯ ಬಟ್ಟೆಯೇ ಇಲ್ಲಿ ಚರ್ಚೆಯ ವಿಷಯವಾಗುತ್ತದೆ ಎಂದು ನಯನಾ ಮೋಟಮ್ಮ ತಿಳಿಸಿದ್ದಾರೆ.
ನಟಿ ರಮ್ಯಾ ಮತ್ತು ವಿಜಯಲಕ್ಷ್ಮಿ ದರ್ಶನ್ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ ಕಿಡಿಗೇಡಿಗಳಿಗೆ ಕಾನೂನಿನ ಮೂಲಕ ತಕ್ಕ ಪಾಠ ಕಲಿಸಿದ್ದ ಘಟನೆ ಮಾಸುವ ಮುನ್ನವೇ, ಈಗ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ತಮ್ಮ ವೈಯಕ್ತಿಕ ಫೋಟೋಗಳಿಗೆ ಬಂದಿರುವ ಅಸಭ್ಯ ಪ್ರತಿಕ್ರಿಯೆಗಳ ವಿರುದ್ಧ ಅವರು ಧ್ವನಿ ಎತ್ತಿದ್ದಾರೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರು ತಮ್ಮ ವೈಯಕ್ತಿಕ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ಫೋಟೋಗಳಿಗೆ ಕೆಲವು ಕಿಡಿಗೇಡಿಗಳು ವೇಶ್ಯೆ ಎಂದು ಹಿಯಾಳಿಸಿದ್ದಾರೆ.
ಈ ಬಗ್ಗೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು,ʻʻ ನನ್ನ ರಾಜಕೀಯ ಕೆಲಸಕ್ಕೆ ಇಂದು ನಾ ಧರಿಸಿದ್ದ ಡ್ರೆಸ್ ಇದು. ಮಹಿಳಾ ರಾಜಕಾರಣಿಯಾಗಿ ಮಹಿಳಾ ವಿರೋಧಿ ಮನೋಭಾವಗಳನ್ನು ಎದುರಿಸುತ್ತಿದ್ದೇನೆ. ನಾ ಈ ರೀತಿ ಡ್ರೆಸ್, ಪ್ಯಾಂಟ್, ಜೀನ್ಸ್ ಅಥವಾ ಸ್ಲೀವ್‌ಲೆಸ್ ಬಟ್ಟೆ ಹಾಕಿಕೊಂಡರೆ, ಕೆಲಸ ಮಾಡದ ರಾಜಕಾರಣಿ, ರಸ್ತೆಗಳ ಗುಂಡಿ ಮುಚ್ಚದ ಶಾಸಕರು, ತೆರಿಗೆದಾರರ ಹಣದಲ್ಲಿ ಬದುಕುವವರು ಎಂದು ಹೇಳುತ್ತಾರೆ. ಇಷ್ಟಕ್ಕೇ ಮುಗಿಸದೇ ನನ್ನನ್ನು ವೇಶ್ಯೆ ಎಂದು ಕರೆಯುವ ಮಟ್ಟಕ್ಕೂ ಇಳಿಯುತ್ತಾರೆ. ಒಮ್ಮೆ ಯೋಚಿಸಿ ನೋಡಿ ಪುರುಷ ರಾಜಕಾರಣಿಯ ಉಡುಪಿನ ಬಗ್ಗೆ ಎಂದಿಗೂ ಪ್ರಶ್ನೆ ಕೇಳೋದಿಲ್ಲ. ಬಹುಶಃ ಅವರು ಸ್ಲೀವ್‌ಲೆಸ್ ಡ್ರೆಸ್ ಹಾಕಿಕೊಳ್ಳಲು ಸಾಧ್ಯವಿಲ್ಲ ಅನ್ನೋ ಕಾರಣಕ್ಕಾ??
ಈ ರೀತಿಯ ಕಾಮೆಂಟ್ ಮಾಡುವವರನ್ನು ನೇರವಾಗಿ ಪ್ರಶ್ನೆ ಮಾಡಬೇಕು ಅನ್ನಿಸುತ್ತೆ. ಆದರೆ ಹೆಚ್ಚಿನವರು ಡಿಪಿ ಇಲ್ಲದ ಪ್ರೊಫೈಲ್ ಇಟ್ಟುಕೊಂಡಿದ್ದಾರೆ. ಇನ್ನೂ ಕೆಲವರ ಇನ್‌ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಕೂಡಾ ಇಲ್ಲದವರಿದ್ದಾರೆ. ಬಹುಶಃ ಒಂದು ದಿನ ನಾನು ಅವರನ್ನು ನೇರವಾಗಿ ಎದುರಿಸುತ್ತೇನೆ. ಆದರೆ ಸದ್ಯಕ್ಕೆ ಈ ಮಹಿಳಾ ವಿರೋಧಿ ಮನೋಭಾವವನ್ನಷ್ಟೇ ಪ್ರಶ್ನಿಸುತ್ತಿದ್ದೇನೆʼʼ ಎಂದು ಬರೆದುಕೊಂಡಿದ್ದಾರೆ.
ನಯನಾ ಮೋಟಮ್ಮ ಪೋಸ್ಟ್
ಇನ್ನೊಂದು ಪೋಸ್ಟ್‌ನಲ್ಲಿ ಇತ್ತೀಚಿನ ಒಂದು ಘಟನೆಯ ಬಗ್ಗೆ ಬರೆದುಕೊಂಡಿರುವ ಅವರು, ʻʻಇತ್ತೀಚೆಗೆ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ, ವಿಮಾನ ನಿಲ್ದಾಣದಲ್ಲಿ ಒಬ್ಬ ಮಹಿಳಾ IAS ಅಧಿಕಾರಿಯವರೊಂದಿಗೆ ಮಾತುಕತೆ ನಡೆಸಿದೆ ಮತ್ತು ಮತ್ತೊಬ್ಬ ಮಹಿಳಾ KAS ಅಧಿಕಾರಿಯವರನ್ನು ಕರೆಯಲ್ಲಿ ಮಾತನಾಡಿದೆ. ಇವರನ್ನು ನಾನು ಮೊದಲ ಬಾರಿಗೆ ಫೋನ್ ಕಾಲ್ ನಲ್ಲಿ ಮಾತನಾಡಿ ಅಥವಾ ಭೇಟಿ ಮಾಡುತ್ತಿರುವುದು ಇದಾಗಿತ್ತು. ಮಹಿಳಾ IAS ಅಧಿಕಾರಿ ಸ್ವತಃ ಮುಂದೆ ಬಂದು ತಮ್ಮನ್ನು ಪರಿಚಯಿಸಿಕೊಂಡರು. ಮತ್ತೊಬ್ಬರು ನಾನು ಕರೆ ಮಾಡಿದುದು ನನ್ನ ವೈಯಕ್ತಿಕ ಸಂಖ್ಯೆಯಿಂದಲೇಯೇ ಎಂದು ಕೇಳಿದರು. ಅವರಲ್ಲಿ ಒಬ್ಬರು ನನ್ನ ಇನ್‌ಸ್ಟಾಗ್ರಾಂ ಖಾತೆಯನ್ನು ಅನುಸರಿಸುತ್ತಿರುವುದಾಗಿ ತಿಳಿಸಿದಾಗ, ಅದು ನನ್ನ ವೈಯಕ್ತಿಕ ಖಾತೆಯೇ ʼʼ ಎಂದು ನಗುತ್ತಲೇ ಹೇಳಿದೆ.
ʻʻಈ ಸಂದರ್ಭಗಳು ನನಗೆ ಒಂದು ವಿಚಾರವನ್ನು ಮನದಟ್ಟು ಮಾಡಿಸಿವೆ ಮಾತಾಡದೇ, ಹೊರಗೆ ತೋರಿಸದೇ, ಮೌನವಾಗಿ ನನ್ನನ್ನು ಗಮನಿಸುತ್ತಿರುವ ಮತ್ತು ತಮ್ಮದೇ ರೀತಿಯಲ್ಲಿ ಬೆಂಬಲ ನೀಡುತ್ತಿರುವ ಅನೇಕ ಮಹಿಳೆಯರು ನಮ್ಮ ನಡುವೆ ಇದ್ದಾರೆ ಎಂಬುದನ್ನು. ತಮ್ಮ ಜೀವನವನ್ನು ತಮ್ಮ ಷರತ್ತಿನ ಮೇಲೆ ಬದುಕಬೇಕೆಂದು ಬಯಸಿದರೂ, ಹಲವು ಕಾರಣಗಳಿಂದ ಅದು ಸಾಧ್ಯವಾಗದ ಮಹಿಳೆಯರಿಗಾಗಿ ಈ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದೇನೆ. ನನ್ನ ವೈಯಕ್ತಿಕ ಫೋಟೋಗಳ ಕುರಿತು ಕೆಲವೊಮ್ಮೆ ನೆಗೆಟಿವ್ ಪ್ರತಿಕ್ರಿಯೆಗಳು ಬರುತ್ತವೆ ಅವು ಕೆಲ ಕ್ಷಣಗಳಲ್ಲಿ ಮನಸ್ಸನ್ನು ಕುಗ್ಗಿಸಬಹುದು. ಆದರೂ, ಇತರರಿಗಾಗಿ ನಾನು ಮುಂದುವರಿದು ನಿಲ್ಲಬೇಕೆಂಬ ಜವಾಬ್ದಾರಿಯ ಅರಿವು ನನಗಿದೆʼʼ ಎಂದು ಅವರು ಬರೆದುಕೊಂಡಿದ್ದಾರೆ.

