ಲೋಕಸಭೆ ಚುನಾವಣೆ | ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ: ಡಿ.ಕೆ. ಶಿವಕುಮಾರ್ ವಿಶ್ವಾಸ
ʻಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ʻಇಂಡಿಯಾ ಮೈತ್ರಿಕೂಟ” ಅಧಿಕಾರಕ್ಕೆ ಬರಲಿದೆʼ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ʻಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ʻಇಂಡಿಯಾ ಮೈತ್ರಿಕೂಟʼ ಅಧಿಕಾರಕ್ಕೆ ಬರಲಿದೆʼ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ, ಬಿಜೆಪಿಯಿಂದ ಯಾರು ಪ್ರಧಾನಿಯಾಗಿ ಆಯ್ಕೆಯಾಗುವುದಿಲ್ಲ. ದೇಶದಲ್ಲಿ ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟ ಆಡಳಿತ ನಡೆಸಲಿದೆʼ ಎಂದರು.
ಲೋಕಸಭೆ ಮಾದರಿ ಪರಿಷತ್ ಚುನಾವಣೆ ಎದುರಿಸುತ್ತೇವೆ
ʻಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಚಾರವಾಗಿ ನಮ್ಮ ಪಕ್ಷದ ನಾಯಕರು ಹಾಗೂ ಪದಾಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇವೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಎಲ್ಲಾ ಮುಖಂಡರು ಸೇರಿ ಈ ಚುನಾವಣೆ ಎದುರಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ. ಪಕ್ಷದ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲಾಗಿದೆʼ ಎಂದು ಹೇಳಿದರು.
ಪರಿಷತ್ ಚುನಾವಣೆಗೂ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಬಿಜೆಪಿ – ಜೆಡಿಎಸ್ ಪಕ್ಷದವರು ಶಾಶ್ವತವಾಗಿ ಮೈತ್ರಿ ಮಾಡಿಕೊಳ್ಳಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಮೈತ್ರಿಯಾದರೂ ಮಾಡಿಕೊಳ್ಳಲಿ, ವಿಲೀನವಾದರೂ ಮಾಡಿಕೊಳ್ಳಲಿ. ಅದು ಆ ಎರಡೂ ಪಕ್ಷಗಳ ನಿರ್ಧಾರ. ನಮಗೂ ಅದಕ್ಕೂ ಸಂಬಂಧವಿಲ್ಲʼ ಎಂದರು.
ಬಿ ಫಾರಂ ವಿತರಣೆ
ಶಿಕ್ಷಕರು ಹಾಗೂ ಪದವೀಧರರು ಸೇರಿದಂತೆ ವಿವಿಧ ಕ್ಷೇತ್ರಗಳಿಂದ ವಿಧಾನಪರಿಷತ್ ನಡೆಯುತ್ತಿರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಾದ ಕೆ.ಕೆ ಮಂಜುನಾಥ್ ಕುಮಾರ್, ಮರಿತಿಬ್ಬೇಗೌಡ, ಆಯನೂರು ಮಂಜುನಾಥ್ ಹಾಗೂ ಡಾ. ಚಂದ್ರಶೇಖರ ಪಾಟೀಲ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಬಿ ಫಾರಂ ವಿತರಿಸಿದರು.