'ರಾಧಿಕಾ ಕುಮಾರಸ್ವಾಮಿ ಕರಿಯಾ ಅಂದ್ರೆ ಓಕೆ..ಜಮೀರ್ ಕರೆದ್ರೆ ವಿವಾದʼ: ತೇಜಸ್ವಿನಿ ಗೌಡ
ರಾಧಿಕಾ ಅವರು ಕುಮಾರಸ್ವಾಮಿ ಅವರನ್ನು ಕರಿಯ ಎಂದರೆ ಓಕೆ ಆದರೆ ಜಮೀರ್ ಕರೆದರೆ ವಿವಾದ ಏಕೆ ಎಂದು ಕಾಂಗ್ರೆಸ್ ನಾಯಕಿ ತೇಜಸ್ವಿ ಗೌಡ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ಇತ್ತೀಚೆಗೆ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿಯವರನ್ನು ಸಚಿವ ಜಮೀರ್ ಅಹ್ಮದ್ ಖಾನ್ ಕರಿಯ ಎಂದು ಕರೆದಿದ್ದು ರಾಜ್ಯ ರಾಜಕೀಯದಲ್ಲಿ ಸಂಚಲವನ್ನೇ ಸೃಷ್ಟಿಸಿತ್ತು. ಅಹ್ಮದ್ ಖಾನ್ ಹೇಳಿಕೆಗೆ ವ್ಯಾಪಕ ಖಂಡನೆಯೂ ವ್ಯಕ್ತವಾಗಿತ್ತು. ಕೊನೆಗೆ ಜಮೀರ್ ಅವರು ಕ್ಷಮೆಯನ್ನು ಕೇಳಿದ್ದರು. ಇದೀಗ ಕಾಂಗ್ರೆಸ್ ನಾಯಕಿ ತೇಜಸ್ವಿನಿ ಗೌಡ ಮಾತನಾಡುವ ಭರದಲ್ಲಿ ಈ ವಿಚಾರವನ್ನು ಕೆದಕಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ತೇಜಸ್ವಿನಿ ಗೌಡ ಹೇಳಿದ್ದೇನು?
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಇಂದಿರಾಗಾಂಧಿ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ತೇಜಸ್ವಿನಿ ಗೌಡ ಅವರು ʼʼಸೋಷಿಯಲ್ ಮೀಡಿಯಾದಲ್ಲಿ ವಿಡಿಯೊವೊಂದು ವೈರಲ್ ಆಗಿದೆ. ಅದರಲ್ಲಿ ಸಂದರ್ಶಕರೊಬ್ಬರು ರಾಧಿಕಾ ಅವರಲ್ಲಿ ಕುಮಾರಸ್ವಾಮಿ ನಿಮ್ಮನ್ನು ಏನೆಂದು ಕರೆಯುತ್ತಾರೆ ಎಂದು ಕೇಳುತ್ತಾರೆ. ಆಗ ರಾಧಿಕಾ ಚಿನ್ನು ಎನ್ನುತ್ತಾರೆ ಎಂದು ಹೇಳುತ್ತಾರೆ. ನೀವು ಅವರನ್ನು ಹೇಗೆ ಕರೆಯುತ್ತೀರಿ? ಎಂದು ಸಂದರ್ಶಕರು ಮತ್ತೆ ಪ್ರಶ್ನಿಸುತ್ತಾರೆ. ಮೊದಲು ರಾಧಿಕಾ ಉತ್ತರ ಹೇಳಲು ನಿರಾಕರಿಸುತ್ತಾರೆ. ಒತ್ತಾಯ ಮಾಡಿದಾಗ ಕರಿಯ ಎನ್ನುತ್ತೇನೆ ಎಂದಿದ್ದಾರೆ. ರಾಧಿಕಾ ಕರೆದರೆ ಓಕೆ, ಆದರೆ ಜಮೀರ್ ಕರೆದರೆ ವಿವಾದ ಸೃಷ್ಟಿಯಾಗುತ್ತದೆʼʼ ಎಂದು ತೇಜಸ್ವಿನಿ ಗೌಡ ಹೇಳಿದ್ದಾರೆ. ಸದ್ಯ ಅವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತದೆ.
ಏನಿದು ವಿವಾದ
ಚನ್ನಪಟ್ಟಣದಲ್ಲಿ ವಿಧಾನಸಭೆ ಉಪಚುನಾವಣೆ ಪ್ರಚಾರದ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮ್ಮ ಭಾಷಣದ ವೇಳೆ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡುವ ಭರದಲ್ಲಿ “ಬಿಜೆಪಿಯವರಿಗಿಂತ ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಹೆಚ್ಚು ಖತರ್ನಾಕ್” ಎಂದು ಉರ್ದುವಿನಲ್ಲಿ ಹೇಳಿದ್ದರು.
“ಯೋಗೇಶ್ವರ್ ನಮ್ಮ ಪಕ್ಷದಿಂದ ರಾಜಕೀಯ ಪ್ರಾರಂಭ ಮಾಡಿದರು. ಕೆಲವು ವ್ಯತ್ಯಾಸಗಳಾಗಿ ಬಿಜೆಪಿಗೆ ಹೋದರು. ಜೆಡಿಎಸ್ ಹೋಗಬೇಕು ಅಂತ ಅಂದುಕೊಂಡಿದ್ದರು. ಆದರೆ ಕರಿಯ ಕುಮಾರಸ್ವಾಮಿ, ಬಿಜೆಪಿಗಿಂತ ಡೇಂಜರ್ ಅಂತ ಜೆಡಿಎಸ್ಗೆ ಹೋಗಿಲ್ಲ. ಏ ಕುಮಾರಸ್ವಾಮಿ ನಿನ್ ರೇಟು ಹೇಳು, ಮುಸಲ್ಮಾನರು ಒಂದೊಂದ್ ಪೈಸೆ ಹಾಕಿ ಇಡೀ ನಿನ್ನ ಕುಟುಂಬವನ್ನೇ ಖರೀದಿ ಮಾಡುತ್ತೇವೆʼʼ ಎಂದು ವಾಗ್ದಾಳಿ ನಡೆಸಿದ್ದರು. ಇದರ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕೊನೆಗೆ ನನ್ನ ಮಾತಿನಿಂದ ಜೆಡಿಎಸ್ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಕ್ಷೆಮೆಯಾಚಿಸಿದ್ದರು.