Congress leader Rahul Gandhis resignation should be sought: Radha Mohandas Agarwal
x

ರಾಜ್ಯ ಬಿಜೆಪಿ ಉಸ್ತುವಾರಿ ರಾಧಮೋಹನದಾಸ್‌ ಅಗರವಾಲ್‌ ಹಾಗೂ ರಾಹುಲ್‌ಗಾಂಧಿ

ಸೋಫಿಯಾ ಖುರೇಷಿ ವಿವಾದ: ಮಧ್ಯಪ್ರದೇಶ ಸಚಿವರ ಹೇಳಿಕೆಗೆ ಬಿಜೆಪಿ ಖಂಡನೆ, ರಾಹುಲ್​ ಮೇಲೂ ಆರೋಪ

ರಾಜ್ಯ ಬಿಜೆಪಿ ಉಸ್ತುವಾರಿ ರಾಧಮೋಹನದಾಸ್ ಅಗರ್ವಾಲ್, ಪಹಲ್ಗಾಮ್​ ಭಯೋತ್ಪಾದಕರ ದಾಳಿಗೆ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ ಕಾಂಗ್ರೆಸ್​ ನಡೆಯನ್ನು ಖಂಡಿಸಿದರು.


ಕರ್ನಲ್ ಸೋಫಿಯಾ ಖುರೇಶಿಯವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರನ್ನು ಪಕ್ಷ ಎಂದಿಗೂ ಕ್ಷಮಿಸುವುದಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಮೋಹನದಾಸ್ ಅಗರ್ವಾಲ್ ಸ್ಪಷ್ಟಪಡಿಸಿದ್ದಾರೆ.

ಕೇವಲ ಹೇಳಿಕೆಗಳ ಆಧಾರದ ಮೇಲೆ ಕ್ರಮ ಕೈಗೊಳ್ಳುವುದಾದರೆ ಕಾಂಗ್ರೆಸ್‌ನ ಹಿರಿಯ ನಾಯಕರಾದ ಶಶಿ ತರೂರ್ ಮತ್ತು ಪಿ. ಚಿದಂಬರಂ ಅವರನ್ನು ಹೊರತುಪಡಿಸಿ ಬೇರೆ ಯಾರೂ ಉಳಿಯುವುದಿಲ್ಲ ಎಂದು ಅವರು ಹೇಳಿದ್ದಾರೆ. ಮೊದಲನೆಯದಾಗಿ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರ ರಾಜೀನಾಮೆ ಕೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ಮೃತಪಟ್ಟ 26 ಭಾರತೀಯ ಪ್ರವಾಸಿಗರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತೀಯ ಸೈನಿಕರು ತಾಳ್ಮೆಯಿಂದ ಯುದ್ಧ ನಿಯಮಗಳನ್ನು ಪಾಲಿಸಿ 11 ಭಯೋತ್ಪಾದಕ ಸಂಘಟನೆಗಳ ನೆಲೆಗಳನ್ನು ಮತ್ತು ಅವರಿಗೆ ಬೆಂಬಲ ನೀಡಿದ 11 ಪಾಕಿಸ್ತಾನ ಸೇನೆಯ ವಾಯುನೆಲೆಗಳನ್ನು ಧ್ವಂಸ ಮಾಡಿದ್ದಾರೆ. ನಮ್ಮ ದಾಳಿಯಿಂದ ಉಗ್ರರನ್ನು ಹೊರತುಪಡಿಸಿ ಪಾಕಿಸ್ತಾನದ ನಾಗರಿಕರು ಮೃತಪಟ್ಟಿಲ್ಲ. ಪಾಕಿಸ್ತಾನದ ದಾಳಿಯನ್ನು ಸಮರ್ಥವಾಗಿ ಎದುರಿಸಲಾಗಿದ್ದು, ಒಂದೇ ಒಂದು ಕ್ಷಿಪಣಿಯನ್ನು ಸಹ ನಮ್ಮ ದೇಶದೊಳಗೆ ಪ್ರವೇಶಿಸಲು ಬಿಟ್ಟಿಲ್ಲ. ಇದು ಜಗತ್ತಿಗೆ ಭಾರತದ ವಾಯು ರಕ್ಷಣಾ ಶಕ್ತಿಯನ್ನು ತೋರಿಸಿದೆ ಎಂದು ಅವರು ಹೇಳಿದರು.

ಭಾರತೀಯ ಸೇನಾಪಡೆ ನಡೆಸಿದ 'ಆಪರೇಷನ್ ಸಿಂದೂರ್' ಅಹಿಂಸಾತ್ಮಕ ಯುದ್ಧವಾಗಿದೆ. ಭಾರತೀಯ ನಾಗರಿಕರ ಹತ್ಯೆಗೆ ಪ್ರತೀಕಾರ, ಭಾರತೀಯ ಯೋಧರ ಸಾಹಸ, ತ್ಯಾಗ, ಸಂಯಮ ಮತ್ತು ಸತ್ಯದ ಸಂಕೇತವಾಗಿ ಎಲ್ಲೆಡೆ ಪಕ್ಷಾತೀತವಾಗಿ ತಿರಂಗಾ ಯಾತ್ರೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುದ್ಧವನ್ನು ನಿಲ್ಲಿಸಿದ್ದೇನೆ ಎಂಬ ಹೇಳಿಕೆಯು ರೈಲಿನಿಂದ ಇಳಿದು, ರೈಲನ್ನು ತಳ್ಳಿ, ನಾನೇ ರೈಲು ತಳ್ಳಿ ಕಳುಹಿಸಿದ್ದು ಎಂದು ಹೇಳಿದಂತಿದೆ. ಅವರಿಗೆ ಈ ರೀತಿ ಹೇಳುವ ಅಭ್ಯಾಸವಿದ್ದು, ನಮಗೆ ಯಾರ ಮಧ್ಯಸ್ಥಿಕೆಯೂ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈಗಾಗಲೇ ಕದನ ವಿರಾಮದ ಬಗ್ಗೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದು ಸ್ಪಷ್ಟನೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

Read More
Next Story