ಕಾಂಗ್ರೆಸ್ ಜನಕಲ್ಯಾಣ ಸಮಾವೇಶ | ಪೋಸ್ಟರಿನಲ್ಲಿ ಅಂಚಿಗೆ ಸರಿದ ಸಿದ್ದರಾಮಯ್ಯ ಫೋಟೊ
ಹೈಕಮಾಂಡ್ ಸೂಚನೆಯಂತೆ ʼಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶʼವನ್ನು ʼಜನಕಲ್ಯಾಣ ಸಮಾವೇಶʼವನ್ನಾಗಿ ಬದಲಾಯಿಸಿದ್ದು ರಾಜ್ಯ ಕಾಂಗ್ರೆಸ್. ಜೊತೆಗೆ ಸಮಾವೇಶದ ಹೋರ್ಡಿಂಗ್ಸ್, ಪೋಸ್ಟರುಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೊವನ್ನು ಪೋಸ್ಟರಿನ ಮೇಲ್ಭಾಗದ ಕೊನೆಯ ತುದಿಯಲ್ಲಿ ಮುದ್ರಿಸಲಾಗಿದೆ.
ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದ ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶದ ಚಿತ್ರಣವೇ ಈಗ ಬದಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಕೇಂದ್ರೀಕರಿಸಿ ಈ ಮೊದಲು ಯೋಜಿಸಲಾಗಿದ್ದ ಸಮಾವೇಶದ ಪೋಸ್ಟರ್‌ನಲ್ಲಿ ಈಗ ಅವರ ಫೋಟೊವನ್ನೇ ಕೊನೆಯಲ್ಲಿ ಹಾಕುವ ಮಟ್ಟಿಗೆ ಮಹತ್ತರ ಬದಲಾವಣೆ ಕಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಗಳು ತಮ್ಮ ನಾಯಕರ ವರ್ಚಸ್ಸು ವೃದ್ಧಿಗಾಗಿ ಆಯೋಜಿಸಲು ಹೊರಟಿದ್ದ ಸಮಾವೇಶ, ಈಗ ಸಂಪೂರ್ಣ ‘ಕೈ’ವಶವಾಗಿದೆ. ‘ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶ’ ಎನ್ನುವ ಈ ಮೊದಲಿನ ಹೆಸರಿನ ಬದಲು ಈಗ ’ಕಾಂಗ್ರೆಸ್ ಜನಕಲ್ಯಾಣ ಸಮಾವೇಶ’ ಎಂದು ಮರು ನಾಮಕರಣ ಮಾಡಲಾಗಿದೆ. ಈ ಬದಲಾವಣೆ ಸಹಜವಾಗಿಯೇ ಮೂಲತಃ ಈ ಸಮಾವೇಶ ಮಾಡಲು ಮುಂದಾಗಿದ್ದ ಸಿದ್ದರಾಮಯ್ಯ ಅಭಿಮಾನಿ ಬಳಗಕ್ಕೆ ತೀವ್ರ ನಿರಾಸೆ ತಂದಿದೆ.
ನಾಳೆ ಡಿಸೆಂಬರ್ 5 ರಂದು ಹಾಸನದಲ್ಲಿ ಸ್ವಾಭಿಮಾನಿ ಒಕ್ಕೂಟಗಳ ಆಶ್ರಯದಲ್ಲಿ ಜನಕಲ್ಯಾಣ ಸಮಾವೇಶವನ್ನು ರಾಜ್ಯ ಕಾಂಗ್ರೆಸ್ ಸಮಿತಿ ಆಯೋಜಿಸಿದೆ. ಕೆಪಿಸಿಸಿ ಈ ಸಮಾವೇಶದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿದೆ. ಹೀಗಾಗಿ ಸ್ವಾಭಿಮಾನಿ ಸಮಾವೇಶ ಮಾಡಲು ಮುಂದಾಗಿದ್ದ ಸಿದ್ದರಾಮಯ್ಯ ಆಪ್ತರಿಗೆ ಹಿನ್ನಡೆ ಆಗಿದೆ.
ಸಚಿವರಾದ ಕೆ.ಎನ್. ರಾಜಣ್ಣ, ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಥಳ ಪರಿಶೀಲನೆ ಸೇರಿದಂತೆ ಸಮಾವೇಶ ನಡೆಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ರಾಜ್ಯ ಕಾಂಗ್ರೆಸ್ ಪಕ್ಷದ ಮತ್ತೊಂದು ಬಣವು ಸಿದ್ದರಾಮಯ್ಯ ಹೆಸರಿನಲ್ಲಿ ಸಮಾವೇಶ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಆ ಸಮಾವೇಶದ ಪೋಸ್ಟರ್ ಬಿಡುಗಡೆಯಾದ ಬಳಿಕ ಅದನ್ನೇ ಸಾಕ್ಷಿಯನ್ನಾಗಿ ಇಟ್ಟುಕೊಂಡು ಆ ಬಣದ ಕೆಲವರು ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದರು.
ಆ ಪತ್ರದ ಬೆನ್ನಲ್ಲೇ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ವತಿಯಿಂದಲೇ ಸಮಾವೇಶ ನಡೆಸುವಂತೆ ಸಲಹೆ ನೀಡಿದ್ದರು.
ಸಿದ್ದರಾಮಯ್ಯ ಫೋಟೊ ಮಾತ್ರ ರಾರಾಜಿಸಿತ್ತು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಸಚಿವರಾದ ರಾಜಣ್ಣ, ಎಚ್.ಸಿ. ಮಹಾದೇವಪ್ಪ, ವೆಂಕಟೇಶ್ ಸೇರಿದಂತೆ ಪ್ರಮುಖರು ಮೈಸೂರಿನಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ್ದರು.
ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ಇತರೆ ಎಲ್ಲಾ ವರ್ಗಗಳ ಒಕ್ಕೂಟಗಳ ಆಶ್ರಯದಲ್ಲಿ ಸಮಾವೇಶ ಮಾಡುವುದಾಗಿ ಪೋಸ್ಟರ್‌ನಲ್ಲಿ ಹೇಳಲಾಗಿತ್ತು. ಅದರಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನಾಗಲೀ, ಸಿದ್ದರಾಮಯ್ಯ ಹೊರತುಪಡಿಸಿ ಪಕ್ಷದ ಇತರೆ ರಾಷ್ಟ್ರ, ಮತ್ತು ರಾಜ್ಯಮಟ್ಟದ ನಾಯಕರ ಚಿತ್ರಗಳನ್ನಾಗಲೀ ಬಳಸಿರಲಿಲ್ಲ. ಕೇವಲ ಸಿದ್ದರಾಮಯ್ಯ ಅವರೊಬ್ಬರೇ ದೊಡ್ಡದಾಗಿ ಕಾಣುವಂತೆ ಪೋಸ್ಟರ್ ಮುದ್ರಿಸಲಾಗಿತ್ತು. ಆದರೆ ಈಗ ಸಮಾವೇಶದ ಪರಿಕಲ್ಪನೆಯೇ ಬದಲಾಗಿದೆ.
ಈಗ ಕೊನೆಯಲ್ಲಿದೆ ಸಿದ್ದರಾಮಯ್ಯ ಫೋಟೊ
ಹೈಕಮಾಂಡ್ ಸೂಚನೆಯಂತೆ ʼಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶʼವನ್ನು ʼಜನಕಲ್ಯಾಣ ಸಮಾವೇಶʼವನ್ನಾಗಿ ಬದಲಾಯಿಸಿದ್ದು ರಾಜ್ಯ ಕಾಂಗ್ರೆಸ್. ಜೊತೆಗೆ ಸಮಾವೇಶದಲ್ಲಿ ಪ್ರಮುಖವಾಗಿ ಬಳಸುವ ಹೋರ್ಡಿಂಗ್ಸ್, ಪೋಸ್ಟರುಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೊವನ್ನು ಪೋಸ್ಟರಿನ ಮೇಲ್ಭಾಗದ ಕೊನೆಯ ತುದಿಯಲ್ಲಿ ಮುದ್ರಿಸಲಾಗಿದೆ.
ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಫೋಟೊದಿಂದ ಆರಂಭಿಸಿ ಎಐಇಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬಳಿಕ ಕೊನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೊವನ್ನು ಹಾಕಲಾಗಿದೆ.
ಸಮಾವೇಶದ ದಿಕ್ಕು ಬದಲಿಸಿದ ದೂರು
ಹೈಕಮಾಂಡ್ ಆದೇಶದ ಹಿನ್ನೆಲೆ ತಣ್ಣಗಾದ ಆಪ್ತರು
ಕಾರ್ಯಕರ್ತರ ದೂರು ಪರಿಗಣಿಸಿದ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ವೇದಿಕೆಯಡಿ ಸಮಾವೇಶ ಮಾಡುವಂತೆ ಸೂಚಿಸಿತ್ತು. ಅದಾದ ಬಳಿಕ ಸಮಾವೇಶದ ಹೆಸರಿನೊಂದಿಗೆ ಇಡೀ ಪರಿಕಕಲ್ಪನೆಯನ್ನೇ ಬದಲಾಯಿಸಿ ಕೆಪಿಸಿಸಿ ಗುರುವಾರ(ಡಿ.5) ಸಮಾವೇಶ ನಡೆಸುತ್ತಿದೆ.
ಸಮಾವೇಶ ಆಯೋಜಿಸಿದ್ದವರೇ ಈಗ ಆಹ್ವಾನಿತರಾಗಿ ಭಾಗವಹಿಸುತ್ತಿರುವುದು ಸಿದ್ದರಾಮಯ್ಯ ಬಣಕ್ಕೆ ಆಗಿರುವ ಹಿನ್ನಡೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಹಿಂದುಳಿದ ವರ್ಗಗಳ ಆಶ್ರಯದಲ್ಲಿ ಸಮಾವೇಶ ನಡೆದಿದ್ದರೆ ಸಿದ್ದರಾಮಯ್ಯ ಆಪ್ತರೆ ಮುಖ್ಯವಾಗಿರುತ್ತಿದ್ದರು. ಈಗ ಅವರೇ ಆಹ್ವಾನಿತರಾಗಿ ಭಾಗವಹಿಸಬೇಕಾಗಿದೆ. ಇದು ಮುಂದಿನ ಹಂತದಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಯಾವ ರೀತಿಯ ಬೆಳವಣಿಗೆಗೆ ಕಾರಣವಾಗಬಹುದು ಎಂಬುದು ಕುತೂಹಲ ಮೂಡಿಸಿದೆ.