ಪಾದಯಾತ್ರೆಗೆ ಜನಾಂದೋಲನದ ತಿರುಗೇಟು | ಮೈಸೂರಿನಲ್ಲಿ ರಂಗೇರಿದ ಕಾಂಗ್ರೆಸ್ ಸಮಾವೇಶ
ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ-ಜೆಡಿಎಸ್ ʻಮೈಸೂರು ಚಲೋʼ ಹೆಸರಿನಲ್ಲಿ ಪಾದಯಾತ್ರೆ ನಡೆಸುತ್ತಿವೆ. ಪ್ರತಿಪಕ್ಷಗಳ ಪಾದಯಾತ್ರೆಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಜನಾಂದೋಲನ ಸಮಾವೇಶ ನಡೆಸುತ್ತಿದೆ. ಮೈಸೂರಿನಲ್ಲಿ ಶುಕ್ರವಾರ (ಆ.09) ಬೃಹತ್ ಸಮಾವೇಶ ಆರಂಭವಾಗಿದೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಕಾಂಗ್ರೆಸ್ ಬೃಹತ್ ಜನಾಂದೋಲನ ಆರಂಭವಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸಿದ್ದರಾಮಯ್ಯ ಅವರ ಅಭಿಮಾನಿಗಳು ಕೂಡ ಭಾರಿ ಸಂಖ್ಯೆಯಲ್ಲಿ ಸೇರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಸಚಿವರು, ಶಾಸಕರು, ಮಾಜಿ ಶಾಸಕರು, ಲೋಕಸಭಾ ಸದಸ್ಯರು, ಮಾಜಿ ಸಂಸದರು, ಎಲ್ಲಾ ಜಿಲ್ಲಾ, ನಗರ ಸಮಿತಿ ಅಧ್ಯಕ್ಷರು ಹಾಗೂ ಇನ್ನಿತರ ಕಾಂಗ್ರೆಸ್ ಪದಾಧಿಕಾರಿಗಳನ್ನು ಒಳಗೊಂಡಂತೆ 300ಕ್ಕೂ ಹೆಚ್ಚು ಪಕ್ಷದ ಮುಖಂಡರು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.
ಈ ಹಿಂದೆ ಜೆಡಿಎಸ್ ವಿರುದ್ಧ ಬಿಜೆಪಿ ಜಾಹೀರಾತು ನೀಡಿದ್ದು ಅದೀಗ ಕಾಂಗ್ರೆಸ್‌ಗೆ ಬ್ರಹ್ಮಾಸ್ತ್ರವಾಗಿದೆ. ಜಾಹೀರಾತು ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಮೈತ್ರಿ ದೋಸ್ತಿಗೆ ಠಕ್ಕರ್ ಕೊಡಲು ಮುಂದಾಗಿದೆ. ಈ ಸಮಾವೇಶದಲ್ಲಿ ಬಿಜೆಪಿ ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ನೀಡಿದ್ದ ಜಾಹೀರಾತನ್ನು ಅಸ್ತ್ರವಾಗಿ ಬಳಸಲು ಕಾಂಗ್ರೆಸ್ ಮುಂದಾಗಿದೆ.
ಸಮಾವೇಶದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಭ್ರಷ್ಟಾಚಾರಗಳನ್ನು ದಾಖಲೆ ಸಮೇತ ಬಿಚ್ಚಿಡಲು ಕಾಂಗ್ರೆಸ್ ತೀರ್ಮಾನಿಸಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಮೈತ್ರಿ ಪಕ್ಷಗಳಿಗೆ ಪ್ರತ್ಯುತ್ತರ ಕೊಡಲು ಕಾಂಗ್ರೆಸ್ ಮುಂದಾಗಿದೆ.
ಇನ್ನೂ ಸಮಾವೇಶ ನಡೆಯುವ ಸ್ಥಳಕ್ಕೆ ಗುರುವಾರವೇ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಸ್ವತಃ ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದ್ದರು. ಶಾಮಿಯಾನದ ಮಾಲೀಕ ಷರೀಫ್ ಅವರು ಗಣ್ಯರು ಕೂರುವ ವೇದಿಕೆ, ಸಾರ್ವಜನಿಕರು ಆಸೀನರಾಗುವ ಜಾಗ, ಪ್ರವೇಶ ಸೇರಿದಂತೆ ಮತ್ತಿತರ ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ಮಾಧ್ಯಮದವರಿಗೆ ಪ್ರವೇಶ ಕಲ್ಪಿಸಿರುವುದು ಮತ್ತು ಆಸನ ವ್ಯವಸ್ಥೆ ಜಾಗದ ಬಗ್ಗೆ ವಿವರಣೆ ಕೇಳಿ ಪಡೆದುಕೊಂಡಿದ್ದಾರೆ. ಸಿಎಂ ಅವರೇ ಪ್ರತಿಯೊಂದನ್ನು ಗಮನಿಸಿ ಮಾಹಿತಿ ಪಡೆದರಲ್ಲದೆ, ಧ್ವನಿವರ್ಧಕ ಎರಡು ಕಿಮೀ ವರೆಗೂ ಇರುವಂತೆ ಅಳವಡಿಸಲು ಸೂಚನೆ ನೀಡಿದ್ದಾರೆ.
ಪೊಲೀಸ್ ಬಿಗಿಭದ್ರತೆ
ಮೈಸೂರಿನಲ್ಲಿ ನಾಲ್ವರು ಡಿಐಜಿಗಳ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅಲ್ಲದೆ 36 ಡಿವೈಎಸ್ಪಿ, 77 ಇನ್ಸ್ಪೆಕ್ಟರ್ಸ್, 175 ಪಿಎಸ್ಐ, ಜಿಲ್ಲೆಯ 3 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಹೊರ ಜಿಲ್ಲೆಯ 1500 ಪೊಲೀಸರು, 60 ಕೆಎಸ್ಆರ್ಪಿ ತುಕಡಿ, 20 ಸಿಎಆರ್ ತುಕಡಿ, 500 ಹೋಮ್ ಗಾರ್ಡ್ಸ್ ನಿಯೋಜನೆ ಮಾಡಲಾಗಿದೆ. ಜತೆಗೆ, ಸಮಾವೇಶದ ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ.
ನಗರದಾದ್ಯಂತ ಫ್ಲೆಕ್ಸ್‌ಗಳು
ಕಾಂಗ್ರೆಸ್ ಬೃಹತ್ ಜನಾಂದೋಲನ ಸಮಾವೇಶದ ಪ್ರಯುಕ್ತ ಮೈಸೂರು ನಗರದಲ್ಲಿ ‘ಕೈ’ ನಾಯಕರ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸಚಿವರು, ಕಾಂಗ್ರೆಸ್ ಶಾಸಕರ ಫ್ಲೆಕ್ಸ್‌ಗಳು ಎಲ್ಲೆಡೆ ಕಾಣಿಸುತ್ತಿವೆ.
ಈ ನಡುವೆ ವಿಭಿನ್ನ ಫ್ಲೆಕ್ಸ್ ಒಂದು ಮೈಸೂರಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಹೆಚ್.ಡಿ.ದೇವೇಗೌಡ ಕುಟುಂಬದ ಭೂ ಕಬಳಿಕೆ ಪಕ್ಷಿನೋಟದ ಫ್ಲೆಕ್ಸ್ ಅನ್ನು ಕಾಂಗ್ರೆಸ್ ಅಳವಡಿಸಿದೆ. ಅದರಲ್ಲಿ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ ಬಗ್ಗೆ ಮಾಹಿತಿ ಇವೆ. ಹೆಚ್ಡಿಕೆ ನಿವೇಶನಕ್ಕೆ ಮುಡಾಗೆ ನೀಡಿರುವ ಅರ್ಜಿಯ ಕಾಪಿ ಕೂಡ ಇದೆ. ಹೆಚ್ಡಿಡಿ ಕುಟುಂಬ ಪಡೆದಿದ್ದಾರೆ ಎನ್ನಲಾದ ನಿವೇಶನಗಳ ಮಾಹಿತಿ ಇದೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶಕ್ಕಾಗಿ ಎರಡು ಬೃಹತ್ ವೇದಿಕೆಗಳು ಸಿದ್ಧವಾಗಿವೆ. ಕಣ್ಣು ಹಾಯಿಸದ ಕಡೆಗಳಲ್ಲೆಲ್ಲಾ ಬ್ಯಾನರ್‌ಗಳು ಪೋಸ್ಟರ್‌ಗಳು ಕಾಣಿಸುತ್ತಿವೆ. ಲಕ್ಷಾಂತರ ಜನರನ್ನು ಸೇರಿಸುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ.