Karnataka By Election: ವಿರೋಧಿ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗುವುದು ಗ್ಯಾರಂಟಿ; ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿಗಳಿಗೆ ತಮ್ಮ ತಪ್ಪಿನ ಅರಿವಾಗಿ ನೊಟೀಸ್ ವಾಪಸ್ ತೆಗೆದುಕೊಳ್ಳಲು ಹೇಳಿದ್ದಾರೆ. ಸರ್ಕಾರ ತಪ್ಪು ಮಾಡದಿದ್ದರೆ ರೈತರಿಗೆ ನೀಡಿದ್ದ ನೋಟಿಸ್ ಯಾಕೆ ವಾಪಸ್ ಪಡೆಯುತ್ತಿದ್ದರು ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ದ ರಾಜ್ಯಾದ್ಯಂತ ಜನರು ತಿರುಗಿ ಬಿದ್ದಿದ್ದಾರೆ. ಆಡಳಿತ ವಿರೋಧಿ ಅಲೆಗೆ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗುವುದು ಗ್ಯಾರಂಟೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗೆ ವಕ್ಪ್ ಆಸ್ತಿ ಹೆಸರಿನಲ್ಲಿ ನೋಟಿಸ್ ಕೊಟ್ಟಿರುವುದಕ್ಕೆ ರಾಜ್ಯಾದ್ಯಂತ ಜನರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ ಎಂದು ಹೇಳಿದರು. ಮುಂದುವರಿದ ಅವರು, ಮುಖ್ಯಮಂತ್ರಿಗಳಿಗೆ ತಮ್ಮ ತಪ್ಪಿನ ಅರಿವಾಗಿ ನೋಟಿಸ್ ವಾಪಸ್ ತೆಗೆದುಕೊಳ್ಳಲು ಹೇಳಿದ್ದಾರೆ. ಸರ್ಕಾರ ತಪ್ಪು ಮಾಡದಿದ್ದರೆ ರೈತರಿಗೆ ನೀಡಿದ್ದ ನೋಟಿಸ್ ಯಾಕೆ ವಾಪಸ್ ಪಡೆಯುತ್ತಿದ್ದರು ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.
ವಕ್ಪ್ ಸಚಿವ ಜಮೀರ್ ಅವರು ಮುಖ್ಯಮಂತ್ರಿಗಳ ಆದೇಶದ ಮೇರೆಗೆ ನೊಟೀಸ್ ನೀಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಡಿಸಿಗಳು ವಕ್ಫ್ ಸಚಿವರ ಆದೇಶದ ಮೇರೆಗೆ ನೋಟಿಸ್ ನೀಡಿರುವುದಾಗಿ ಹೇಳಿದ್ದಾರೆ. ಈಗ ಜನ ತಿರುಗಿ ಬೀಳುತ್ತಾರೆ ಎನ್ನುವುದು ಗೊತ್ತಾದ ತಕ್ಷಣ ಯೂ ಟರ್ನ್ ಹೊಡೆಯುತ್ತಿದ್ದಾರೆ. ಇದೊಂದು ರೀತಿ ಯೂ ಟರ್ನ್ ಸರ್ಕಾರ. ಮುಡಾದಲ್ಲಿ ಸೈಟ್ ಪಡೆದು ವಾಪಸ್ ಕೊಡುತ್ತಾರೆ. ವಾಲ್ಮೀಕಿ ನಿಗಮದ ಹಣ ಲೂಟಿ ಮಾಡಿ ಅದನ್ನು ವಾಪಸ್ ಹಾಕುವುದಾಗಿ ಹೇಳುತ್ತಾರೆ. ಈಗ ವಕ್ಪ್ ವಿಚಾರದಲ್ಲಿ ರೈತರಿಗೆ ನೋಟಿಸ್ ನೀಡಿ, ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನೋಟಿಸ್ ವಾಪಸ್ ಪಡೆಯುತ್ತಾರೆ. ರಾಜ್ಯ ಸರ್ಕಾರ ನಿರಂತರವಾಗಿ ಇದೇ ರೀತಿ ಮಾಡುತ್ತಾ ಬಂದಿದೆ ಎಂದು ವಾಗ್ದಾಳಿ ನಡೆಸಿದರು.