ಮುಡಾ ಹಗರಣ ಮುಚ್ಚಿಹಾಕಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿದೆ: ಎಚ್‌ ಡಿ ಕುಮಾರಸ್ವಾಮಿ
x

ಮುಡಾ ಹಗರಣ ಮುಚ್ಚಿಹಾಕಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿದೆ: ಎಚ್‌ ಡಿ ಕುಮಾರಸ್ವಾಮಿ


ಮೈಸೂರಿನ ಮುಡಾ ಹಗರಣವನ್ನು ಮುಚ್ಚಿ ಹಾಕಲು ರಾಜ್ಯ ಕಾಂಗ್ರೆಸ್ ಸರಕಾರ ಹುನ್ನಾರ ನಡೆಸಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಜೆಡಿಎಸ್‌ ಪಕ್ಷದ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಇಡೀ ಹಗರಣದ ಸುತ್ತಮುತ್ತ ನಡೆಯುತ್ತಿರುವ ಘಟನೆಗಳು, ಬೆಳವಣಿಗೆಗಳನ್ನು ಗಮನಿಸಿದರೆ ಇದೊಂದು ದೊಡ್ಡ ಹಗರಣ ಎಂದರೆ ತಪ್ಪಲ್ಲ. ಆದರೆ, ಈ ಹಗರಣವನ್ನು ಮುಚ್ಚಿಹಾಕಲು ಸರ್ಕಾರವೇ ಮುಂದಾಗಿದೆ. ಇದು ಅರ್ಕಾವತಿ ಡಿನೋಟಿಫೈ, ರೀಡೂ ಹಾಗೂ ವಾಚ್ ಹಗರಣದಂತೆ ಇದೆ‌ʼ ಎಂದು ದೂರಿದರು.

ʻʻನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಹಗರಣವೇ ನಡೆದಿಲ್ಲ ಎಂದು ಹೇಳಿದ್ದಾರೆ. ಆದರೆ, ಮೈಸೂರಿಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಹೋಗಿ ಕಂತೆಗಟ್ಟಲೇ ಕಡತಗಳನ್ನು, ದಾಖಲೆಗಳನ್ನು ತುಂಬಿಕೊಂಡು ತಂದವರು ಯಾರು, ಅವರೇ ತಾನೇ?ʼʼ ಎಂದು ಕೇಂದ್ರ ಸಚಿವರು ನೇರ ಆಪಾದನೆ ಮಾಡಿದರು.

ಮೈಸೂರಿನಿಂದ ಹೆಲಿಕಾಪ್ಟರ್ ನಲ್ಲಿ ತಂದ ದಾಖಲೆಗಳನ್ನು ಭೈರತಿ ಸುರೇಶ್ ಎಲ್ಲೆಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ. ಆ ಬಗ್ಗೆ ಮಾಹಿತಿ ಜನರಿಗೆ ಗೊತ್ತಾಗಬೇಕು ಎಂದು ಅವರು ಹೇಳಿದರು.

ʻʻಕಾಂಗ್ರೆಸ್‌ ನಾಯಕರ ಪಿತೂರಿ ನಡೆದಿಲ್ಲ ಎನ್ನುವುದಾದರೆ, ಅಧಿಕಾರಿಗಳನ್ನು ಕಳಿಸಿ ಯಾಕೆ ತನಿಖೆ ಮಾಡುತ್ತಿದ್ದಾರೆ? ದಿಢೀರ್ ವರ್ಗಾವಣೆಗಳು ಯಾಕೆ ಆಗುತ್ತಿವೆ? ವರ್ಗಾವಣೆಗೆ ಗುರಿಯಾದ ಅಧಿಕಾರಿ ಈ ಹಗರಣದ ಬಗ್ಗೆ ಸರ್ಕಾರಕ್ಕೆ ಎಷ್ಟು ಸಲ ದೂರು ನೀಡಿದ್ದರು? ಎಷ್ಟು ಕಡತಗಳನ್ನು, ದಾಖಲೆಗಳನ್ನು ಕಳಿಸಿದ್ದರು? ಎಂಬ ಬಗ್ಗೆ ಹಾದಿಬೀದಿಯಲ್ಲಿ ಚರ್ಚೆ ಆಗುತ್ತಿದೆʼʼ ಎಂದು ಹೇಳಿದರು.

ಹಿಂದೆ ಅರ್ಕಾವತಿ ರೀಡೂ ಹಗರಣ ನಡೆಯಿತಲ್ಲಾ? ಅದು ಎಲ್ಲಿಗೆ ಮುಟ್ಟಿತು? ಅದಕ್ಕೊಂದು ಆಯೋಗ ಮಾಡಿಕೊಂಡು ಹಗರಣ ಮುಚ್ಚಿ ಹಾಕಿದರಲ್ಲವೇ? ಮುಡಾದಲ್ಲಿ ಹದಿನಾಲ್ಕು ನಿವೇಶನಗಳನ್ನು ಅಧಿಕಾರಿಗಳು ಇವರಿಗೆ ರೆಡ್‌ ಕಾರ್ಪೆಟ್ ಹಾಕಿ ಕೊಟ್ಟಿದ್ದಾರೆ ಪಾಪ. ಇವರ ಭೂಮಿಗೆ ಬದಲಾಗಿ ಇವರಿಗೆ ನಿವೇಶನಗಳನ್ನು ಹಂಚಿದ್ದಾರಂತೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ಇವರ ಜಮೀನಿಗೆ ₹62 ಕೋಟಿ ಬೆಲೆ ಕಟ್ಟಿಕೊಂಡಿದ್ದಾರೆ. ಅದರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಅದರ ಬಗ್ಗೆ ನಾನು ಮಾತಾಡಲ್ಲ. ಅವರ ಸಂಪುಟದ ಸದಸ್ಯರೇ ಮಾತನಾಡಲು ರೆಡಿ ಇದ್ದಾರೆ ಎಂದು ಟಾಂಗ್ ಕೊಟ್ಟರು.

Read More
Next Story