ಮಾಂಸದೂಟವನ್ನು ಭಯೋತ್ಪಾದನೆಯಂತೆ ವೈಭವೀಕರಿಸಿದ ಕಾಂಗ್ರೆಸ್: ಎಚ್‌ಡಿಕೆ ಆಕ್ರೋಶ
ಯುಗಾದಿ ಹೊಸತೊಡಕು ಸಂಭ್ರಮಕ್ಕೆ ಅಡ್ಡಿ ಮಾಡುವ ಮೂಲಕ ಕಾಂಗ್ರೆಸ್ ಹಿಂದೂ ಸಂಸ್ಕೃತಿಯ ಮೇಲೆ ತನ್ನ ಕಾಕದೃಷ್ಟಿ ಬೀರಿದೆ ಎಂದು ಜೆಡಿಎಸ್ (ಜಾತ್ಯತೀತ ಜನತಾದಳ) ಆಕ್ರೋಶ ವ್ಯಕ್ತಪಡಿಸಿದೆ.
ಬುಧವಾರ ಬೆಳಿಗ್ಗೆಯಿಂದ ಮಾಂಸದೂಟದ (ಹೊಸತೊಡಕು) ಬಗ್ಗೆ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರ ಮುಂದುವರಿದಿದೆ.
ಯುಗಾದಿ ಹೊಸತೊಡಕು ಸಂಭ್ರಮಕ್ಕೆ ಅಡ್ಡಿ ಮಾಡುವ ಮೂಲಕ ಕಾಂಗ್ರೆಸ್ ಹಿಂದೂ ಸಂಸ್ಕೃತಿಯ ಮೇಲೆ ತನ್ನ ಕಾಕದೃಷ್ಟಿ ಬೀರಿದೆ ಎಂದು ಜೆಡಿಎಸ್ (ಜಾತ್ಯತೀತ ಜನತಾದಳ) ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ, ಯುಗಾದಿ ಹಿಂದೂಗಳ ಹೊಸವರ್ಷ. ಯುಗಾದಿ ಹಿಂದೂಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಸ್ಮಿತೆ. ಈ ಹಬ್ಬದ ಮರುದಿನದ ಮಾಂಸದೂಟ (ಹೊಸತೊಡಕು) ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಮ್ಮ ಸಂಪ್ರದಾಯ, ಸಂಸ್ಕೃತಿ, ಆಚರಣೆಯ ಮೇಲೆ ಕಾಂಗ್ರೆಸ್‌ನವರ ಕಾಕದೃಷ್ಟಿ ಬಿದ್ದಿದೆ. ಬಾಡೂಟವನ್ನು ಭಯೋತ್ಪಾದನೆಯಂತೆ ವೈಭವೀಕರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ನಡೆಯುವಂತೆ ಕುಮಾರಸ್ವಾಮಿ ಅವರ ಮನೆಯಲ್ಲಿಯೂ ಹೊಸತೊಡಕು ಆಚರಣೆ ನಡೆಯುತ್ತಿದೆ. ಅದರಲ್ಲಿ ವಿಶೇಷವೇನೂ ಇಲ್ಲ. ಹೊಸತೊಡಕು ಊಟಕ್ಕೆ ಸಂಬಂಧಿಕರು, ಸ್ನೇಹಿತರು ಹಾಗೂ ರಾಜಕೀಯ ನಾಯಕರನ್ನು ಕುಮಾರಸ್ವಾಮಿ ಆಹ್ವಾನಿಸಿದ್ದಾರೆ. ಮಾಂಸದ ಅಡುಗೆ ಈ ದಿನ ಸಾಮಾನ್ಯ ಆಹಾರ. ಊಟಕ್ಕೂ ಕಲ್ಲು ಹಾಕಿ ಕಾಂಗ್ರೆಸ್ ವಿಕೃತಿ ಮೆರೆದಿದೆ ಎಂದು ಜೆಡಿಎಸ್ ಪಕ್ಷ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದೆ.
ಮತಕ್ಕಾಗಿ ಹಣ, ಹೆಂಡ, ಸೀರೆ, ಕುಕ್ಕರ್, ಪ್ರಿಜ್ಡ್, ಕೂಪನ್ ಹಂಚುವ ಸತ್ಸಂಪ್ರದಾಯ ಹೊಂದಿರುವ ಕಾಂಗ್ರೆಸ್ಸಿಗೆ, ಕಾವೇರಿ ಹೆಸರಿನಲ್ಲಿ ನಡೆಸಿದ ಮೇಕೆದಾಟು ಪಾದಯಾತ್ರೆಯಲ್ಲಿ ನದಿಯಂತೆ ಹರಿದ ಮಾಂಸ, ಮದ್ಯದ ಹೊಳೆಯನ್ನು ಕಾಣದವರು ಯಾರೂ ಇಲ್ಲ. ಆದರೆ, ಆ ಪಕ್ಷದ ಕಾಮಾಲೆ ಕಣ್ಣು ಹಿಂದೂಗಳ ಹಬ್ಬಗಳ ಮೇಲೆಯೇ ಬಿದ್ದಿದೆ. ಜಾತಿ, ಧರ್ಮಗಳ ತುಷ್ಟೀಕರಣ ಜಾಡ್ಯ ಕಾಂಗ್ರೆಸ್ ಪಕ್ಷವನ್ನು ಅಂಟಿಕೊಂಡಿದೆ ಎಂದು ಜೆಡಿಎಸ್ ದೂರಿದೆ.
ಸೋಲಿನ ಹತಾಶೆಯಿಂದ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳನ್ನು ಟೀಕಿಸುವ ಬರದಲ್ಲಿ ಕಾಂಗ್ರೆಸ್ ನಮ್ಮ ಹಿಂದೂ ಸಂಪ್ರದಾಯದ ಬಗ್ಗೆ ಅವಹೇಳನ ಮಾಡಿದೆ. ಅದರ ಕೊಳಕುತನ ಅದರ ಟ್ವೀಟ್ ನಲ್ಲಿ ಎದ್ದು ಕಾಣುತ್ತಿದೆ. ನಿರಂತರವಾಗಿ ಹಿಂದೂ ವಿರೋಧಿ, ದ್ರೋಹಿ ಆಗಿರುವ ಕಾಂಗ್ರೆಸ್ ಪಕ್ಷಕ್ಕೆ ಹೊಸತೊಡಕುಗಿಂತ ಇಫ್ತಾರ್ ಕೂಟದಲ್ಲಿಯೇ ಹೆಚ್ಚು ಪ್ರೀತಿ. ಜನ್ಮದಾರಭ್ಯ ಬಂದಿದ್ದನ್ನು ನಾವಂತೂ ಅವಹೇಳನ ಮಾಡುವುದಿಲ್ಲ ಎಂದು ಪಕ್ಷ ಹೇಳಿದೆ.