ಬೆಳಗಾವಿ ಕಾಂಗ್ರೆಸ್‌ ಕಾರ್ಯಕಾರಿಣಿ | ಚುನಾವಣಾ ಆಯೋಗದ ಪಕ್ಷಪಾತಿ ನಡೆಗೆ ಅಸಮಾಧಾನ
x
ಬೆಳಗಾವಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು

ಬೆಳಗಾವಿ ಕಾಂಗ್ರೆಸ್‌ ಕಾರ್ಯಕಾರಿಣಿ | ಚುನಾವಣಾ ಆಯೋಗದ ಪಕ್ಷಪಾತಿ ನಡೆಗೆ ಅಸಮಾಧಾನ

ಚುನಾವಣಾ ಆಯೋಗದ ಪಕ್ಷಪಾತಿ ಧೋರಣೆಯ ಕುರಿತು ಹಲವು ಪ್ರಶ್ನೆಗಳು ಎದ್ದಿವೆ. ಇಡೀ ಚುನಾವಣಾ ಪ್ರಕ್ರಿಯೆ ಮೇಲೆ ದೇಶದ ಜನ ನಂಬಿಕೆ ಕಳೆದುಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ ಎಂದು ಸಿಡಬ್ಲ್ಯೂಸಿ ಅಧ್ಯಕ್ಷತೆ ವಹಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.


ಬೆಳಗಾವಿಯಲ್ಲಿ ಗುರುವಾರ ನಡೆದ ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ಕಾರ್ಯಕಾರಿಣಿಯಲ್ಲಿ ದೇಶದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಬಿಜೆಪಿ ಹಿಡಿತ ಸಾಧಿಸುತ್ತಿರುವ ಬಗ್ಗೆ ಆತಂಕ ವ್ಯಕ್ತವಾಯಿತು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ಸಭೆಯ ಅಧ್ಯಕ್ಷತೆ ವಹಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೇಶದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಬಿಜೆಪಿ ಹಿಡಿತ ಸಾಧಿಸುತ್ತಿದೆ. ಚುನಾವಣಾ ಆಯೋಗದ ಪಕ್ಷಪಾತಿ ಧೋರಣೆ ಮತ್ತು ಕಾರ್ಯನಿರ್ವಹಣೆಯ ಕುರಿತು ಹಲವು ಪ್ರಶ್ನೆಗಳು ಎದ್ದಿವೆ. ಇಡೀ ಚುನಾವಣಾ ಪ್ರಕ್ರಿಯೆ ಮೇಲೆ ದೇಶದ ಜನತೆ ನಂಬಿಕೆ ಕಳೆದುಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು.

ಚುನಾವಣೆ ಸಂಬಂಧ ನ್ಯಾಯಾಲಯದ ಆದೇಶ ಹಂಚಿಕೊಳ್ಳಬೇಕೆಂಬ ಒಂದೇ ಕಾರಣಕ್ಕೆ ಚುನಾವಣಾ ನಿಯಮವನ್ನೇ ಆಯೋಗ ಬದಲಿಸಿದೆ. ಮತದಾರರ ಪಟ್ಟಿಯಿಂದ ಹೆಸರು ಅಳಿಸಿ ಹೋಗುವುದು, ಪಟ್ಟಿಯಲ್ಲಿ ದಿಢೀರ್ ಮತದಾರರ ಸಂಖ್ಯೆ ಹೆಚ್ಚಳವಾಗುವುದು, ಮತದಾನದ ಕೊನೆಯಲ್ಲಿಅನಿರೀಕ್ಷಿತವಾಗಿ ಮತದಾನದ ಪ್ರಮಾಣ ಹೆಚ್ಚುವುದು ಸೇರಿದಂತೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಪ್ರಶ್ನೆಗಳು ಪ್ರತಿ ಚುನಾವಣೆ ಸಂದರ್ಭದಲ್ಲಿ ಉದ್ಭವಿಸುತ್ತಿರುತ್ತವೆ. ಆದರೆ, ಇದಕ್ಕೆ ಸಮಜಾಯಿಷಿ ನೀಡಬೇಕಾದ ಚುನಾವಣಾ ಆಯೋಗ ವಿತಂಡವಾದ ಮಾಡುತ್ತಿದೆ ಎಂದು ಆರೋಪಿಸಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನ ಕುರಿತು ಅಧಿಕಾರದ ಚುಕ್ಕಾಣಿ ಹಿಡಿದವರ ಧೋರಣೆಯಿಂದ ಚುನಾವಣಾ ಆಯೋಗ ಈ ರೀತಿ ವರ್ತಿಸುತ್ತಿದೆ. ಆದರೆ, ಕಾಂಗ್ರೆಸ್ ಯಾರಿಗೂ ಹೆದರುವುದಿಲ್ಲ. ಜವಹಾರ್ ಲಾಲ್ ನೆಹರೂ- ಮಹಾತ್ಮ ಗಾಂಧೀಜಿಯವರ ವಿಚಾರಧಾರೆ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರು ಉಳಿಸಲು ಕೊನೆಯ ಉಸಿರು ಇರುವವರೆಗೂ ಹೋರಾಡುತ್ತದೆ ಎಂದು ಹೇಳಿದರು.

ಲೋಕಸಭೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತಂತೆ ಅಮಿತ್ ಶಾ ನೀಡಿದ ಹೇಳಿಕೆ ಕುರಿತು ಪ್ರಸ್ತಾಪಿಸಿದ ಖರ್ಗೆ ಅವರು, ಸಂವಿಧಾನದ ಶಿಲ್ಪಿಗೆ ಬಿಜೆಪಿಯಿಂದ ಘೋರ ಅಪಮಾನವಾಗಿದೆ. ಅಧಿಕಾರದ ಚುಕ್ಕಾಣಿ ಹಿಡಿದವರ ಅಂತಹ ಧೋರಣೆಯ ವಿರುದ್ಧ ಕಾಂಗ್ರೆಸ್ ದೇಶವ್ಯಾಪಿ ಪ್ರತಿಭಟನೆ, ಆಕ್ಷೇಪ ದಾಖಲಿಸಿದೆ. ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗಳನ್ನು ಇನ್ನಷ್ಟು ಹೆಚ್ಚಿಸಬೇಕಿದೆ ಎಂದು ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದರೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಹದ್ಯೋಗಿಯ ತಪ್ಪು ಒಪ್ಪಿಕೊಳ್ಳುತ್ತಿಲ್ಲ. ಈ ಇಬ್ಬರೂ ಕೂಡ (ಪ್ರಧಾನಿ ಹಾಗೂ ಗೃಹ ಸಚಿವರು) ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು.

ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸುವ ವೇಳೆ ಉಂಟಾದ ಗದ್ದಲ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗೃಹ ಸಚಿವರ ರಕ್ಷಣೆಗೆ ಧಾವಿಸಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದೂ ಅವರು ಪ್ರಸ್ತಾಪಿಸಿದರು.

ಹೊಸ ವರ್ಷದಿಂದ ಪಕ್ಷ ಸಂಘಟನೆಗೆ ಒತ್ತು

2025 ರ ಹೊಸ ವರ್ಷದಿಂದ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುವುದು. ಪಕ್ಷದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಉದಯಪುರ ಘೋಷಣೆಯನ್ನು ಸಂಪೂರ್ಣವಾಗಿ ಜಾರಿಗೆ ತರುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಈ ಸಂದರ್ಭದಲ್ಲಿ ಘೋಷಿಸಿದರು.

ಪ್ರತಿ ಬೂತ್ ಮಟ್ಟದಲ್ಲಿ ಚುನಾವಣೆ ಗೆಲ್ಲಲು ಅಗತ್ಯವಾದ ಕೌಶಲದೊಂದಿಗೆ ಪಕ್ಷವನ್ನು ಸಂಘಟಿಸಬೇಕಿದೆ ಎಂದು ಕಾರ್ಯಕಾರಿ ಸಮಿತಿಯಲ್ಲಿ ಭಾಗವಹಿಸಿದ್ದ ಆಹ್ವಾನಿತರಿಗೆ ಅವರು ಕರೆ ನೀಡಿದರು.

ಚುನಾವಣೆ ಆಯೋಗದ ಉಡಾಫೆ ಉತ್ತರ: ರಾಹುಲ್‌ ಕಿಡಿ

ಲೋಕಸಭಾ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮಾತನಾಡಿ, ಪಂಚರಾಜ್ಯಗಳ ಚುನಾವಣೆ ಅವಧಿಯಲ್ಲಿ ಮಹಾರಾಷ್ಟ್ರ ವಿಧಾನಸಭೆ ಫಲಿತಾಂಶ ಕುರಿತು ಇಂದಿಗೂ ಗೊಂದಲ ಬಗೆಹರಿದಿಲ್ಲ. ರಾಜಕೀಯ ಪಕ್ಷಗಳಲ್ಲಿರುವ ಅನುಮಾನ ನಿವಾರಣೆ ಮಾಡಬೇಕಾದ ಚುನಾವಣಾ ಆಯೋಗ ಉಡಾಫೆ ಉತ್ತರ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಚುನಾವಣೆ ಫಲಿತಾಂಶದ ಮತದಾನದ ವಿವರ ಪರಿಶೀಲಿಸಿದಾಗ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದ 100 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ 25 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. ಸರಾಸರಿ ಕ್ಷೇತ್ರವಾರು ಏರಿಳಿತಗಳೂ ಇರಲಿಲ್ಲ. ಹೀಗಿದ್ದರೂ ಬಿಜೆಪಿಗೆ ಹೆಚ್ಚು ಮತಗಳು ಬಂದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕಾದ ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ಹೋಗಿ ಎಂಬ ಬೇಜವಾಬ್ದಾರಿ ಉತ್ತರ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರದ ಬಿಜೆಪಿ ಸರ್ಕಾರ ಸಂವಿಧಾನದ ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡುತ್ತಿದೆ. ಸಂವಿಧಾನವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಹೋರಾಟ ನಡೆಸಬೇಕಿದೆ. ನಾವೊಬ್ಬರೇ ಹೋರಾಟ ಮಾಡುವುದರಿಂದ ಏನೂ ಆಗದು. ಎಲ್ಲಾ ಪಕ್ಷಗಳನ್ನು ಒಟ್ಟಾಗಿಸಿ ಹೋರಾಟ ನಡೆಸಬೇಕು ಎಂದು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೇಳಿದರು.

Read More
Next Story