ದೆಹಲಿ ಸ್ಫೋಟವನ್ನು ಕಾಂಗ್ರೆಸ್ ಖಂಡಿಸುತ್ತದೆ, ಇದು ಆರೋಪ ಮಾಡುವ ಸಮಯವಲ್ಲ: ಡಿ.ಕೆ. ಶಿವಕುಮಾರ್
x

ದೆಹಲಿ ಸ್ಫೋಟವನ್ನು ಕಾಂಗ್ರೆಸ್ ಖಂಡಿಸುತ್ತದೆ, ಇದು ಆರೋಪ ಮಾಡುವ ಸಮಯವಲ್ಲ: ಡಿ.ಕೆ. ಶಿವಕುಮಾರ್

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿ ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದರು.


ದೆಹಲಿಯಲ್ಲಿ ನಡೆದಿರುವ ಕಾರು ಸ್ಫೋಟ ಘಟನೆಯನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ಖಂಡಿಸುತ್ತದೆ. ದೇಶದ ಐಕ್ಯತೆ, ಸಮಗ್ರತೆ ಮತ್ತು ಶಾಂತಿ ರಕ್ಷಣೆಗಾಗಿ ನಾವು ಉಗ್ರ ಚಟುವಟಿಕೆಗಳ ವಿರುದ್ಧ ಬಹಳ ಜಾಗರೂಕರಾಗಿ ಇರಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿ ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದರು. "ದೆಹಲಿಯಲ್ಲಾಗಲಿ ಅಥವಾ ಬೇರೆ ಎಲ್ಲೇ ಆಗಲಿ, ನಾವು ಎಚ್ಚರಿಕೆಯಿಂದ ಇರಬೇಕು. ಕರ್ನಾಟಕ ರಾಜ್ಯದ ಭದ್ರತೆಯ ಬಗ್ಗೆ ಗೃಹ ಸಚಿವರು ಪರಿಶೀಲಿಸುತ್ತಿದ್ದು, ಭದ್ರತೆ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಆದೇಶ ನೀಡಿದ್ದಾರೆ. ಇಡೀ ದೇಶದಲ್ಲಿ ಶಾಂತಿ ಸ್ಥಾಪಿಸಲು ನಾವು ಕ್ರಮ ಕೈಗೊಳ್ಳಬೇಕು," ಎಂದು ಹೇಳಿದರು.

ಉಗ್ರರಿಗೆ ಶಿಕ್ಷೆಯಾಗಲಿ

ಈ ಘಟನೆಯ ಕುರಿತು ಕೂಡಲೇ ತನಿಖೆ ನಡೆಸಿ, ಸ್ಫೋಟದ ಹಿಂದಿರುವ ಉಗ್ರರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವುದಾಗಿ ಶಿವಕುಮಾರ್ ತಿಳಿಸಿದರು. "ಪುಲ್ವಾಮಾ ಘಟನೆಯ ನಂತರ ಎಚ್ಚೆತ್ತುಕೊಂಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಇದು ಗುಪ್ತಚರ ಇಲಾಖೆಯ ವೈಫಲ್ಯವೇ?" ಎಂಬ ಪ್ರಶ್ನೆಗೆ, "ಈ ವಿಚಾರದಲ್ಲಿ ನಾನು ಬೇರೆಯವರ ಮೇಲೆ ಆರೋಪ ಮಾಡುವುದಿಲ್ಲ. ಆರೋಪ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಜನಸಾಮಾನ್ಯರನ್ನು ರಕ್ಷಿಸಿ, ಸರ್ಕಾರದ ಗೌರವ ಉಳಿಸಿಕೊಳ್ಳುವುದೇ ನಿಜವಾದ ಪರಿಹಾರ. ಸೂಕ್ತ ಸಮಯ ಬಂದಾಗ ನಾವು ಆರೋಪ ಮಾಡುತ್ತೇವೆ. ಈಗ ನಮ್ಮ ಆದ್ಯತೆ ಜನರ ಜೀವ ಮತ್ತು ಜೀವನವನ್ನು ಉಳಿಸುವುದು," ಎಂದು ಅವರು ಸ್ಪಷ್ಟಪಡಿಸಿದರು.

'ಕಲಾಲೋಕ' ಮಳಿಗೆ ಉದ್ಘಾಟನೆ

ಇದೇ ಸಂದರ್ಭದಲ್ಲಿ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ಕಲಾಲೋಕ' ಮಾರಾಟ ಮಳಿಗೆಯನ್ನು ಉದ್ಘಾಟಿಸಿದ ಬಗ್ಗೆ ಮಾತನಾಡಿದ ಅವರು, "ಚನ್ನಪಟ್ಟಣ ಗೊಂಬೆ, ಬಿದಿರು ಕಲಾಕೃತಿ, ಶ್ರೀಗಂಧ, ಮೈಸೂರು ರೇಷ್ಮೆ, ಕರಕುಶಲ ವಸ್ತುಗಳು, ಸಾಬೂನು, ಕೈಮಗ್ಗ ಮತ್ತು ಕಾಫಿ ಉತ್ಪನ್ನಗಳಂತಹ ನಮ್ಮ ರಾಜ್ಯದ ಉತ್ಪನ್ನಗಳನ್ನು ಹೊರ ರಾಜ್ಯ ಹಾಗೂ ದೇಶಗಳಿಂದ ಬರುವ ಜನರಿಗೆ ಪರಿಚಯಿಸಲು ಈ ಮಳಿಗೆಯನ್ನು ಆರಂಭಿಸಲಾಗಿದೆ," ಎಂದು ತಿಳಿಸಿದರು.

ತಮ್ಮ ದೆಹಲಿ ಭೇಟಿಯ ಕುರಿತು ಕೇಳಿದ ಪ್ರಶ್ನೆಗೆ, "ಮತ ಕಳ್ಳತನದ ವಿರುದ್ಧ ನಡೆಸಿದ ಸಹಿ ಸಂಗ್ರಹ ಅಭಿಯಾನದ ದಾಖಲೆಗಳನ್ನು ಸಲ್ಲಿಸಲು ಹೋಗಿದ್ದೆ. ಅವುಗಳನ್ನು ಸಲ್ಲಿಸಿ ಬಂದಿದ್ದು, ಇನ್ನಷ್ಟು ದಾಖಲೆಗಳನ್ನು ಶೀಘ್ರದಲ್ಲೇ ತಲುಪಿಸುತ್ತೇವೆ," ಎಂದು ಉತ್ತರಿಸಿದರು.

Read More
Next Story