ಮತಗಟ್ಟೆ ಸಮೀಕ್ಷೆ ತಳಮಳ: ಶಾಸಕರಿಗೆ ಧೈರ್ಯ ತುಂಬಿದ ಸಿಎಂ, ಡಿಸಿಎಂ
ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ಶನಿವಾರ ಸಂಜೆ ಎಲ್ಲ ಮಾಧ್ಯಮಗಳಲ್ಲಿ ವಿವಿಧ ಏಜೆನ್ಸಿಗಳ ಮತಗಟ್ಟೆ ಸಮೀಕ್ಷೆಗಳು ಬಿತ್ತರಗೊಂಡಿವೆ. ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಾಯಕರು ಆತಂಕಗೊಂಡಿದ್ದಾರೆ. ಭಾನುವಾರ ನಡೆದ ಸಿಎಲ್‌ಪಿ (ಕಾಂಗ್ರೆಸ್ ಶಾಸಕಾಂಗ ಸಭೆ)ಯಲ್ಲಿ ಚರ್ಚೆಯಾಗಿದೆ.
ಎಲ್ಲ ಏಜೆನಿಸಗಳ ಮತಗಟ್ಟೆ ಸಮೀಕ್ಷೆಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎಗೆ ಭರ್ಜರಿ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿವೆ. ಇಂಡಿಯಾ ಮೈತ್ರಿಕೂಟ 150 ಸ್ಥಾನಗಳಿಂದ 200ರ ಒಳಗೆ ಗೆಲ್ಲಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಇದು ಕಾಂಗ್ರೆಸ್ ಪಾಳಯದಲ್ಲಿ ತಳಮಳ ಸೃಷ್ಟಿಗೆ ಕಾರಣವಾಗಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಎರಡಂಕಿ ದಾಟುವುದಿಲ್ಲ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಇದು ಕೈ ಶಾಸಕರಲ್ಲಿ ಕಳವಳ ತಂದಿಟ್ಟಿದೆ. ಹೀಗಾಗಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಸಿದ್ದರಾಮಯ್ಯ ಭಾನುವಾರ ರಾತ್ರಿ ಶಾಸಕಾಂಗ ಸಭೆ ಕರೆದಿದ್ದರು. ಸಭೆಯಲ್ಲಿ ಮತದಾನೋತ್ತರ ಸಮೀಕ್ಷಾ ವರದಿ, ಲೋಕಸಭೆ ಚುನಾವಣೆ ಫಲಿತಾಂಶ, ಪರಿಷತ್ ಚುನಾವಣೆಗಳ ಬಗ್ಗೆ ಚರ್ಚೆ ನಡೆಸಿದವು.
ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‌ಗೆ ಸಂಕಷ್ಟ ಎಂದು ರಾಜ್ಯ ಕಾಂಗ್ರೆಸ್‌ನ ಶಾಸಕರು ಆತಂಕಗೊಂಡಿದ್ದಾರೆ. ನಿನ್ನೆ ಸಿಎಲ್‌ಪಿ ಸಭೆಯಲ್ಲಿ ಸಿಎಂ, ಡಿಸಿಎಂ ಇದೇ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಧೈರ್ಯ ತುಂಬಿದ್ದಾರೆ. ಮತದಾನೋತ್ತರ ಸಮೀಕ್ಷೆ ವರದಿ ನೋಡಿ ಯಾರೂ ಧೃತಿಗೆಬೇಡಿ. ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದೇವೆ. ಕ್ಷೇತ್ರಗಳಲ್ಲಿ ಭಿನ್ನಾಭಿಪ್ರಾಯವಿಲ್ಲದೆ ಕೆಲಸ ಮಾಡಿದ್ದೇವೆ. ಚುನಾವಣೆ ಬಗ್ಗೆ ನಾವು ಕೂಡ ವರದಿ ತರಿಸಿಕೊಂಡಿದ್ದೇವೆ. ಏನೇ ಆದರೂ ಕರ್ನಾಟಕದಲ್ಲಿ ನಾವು ಎರಡಂಕಿ ದಾಟುತ್ತೇವೆ. ಗುಪ್ತಚರ ಇಲಾಖೆ ವರದಿ ಪ್ರಕಾರ 14-18 ಸ್ಥಾನಗಳಲ್ಲಿ ಗೆಲ್ಲುವ ಅವಕಾಶವಿದೆ. ಹೀಗಾಗಿ ಯಾರೂ ಕೂಡ ಧೃತಿಗೆಡುವ ಅವಶ್ಯಕತೆಯಿಲ್ಲ ಎಂದು ಕೈ ಶಾಸಕರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಧೈರ್ಯ ತುಂಬಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ʻʻಎಲ್ಲಾ ಮಾಧ್ಯಮಗಳು ಯಾಕೆ ಆ ರೀತಿ ವರದಿ ಕೊಟ್ಟಿವೆ ಎನ್ನುವ ಬಗ್ಗೆ ಗೊತ್ತಿಲ್ಲ. ಅದೇನೆ ಇರಲಿ ನಾವು ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಇಂಡಿಯಾ ಮೈತ್ರಿಕೂಟಕ್ಕೂ ಗೆಲುವು ಆಗಲಿದೆ. ಇಂದಿನ ಎಐಸಿಸಿ ಅಧ್ಯಕ್ಷರ ಜೊತೆಗಿನ ಸಭೆಯಲ್ಲೂ ಅದೇ ವಿಶ್ವಾಸ ವ್ಯಕ್ತವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಲ್‌ಪಿ ಸಭೆಯಲ್ಲಿ ಹೇಳಿದ್ದಾರೆ.