
ವಿಧಾನಸಭೆ: ಪಕ್ಷ ಬೇಧ ಮರೆತು ಮನಮೋಹನ್ ಸಿಂಗ್ ಕೊಂಡಾಡಿದ ಸದಸ್ಯರು
ಮಾಜಿ ಪ್ರಧಾನಿ ದಿ. ಮನಮೋಹನ್ ಸಿಂಗ್ ಸೇರಿದಂತೆ ಸಾಹಿತಿ ನಾ. ಡಿಸೋಜಾ, ಮಾಜಿ ಸಂಸದ ಎಂ. ಶ್ರೀನಿವಾಸ, ನಿರ್ದೇಶಕ ಶ್ಯಾಮ್ ಬೆನಗಲ್, ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು.
ಭಾರತ ಆರ್ಥಿಕ ಭಿಕ್ಕಟ್ಟನ್ನು ಎದುರಿಸುತ್ತಿರುವಾಗ ಅದಕ್ಕೆ ಪರಿಹಾರ ಕಂಡುಹಿಡಿದಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್. ಅಧಿಕಾರದಲ್ಲಿದ್ದಾಗ ಪ್ರಮಾಣಿಕರಾಗಿರುವವರು ಬಹಳ ಕಷ್ಟ. ಕಲವೇ ಪ್ರಾಮಾಣಿಕ ಪ್ರಧಾನಮಂತ್ರಿಗಳಲ್ಲಿ ಇವರೂ ಒಬ್ಬರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.
ಜಂಟಿ ಅಧಿವೇಶನದ ಬಳಿಕ ವಿಧಾನಸಭೆಯಲ್ಲಿ ಸಂತಾಪ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮನಮೋಹನ್ ಸಿಂಗ್ ಮಿತಭಾಷಿ. 6 ಬಾರಿ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಅವರು ಕೇವಲ ಆರ್ಥಿಕಶಾಸ್ತ್ರಜ್ಞ ಮಾತ್ರವಲ್ಲ. ಅವರು ಹಲವು ಹುದ್ದೆಗಳನ್ನು ಅಲಂಕರಿಸಿದ್ದರು. ತಮ್ಮ ಕೊನೆಯ ಕಾಲದವರೆಗೂ ದೇಶದ ಸೇವೆಯನ್ನು ಮಾಡಿದ್ದರು. ದೇಶದ ಪರಿವರ್ತನೆಯಲ್ಲಿ ಪ್ರಮುಖರು. ದೇಶದ ಬಡ ಜನರಿಗೆ ಆಹಾರ ಭದ್ರತೆ ಕಾಯಿದೆಯನ್ನು ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಅವರು ಎಂದು ಸಿಎಂ ಸಿದ್ದರಾಮಯ್ಯ ಗೌರವ ಅರ್ಪಿಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ
ಸಂತಾಪಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 'ಮನಮೋಹನ್ ಸಿಂಗ್ ಕಾಣಿಕೆ ನಾವು ಮರೆಯಲು ಸಾಧ್ಯವಿಲ್ಲ. ಅವರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಯಶವಂತಪುರ, ನೆಲಮಂಗಲ, ಯಲಹಂಕ, ಏರ್ಪೋರ್ಟ್ ಫ್ಲೈ ಓವರ್ ಕೊಟ್ಟವರು ಅವರು. ನರೇಗಾ ಯೋಜನೆ ತಂದಿದ್ದು ಮನಮೋಹನ್ ಸಿಂಗ್. ಜೊತೆಗೆ ಆರ್ಟಿಐ ಹಾಗೂ ಆರ್ಟಿಇ ಜಾರಿಗೆ ತರುವುದರ ಜೊತೆಗೆ ಹಲವು ಮಹತ್ವದ ಯೋಜನೆಗಳನ್ನ ಜಾರಿಗೆ ತಂದರು. ಬೆಂಗಳೂರು ಜಾಗತಿಕವಾಗಿ ಬೆಳೆಯಲು, ಗುರುತಿಸಿಕೊಳ್ಳಲು ದೊಡ್ಡ ಕೊಡುಗೆ ನೀಡಿದ ವ್ಯಕ್ತಿ ಮನಮೋಹನ್ ಸಿಂಗ್ ಎಂದು ನೆನಪಿಸಿಕೊಂಡರು.
ಮನಮೋಹನ್ ಸಿಂಗ್ ಸೇವೆ ಸ್ಮರಿಸಿದ ಆರ್. ಆಶೋಕ್
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, 'ಮನಮೋಹನ್ ಸಿಂಗ್ ಅವರಂತಹ ನಾಯಕನನ್ನು ನಾವು ಮತ್ತೆ ನೋಡುವುದಕ್ಕೆ ಆಗುವುದಿಲ್ಲ. ದೇಶ ಕಷ್ಟದ ಕಾಲದಲ್ಲಿ ಇದ್ದಾಗ ಆರ್ಥಿಕ ಸಚಿವರಾಗಿ ಕೆಲಸ ಮಾಡಿದರು. ಪ್ರಧಾನಿಗಳ ಸಲಹೆಗಾರರಾಗಿ, ಆರ್ಥಿಕ ಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಆರ್ಥಿಕತಜ್ಞ ಎಂದು ಕರೆಯಿಸಿಕೊಂಡಿದ್ದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ನೆನಪಿಸಿಕೊಂಡರು.
ಮನಮೋಹನ್ ಸಿಂಗ್ ಮೌನಿ ಬಾಬಾ ಅಲ್ಲ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಮೌನಿ ಬಾಬಾ, ಮೌನಿ ಬಾಬಾ ಎಂದು ಕರೆದರು ಎಂದು ಸಚಿವ ಎಚ್.ಕೆ. ಪಾಟೀಲ್ ನೆನಪಿಸಿಕೊಂಡರು. ಅತ್ಯಂತ ಹೆಚ್ಚು ಕೆಲಸ ಮಾಡಿದ್ದ ವ್ಯಕ್ತಿಯನ್ನು ಹೀಗೆ ಕರೆದಿದ್ದರು. ಜೊತೆಗೆ ಪ್ರಪಂಚ ಕಂಡ ಅತ್ಯಂತ ಪ್ರಾಮಾಣಿಕ ವ್ಯಕ್ತಿಗೆ ಇಡಿ ಇಲಾಖೆ ನೋಟೀಸ್ ಕೊಟ್ಟಿತ್ತು. ಮನಮೋಹನ್ ಸಿಂಗ್ ಆಡಳಿತದಿಂದ ಅತ್ಯಂತ ಹೆಚ್ಚು ಲಾಭ ಪಡೆದಿದ್ದು ನಮ್ಮ ರಾಜ್ಯ ಕರ್ನಾಟಕ ಎಂದು ಪಾಟೀಲ್ ನೆನಪಿಸಿಕೊಂಡರು. ಜೊತೆಗೆ ಅವರ ಹಸರಿನಲ್ಲಿ ಅರ್ಥಶಾಸ್ತ್ರದ ಒಂದು ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದ ಎಚ್.ಕೆ. ಪಾಟೀಲ್ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದರು.
ಪ್ರಧಾನಿ ಮಾಡಿದ್ದು ಸೋನಿಯಾ ಗಾಂಧಿ
ಇನ್ನು ಸಂತಾಪ ಸೂಚನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಜಿ.ಟಿ. ದೇವೇಗೌಡ ಅವರು ಮನಮೋಹನ್ ಸಿಂಗ್ ಕೊಡುಗೆಗಳನ್ನು ಸ್ಮರಿಸಿಕೊಂಡರು. ಇದೇ ವೇಳೆ ಸೋನಿಯಾ ಗಾಂಧಿ ಅವರನ್ನು ಹೊಗಳಿಸ ಜಿಟಿಡಿ, ಮನಮೋಹನ್ ಸಿಂಗ್ ಅವರಂತಹ ಧೀಮಂತರನ್ನ ಪ್ರಧಾನಿ ಮಾಡಿದ್ದು ಸೋನಿಯಾ ಗಾಂಧಿ ಎಂದರು.
ಇದೇ ಸಂದರ್ಭದಲ್ಲಿ ಸಾಹಿತಿ ನಾ. ಡಿಸೋಜಾ, ಮಾಜಿ ಸಂಸದ ಎಂ. ಶ್ರೀನಿವಾಸ, ನಿರ್ದೇಶಕ ಶ್ಯಾಮ್ ಬೆನಗಲ್, ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು.