
ಸಾಂದರ್ಭಿಕ ಚಿತ್ರ
ಕಡ್ಡಾಯ ಕನ್ನಡ ಪರೀಕ್ಷೆ, ಯಾರು ಬರೆಯಬೇಕು, ಯಾರಿಗೆ ವಿನಾಯ್ತಿ ? ಕೆಇಎ ಸ್ಪಷ್ಟನೆ
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ಬಹು ಆಯ್ಕೆ ಮಾದರಿ ಪತ್ರಿಕೆಯಾಗಿದ್ದು, ಗರಿಷ್ಠ 150 ಅಂಕಗಳನ್ನು ಒಳಗೊಂಡಿರುತ್ತದೆ ಮತ್ತು ಅಭ್ಯರ್ಥಿಗಳು ಇದರಲ್ಲಿ ಅರ್ಹತೆ ಗಳಿಸಲು ಕನಿಷ್ಠ 50 ಅಂಕಗಳನ್ನು ಗಳಿಸತಕ್ಕದ್ದು ಎಂದು ಕೆಇಎ ತಿಳಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಆರಂಭಿಸಿದೆ. ಆದರೆ ಅರ್ಜಿ ಸಲ್ಲಿಸಿರುವ ಸ್ಪರ್ಧಾರ್ಥಿಗಳು ಕಡ್ಡಾಯ ಕನ್ನಡ ಪರೀಕ್ಷೆ ಬರೆಯಬೇಕೇ ಅಥವಾ ಅದರಿಂದ ವಿನಾಯಿತಿ ಇದೆಯೇ ಎಂಬ ಗೊಂದಲಕ್ಕೆ ಕೆಇಎ ಸ್ಪಷ್ಟನೆ ನೀಡಿದೆ.
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಸಾಮನ್ಯ ಹಾಗೂ ನಿರ್ಧಿಷ್ಟ ಪತ್ರಿಕೆಗಳೊಡನೆ ಕಡ್ಡಾಯ ಕನ್ನಡ ಪತ್ರಿಕೆಯನ್ನು ಬರೆಯಬೇಕು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ ಈ ಕುರಿತು ಪರೀಕ್ಷಾರ್ಥಿಗಳಲ್ಲಿ ಅನೇಕ ಗೊಂದಲ ಉಂಟಾಗಿದ್ದರಿಂದ ಇದೀಗ ಕೆಇಎ ಸ್ಪಷ್ಟನೆ ನೀಡಿದ್ದು, ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ವ್ಯಾಸಂಗ ಮಾಡಿದ್ದಲ್ಲಿ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಥವಾ ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸಲಾದ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾದಲ್ಲಿ ಕಡ್ಡಾಯ ಕನ್ನಡ ಪರೀಕ್ಷೆಯಿಂದ ವಿನಾಯತಿ ನೀಡಲಾಗುತ್ತದೆ ಎಂದು ತಿಳಿಸಿದೆ.
ಉಳಿದ ಅಭ್ಯರ್ಥಿಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ಬಹು ಆಯ್ಕೆ ಮಾದರಿ ಪತ್ರಿಕೆಯಾಗಿದ್ದು, ಗರಿಷ್ಠ 150 ಅಂಕಗಳನ್ನು ಒಳಗೊಂಡಿರುತ್ತದೆ ಮತ್ತು ಅಭ್ಯರ್ಥಿಗಳು ಇದರಲ್ಲಿ ಅರ್ಹತೆ ಗಳಿಸಲು ಕನಿಷ್ಠ 50 ಅಂಕಗಳನ್ನು ಗಳಿಸತಕ್ಕದ್ದು. ಗೈರು ಹಾಜರಾದ ಅಥವಾ ಕನಿಷ್ಠ 50 ಅಂಕಗಳನ್ನು ಗಳಿಸದ ಅಭ್ಯರ್ಥಿಗಳು ಆಯ್ಕೆಗೆ ಅರ್ಹರಾಗುವುದಿಲ್ಲ. ಈ ಪ್ರಶ್ನೆಪತ್ರಿಕೆಯನ್ನು ಎಸ್‌ಎಸ್‌ಎಲ್‌ಸಿ ಹಂತದಲ್ಲಿನ ಪ್ರಥಮ ಭಾಷೆ ಕನ್ನಡವನ್ನು ಮಾನದಂಡವನ್ನಾಗಿಟ್ಟಕೊಂಡು ಸಿದ್ಧಪಡಿಸಲಾಗುವುದು. ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಜೇಷ್ಠತೆಗೆ ಅಥವಾ ಹುದ್ದೆಗಳ ಆಯ್ಕೆಗೆ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಕರ್ನಾಟಕ ಸೋಪ್ ಆ್ಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL), ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC), ಕಲ್ಯಾಣ ಕರ್ನಾಟಕ ಸಾರಿಗೆ (KKRTC), ಕೃಷಿ ಮಾರಾಟ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಯಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಕ್ಟೋಬರ್ 31, 2025 ಕೊನೆಯ ದಿನಾಂಕವಾಗಿದೆ.
ಶುಲ್ಕ ಕಡಿಮೆ ಮಾಡುವಂತೆ ಒತ್ತಾಯ
ಕೆಇಎ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವುದು ಸ್ಪರ್ಧಾರ್ಥಿಗಳಲ್ಲಿ ಸಂತಸ ತಂದಿದೆ, ಆದರೆ ಶುಲ್ಕ ಹೆಚ್ಚಳವಾಗಿದ್ದು ಕಡಿಮೆ ಮಾಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಸಾಮಾನ್ಯ ಮತ್ತು ಹಿಂದುಳಿದ ವರ್ಗ (2A, 2B, 3A, 3B): ಒಂದು ಅರ್ಜಿಗೆ 750 ರೂಪಾಯಿ ನಿಗದಿಪಡಿಸಲಾಗಿದೆ. ಅಭ್ಯರ್ಥಿಯು ಸಲ್ಲಿಸುವ ಪ್ರತಿಯೊಂದು ಹೆಚ್ಚುವರಿ ಹುದ್ದೆಗೆ ತಲಾ 100 ರೂಪಾಯಿ ಹೆಚ್ಚುವರಿ ಶುಲ್ಕ ಪಾವತಿಸಬೇಕು. ಇದರಿಂದಾಗಿ, ಒಬ್ಬ ಅಭ್ಯರ್ಥಿ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೆ ಸುಮಾರು 2,100 ರೂಪಾಯಿ ಪಾವತಿಸಬೇಕಾಗುತ್ತದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1: ಈ ವರ್ಗದ ಅಭ್ಯರ್ಥಿಗಳಿಗೆ 500 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಇವರೂ ಸಹ ಪ್ರತಿ ಹೆಚ್ಚುವರಿ ಅರ್ಜಿಗೆ 100 ರೂಪಾಯಿ ಪ್ರತ್ಯೇಕ ಶುಲ್ಕ ಪಾವತಿಸಬೇಕು. ಇದರಿಂದ ಇವರು ಸುಮಾರು 1,600 ರೂಪಾಯಿ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ.

