C T Ravi Case | ಸಚಿವೆಗೆ ಅಶ್ಲೀಲ ನಿಂದನೆ: ಸಿ ಟಿ ರವಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು
x
ಸಿ.ಟಿ ರವಿ ವಿರುದ್ಧ ಕೆಪಿಸಿಸಿ ಮಹಿಳಾ ಆಯೋಗಕ್ಕೆ ದೂರು ನೀಡಿದೆ

C T Ravi Case | ಸಚಿವೆಗೆ ಅಶ್ಲೀಲ ನಿಂದನೆ: ಸಿ ಟಿ ರವಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

ಸಿ.ಟಿ. ರವಿ ವಿರುದ್ಧ ಕ್ರಮ ಕೈಗೊಳ್ಳಲು ಸಭಾಪತಿಗೆ ಪತ್ರ ಬರೆಯುವುದಾಗಿ ರಾಜ್ಯ ಮಹಿಳಾ ಆಯೋಗ ಹೇಳಿದೆ.


ಬೆಳಗಾವಿ ಅಧಿವೇಶನದ ಕಲಾಪದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸಿ.ಟಿ ರವಿ ಅವರನ್ನು ಪೊಲೀಸರು ಬಂಧಿಸಿದ್ದು, ಈ ಮಧ್ಯೆ ಸಿ ಟಿ ರವಿ ವಿರುದ್ಧ ಮಹಿಳಾ ಆಯೋಗಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ದೂರು ನೀಡಿದೆ.

ದೂರಿನಲ್ಲೇನಿದೆ?

ಬೆಳಗಾವಿ ಅಧಿವೇಶನ ನಡೆಯುತ್ತಿದ್ದ ಸುವರ್ಣ ಸೌಧದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಕ್ಟರ್ ಅವರಿಗೆ ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ. ರವಿ ಅವರು ಅಸಭ್ಯ ಮತ್ತು ಅಸಂವಿಧಾನಿಕ ಪದ ಬಳಕೆ ಮಾಡಿ ಅಪಮಾನಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ.

ಮಾಜಿ ಮಂತ್ರಿಯಾಗಿದ್ದು, ಹೆಣ್ಣು ಮಕ್ಕಳ ಬಗ್ಗೆ ಅಪಾರ ಕಾಳಜಿ, ಗೌರವ ಹೊಂದಿರಬೇಕಾದ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯೇ ಘನತೆವೆತ್ತ ಸದನದಲ್ಲಿ ಮಹಿಳಾ ಮಂತ್ರಿಯೊಬ್ಬರ ವಿರುದ್ಧ ಅತೀ ಕೀಳು ಮಟ್ಟದ ಅಸಾಂವಿಧಾನಿಕ ಪದ ಪ್ರಯೋಗ ಮಾಡಿದ್ದಾರೆ. ಅದು ನಾಡಿನ ಇಡೀ ಹೆಣ್ಣು ಕುಲಕ್ಕೇ, ಅವರ ಭಾವನೆಗಳಿಗೆ, ಅವರ ಘನತೆಗೆ ಉಂಟು ಮಾಡಿರುವ ಅಪಮಾನ. ಹಾಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕೆ.ಜಿ‌.ರಸ್ತೆಯ ರಾಜ್ಯ ಮಹಿಳಾ‌ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ, ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಸುವರ್ಣಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಿ.ಟಿ ರವಿ ಅವರು ಅವಾಚ್ಯ ಪದಗಳಿಂದ ನಿಂದಿಸಿರುವುದಾಗಿ ಸಭಾಪತಿ ಅವರಿಗೆ ದೂರನ್ನು ನೀಡಿದ್ದಾರೆ. ಆ ದೃಶ್ಯಾವಳಿಗಳನ್ನು ಮಾಧ್ಯಮಗಳ ಮೂಲಕ ಗಮನಿಸಿದ್ದೇವೆ. ವಿಧಾನ ಪರಿಷತ್ ಸದಸ್ಯರು ಸಹ ದೂರನ್ನು ಕೊಡುತ್ತಾರೆ. ಸಭಾಪತಿಗಳ ಜೊತೆಯೂ ನಾನು ಮಾತನಾಡಿದೆ. ಪರಸ್ಪರ ಇಬ್ಬರೂ ಮಾತುಗಳನ್ನ ಆಡಿದ್ದಾರೆ, ಕಲಾಪದ ಮುಂದೂಡಿಕೆ ಆದ ಮೇಲೆ ವಾಕ್ಸಮರ ನಡೆದಿದೆ. ಸಭಾಪತಿಗಳಿಗೆ ಪತ್ರ ಬರೆದಿದ್ದೇನೆ, ಉನ್ನತ ಮಟ್ಟದ ತನಿಖಾ‌ ತಂಡ ರಚಿಸಬೇಕಿದೆ. ಏನಾಗಿದೆ ಎನ್ನುವುದನ್ನು ಪರಿಶೀಲನೆ ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗದ ವಿರುದ್ಧ ಬಿಜೆಪಿ ಮಹಿಳಾ ಮೋರ್ಛಾ ರಾಜ್ಯಾಧ್ಯಕ್ಷೆ ಸಿ. ಮಂಜುಳಾ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಮಹಿಳಾ ಆಯೋಗ ಸಿ.ಟಿ. ರವಿ ಅವರ ಮೇಲೆ ಕ್ರಮಕ್ಕೆ ಸಭಾಪತಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಮಹಿಳೆಯರ ವಿರುದ್ಧ ಹೇಳಿಕೆ ಬಂದಾಗ ಒಪ್ಪಲು ಸಾಧ್ಯವಿಲ್ಲ. ಆದರೆ ಮಹಿಳಾ ಆಯೋಗ ರಾಜ್ಯದ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಬಾಣಂತಿಯರ ಸಾವಿನ ಬಗ್ಗೆ ಧ್ವನಿ ಎತ್ತಿಲ್ಲ. ಆದರೆ ಪಕ್ಷದ ವಿಚಾರ ಬಂದಾಗ ಮಹಿಳಾ ಆಯೋಗದ ಅಧ್ಯಕ್ಷರು ಧ್ವನಿ ಎತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More
Next Story