Commission Scam in BOVI Corporation: Nikhil Kumaraswamy Demands Siddaramaiah Government’s Resignation
x

ಜೆಡಿಎಸ್‌ ಯುವ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ 

ಭೋವಿ ನಿಗಮದಲ್ಲಿ ಕಮಿಷನ್ ಹಗರಣ: ಸಿದ್ದರಾಮಯ್ಯ ಸರ್ಕಾರದ ರಾಜೀನಾಮೆಗೆ ನಿಖಿಲ್ ಕುಮಾರಸ್ವಾಮಿ ಆಗ್ರಹ

ಭೋವಿ ಅಭಿವೃದ್ಧಿ ನಿಗಮದಲ್ಲಿ ಫಲಾನುಭವಿಗಳಿಗೆ ಅನುದಾನ ನೀಡಲು ನಿಗಮದ ಅಧ್ಯಕ್ಷರೇ ಕಮಿಷನ್ ಕೇಳುತ್ತಿರುವ ಹಗರಣ ಜಗಜ್ಜಾಹೀರಾಗಿದೆ ಎಂದು ಯುವ ಜೆಡಿಎಸ್‌ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದ್ದಾರೆ.


"ವಾಲ್ಮೀಕಿ ನಿಗಮ ಮತ್ತು ಎಸ್​​ಸಿಸಿಪಿ /ಟಿಎಸ್​​ಪಿ ನಿಧಿ ದುರ್ಬಳಕೆಯ ನಂತರ, ಇದೀಗ ಭೋವಿ ಅಭಿವೃದ್ಧಿ ನಿಗಮದಲ್ಲಿ ಮತ್ತೊಂದು ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, ಇದು ಸಿದ್ದರಾಮಯ್ಯ ಸರ್ಕಾರದ ದಲಿತ ವಿರೋಧಿ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ" ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, "ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಮೀಸಲಾದ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿಗಳನ್ನು ನುಂಗಿ ನೀರು ಕುಡಿದ ಸಿದ್ದರಾಮಯ್ಯ ಸರ್ಕಾರ, ಅಷ್ಟಕ್ಕೇ ಸುಮ್ಮನಾಗದೆ ಎಸ್​ಸಿಎಸ್​​ಪಿ/ಟಿಎಸ್​​ಪಿ ನಿಧಿಯ ಹಣವನ್ನು ಬೇರೆಡೆಗೆ ವರ್ಗಾಯಿಸಿ ದಲಿತರಿಗೆ ಅನ್ಯಾಯ ಮಾಡಿತ್ತು. ಆ ಕಹಿ ಘಟನೆ ಮಾಸುವ ಮುನ್ನವೇ, ಈಗ ಭೋವಿ ಅಭಿವೃದ್ಧಿ ನಿಗಮದಲ್ಲಿ ಫಲಾನುಭವಿಗಳಿಗೆ ಅನುದಾನ ನೀಡಲು ನಿಗಮದ ಅಧ್ಯಕ್ಷರೇ ಕಮಿಷನ್ ಕೇಳುತ್ತಿರುವ ಹಗರಣ ಜಗಜ್ಜಾಹೀರಾಗಿದೆ" ಎಂದು ಆರೋಪಿಸಿದ್ದಾರೆ.

25 ಲಕ್ಷಕ್ಕೆ ₹5 ಲಕ್ಷ ರೂಪಾಯಿ ಕಮಿಷನ್

'ಭೂ ಒಡೆತನ' ಯೋಜನೆಯಡಿ ಭೂಮಿ ಮಂಜೂರಾದ ಫಲಾನುಭವಿಗಳಿಗೆ 25 ಲಕ್ಷ ರೂಪಾಯಿ ಸಹಾಯಧನ ಬಿಡುಗಡೆ ಮಾಡಲು, ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್ ಅವರು 5 ಲಕ್ಷ ರೂಪಾಯಿ ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. "ಭ್ರಷ್ಟಾಚಾರದಲ್ಲಿ ಮುಳುಗಿರುವ ನಿಗಮದ ಅಧ್ಯಕ್ಷರ ವಿರುದ್ಧ ಸರ್ಕಾರವು ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಅವರು ಒತ್ತಾಯಿಸಿದ್ದಾರೆ.

ಸಿಎಂ, ಡಿಸಿಎಂ ರಾಜೀನಾಮೆ ನೀಡಲಿ

"ಈ ದಲಿತ ವಿರೋಧಿ ಸರ್ಕಾರವನ್ನು ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ತಕ್ಷಣವೇ ರಾಜೀನಾಮೆ ನೀಡಬೇಕು" ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Read More
Next Story