Commission ready for GBA elections, instructions to prepare ward-wise voter list
x

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕೇಂದ್ರ ಕಚೇರಿ

ಜಿಬಿಎ ಚುನಾವಣೆಗೆ ಆಯೋಗ ಸಿದ್ದತೆ, ವಾರ್ಡ್‌ವಾರು ಮತದಾರರ ಪಟ್ಟಿ ಸಿದ್ದತೆಗೆ ಸೂಚನೆ

ಅಪರ ಜಿಲ್ಲಾ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಪ್ರತಿ ವಾರ್ಡ್‌ನ ಗಡಿಸರಹದ್ದು ರೇಖೆ ಒಳಗೆ ಬರುವ ವಿಧಾನಸಭಾ ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು ಗುರುತಿಸಿಕೊಂಡು ಫಾರ್ಮ್ ಟು ಮ್ಯಾಟ್ರಿಕ್ಸ್ ತಯಾರಿಸಬೇಕು ಎಂದು ಆಯೋಗ ತಿಳಿಸಿದೆ.


Click the Play button to hear this message in audio format

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯನ್ನು ವಿಭಜಿಸಿದ ನಂತರ ರಾಜ್ಯ ಸರ್ಕಾರ ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ನಡೆಸಲು ಸಿದ್ದತೆ ನಡೆಸಿದೆ. ಅದರ ಭಾಗವಾಗಿ ಚುನಾವಣಾ ಆಯೋಗ ವಾರ್ಡ್‌ವಾರು ಮತದಾರರ ಪಟ್ಟಿ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಈ ಕುರಿತು ಸೂಚನೆ ನೀಡಿರುವ ರಾಜ್ಯ ಚುನಾವಣಾ ಆಯೋಗ, ಜಿಬಿಎ ವ್ಯಾಪ್ತಿಯ ಐದು ನಗರಪಾಲಿಕೆಗಳ ವ್ಯಾಪ್ತಿಯ 368 ವಾರ್ಡ್‌ವಾರು ಮತದಾರದ ಪಟ್ಟಿ ತಯಾರಿಸಲು ಕ್ರಮಕೈಗೊಳ್ಳಬೇಕು ಎಂದು ಜಿಬಿಎ ಆಯುಕ್ತರು ಹಾಗೂ ಜಿಲ್ಲಾ ಚುನಾವಣಾಧಿಕಾರಿಗೆ ತಿಳಿಸಿದೆ.

ವಿಧಾನಸಭಾ ಮೂಲ ಮತದಾರರ ಪಟ್ಟಿ ಹಾಗೂ ನಂತರ ಪ್ರಕಟವಾದ ಪೂರಕ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ವಾರ್ಡ್‌ವಾರು ಕರಡು ಮತದಾರರ ಪಟ್ಟಿ ತಯಾರಿಸಬೇಕು. ಅಪರ ಜಿಲ್ಲಾ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಪ್ರತಿ ವಾರ್ಡ್‌ನ ಗಡಿಸರಹದ್ದು ರೇಖೆ ಒಳಗೆ ಬರುವ ವಿಧಾನಸಭಾ ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು ಗುರುತಿಸಿಕೊಂಡು ಫಾರ್ಮ್ ಟು ಮ್ಯಾಟ್ರಿಕ್ಸ್ ತಯಾರಿಸಬೇಕು. ಅಂತೆಯ ಕರಾರುವಕ್ಕಾಗಿ ಆಯಾ ವಾರ್ಡ್‌ನ ಮತದಾರರ ಪಟ್ಟಿಗೆ ಸೇರಿಸಿಕೊಳ್ಳಬೇಕು ಎಂದು ಹೇಳಿದೆ.

ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿ ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳು ಯಾವುದೇ ತಪ್ಪುಗಳಿಗೆ ಆಸ್ಪದ ನೀಡದಂತೆ ತಮ್ಮ ಕಾರ್ಯ ನಿರ್ವಹಿಸಬೇಕು. ವಾರ್ಡ್‌ವಾರು ಮತದಾರರ ಪಟ್ಟಿ ದೋಷರಹಿತವಾಗಿ ಮುದ್ರಣವಾಗುವಂತೆ ನೋಡಿಕೊಳ್ಳಬೇಕು. ಆಯೋಗದ ಸೂಚನೆ ಅನುಸಾರ ತಯಾರಿಸಿದ ಮತದಾರರ ಪಟ್ಟಿಯ ಶೇ.1ರಷ್ಟನ್ನು ಚುನಾವಣಾಧಿಕಾರಿ ಮತ್ತು ಶೇ.10ರಷ್ಟನ್ನು ಆಯಾ ನಗರ ಪಾಲಿಕೆ ಅಪರ ಜಿಲ್ಲಾ ಚುನಾವಣಾಧಿಕಾರಿ ಪರಿಶೀಲಿಸಬೇಕು. 2026 ಜ.29ರ ಒಳಗಾಗಿ ವಾರ್ಡ್‌ವಾರು ಮತದಾರರ ಪಟ್ಟಿ ಪ್ರಕಟಿಸಬೇಕು ಎಂದು ಸೂಚನೆ ನೀಡಿದೆ.

ಬೆಂಗಳೂರು ಮಂತ್ರಿಗಳ ಹೆಗಲಿಗೆ ಜಿಬಿಎ ಚುನಾವಣೆ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ ಅಧಿಕಾರ ಪಡೆಯಲೇ ಬೇಕು ಎಂದು ಹಠ ತೊಟ್ಟಿರುವ ಸರ್ಕಾರ ಬೆಂಗಳೂರು ಉಸ್ತುವಾರಿಯಾಗಿದ್ದರೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಜಿಬಿಎ ಚುನಾವಣೆಯ ಹೊಣೆ ನೀಡದೆ ಬೆಂಗಳೂರಿನ ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇಂಧನ ಸಚಿವ ಕೆ.ಜೆ.ಜಾರ್ಜ್‌, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ವಸತಿ ಸಚಿವ ಜಮೀರ್‌ ಅಹ್ಮದ್‌ ಅವರಿಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆಯ ಹೊಣೆಯನ್ನು ನೀಡಲಾಗಿದೆ. ಐದು ಪಾಲಿಕೆಗಳನ್ನು ಆರು ಸಚಿವರಿಗೆ ಹಂಚಲಾಗಿದೆ.

ಐದು ನಗರ ಪಾಲಿಕೆಗಳಲ್ಲಿ ಒಟ್ಟು 368 ವಾರ್ಡ್‌ಗಳನ್ನು ವಿಂಗಡಣೆ ಮಾಡಲಾಗಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ 63 ವಾರ್ಡ್‌ಗಳು, ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ 72 ವಾರ್ಡ್‌ಗಳು, ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ 50 ವಾರ್ಡ್‌ಗಳು, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ 111 ವಾರ್ಡ್‌ಗಳು ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ 72 ವಾರ್ಡ್‌ಗಳನ್ನು‌ ಮರುವಿಂಗಡಣೆ ಮಾಡಲಾಗಿದೆ. ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ಪೂರ್ವ, ಬೈರತಿ ಸುರೇಶ್‌ ಅವರಿಗೆ ಬೆಂಗಳೂರು ಪಶ್ಚಿಮ, ಕೆ.ಜೆ.ಜಾರ್ಜ್‌ ಅವರಿಗೆ ಬೆಂಗಳೂರು ಉತ್ತರ, ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ದಕ್ಷಿಣ, ದಿನೇಶ್‌ ಗುಂಡೂರಾವ್‌ ಮತ್ತು ಜಮೀರ್‌ ಅಹ್ಮದ್‌ ಅವರಿಗೆ ಬೆಂಗಳೂರು ಕೇಂದ್ರ ಭಾಗದ ಉಸ್ತುವಾರಿ ನೀಡಲಾಗಿದೆ. ಉಸ್ತುವಾರಿ ನೀಡಿರುವ ಪಾಲಿಕೆಯಲ್ಲಿ ಅತಿ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಂಡು ಬರುವ ಸವಾಲು ಸಚಿವರ ಮುಂದಿದೆ.

ಪ್ರತಿಪಕ್ಷಗಳಿಂದಲೂ ಚುನಾವಣೆಗೆ ಸಿದ್ದತೆ

ಬಿಬಿಎಂಪಿಯ ವಿಭಜನೆಯನ್ನು ವಿರೋಧಿಸಿದ್ದ ಬಿಜೆಪಿ ಗ್ರೇಟರ್‌ ಬೆಂಗಳೂರು ಚುನಾವಣೆಗೆ ಸದ್ದಿಲ್ಲದೆ ಸಿದ್ದತೆ ಆರಂಭಿಸಿದೆ. ಶೀಘ್ರದಲ್ಲೇ ಚುನಾವನೆ ನಡೆಯುವುದರಿಂದ ಚುನಾವಣಾ ಉಸ್ತುವಾರಿ ಮತ್ತು ಪಕ್ಷದ ಸಂಘಟನೆಗಾಗಿ ರಾಜ್ಯ ಮತ್ತು ವಿಭಾಗೀಯ ಮಟ್ಟದ ಸಂಯೋಜಕರ ಬೃಹತ್ ತಂಡವನ್ನು ರಚಿಸಿ ಪ್ರಕಟಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ ಸೇರಿದಂತೆ ಹಲವು ಪ್ರಮುಖ ನಾಯಕರು, ಕೇಂದ್ರ ಸಚಿವರು, ಸಂಸದರು ಮತ್ತು ಶಾಸಕರಿಗೆ ಈ ತಂಡದಲ್ಲಿ ಜವಾಬ್ದಾರಿ ನೀಡಲಾಗಿದ್ದು, ಬೆಂಗಳೂರಿನಲ್ಲಿ ಮತ್ತೆ ಅಧಿಕಾರ ಹಿಡಿಯಲು ಬಿಜೆಪಿ ರಣತಂತ್ರ ರೂಪಿಸಿದೆ.

ಎನ್‌ಡಿಎ ಮಿತ್ರ ಪಕ್ಷ ಜೆಡಿಎಸ್‌ ಕೂಡ ಚುನಾವಣೆಗೆ ಸಿದ್ದತೆ ನಡೆಸಿದ್ದು, ಅರಕಲಗೂಡು ಶಾಸಕ ಎ. ಮಂಜು, ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ, ವಿಧಾನಪರಿಷತ್‌ ಸದಸದ್ಯರಾದ ಟಿ.ಎ. ಶರವಣ, ಟಿ.ಎನ್. ಜವರಾಯಿಗೌಡ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಧಾನಸಭೆ ಮಾಜಿ ಉಪಸಭಾಧ್ಯಕ್ಷ ಎಂ. ಕೃಷ್ಣಾರೆಡ್ಡಿ, ನಾಗಮಂಗಲ ಮಾಜಿ ಶಾಸಕ ಸುರೇಶ್‌ಗೌಡ, ಮಾಗಡಿ ಮಾಜಿ ಶಾಸಕ ಎ. ಮಂಜುನಾಥ್ ಹಾಗೂ ಕೆ.ಎ. ತಿಪ್ಪೇಸ್ವಾಮಿ ಅವರನ್ನು ಚುನಾವಣಾ ಉಸ್ತುವಾರಿಗಳಾಗಿ ನೇಮಿಸಲಾಗಿದೆ.

Read More
Next Story