Coconut Price Hike | ತೆಂಗಿನಕಾಯಿ ದುಬಾರಿ ; ರೈತರ ಮೊಗದಲ್ಲಿ ಮಂದಹಾಸ, ಗ್ರಾಹಕರಿಗೆ ಪ್ರಯಾಸ
x
ತೆಂಗಿನಕಾಯಿ ಬೆಲೆ ಏರಿಕೆಯಾಗಿದೆ.

Coconut Price Hike | ತೆಂಗಿನಕಾಯಿ ದುಬಾರಿ ; ರೈತರ ಮೊಗದಲ್ಲಿ ಮಂದಹಾಸ, ಗ್ರಾಹಕರಿಗೆ ಪ್ರಯಾಸ

Coconut Price Hike | ಕಾಂಡ ಸೋರುವ ರೋಗ, ಗರಿ ರೋಗ, ಕಪ್ಪು ತಲೆ ಹುಳು ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಕೀಟ ಬಾಧೆಯಿಂದಲೂ ಫಸಲು ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.


ರಾಜ್ಯದಲ್ಲಿ ತೆಂಗಿನಕಾಯಿ ಬೆಲೆ ಗಗನಕ್ಕೇರಿರುವುದು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಆದರೆ ಬೆಲೆಯ ಬಿಸಿಯಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಕೊಬ್ಬರಿ ಎಣ್ಣೆಯ ಉತ್ಪನ್ನಗಳ ಬೆಲೆಯೂ ಏರಿಕೆಯಾಗುತ್ತಿದೆ. ಚಟ್ನಿ, ಸಾಂಬಾರ್‌ಗೆ ತೆಂಗಿನ ಕಾಯಿ ಅನಿವಾರ್ಯವಾಗಿರುವ ಕಾರಣ ಹೋಟೆಲ್‌ ಉದ್ಯಮಕ್ಕೂ ಹೊರೆಯೆನಿಸುತ್ತಿದೆ.

ಕಳೆದ ಹತ್ತು ವರ್ಷದ ಬಳಿಕ ತೆಂಗಿನಕಾಯಿಗೆ ಏಕಾಏಕಿ ಬೆಲೆ ಏರಿಕೆಯಾಗಿದೆ. ಆದರೆ, ಇದರ ಫಲ ಬೆಳೆಗಾರರಿಗೆ ಧಕ್ಕಲಿದೆಯೇ ಎಂಬುದು ಪ್ರಶ್ನೆಯಾಗಿದೆ. ವಾರದ ಹಿಂದೆ 25 ರೂಪಾಯಿ ಇದ್ದ ತೆಂಗಿನಕಾಯಿ ಬೆಲೆ 45 ರೂಪಾಯಿ ಆಗಿದೆ. ಸಣ್ಣ ತೆಂಗಿನಕಾಯಿಯ ಸಗಟು ಬೆಲೆ 26 ರಿಂದ 28 ರೂಪಾಯಿ ಇದೆ. ಚಿಲ್ಲರೆ ಮಾರಾಟದಲ್ಲಿ ಸಾಮಾನ್ಯ ಗಾತ್ರದ ತೆಂಗಿನಕಾಯಿ 35ರಿಂದ 45 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಕಳೆದ ಒಂದು ವಾರದಲ್ಲಿ ತೆಂಗಿನಕಾಯಿ ದರ ಕನಿಷ್ಠ 10 ರೂ.ಗಳಿಂದ 25 ರೂಪಾಯಿವರೆಗೆ ಹೆಚ್ಚಳವಾಗಿದೆ.

ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಬೆಲೆ ಕೆ.ಜಿ ಗೆ 60 ರೂಗಳಿವೆ. ದೊಡ್ಡ ಗಾತ್ರದ ಕಾಯಿ ಒಂದು ಕೆ.ಜಿ ತೂಗುತ್ತಿದೆ. ಹಾಗಾಗಿ ಇದು ಗ್ರಾಹಕರಿಗೆ ಹೊರೆಯಾಗಿದೆ. ಎಳನೀರು ಸಹ ಬೆಲೆಯೂ 40ರಿಂದ 50 ರೂ. ದಾಟಿದೆ.

ಕೊಬ್ಬರಿಗೆ ಹೆಚ್ಚು ಬೆಲೆ ಸಿಗುವುದರಿಂದ ಕೆಲವರು ತೆಂಗಿನ ಕಾಯಿ ಮಾರಾಟ ಮಾಡದೇ ಇಡುತ್ತಿದ್ದಾರೆ. ಇನ್ನು ಕೆಲವರು ಲಾಭದ ಕಾರಣಕ್ಕೆ ಎಳನೀರನ್ನೇ ಕಿತ್ತು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಗೆ ಸುಲಿದ ತೆಂಗಿನ ಕಾಯಿ ಆವಕ ಕಡಿಮೆಯಾಗಿದೆ. ಇದು ಕೂಡ ತೆಂಗಿನಕಾಯಿ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಬೆಂಗಳೂರಿನ ಚಿಲ್ಲರೆ ವ್ಯಾಪಾರಿ ವೇಣು ʻದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

ಬೆಲೆ ಹೆಚ್ಚಳಕ್ಕೆ ಕಾರಣವೇನು?

ತೆಂಗಿನಕಾಯಿ ಇಳುವರಿ ಕಡಿಮೆಯಾಗಿದೆ. ಈ ಹಿಂದೆ ಇದ್ದ ತೆಂಗಿನ ತೋಟಗಳಲ್ಲಿ ಶೇ 30ರಿಂದ 40ರಷ್ಟು ತೆಂಗಿನ ಮರಗಳು ಹಾಳಾಗಿವೆ. ಶೇ 20ರಿಂದ 30 ಮರಗಳು ಸಂಪೂರ್ಣ ನಾಶವಾಗಿವೆ. ತೆಂಗಿನ ಮರಗಳಿಗೆ ಹೆಚ್ಚು ಮಳೆ ಬಂದರೂ ಇಳುವರಿ ಕಡಿಮೆಯಾಗುತ್ತದೆ. ಮಳೆ ಕಡಿಮೆಯಾದರೂ ಇಳುವರಿ ಕಡಿಮೆಯಾಗುತ್ತದೆ. 2016 ರಲ್ಲಿ ಬರ ಕಾಣಿಸಿಕೊಂಡ ಬಳಿಕ ತೆಂಗಿನಕಾಯಿ ಇಳುವರಿಯೇ ಕಡಿಮೆಯಾಗಿದೆ ಎಂದು ತೆಂಗಿನಕಾಯಿ ಬೆಳೆಗಾರ ತಿಪಟೂರಿನ ನಾಗೇಶ್ ಬಳ್ಳಿಗೆರೆಪಾಳ್ಯʻ ದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ತೆಂಗಿಗೆ ಕಾಡುವ ರೋಗ ಬಾಧೆ

ಅಡಿಕೆ ಮರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ತರಹೇವಾರಿ ರೋಗ, ಕೀಟಗಳು ತೆಂಗಿನಕಾಯಿ ಮರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದು, ಇಳುವರಿಕೆ ಕುಸಿತಕ್ಕೆ ಕಾರಣವಾಗಿದೆ. ಇತ್ತೀಚೆಗೆ ತೆಂಗಿನ ಮರಗಳಿಗೆ ರೋಗ ಬಾಧಿಸುತ್ತಿರುವುದರಿಂದ ಇಳುವರಿ ಕಡಿಮೆಯಾಗಿದ್ದು, ತೆಂಗಿನಕಾಯಿ ಬೆಲೆ ದುಬಾರಿಯಾಗಿದೆ. ಹಳೆ ತೆಂಗಿನ ತೋಟಗಳಲ್ಲಿ ಸಾಮಾನ್ಯವಾಗಿ ಇಳುವರಿ ಬರುವುದಿಲ್ಲ. ಅದಕ್ಕೆ ಮುಖ್ಯ ಕಾರಣ ತೆಂಗಿನ ಮರಗಳಿಗೆ ಕಾಡುತ್ತಿರುವ ಕೀಟ ಬಾಧೆ. ಈ ನುಸಿಗಳು ತೆಂಗಿನಮರದಲ್ಲಿರುವ ರಸ ಹೀರುವುದರಿಂದ ಇಳುವರಿ ಕಡಿಮೆಯಾಗಿದೆ ಎನ್ನುತ್ತಾರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಶ್ರೀನಿವಾಸಪ್ಪ.

ರೋಗಕ್ಕೆ ತುತ್ತಾರುವ ತೆಂಗಿನ ಮರ

ನುಸಿಪೀಡೆಯಿಂದ ತೆಂಗಿನಕಾಯಿಯ ಗುಣಮಟ್ಟ ಕಡಿಮೆಯಾಗಿ ಕೊಬ್ಬರಿಯ ಬೆಳವಣಿಗೆಯೂ ಕುಂಠಿತವಾಗಿದೆ. ಇದರಿಂದಾಗಿ ಒಳ್ಳೆಯ ಗುಣಮಟ್ಟದ ತೆಂಗಿನಕಾಯಿಗಳು ಮಾರುಕಟ್ಟೆಗೆ ಬರುತ್ತಿಲ್ಲ. ಈ ಕೀಟ ಬಾಧೆ ಶ್ರೀಲಂಕಾ, ಮಲೇಷಿಯಾದಿಂದ ಭಾರತಕ್ಕೆ ಹರಡುತ್ತಿದೆ. ಕಳೆದ ಮೂರು ವರ್ಷಗಳಿಂದ ಭಾರತದಲ್ಲಿ ಕೀಟಬಾಧೆ ಕಾಡುತ್ತಿದೆ. ಈ ರೋಗ ನಿಯಂತ್ರಣಕ್ಕೆ ಮದ್ದು ಸಿಂಪಡಿಸುವುದರಿಂದ ನಿಯಂತ್ರಿಸಬಹುದು. ಆದರೆ 50X60 ಅಡಿ ಎತ್ತರ ಇರುವ ಮರಗಳಿಗೆ ಮದ್ದು ಸಿಂಪಡಿಸುವುದೇ ಸಮಸ್ಯೆಯಾಗಿದೆ ಎಂದು ಹಿರಿಯ ವಿಜ್ಞಾನಿ ಶ್ರೀನಿವಾಸಪ್ಪ `ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

ತೆಂಗಿನ ಕಾಯಿ ಇಳುವರಿ ಕುಂಠಿತವಾಗಲು ಮತ್ತೊಂದು ಕಾರಣವೆಂದರೆ ತೆಂಗಿನ ಮರಗಳಿಗೆ ಪೋಷಕಾಂಶದ ಕೊರತೆ. ತೆಂಗಿನ ಮರಗಳಿಗೆ ಸರಿಯಾದ ಪೋಷಕಾಂಶದ ಅಗತ್ಯವಿದೆ. ನೀರು ಕೂಡ ಹೆಚ್ಚಾಗಿ ಬೇಕಾಗುತ್ತದೆ. ರೈತರು ಸರಿಯಾದ ಕ್ರಮದಲ್ಲಿ ನಿರ್ವಹಣೆ ಮಾಡದ ಕಾರಣ ತೆಂಗಿನಕಾಯಿ ಇಳುವರಿ ಕಡಿಮೆಯಾಗಿದೆ ಎಂದು ತಿಳಿಸಿದರು.

ಕಾಂಡ ಸೋರುವ ರೋಗ, ಗರಿ ರೋಗ, ಕಪ್ಪು ತಲೆ ಹುಳು ಹೀಗೆ ಅನೇಕ ತೊಡಕುಗಳು ಕಾಣಿಸಿಕೊಳ್ಳುತ್ತಿವೆ. ನೀರಿಲ್ಲದೆ ಬಳಲಿ ಬೆಂಡಾಗಿರುವ ಮರಗಳಿಗೆ ರೋಗ, ಕೀಟ ಅಂಟಿಕೊಳ್ಳುತ್ತಿರುವುದು ರೈತರಿಗೆ ತಲೆ ನೋವಾಗಿದೆ. ಒಂದೊಂದು ತೋಟದಲ್ಲಿಕನಿಷ್ಠ 5- 6 ಮರಗಳು ರೋಗಕ್ಕೆ ಬಲಿಯಾಗುತ್ತಿವೆ ಎಂದು ಅವರು ವಿವರಿಸಿದ್ದಾರೆ.

ಕೊಬ್ಬರಿ ಬೆಲೆಯೂ ಏರಿಕೆ

ಸದ್ಯ ತೆಂಗು ಇಳುವರಿಗಾಗಿ ಮುಂದಿನ ಜುಲೈ ತನಕ ಕಾಯಬೇಕು. ಈಗಾಗಲೇ ಶೇಖರಿಸಿರುವ ತೆಂಗಿನ ಕಾಯಿಯನ್ನು ಕೊಬ್ಬರಿ ತೆಗೆದು ಮಾರಾಟ ಮಾಡಲಾಗುವುದು. ಹೀಗಾಗಿ ಕೊಬ್ಬರಿಗೂ ಬೆಲೆ ಹೆಚ್ಚು ಬಂದಿದೆ. ಆದರೆ, ಸರಿಯಾದ ಇಳುವರಿ ಇಲ್ಲ. ಇದೂ ಕೂಡ ಗ್ರಾಹಕರಿಗೆ ಹೊರೆಯಾಗಿದೆ.

ಇನ್ನು ಎಳನೀರು ಯಥೇಚ್ಛವಾಗಿ ಮಾರಾಟ ಮಾಡುತ್ತಿರುವ ಕಾರಣ ಕೊಬ್ಬರಿ ಬೇಡಿಕೆಗೆ ಅನುಗುಣವಾಗಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಬೆಲೆ ಏರಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

ತೆಂಗು ಬೆಳೆ ಪ್ರದೇಶ ಕ್ಷೀಣ

ರಾಜ್ಯದಲ್ಲಿ ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ದಕ್ಷಿಣ ಕನ್ನಡದಲ್ಲಿ ಹೆಚ್ಚು ತೆಂಗು ಬೆಳೆಯಲಾಗುತ್ತದೆ. ಆದರೆ, ಇತ್ತೀಚೆಗೆ ತೆಂಗು ಬೆಳೆ ಪ್ರದೇಶ ಭಾರೀ ಪ್ರಮಾಣದಲ್ಲಿ ಕ್ಷೀಣಿಸಿದೆ. ತೋಟಗಾರಿಕೆ ಇಲಾಖೆ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 6,93,516 ಹೆಕ್ಟೇರ್ ಪ್ರದೇಶದಲ್ಲಿಇದ್ದ ತೆಂಗು ಪ್ರದೇಶ 2023-24 ನೇ ವರ್ಷದಲ್ಲಿ 5,76,249ಹೆಕ್ಟೇರ್ಗೆ ಇಳಿಕೆಯಾಗಿದೆ. ಕರ್ನಾಟಕ ಅಷ್ಟೇ ಅಲ್ಲದೇ ತೆಂಗು ಬೆಳೆಯುವ ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲೂ ಬೆಳೆ ಪ್ರದೇಶ ಕಡಿಮೆ ಆಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ 11,116 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಿತ್ತು. 2023 - 24ನೇ ಸಾಲಿಗೆ 6,134 ಹೆಕ್ಟೇರ್‌ಗೆ ಕುಸಿದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ63,087 ಹೆಕ್ಟೇರ್‌ನಿಂದ 60,874 ಹೇಕ್ಟೇರ್‌ಗಳಿಗೆ ಇಳಿದಿದೆ.

ಕಡಿಮೆ ಇಳುವರಿ, ಎಳನೀರಿಗೆ ರೈತರ ಆದ್ಯತೆ, ತೆಂಗಿನತೋಟ ನಾಶ ಮಾಡಿ ಆ ಜಮೀನುಗಳನ್ನು ನಿವೇಶನಗಳಾಗಿ ಪರಿವರ್ತನೆ ಮಾಡುತ್ತಿರುವುದು, ವಾಣಿಜ್ಯ ಬೆಳೆ ಅಡಕೆಗೆ ಹೆಚ್ಚು ಒತ್ತು ನೀಡಿದ ಕಾರಣ ರಾಜ್ಯಾದ್ಯಂತ ತೆಂಗಿನ ಇಳುವರಿ ಕಡಿಮೆಯಾಗಿದೆ. ಇದರಿಂದಾಗಿ, ತೆಂಗಿನಕಾಯಿ ದರ ಏರಿಕೆಯಾಗಿದೆ ಎಂದೂ ಹೇಳಲಾಗುತ್ತಿದೆ.

Read More
Next Story