ಕಾಸರಗೋಡಿನ ಕನ್ನಡಿಗರ ಮೇಲೆ ಮಲಯಾಳಂ ಹೇರಿಕೆ ಜನಾಂಗ ಹತ್ಯೆಗೆ ಸಮಾನ: ಡಾ. ಪುರುಷೋತ್ತಮ ಬಿಳಿಮಲೆ ಆಕ್ರೋಶ
x

ಕಾಸರಗೋಡಿನ ಕನ್ನಡಿಗರ ಮೇಲೆ ಮಲಯಾಳಂ ಹೇರಿಕೆ 'ಜನಾಂಗ ಹತ್ಯೆ'ಗೆ ಸಮಾನ: ಡಾ. ಪುರುಷೋತ್ತಮ ಬಿಳಿಮಲೆ ಆಕ್ರೋಶ

‘ದ ಫೆಡರಲ್ ಕರ್ನಾಟಕ’ದೊಂದಿಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ವಿಧೇಯಕದ ಕಾನೂನಾತ್ಮಕ ತೊಡಕುಗಳು, ಕಾಸರಗೋಡಿನ ಐತಿಹಾಸಿಕ ಹಿನ್ನೆಲೆ ಮತ್ತು ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಸಮಗ್ರವಾಗಿ ವಿವರಿಸಿದ್ದಾರೆ.


Click the Play button to hear this message in audio format

ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಕಡ್ಡಾಯಗೊಳಿಸುವ ಕೇರಳ ಸರ್ಕಾರದ ‘ಮಲಯಾಳಂ ಭಾಷಾ ವಿಧೇಯಕ-2025’ (Malayalam Language Bill 2025) ಗಡಿನಾಡ ಕನ್ನಡಿಗರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ವಿಧೇಯಕವು ಸಂವಿಧಾನದ ಆಶಯಗಳಿಗೆ ಹಾಗೂ ಮಕ್ಕಳ ಹಕ್ಕುಗಳಿಗೆ ವಿರುದ್ಧವಾಗಿದ್ದು, ಕೇರಳ ರಾಜ್ಯಪಾಲರು ಇದಕ್ಕೆ ಅಂಕಿತ ಹಾಕದಂತೆ ತಡೆಹಿಡಿಯಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಆಗ್ರಹಿಸಿದ್ದಾರೆ.

‘ದ ಫೆಡರಲ್ ಕರ್ನಾಟಕ’ದೊಂದಿಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ವಿಧೇಯಕದ ಕಾನೂನಾತ್ಮಕ ತೊಡಕುಗಳು, ಕಾಸರಗೋಡಿನ ಐತಿಹಾಸಿಕ ಹಿನ್ನೆಲೆ ಮತ್ತು ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಸಮಗ್ರವಾಗಿ ವಿವರಿಸಿದ್ದಾರೆ.

ವಿಧೇಯಕ ತಡೆಹಿಡಿಯಲು ರಾಜ್ಯಪಾಲರಿಗೆ ಮನವಿ

ಪ್ರಸ್ತುತ ಕೇರಳ ಸರ್ಕಾರ ರೂಪಿಸಿರುವ ಮಲಯಾಳಂ ಭಾಷಾ ವಿಧೇಯಕವು ರಾಜ್ಯಪಾಲರ ಅಂಕಿತಕ್ಕೆ ಬಾಕಿ ಇದೆ. ಈ ಹಂತದಲ್ಲಿ ಯಾವುದೇ ಕಾರಣಕ್ಕೂ ರಾಜ್ಯಪಾಲರು ಇದಕ್ಕೆ ಸಹಿ ಹಾಕಬಾರದು. ಮುಂದಿನ ಚರ್ಚೆ ನಡೆದು, ಎಲ್ಲ ಗೊಂದಲಗಳು ಬಗೆಹರಿಯುವವರೆಗೂ ವಿಧೇಯಕವನ್ನು ತಡೆಹಿಡಿಯಬೇಕು ಎಂದು ಬಿಳಿಮಲೆ ಒತ್ತಾಯಿಸಿದ್ದಾರೆ. ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಾಸರಗೋಡಿನ ಕನ್ನಡ ಹೋರಾಟಗಾರರು ಕೇರಳ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ರಾಜ್ಯಪಾಲರು ಇದನ್ನು ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ?

ರಾಜ್ಯಗಳು ತಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳುವುದು ಸಂವಿಧಾನದ 341 ಮತ್ತು 342ನೇ ವಿಧಿಯ ಪ್ರಕಾರ ಸರಿಯಾಗಿದ್ದರೂ, ಮಕ್ಕಳ ಮೇಲೆ ಭಾಷೆಯನ್ನು ಹೇರುವುದು ತಪ್ಪು ಎಂದು ಬಿಳಿಮಲೆ ಪ್ರತಿಪಾದಿಸಿದರು.

"2015ರ ಫೆಬ್ರವರಿ 5ರಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಮಹತ್ವದ ತೀರ್ಪೊಂದನ್ನು ನೀಡಿದೆ. ಅದರ ಪ್ರಕಾರ, ರಾಜ್ಯ ಸರ್ಕಾರಗಳು ಕಲಿಯುವ ಮಕ್ಕಳ ಮೇಲೆ ತಮ್ಮ ಭಾಷೆಯನ್ನು ಹೇರುವಂತಿಲ್ಲ. ಯಾವ ಭಾಷೆಯಲ್ಲಿ ಶಿಕ್ಷಣ ಪಡೆಯಬೇಕು ಎಂಬುದು ಮಗು ಮತ್ತು ಪೋಷಕರ ಆಯ್ಕೆಯ ಹಕ್ಕು. ಹೀಗಾಗಿ, ಕೇರಳದ ಈ ಹೊಸ ವಿಧೇಯಕ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದ್ದು, ನ್ಯಾಯಾಲಯದಲ್ಲಿ ಇದು ಊರ್ಜಿತವಾಗುವುದಿಲ್ಲ" ಎಂದು ಅವರು ವಿಶ್ಲೇಷಿಸಿದರು.

ಕರ್ನಾಟಕ ಸರ್ಕಾರ ಕೂಡ 2022ರಲ್ಲಿ ‘ಸಮಗ್ರ ಕನ್ನಡ ಅನುಷ್ಠಾನ ಅಧಿನಿಯಮ’ದ ಮೂಲಕ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸಲು ಮುಂದಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಅದು ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಇದೇ ಮಾನದಂಡ ಕೇರಳಕ್ಕೂ ಅನ್ವಯಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಭಾಷಾ ತಜ್ಞರ ಸಭೆ ಮತ್ತು ಸೌಹಾರ್ದಯುತ ಪರಿಹಾರ

ಈ ಸಮಸ್ಯೆಯನ್ನು ಭಾವನಾತ್ಮಕವಾಗಿ ಮಾತ್ರವಲ್ಲದೆ ಬೌದ್ಧಿಕವಾಗಿಯೂ ಎದುರಿಸಬೇಕಿದೆ. ವಿಧೇಯಕವನ್ನು ತಡೆಹಿಡಿದ ನಂತರ, ಕೇರಳ ಮತ್ತು ಕರ್ನಾಟಕದ ಭಾಷಾ ತಜ್ಞರು ಹಾಗೂ ವಿದ್ವಾಂಸರು ಒಂದೆಡೆ ಕುಳಿತು ಚರ್ಚಿಸಬೇಕು. ಸಂವಿಧಾನದತ್ತವಾದ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಉಭಯ ರಾಜ್ಯಗಳ ತಜ್ಞರ ಸಭೆ ಅಗತ್ಯ ಎಂದು ಬಿಳಿಮಲೆ ಪ್ರತಿಪಾದಿಸಿದರು.

ಅನ್ಯಾಯದ ಇತಿಹಾಸ, ಕನ್ನಡದ ಕೊಂಡಿ

ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ಕಾಸರಗೋಡು ಕೇರಳಕ್ಕೆ ಸೇರಿದ್ದು ಇತಿಹಾಸದಲ್ಲೇ ನಡೆದ ಒಂದು ಘನಘೋರ ಅನ್ಯಾಯ ಎಂದು ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.

"ಕಾಸರಗೋಡು ಎಂದಿಗೂ ಕನ್ನಡದ ಕೇಂದ್ರವಾಗಿತ್ತು. ಯಕ್ಷಗಾನ ಕಲೆ ಹುಟ್ಟಿದ್ದು, ಮಹಾಕವಿ ಭಾರತಿ ಸುತರು ಜನಿಸಿದ್ದು ಇಲ್ಲೇ. ಅಡೂರು, ಅನಂತಪುರ ದೇವಸ್ಥಾನಗಳನ್ನು ಕಟ್ಟಿದವರು ಕನ್ನಡಿಗರು. ಇಂದಿಗೂ ಕಾಸರಗೋಡಿನ ಶೇ.90ರಷ್ಟು ಸ್ಥಳನಾಮಗಳು ಅಚ್ಚ ಕನ್ನಡದಲ್ಲಿವೆ. ಬದಿ, ಅಡ್ಕ, ಏತಡ್ಕ, ಪೆರ್ಲ, ಕುಂಬಳೆ ಇವೆಲ್ಲವೂ ಕನ್ನಡದ ಹೆಸರುಗಳು. ಏಳೂವರೆ ಲಕ್ಷ ಜನಸಂಖ್ಯೆ ಇರುವ ಕಾಸರಗೋಡಿನ ಕನ್ನಡಿಗರ ಹಿತಕಾಪಾಡುವುದು ಕೇರಳ ಸರ್ಕಾರದ ಕರ್ತವ್ಯ," ಎಂದು ಅವರು ಇತಿಹಾಸವನ್ನು ಮೆಲುಕು ಹಾಕಿದರು.

ಮಕ್ಕಳು ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಸಂವಿಧಾನದ ಆಶಯ ಹಾಗೂ ಯುನೆಸ್ಕೋ ಶಿಫಾರಸು ಕೂಡ ಹೌದು. ಇದನ್ನು ಕಸಿದುಕೊಂಡು ಪರಭಾಷೆಯಲ್ಲಿ ಕಲಿಯುವ ವಾತಾವರಣ ನಿರ್ಮಿಸುವುದು 'ಸಾಂಸ್ಕೃತಿಕ ಅಥವಾ ಜನಾಂಗ ಹತ್ಯೆ'ಗೆ (Genocide) ಸಮಾನವಾದ ಪ್ರಕ್ರಿಯೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.

ವಿಧೇಯಕದ ಅಸಲಿ ಸತ್ಯವೇನು?

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇದು ಹಳೆಯ ವಿಧೇಯಕ ಎಂದು ಸಮಜಾಯಿಷಿ ನೀಡುತ್ತಿದ್ದರೂ, 2025ರ ವಿಧೇಯಕದ ಪ್ರತಿಯಲ್ಲಿ ಆತಂಕಕಾರಿ ಅಂಶಗಳಿವೆ ಎಂದು ಬಿಳಿಮಲೆ ದಾಖಲೆ ಸಮೇತ ವಿವರಿಸಿದರು.

"ನನ್ನ ಬಳಿ ಇರುವ 2025ರ ವಿಧೇಯಕದ 3ನೇ ಅಧ್ಯಾಯದ 6ನೇ ಪಾಯಿಂಟ್‌ನಲ್ಲಿ, 'Malayalam shall be the compulsory first language in all government and aided schools in Kerala up to 10th standard' (ಕೇರಳದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 10ನೇ ತರಗತಿಯವರೆಗೆ ಮಲಯಾಳಂ ಕಡ್ಡಾಯ ಪ್ರಥಮ ಭಾಷೆಯಾಗಿರಬೇಕು) ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಜೊತೆಗೆ ಮಲಯಾಳಂ ಭಾಷೆಯ ಪ್ರಸರಣಕ್ಕಾಗಿ ಎಲ್ಲ ಶಾಲೆಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದೂ ಹೇಳಲಾಗಿದೆ," ಎಂದು ಅವರು ಎಚ್ಚರಿಸಿದರು.

ವಿಧೇಯಕದಲ್ಲಿ ಭಾಷಾ ಅಲ್ಪಸಂಖ್ಯಾತರು (ಕನ್ನಡ ಮತ್ತು ತಮಿಳು) ಸರ್ಕಾರಿ ವ್ಯವಹಾರಗಳಿಗೆ ತಮ್ಮ ಭಾಷೆ ಬಳಸಬಹುದು ಎಂದು ಹೇಳಲಾಗಿದ್ದರೂ, ವಾಸ್ತವದಲ್ಲಿ ಅದು ಪಾಲನೆಯಾಗುತ್ತಿಲ್ಲ. "ನಾನು ಇತ್ತೀಚೆಗೆ 15 ದಿನ ಕೇರಳದಲ್ಲಿದ್ದೆ. ಅಲ್ಲಿನ ಡಿಸಿ ಕಚೇರಿಗಳಲ್ಲಿ ಕನ್ನಡದಲ್ಲಿ ಪತ್ರ ಬರೆದರೆ ಉತ್ತರವನ್ನೇ ನೀಡುವುದಿಲ್ಲ. ಶೇ.100ರಷ್ಟು ಮಲಯಾಳಂಮಯವಾಗಿದೆ," ಎಂದು ಅವರು ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟರು.

ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ

ಒಂದು ವೇಳೆ ರಾಜತಾಂತ್ರಿಕ ಮಾತುಕತೆ ಅಥವಾ ರಾಜ್ಯಪಾಲರ ಹಂತದಲ್ಲಿ ಈ ಸಮಸ್ಯೆ ಬಗೆಹರಿಯದಿದ್ದರೆ ಕಾನೂನು ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರವು ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಲು ತಯಾರಿ ನಡೆಸಿದೆ. 2015ರ ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕದ ಪರವಾಗಿರುವುದರಿಂದ, ಕೇರಳದ ಈ ವಿಧೇಯಕವು ನ್ಯಾಯಾಲಯದಲ್ಲಿ ಬಿದ್ದುಹೋಗುವ ಸಾಧ್ಯತೆಯೇ ಹೆಚ್ಚು ಎಂದು ಪುರುಷೋತ್ತಮ ಬಿಳಿಮಲೆ ವಿಶ್ವಾಸ ವ್ಯಕ್ತಪಡಿಸಿದರು.

Read More
Next Story